Site icon Vistara News

ವಾಲ್ಮೀಕಿ ನಿಗಮ ಅಧೀಕ್ಷಕ ಆತ್ಮಹತ್ಯೆ ಪ್ರಕರಣ: ಮೂವರ ಮೇಲೆ ಎಫ್‌ಐಆರ್; ಡೆತ್‌ ನೋಟ್‌ನಲ್ಲಿರುವ ಸಚಿವ ಯಾರು?

Chandrashekar

Valmiki Development Corporation Superintendent Suicide: Karnataka Government Forms SIT To Investigation

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Development Corporation) ಅಧೀಕ್ಷಕ ಚಂದ್ರಶೇಖರ್‌ ಆತ್ಮಹತ್ಯೆ (Self Harming) ಪ್ರಕರಣದಲ್ಲಿ ಮೂರು ಜನ ಅಧಿಕಾರಿಗಳ (Officers) ವಿರುದ್ಧ ಪ್ರಕರಣ (FIR) ದಾಖಲಿಸಲಾಗಿದೆ. ಚಂದ್ರಶೇಖರ್‌ ಬರೆದಿಟ್ಟಿರುವ ಡೆತ್‌ ನೋಟ್‌ನಲ್ಲಿ (Death note) ಒಬ್ಬರು ಸಚಿವರ (minister) ಉಲ್ಲೇಖ ಕಂಡುಬಂದಿದೆ.

ಶಿವಮೊಗ್ಗ (Shivamogga news) ನಗರದ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಇದಕ್ಕೆ ಸಂಬಂಧಿಸಿ ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್, ಬ್ಯಾಂಕ್ ಅಧಿಕಾರಿ ಸುಚಿಸ್ಥನಾ ಎಂಬವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ನಿಗಮದಲ್ಲಿ ನಿಯಮಬಾಹಿರವಾಗಿ 85 ಕೋಟಿ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವನ್ನು ಡೆತ್ ನೋಟ್‌ನಲ್ಲಿ ನೌಕರ ಮಾಡಿದ್ದಾರೆ.

ಚಂದ್ರಶೇಖರ್‌ ಅವರು ಆರು ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದರು. ನಿಯಮಬಾಹಿರವಾಗಿ 85 ಕೋಟಿ ಹಣವನ್ನು ವರ್ಗಾವಣೆ ಮಾಡಲಾಗಿದೆ, ಅದನ್ನು ಪ್ರಶ್ನಿಸಿದ್ದಕ್ಕೆ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅದರಲ್ಲಿ ಆರೋಪಿಸಿದ್ದರು. ಡೆತ್ ನೋಟ್‌ನಲ್ಲಿ, ʼಸಚಿವರ ಮೌಖಿಕ ಆದೇಶ ಮೇಲೆ ಹಣ ವರ್ಗಾವಣೆʼ ವಿಚಾರ ಪ್ರಸ್ತಾಪವಿದೆ. ಸಚಿವರ ಹೆಸರು ಬರೆಯದೇ ಮೌಖಿಕ ಆದೇಶ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದು, ಈ ಸಚಿವರು ಯಾರು ಎಂಬ ಪ್ರಶ್ನೆ ಹಾಗೇ ಉಳಿದಿದೆ.

85 ಕೋಟಿ ರೂ. ಹಣ ವರ್ಗಾವಣೆ ವಿಚಾರದಲ್ಲಿ ಚಂದ್ರಶೇಖರ್‌ ಭಯಗೊಂಡಿದ್ದರು ಎಂದು ಗೊತ್ತಾಗಿದೆ. ಹಣ ಯಾರ ಅಕೌಂಟ್‌ಗೆ ಕಳಿಸಿದ್ದಾರೆ ಎಂದು ತಿಳಿಯದೇ ಆತಂಕಗೊಂಡಿದ್ದರು. ಬ್ಯಾಂಕ್ ಅಧಿಕಾರಿಗೆ ಈ ಬಗ್ಗೆ ಮಾಹಿತಿ ಕೇಳಿದರೂ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿರಲಿಲ್ಲ. 85 ಕೋಟಿ ವರ್ಗಾವಣೆ ಆಗಿದ್ದು ಎಲ್ಲಿಗೆ ಎಂಬುದನ್ನು ಬ್ಯಾಂಕ್‌ ಅಧಿಕಾರಿ ತಿಳಿಸಬೇಕಿದೆ. ಮೌಖಿಕ ಆದೇಶ ನೀಡಿದ ಸಚಿವರು ಯಾರು ಎಂಬುದನ್ನು ಚಂದ್ರಶೇಖರ್‌ ಅವರ ಮೇಲಧಿಕಾರಿಗಳು ತಿಳಿಸಬೇಕಿದೆ.

