Site icon Vistara News

Valmiki Corporation Scam: 8 ಗಂಟೆಗಳ ಕಾಲ ಮಾಜಿ ಸಚಿವ ನಾಗೇಂದ್ರ ಬೆವರಿಳಿಸಿದ ಎಸ್‌ಐಟಿ, ಇಂದು ಮತ್ತೆ ತನಿಖೆ

valmiki corporatyion scam Nagendra

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Corporation Scam) ಬಹುಕೋಟಿ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ (Ex minisiter Nagendra) ನಿನ್ನೆ ಸುಮಾರು 8 ಗಂಟೆಗಳ ಕಾಲ ವಿಶೇಷ ತನಿಖಾ ತಂಡದ (SIT) ತನಿಖೆ ಎದುರಿಸಿದರು. ಶಾಸಕ ಬಸವನಗೌಡ ದದ್ದಲ್ (Basavanagowda Daddal) ಅವರನ್ನೂ ನಾಲ್ಕು ಗಂಟೆಗಳ ಕಾಲ ಪ್ರಶ್ನಿಸಲಾಗಿದೆ.

ಇಂದು ಮತ್ತೆ ತನಿಖೆಗೆ ಹಾಜರಾಗುವಂತೆ ಇಬ್ಬರಿಗೂ ನೋಟೀಸ್‌ ನೀಡಲಾಗಿದೆ. ಪ್ರಕರಣದ ಬಗ್ಗೆ ಇಬ್ಬರನ್ನೂ ಪ್ರತ್ಯೇಕವಾಗಿ ಪ್ರಶ್ನಿಸಲಾಗುತ್ತಿದೆ. ಹಗರಣ ನಡೆದ ಸಂದರ್ಭದಲ್ಲಿ ನಾಗೇಂದ್ರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಶಾಸಕ ದದ್ದಲ್‌ ಈಗಲೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾರೆ.

ನಿನ್ನೆ ಬೆಳಗ್ಗೆ 11 ಗಂಟೆಗೆ ಎಸ್ಐಟಿ ಮುಂದೆ ವಿಚಾರಣೆಗೆ ನಾಗೇಂದ್ರ ಹಾಜರಾಗಿದ್ದರು. ಎಸ್‌ಐಟಿ 8 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿತ್ತು. ಇಂದು ಮತ್ತೆ ವಿಚಾರಣೆಗೆ ಬರುವಂತೆ ನೋಟೀಸ್‌ ನೀಡಲಾಗಿದೆ. ನಿನ್ನೆ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಎಸ್.ಐ.ಟಿ ವಿಚಾರಣೆಗೆ ಹಾಜರಾಗಿದ್ದ ದದ್ದಲ್, ನಾಲ್ಕು ಗಂಟೆಗಳ ಕಾಲ‌ ವಿಚಾರಣೆ ಎದುರಿಸಿ ತೆರಳಿದರು. ಅವರಿಗೂ ಮತ್ತೆ ಬರುವಂತೆ ನೋಟೀಸ್‌ ಕೊಡಲಾಗಿದೆ.

“ಇದ್ಯಾವುದೂ ನಮ್ಮ ಗಮನಕ್ಕೇ ಬಂದಿಲ್ಲ. ನನ್ನ ಹೆಸರು ದುರ್ಬಳಕೆ ಆಗಿದೆ ಅಷ್ಟೆ” ಎಂದು ಎಸ್‌ಐಟಿ ಮುಂದೆ ಬಸವನಗೌಡ ದದ್ದಲ್ ಹೇಳಿಕೆ ನೀಡಿದ್ದಾರೆ. ಇಬ್ಬರೂ ಕೂಡ ಎಸ್‌ಐಟಿ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡಿಲ್ಲ. ಇಬ್ಬರ ಹೇಳಿಕೆಯಲ್ಲಿ ಸಾಮ್ಯತೆಯೇ ಇಲ್ಲ. ಬೇರೆ ಬೇರೆ ಥರದ ಹೇಳಿಕೆಗಳನ್ನು ಎಸ್‌ಐಟಿಗೆ ನೀಡಿರುವ ಹಿನ್ನಲೆಯಲ್ಲಿ ಇಂದು ಮತ್ತೆ ನೋಟೀಸ್ ನೀಡಿ ಇಬ್ಬರನ್ನೂ ಕರೆಸಲಾಗುತ್ತಿದೆ.

ಹಗರಣದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ನಿಗಮದ ಅಧೀಕ್ಷಕ ಚಂದ್ರಶೇಖರ್‌, ತಮ್ಮ ಡೆತ್‌ ನೋಟ್‌ನಲ್ಲಿ ನಾಗೇಂದ್ರ ಹೆಸರನ್ನೂ ಪ್ರಸ್ತಾವಿಸಿದ್ದರು. ಈಗಾಗಲೇ ಹಗರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ನಿಗಮದ ಎಂಡಿ ಪದ್ಮರಾಜ್‌, ಸಿಎ ಪರಶುರಾಮ್‌ ಬಂಧನದಲ್ಲಿದ್ದಾರೆ. ನಿನ್ನೆ ಹಗರಣಕ್ಕೆ ಸಬಂಧಿಸಿದ ಆರೋಪಿಗಳು ನಡೆಸಿದ್ದ ರಹಸ್ಯ ಮೀಟಿಂಗ್‌ನ ಆಡಿಯೋ ಹಾಗೂ ವಿಡಿಯೋ ಕೂಡ ಬಯಲಾಗಿತ್ತು.

ಆರೋಪಿಗಳ ಮೀಟಿಂಗ್‌ನ ರಹಸ್ಯ ಆಡಿಯೋ- ವಿಡಿಯೋ ಬಯಲು

ಹಗರಣಕ್ಕೆ ಸಂಬಂಧಿಸಿ ಆತ್ಮಹತ್ಯೆ ಮಾಡಿಕೊಂಡ ಅಧೀಕ್ಷಕ ಚಂದ್ರಶೇಖರ್ ಸಾವಿಗೆ ಎರಡು ದಿನ ಮುಂಚೆ ನಿಗಮದ ಎಂಡಿ ಪದ್ಮನಾಭ್ ಹಾಗೂ ಲೆಕ್ಕ ಪರಿಶೋಧಕ ಪರಶುರಾಮ್‌ ರಹಸ್ಯವಾಗಿ ಮೀಟಿಂಗ್‌ ನಡೆಸಿದ್ದು ದಾಖಲಾಗಿದೆ. ಮೇ.24ರಂದು ಒಂದು ಹೋಟೆಲ್‌ನಲ್ಲಿ ಇವರ ಸೀಕ್ರೆಟ್ ಮೀಟಿಂಗ್ ನಡೆದಿತ್ತು. ಹಗರಣದ ಬಗ್ಗೆ ಎಂಡಿ ಪದ್ಮನಾಭ್, ಪರಶುರಾಮ್‌ ಜೊತೆ ಬಿಸಿಬಿಸಿ ಚರ್ಚೆ ಮಾಡಿದ್ದ.https://vistaranews.com/wp-content/uploads/2024/07/WhatsApp-Video-2024-07-09-at-11.55.33-AM.mp3

ಎಂಡಿ ತನ್ನನ್ನು ಸಿಕ್ಕಿ ಹಾಕಿಸಬಹುದು ಎಂಬ ಅನುಮಾನದಲ್ಲಿ ಪರಶುರಾಮ್ ಮೀಟಿಂಗ್‌ನ ವಿಡಿಯೋ ಹಾಗೂ ಆಡಿಯೋ ಮಾಡಿಕೊಂಡಿದ್ದ. ಸದ್ಯ ಪ್ರಕರಣದಲ್ಲಿ ಪದ್ಮನಾಭ್ A7 ಹಾಗೂ ಪರಶುರಾಮ್ A8 ಆರೋಪಿಗಳಾಗಿದ್ದಾರೆ. ಹಗರಣವನ್ನು ಮುಚ್ಚಿಹಾಕುವ ವಿಚಾರದಲ್ಲಿ ಪರಶುರಾಮ್ ಹಿಂದೇಟು ಹಾಕಿದ್ದ. ಆದ್ರೆ ಸೈಲೆಂಟ್‌ ಆಗಿರುವಂತೆ MD ಪದ್ಮನಾಭ್ ಬಾಯಿ ಮುಚ್ಚಿಸಿದ್ದ.

