Site icon Vistara News

Viral Video: ಬಕ್ರೀದ್ ಬಲಿ ಕೊಡುವ ಮೇಕೆಯ ಮೈಮೇಲೆ ʼರಾಮʼ ನಾಮ; ಹಿಂದೂಗಳನ್ನು ಕೆಣಕಿದ ವ್ಯಕ್ತಿ ಅರೆಸ್ಟ್

Viral Video

ಮುಂಬೈ : ಮುಸ್ಲಿಮರಿಗೆ ಬಕ್ರೀದ್ ಹಬ್ಬ ತುಂಬಾ ವಿಶೇಷವಾದದ್ದು. ಹಾಗಾಗಿ ಈ ದಿನ ಅವರ ಸಂಪ್ರದಾಯದಂತೆ ಮೇಕೆಗಳನ್ನು ಬಲಿಕೊಡಲಾಗುತ್ತದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಗಳೂ ಕೂಡ ಇತರರ ಭಾವನೆಗಳಿಗೆ ಧಕ್ಕೆಯುಂಟುಮಾಡುವ ಯಾವುದೇ ದುರ್ಘಟನೆಗಳು ನಡೆಯಬಾರದೆಂದು ಮುಸ್ಲಿಂರಿಗೆ ಹಾಗೂ ಆಡಳಿತ ಅಧಿಕಾರಿಗೂ ಸೂಚಿಸಿದೆ. ಆದರೂ ಇದರ ನಡುವೆ ಮಟನ್ ಅಂಗಡಿ ಮಾಲೀಕನೊಬ್ಬ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಹ ಕೆಲಸ ಮಾಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೊ ವೈರಲ್
(Viral Video )ಆಗಿದೆ.

ಮುಂಬೈನ ಬೆಲಾಪುರದ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ನಲ್ಲಿರುವ ಗುಡ್ ಲಕ್ ಮಟನ್ ಅಂಗಡಿ ಮಾಲೀಕ ಮಹಮ್ಮದ್ ಶಾಫಿ ಎಂಬುವವನು ಬಲಿದಾನದ ಬಿಳಿ ಬಣ್ಣದ ಮೇಕೆಯ ಮೈ ಮೇಲೆ ಹಳದಿ ಬಣ್ಣದಲ್ಲಿ ರಾಮ್ ಎಂದು ಬರೆದು ಮಾಂಸದ ಅಂಗಡಿಯ ಹೊರಗೆ ಆ ಮೇಕೆಯನ್ನು ಕಟ್ಟಿಹಾಕಿದ್ದ. ಇದು ಹಿಂದೂಗಳ ಕಣ್ಣಿಗೆ ಬಿದ್ದು ಕೋಲಾಹಲಕ್ಕೆ ಕಾರಣವಾಗಿದೆ. ಜೂನ್ 15ರಂದು ಈ ಘಟನೆ ನಡೆದಿದ್ದು, ರಾಮ ಎನ್ನುವುದು ಹಿಂದೂಗಳ ದೇವರಾದ ಕಾರಣ ಹಿಂದೂ ಸಂಘಟನೆಯ ಕೆಲವು ಜನರು ಅಲ್ಲಿಗೆ ಬಂದು ಗಲಾಟೆ ಮಾಡಿದ್ದಾರೆ. ಹಾಗೇ ಈ ದೃಶ್ಯವನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೊದಲ್ಲಿ ಹಿಂದೂಗಳು ಅಂಗಡಿಗೆ ನುಗ್ಗಿ ಮಾಲೀಕನ ಜೊತೆ ಗಲಾಟೆ ನಡೆಸಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಹಾಗೂ ಆತನ ಅಂಗಡಿಯನ್ನು ಮುಚ್ಚಲಾಗಿದೆ. ಸೋಶಿಯಲ್ ಮೀಡಿಯಾದ ಬಳಕೆದಾರರು, ಹಿಂದೂ ಸಂಘಟನೆಗಳು ಸೇರಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:  ಬಕ್ರೀದ್ ಹಿನ್ನೆಲೆಯಲ್ಲಿ ಮಾರಾಟಕ್ಕಿಟ್ಟಿದ್ದ ಈ ಮೇಕೆಯ ಬೆಲೆ 69 ಲಕ್ಷ ರೂ!

ಹಿಂದುತ್ವ ನೈಟ್ ಎಂಬ ಬಳಕೆದಾರರು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ನಲ್ಲಿ ತಮ್ಮ ಕೋಪವನ್ನು ಹೊರಹಾಕಿದ್ದಾರೆ. “ಇದು ಅತಿರೇಕವಾಗಿದೆ. ಗುಡ್ ಲಕ್ ಮಟನ್ ಸ್ಟೋರ್ ಮಾರಾಟ ಮಾಡುವ ಮೇಕೆಯ ಮೇಲೆ ರಾಮ್ ಹೆಸರನ್ನು ಬರೆಯಲಾಗಿದೆ. ಬಕ್ರೀದ್ ದಿನದಂದು ಈ ಮೇಕೆಯನ್ನು ಬಹಿರಂಗವಾಗಿ ಕೊಲ್ಲುವುದರ ಮೂಲಕ ಹಿಂದೂ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸುತ್ತಿದ್ದಾರೆ. ಈ ಮೂಲಕ ಅವರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದಕ್ಕಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಮುಂಬೈ ಪೊಲೀಸರಲ್ಲಿ ವಿನಂತಿಸುತ್ತೇವೆ” ಎಂದು ಪೋಸ್ಟ್ ಮಾಡಿದ್ದಾರೆ.

Exit mobile version