ಕಣ್ಣೀರಿಟ್ಟ ಚಂದ್ರಶೇಖರ್ ಪತ್ನಿ

“ನನ್ನ ಗಂಡನ ಸಾವಿಗೆ ಸೂಕ್ತ ನ್ಯಾಯ ಒದಗಿಸಬೇಕು. ನಾನು ಎರಡು ಮಕ್ಕಳನ್ನು ಇಟ್ಟುಕೊಂಡು ಹೇಗೆ ಬದುಕೋದು ಸರ್” ಎಂದು ಗಂಡನನ್ನು ನೆನೆದು ಚಂದ್ರಶೇಖರ್ ಪತ್ನಿ ಕವಿತಾ ಕಣ್ಣೀರಿಟ್ಟಿದ್ದಾರೆ. ʼʼನನ್ನ ಗಂಡನ ಸಾವಿಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಆಗಬೇಕು. ಮೂವರು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅವರು ಒಂದು ರೂಪಾಯಿ ಲಂಚ ಪಡೆದಿಲ್ಲ. ನಾನು ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡ್ತಾ ಇದ್ದೀನಿ” ಎಂದು ಶಿವಮೊಗ್ಗದಲ್ಲಿ ಚಂದ್ರಶೇಖರ್ ಪತ್ನಿ ಕವಿತಾ ಹೇಳಿಕೆ ನೀಡಿದ್ದಾರೆ.

“ಸಚಿವರನ್ನು ವಜಾ ಮಾಡಿ”

“ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕರು ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ. ನಾನು ಹೇಡಿಯಲ್ಲ ಎಂದು ಸಹ ಅವರು ಬರೆದಿದ್ದಾರೆ. ಸೂಪರಿಂಟೆಂಡೆಂಟ್ ಪರಿಸ್ಥಿತಿ ಹೀಗಾದರೆ ಸಾಮಾನ್ಯ ಅಧಿಕಾರಿಗಳ ಪರಿಸ್ಥಿತಿ ಏನು? ಕೋಟ್ಯಾಂತರ ರೂಪಾಯಿ ಹಣ ಸಚಿವರ ಮೌಖಿಕ ಆದೇಶದ ಮೂಲಕ ಹಣ ವರ್ಗಾವಣೆ ಆಗಿದೆ. ಸರ್ಕಾರದ ಅಧಿಕಾರಿಗಳಿಗೆ ಈ ಪರಿಸ್ಥಿತಿ ಬರುತ್ತೆ ಅಂದರೆ ನಾವು ಯಾವ ವಾತಾವರಣದಲ್ಲಿದ್ದೇವೆ? ಇಡೀ ಪ್ರಕರಣ ನೋಡಿದರೆ ಏನೂ ನಡೆದೇ ಇಲ್ಲ ಎಂಬಂತೆ ಸರ್ಕಾರ ಇದೆ. ಕುಟುಂಬಗಳು ಅನಾಥವಾಗುತ್ತಿವೆ” ಎಂದು ಶಿವಮೊಗ್ಗದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಟೀಕಿಸಿದ್ದಾರೆ.

ಸಿಎಂ ಕೂಡಲೇ ತಮ್ಮ ವಾಲ್ಮೀಕಿ ನಿಗಮದ ಮಂತ್ರಿಯನ್ನು ವಜಾಗೊಳಿಸಬೇಕು. ಈ ಘಟನೆಗಳನ್ನು ರಾಜ್ಯದ ಜನ ಗಮನಿಸುತ್ತಾರೆ. ಕೂಡಲೇ ಸಂಬಂಧ ಪಟ್ಟ ಮಂತ್ರಿಯ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮದ ಉಸ್ತುವಾರಿ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಸರ್ಕಾರಿ ನೌಕರನ ಸಾವಿಗೆ ಕಾರಣರಾದವರ ಹೆಸರನ್ನು ಸಹ ಎಫ್ಐಆರ್‌ನಲ್ಲಿ ಸೇರಿಸಬೇಕು. ಅಧಿಕಾರಿಗಳು ಹೆದರಿಕೊಂಡು ಕೆಲಸ ಮಾಡುವ ಪರಿಸ್ಥಿತಿ ಬಂದಿದೆ. ಆತ್ಮಹತ್ಯೆ ಆಗಿ ಎರಡು ದಿನ ಆದರೂ ಸರ್ಕಾರ ಸುಮ್ಮನಿರುವುದನ್ನು ನೋಡಿ ಅನುಮಾನ ಬರುತ್ತಿದೆ” ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: Self Harming: ಮೇಲಧಿಕಾರಿಗಳ ಕಿರುಕುಳ, ಹಗರಣದ ಕರಿನೆರಳು: ವಾಲ್ಮೀಕಿ ಅಭಿವೃದ್ಧಿ ನಿಗಮದ ಸೂಪರಿಂಟೆಂಡೆಂಟ್ ಆತ್ಮಹತ್ಯೆ

Exit mobile version