ಜಗತ್ತಿನ ಪ್ರತಿಷ್ಠಿತ ವೈಮಾನಿಕ ಪ್ರದರ್ಶನವಾಗಿರುವ ಏರೋ ಇಂಡಿಯಾ-2023ಕ್ಕೆ (2023 Aero India) ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದಾರೆ. ಏರೋ ಇಂಡಿಯಾ ಕೇವಲ ಒಂದು ಶೋ ಅಲ್ಲ. ಇದು ಹೊಸ ಭಾರತದ ಹೊಸ ಶಕ್ತಿ. ಕಳೆದ 8- 9 ವರ್ಷಗಳಿಂದ ಈ ವೈಮಾನಿಕ ಪ್ರದರ್ಶನಕ್ಕೆ ಹೊಸ ಅರ್ಥವನ್ನೇ ಕಲ್ಪಿಸಲಾಗಿದ್ದು, ಇದೊಂದು ಅವಕಾಶಗಳ ವೇದಿಕೆಯಾಗಿದೆ ಎಂದಿದ್ದಾರೆ. ಏರೋ ಇಂಡಿಯಾ ಆಯೋಜನೆ ಭಾರತದ ಹೆಚ್ಚುತ್ತಿರುವ ಶಕ್ತಿಯ ಪ್ರತೀಕ. ಇಷ್ಟು ದೇಶಗಳು ಭಾಗವಹಿಸುತ್ತಿರುವುದನ್ನು ನೋಡಿದರೆ, ಭಾರತದ ಕುರಿತು ವಿಶ್ವದ ವಿಶ್ವಾಸವನ್ನು ತೋರಿಸುತ್ತದೆ. ಆತ್ಮನಿರ್ಭರವಾಗುವ ಭಾರತದ ಶಕ್ತಿ ಹೀಗೇ ಮುಂದುವರಿಯಲಿ ಎಂದು ಆಶಿಸಿದ್ದಾರೆ. ಭಾರತದಲ್ಲಿ, ಕರ್ನಾಟಕದಲ್ಲಿ ಹೂಡಿಕೆ ಮಾಡಲು ರಾಷ್ಟ್ರೀಯ- ಅಂತಾರಾಷ್ಟ್ರೀಯ ಉದ್ಯಮಿಗಳಿಗೆ ಕರೆ ನೀಡಿದ್ದಾರೆ.
ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಐದು ದಿನ ನಡೆಯಲಿರುವ ಏಷ್ಯಾದ ಅತ್ಯಂತ ದೊಡ್ಡ ಏರ್ ಶೋ ಎನಿಸಿದ ಈ ಪ್ರದರ್ಶನ 1996ರಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ಈ ಸಲದ ಏರ್ ಶೋ 14ನೇ ಆವೃತ್ತಿ. ಹಲವಾರು ದೇಶಗಳ ರಕ್ಷಣಾ ಸಚಿವರು, ಹಲವಾರು ವೈಮಾನಿಕ ಸಂಸ್ಥೆಗಳ ಮುಖ್ಯಸ್ಥರು ಶೋದಲ್ಲಿ ಭಾಗವಹಿಸುತ್ತಾರೆ. ಬಾನಂಗಳದಲ್ಲಿ ಯುದ್ಧ ವಿಮಾನಗಳು, ಸೇನಾಪಡೆಯ ಹೆಲಿಕಾಪ್ಟರ್‌ಗಳ ರೋಚಕ ಹಾರಾಟವನ್ನು ಜನರು ವೀಕ್ಷಿಸಿದರೆ, ಅದೇ ವೇಳೆಗೆ ಉನ್ನತ ಮಟ್ಟದಲ್ಲಿ ವಿಮಾನಗಳ ಕೊಡು ಕೊಳ್ಳುವಿಕೆಯ ಮಾತುಕತೆಗಳು ನಡೆಯುತ್ತವೆ. ಹೀಗಾಗಿಯೇ ಇದು ಭಾರತದ ಶಕ್ತಿ ಪ್ರದರ್ಶನವೂ ಹೌದು, ವಾಣಿಜ್ಯ ಅವಕಾಶವೂ ಹೌದು.
