Site icon Vistara News

ಕಾಂಕ್ರೀಟು ಜಂಗಲ್‌ನೊಳಗೂ ನಿಜವಾದ ಕಾಡುಗಳಿವೆ, ಒಮ್ಮೆ ನೋಡಿ…

ಬೆಂಗಳೂರಿನಂಥ ಕಾಂಕ್ರೀಟು ಕಾಡಿನಲ್ಲಿ ಬೆಳಗ್ಗೆದ್ದು ವಾಕ್‌ ಹೋಗಲು, ಜಾಗ್‌ ಮಾಡಲು ಬೇಕಾದಷ್ಟು ಜಾಗಗಳಿವೆ. ಬೀದಿಗೊಂದರಂತೆ ಪಾರ್ಕ್‌ ಇದೆ. ಏರಿಯಾದಲ್ಲೊಂದು ದೊಡ್ಡ ಪಾರ್ಕ್‌ ಅಥವಾ ಇನ್ನೂ ಸ್ವಲ್ಪ ಅಡ್ಡಾಡಿ ಹುಡುಕಿದರೆ, ದಟ್ಟ ಮರಗಳಿರುವ ಹಳೇ ಜಾಗಗಳು, ಗಲ್ಲಿಗಳ ಸುತ್ತಿ ಬಳಸಿದರೆ ಚೆಂದದೊಂದು ವಾಕ್‌ ಮುಗಿಸಿ ಬೆಳಗಿನ ಗಾಳಿ ಕುಡಿದು ಬರಬಹುದು. ಆದರೂ, ಪ್ರಕೃತಿ, ಪರಿಸರದ ಸಂಗ ಬಯಸುವವರು ಬೆಂಗಳೂರಿನೊಳಗೆ ಪ್ರತಿದಿನ ವಾಕ್‌ಗೆ, ವೀಕೆಂಡ್‌ ವಾಕ್‌ಗೆ ಅಂತೆಲ್ಲ ಹೊಸ ಜಾಗಗಳ ಹುಡುಕಾಟ ಇದ್ದೇ ಇರುತ್ತದೆ.

ಹೆಸರೇ ಹೇಳುವಂತೆ ಬೆಂಗಳೂರು ಉದ್ಯಾನ ನಗರಿ. ಬಹುಶಃ, ಬೆಂಗಳೂರಲ್ಲಿರುವಷ್ಟು ಉದ್ಯಾನ ಭಾರತದ ಯಾವ ಮಹಾನಗರಿಯಲ್ಲೂ ಇರಲಿಕ್ಕಿಲ್ಲ. ಅದಕ್ಕಾಗಿಯೇ ನಮ್ಮ ಬೆಂಗಳೂರು ಎಂಬ ಮಹಾನಗರಿ ಮಾಯಾನಗರಿಯಂತೆ, ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆನ್ನದೆ ಎಲ್ಲ ಭಾಗದ ಭಾರತದ ಜನತೆಯನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಅಷ್ಟೇ ಅಲ್ಲ, ಇಲ್ಲಿ ಒಮ್ಮೆ ಬಂದರೆ ಮತ್ತೆ ವಾಪಾಸು ಹೋಗಲು ಮನಸ್ಸು ಮಾಡುವುದೂ ಇಲ್ಲ. ಬೆಂಗಳೂರಿನ ಮಹಿಮೆಯೇ ಅಂಥದ್ದು.

ಇಂಥ ಬೆಂಗಳೂರು ತನ್ನ ಕಾಂಕ್ರೀಟು ಕಾಡಿನಲ್ಲಿ ಪುಟ್ಟ ಪುಟ್ಟ ನೈಜ ಕಾಡನ್ನೂ ಉಳಿಸಿಕೊಂಡಿದೆ. ನಗರ ಅಗಾಧವಾಗಿ ಬಾನೆತ್ತರಕ್ಕೆ ಬೆಳೆದಿದ್ದರೂ, ಪುಟ್ಟ ಪುಟ್ಟ ಕಾಡುಗಳು ನಗರದ ಹೃದಯ ಭಾಗದಲ್ಲೂ ಸದ್ದಿಲ್ಲದೆ ಉಸಿರಾಡುತ್ತಿವೆ. ನಗರ ಎಷ್ಟೇ ಬೆಳೆದರೂ, ಜನರಿಗೆ ತಾಜಾ ಹವೆಯನ್ನು ನೀಡಿ ಉಸಿರಾಡಲು ಅವಕಾಶ ಮಾಡಿಕೊಟ್ಟಿರುವುದೂ ಇವೇ ಪುಟ್ಟ ಪುಟ್ಟ ಕಾಡುಗಳು. ಇಂಥ ಜಾಗಗಳೊಳಗೆ ಹೊಕ್ಕರೆ, ಅರೆ ಬೆಂಗಳೂರೊಳಗೂ ಇಂಥ ಜಾಗಗಳಿವೆಯೋ ಎಂದು ಆಶ್ಚರ್ಯವಾದೀತು!