ಹಗರಣದ ಬಗ್ಗೆ ಅಧ್ಯಕ್ಷರಿಗೆ ಹೇಳೋದು ಒಳ್ಳೆಯದು ಎಂದು ಆಡಿಯೋದಲ್ಲಿ ಪರಶುರಾಮ್ ಹೇಳುತ್ತಿರುವುದು ಸ್ಪಷ್ಟವಾಗಿದೆ. ʼಹೇಳಿದ್ರೆ ದೊಡ್ಡ ರಾದ್ಧಾಂತ ಆಗುತ್ತೆ. ಸ್ವಲ್ಪ ದಿನ ಹೇಳೋದು ಬೇಡʼ ಎಂದು ಪದ್ಮನಾಭ್ ಹೇಳಿದ್ದ. ನಂತರ ಚಂದ್ರಶೇಖರ್‌ನನ್ನು ಇದರಲ್ಲಿ ಸಿಕ್ಕಿಸಿ ಹಾಕುವುದು ಹೇಗೆ ಎಂಬ ಬಗ್ಗೆ, ಆತನ ಇನ್‌ವಾಲ್ವ್‌ಮೆಂಟ್‌ ಬಗ್ಗೆ ಮಾತು ನಡೆದಿತ್ತು. ಮೀಟಿಂಗ್ ನಡೆದ ಎರಡೇ ದಿನಗಳಲ್ಲಿ ಚಂದ್ರಶೇಖರ್ ಸೂಸೈಡ್ ಮಾಡಿಕೊಂಡಿದ್ದರು.https://vistaranews.com/wp-content/uploads/2024/07/WhatsApp-Video-2024-07-09-at-11.55.34-AM.mp3

ಚಂದ್ರಶೇಖರ ಆತ್ಮಹತ್ಯೆ ನಂತರ ಬೃಹತ್ ಹಗರಣ ಹೊರಬಂದಿತ್ತು. ನಿಗಮದಿಂದ ಖಾಸಗಿಯಾಗಿ ಹಣ ವರ್ಗಾವಣೆ ಮಾಡಲು ಪ್ರತ್ಯೇಕ ಅಕೌಂಟ್ ಅನ್ನು ಆರೋಪಿಗಳ ಗ್ಯಾಂಗ್‌ ಓಪನ್‌ ಮಾಡಿಸಿತ್ತು. ಆತ್ಮಹತ್ಯೆಗೆ ಶರಣಾದ ಅಧೀಕ್ಷಕ ಚಂದ್ರಶೇಖರ್ ಹೆಸರಲ್ಲಿ ಬ್ಯಾಂಕ್ ಅಕೌಂಟ್ ಅನ್ನು ನೆಕ್ಕುಂಟಿ ನಾಗರಾಜ್ ಓಪನ್ ಮಾಡಿಸಿದ್ದ. ಆದರೆ, ಕೊನೆಯ ಕ್ಷಣದಲ್ಲಿ ಚಂದ್ರಶೇಖರ್ ಹಿಂದೇಟು ಹಾಕಿದ್ದ.

ಆಗ ಪರಶುರಾಮ್ ಹಾಗು ಪದ್ಮನಾಬ್ ಸೇರಿಕೊಂಡು, ಪ್ರಕರಣದ ಇನ್ನೊಬ್ಬ ಆರೋಪಿಯಾಗಿರುವ ಸಾಯಿತೇಜನನ್ನು ಶಿವಕುಮಾರ್ ಎಂದು ಅಕೌಂಟ್‌ ಸೃಷ್ಟಿಸಿದ್ದರು. ನಿಗಮದ ಅಧಿಕಾರಿಯೇ ಎಂದು ಬಿಂಬಿಸಿ ಬ್ಯಾಂಕ್ ಅಕೌಂಟ್ ತೆರೆಸಿದ್ದರು. ಬಳಿಕ ನಿಗಮದಿಂದ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು. ಇವೆಲ್ಲವೂ ಇದೀಗ ಬಯಲಾಗುತ್ತಿದೆ.

ಇದನ್ನೂ ಓದಿ: Valmiki Corporation Scam: ವಾಲ್ಮೀಕಿ ನಿಗಮ ಹಗರಣದಲ್ಲಿ ಮುಂದುವರಿದ ಮಾಜಿ ಸಚಿವರ ಪಿಎಸ್‌ ವಿಚಾರಣೆ; ನಾಗೇಂದ್ರಗೆ ಢವಢವ!

Exit mobile version