ಇದನ್ನೂ ನೋಡಿ: Travel tips: ಪ್ರವಾಸ ದುಡ್ಡಿದ್ದವರಿಗೆ ಮಾತ್ರವೇ ಸಾಧ್ಯವೇ?

ಹೆಣ್ಣೂರು ಬಿದಿರು ಕಾಡು

೧. ಹೆಣ್ಣೂರು ಬಿದಿರು ಕಾಡು:‌ ಹೊರವರ್ತುಲ ರಸ್ತೆಯಿಂದ ೧೫ ನಿಮಿಷದ ಹಾದಿ ಹಿಡಿದರೆ ಇದು ಸಿಗುತ್ತದೆ. ದಟ್ಟವಲ್ಲದ, ಆದರೆ ನೈಸರ್ಗಿಕ ಕಾಡಿನೊಳಗೆ ೧೨ ಕಿಮೀಗಳಷ್ಟು ನಡೆಯಬಹುದಾದ, ಜಾಗ್‌ ಮಾಡಬಹುದಾದ, ಸೈಕ್ಲಿಂಗ್‌ ಮಾಡಬಹುದಾದ ಜಾಗವಿದು. ಚಿಲಿಪಿಲಿ ಹಕ್ಕಿಗಳ ಇಂಚರದ ಹಿನ್ನೆಲೆಯಲ್ಲಿ, ವೀಕೆಂಡಿನಲ್ಲಿ ಸ್ಥಳ ಬದಲಾವಣೆಗಾಗಿಯೂ ಇಲ್ಲಿ ಬರಬಹುದು.

ದೊರೆಸಾನಿಪಾಳ್ಯ ಕಾಡು

೨. ದೊರೆಸಾನಿಪಾಳ್ಯ ಕಾಡು: ಜೆಪಿ ನಗರ ಏಳನೇ ಹಂತದಲ್ಲಿರುವ ದೊರೆಸಾನಿ ಪಾಳ್ಯ ಕಾಡು ಸುಮಾರು ಎರಡುವರೆ ಮೂರು ಕಿಮೀಗಳಷ್ಟು ಹಾದಿ ಹೊಂದಿದೆ. ಒಂದಿಷ್ಟು ಬಿದಿರು ಕಾಡು, ಇನ್ನೊಂದಿಷ್ಟು, ಹಳೇ ದೊಡ್ಡ ದೊಡ್ಡ ಮರಗಳಿರುವ ಪುಟ್ಟ ಕಾಡಿದು. ಬೆಳಗಿನ ಹಾಗೂ ಸಂಜೆ ಹೊತ್ತು ಇದರೊಳಗೆ ಒಮ್ಮೆ ಹೊಕ್ಕರೆ, ಬೆಂಗಳೂರಿನ ಸದ್ದುಗದ್ದಲದ ರಸ್ತೆ ದಾಟಿದರೆ ಇಂಥದ್ದೊಂದು ಕಾಡು ಇತ್ತೆಂಬುದೂ ಅರಿಯದು. ವಿವಿಧ ಜಾತಿ ಪಕ್ಷಿ ಸಂಕುಲಗಳಿಗೆ ನೆಲೆಯಾಗಿರುವ ಈ ಕಾಡಿನಲ್ಲೊಮ್ಮೆ ನಡೆದಾಡಿ ಬಂದರೆ ಮನಸ್ಸು ಪ್ರಫುಲ್ಲವಾಗುತ್ತದೆ.

ತುರಹಳ್ಳಿ ಕಾಡು

೩. ತುರಹಳ್ಳಿ ಕಾಡು:‌ ಕನಕಪುರ ರಸ್ತೆಯಲ್ಲಿರುವ ತುರಹಳ್ಳಿ ಕಾಡು ಕೂಡಾ ಒಂದು ಉತ್ತಮ ಆಯ್ಕೆ. ಇತ್ತೀಚಿನ ದಿನಗಳಲ್ಲಿ, ಈ ಜಾಗದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದರಿಂದ ಇದು ಒಬ್ಬರೇ ಹೋಗಲು ಹೆಚ್ಚು ಪ್ರಶಸ್ತವಾದುದಲ್ಲ ಎನ್ನಲಾಗಿತ್ತು. ಹಾಗಾಗಿ ಈ ಪ್ರದೇಶವನ್ನು ಸಾರ್ವಜನಿಕರಿಗೆ ನಿರ್ಬಂಧಿಸಿಯೂ ಇಟ್ಟಿದ್ದರು. ಆದ್ದರಿಂದ ಮೊದಲೇ ವಿಚಾರಿಸಿ ಇಲ್ಲಿಗೆ ಹೋಗಬಹುದು. ಪುಟ್ಟ ಕಾಡು, ಸುಲಭವಾಗಿ ನಡೆದು ಸಾಗಬಹುದಾದ ಸಣ್ಣ ಬೆಟ್ಟ, ಬಂಡೆ ಏರಿ ನಿಂತರೆ, ಬೆಂಗಳೂರು ನಗರ ದರ್ಶನವೇ ಇಲ್ಲಿಂದ ಆಗುತ್ತದೆ.

ಜಯನಗರ ಮಿನಿ ಕಾಡು

೪. ಜಯನಗರ ಮಿನಿ ಕಾಡು: ಜಯನಗರ ಏಳನೇ ಬ್ಲಾಕ್‌ನಲ್ಲಿರುವ ಪುಟಾಣಿ ಮಿನಿ ಕಾಡು ಒಂದು ಅದ್ಭುತ ಜಾಗ. ದಿನವೂ ನಮ್ಮ ಏರಿಯಾದ ಪುಟ್ಟ ಪಾರ್ಕಿನ ವಾಕ್‌ ಬೋರಾದರೆ, ಇನ್ನೊಂದು ಪಾರ್ಕಿಗೆ ಒಂದಷ್ಟು ದಿನದ ವಾಕ್‌ಗೆ ಸ್ಥಳಾಂತರಗೊಳ್ಳುವ ಮನಸ್ಸುಳ್ಳ ಮಂದಿಗೆ ಇದು ಯೋಗ್ಯ ಜಾಗ. ಹಸಿರ ನಡುವೆ ವಾಕಿಂಗ್‌ ಮಾಡಲು ನಿರ್ಮಿಸಿದ ಟ್ರ್ಯಾಕ್‌, ಹೆಚ್ಚು ಹೊತ್ತು ವಾಕ್‌ ಮಾಡಬಹುದಾಷ್ಟು ಸ್ಥಳಾವಕಾಶ, ಮಕ್ಕಳ ಪಾರ್ಕ್‌ ಇವೆಲ್ಲವೂ ವೀಕೆಂಡ್‌ಗಳಲ್ಲಿ ಕುಟುಂಬ ಸಮೇತರಾಗಿ ಸಂಜೆಯ ಹೊತ್ತು ಸಮಯ ಕಳೆದು ಬರಲೂ ಪ್ರಶಸ್ತವಾಗಿದೆ.

೫. ಹೆಬ್ಬಾಳದ ಕೃಷಿ ವಿಜ್ಞಾನ ಕಾಲೇಜು ಕ್ಯಾಂಪಸ್:‌ ಹೆಬ್ಬಾಳದ ಕೃಷಿ ವಿಜ್ಞಾನ ಕಾಲೇಜು ಆವರಣದ ಕಾಡು ಕೂಡಾ ಒಂದು ಅತ್ಯುತ್ತಮ ಆಯ್ಕೆ. ನೈಸರ್ಗಿಕ ಕಾಡು, ಗಂಟೆಗಳಷ್ಟು ಕಾಲ ನಡೆದರೂ ಮುಗಿಯದ ಜಾಗಗಳು, ನಗರದೊಳಗಿದ್ದೂ ಹಸಿರ ಸಂಗ ಬಯಸುವ, ದಿನವೂ ಉಸಿರಾಡಲು ಜಾಗ ಬಯಸುವ ಮಂದಿಯ ಮನಸ್ಸಿಗೆ ತಂಪೆರೆಯಬಹುದು. ಈ ಎಲ್ಲ ಜಾಗಗಳು ಪಕ್ಷಿ ಪ್ರಿಯರಿಗೂ ಮೆಚ್ಚಿನ ತಾಣಗಳು.

ಇದನ್ನೂ ಓದಿ: Rain travel: ಮಳೆಯಲಿ ಜೊತೆಯಲಿ ಇಲ್ಲಿಗೆ ಪ್ರವಾಸ ಮಾಡಿ!

Exit mobile version