ಈ ಬಾರಿ ಏರೋ ಶೋದಲ್ಲಿ 98 ದೇಶಗಳಿಂದ 809 ಕಂಪನಿಗಳು ಭಾಗಿಯಾಗಿವೆ. ಭಾರತೀಯ ಹಾಗೂ ವಿದೇಶಿ ಕಂಪನಿಗಳ ನಡುವೆ ಅನೇಕ ಒಪ್ಪಂದಗಳು ಏರ್ಪಡುವ ಸಾಧ್ಯತೆಗಳಿದ್ದು, ಸುಮಾರು 251 ಒಪ್ಪಂದಗಳಿಗೆ ಸಹಿ ಬೀಳುವ ಸಾಧ್ಯತೆ ಇದೆ. ಜತೆಗೆ, ಸುಮಾರು 75 ಸಾವಿರ ಕೋಟಿ ಹೂಡಿಕೆಯನ್ನು ನಿರೀಕ್ಷಿಸಲಾಗಿದೆ. ಭಾರತವು ಏರ್‌ಬಸ್ ಎಸ್‌ಇ ಮತ್ತು ಬೋಯಿಂಗ್ ಕಂಪನಿಗಳಿಂದ ಸುಮಾರು 100 ಶತಕೋಟಿ ಡಾಲರ್ ವೆಚ್ಚದಲ್ಲಿ 500 ಜೆಟ್‌ಗಳನ್ನು ಖರೀದಿಸುವ ಸಾಧ್ಯತೆ ಇದೆ. ಮಹತ್ವದ ಒಂದು ಬೆಳವಣಿಗೆಯಲ್ಲಿ, ನಮ್ಮ ಸಾರ್ವಜನಿಕ ವಲಯದ ಎಚ್‌ಎಎಲ್ ಉತ್ಪಾದಿಸುವ ಲಘು ಯುದ್ಧ ವಿಮಾನ ತೇಜಸ್ ಎಂಕೆ 1ಎ ಅನ್ನು ಆಮದು ಮಾಡಿಕೊಳ್ಳಲು ಅರ್ಜೆಂಟೀನಾ ಮತ್ತು ಮಲೇಷ್ಯಾ ಸಜ್ಜಾಗಿವೆ.
ಭಾರತದ ರಕ್ಷಣಾ ಕ್ಷೇತ್ರವು ಹಿಂದೆಂದಿಗಿಂತಲೂ ವೇಗವಾಗಿ ಮುನ್ನುಗ್ಗುತ್ತಿದೆ. ಈಗ ನೂರೈವತ್ತು ಕೋಟಿ ಡಾಲರ್ ಮೊತ್ತದಷ್ಟು ಇರುವ ಭಾರತದ ರಕ್ಷಣಾ ರಫ್ತು ಪ್ರಮಾಣ 2024ರ ವೇಳೆಗೆ ಐದುನೂರು ಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಇದಕ್ಕೆ ಏರೋ ಇಂಡಿಯಾ ಒಂದು ಚಿಮ್ಮು ಹಲಗೆಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಖಾಸಗಿ ಕ್ಷೇತ್ರ ಹಾಗೂ ಹೂಡಿಕೆದಾರರ ಪಾತ್ರ ಮಹತ್ವದ್ದು. ಅನುಭವ, ಬೇಡಿಕೆ, ಕೌಶಲ್ಯ ಎಲ್ಲವನ್ನೂ ಹೊಂದಿರುವ ಉದ್ಯಮಗಳಿಗೆ, ಉದ್ಯೋಗಿಗಳಿಗೆ ಇದು ಸುವರ್ಣಾವಕಾಶ. ಈ ಹಿಂದೆ ಅತಿ ದೊಡ್ಡ ರಕ್ಷಣಾ ಉಪಕರಣ ಆಮದು ರಾಷ್ಟ್ರವಾಗಿದ್ದ ಭಾರತ ಈಗ ಐವತ್ತಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ ಎಂಬುದೇ ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ರಫ್ತು ಮತ್ತಷ್ಟು ಹೆಚ್ಚಾಗಲಿದೆ. ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಬಹುದೊಡ್ಡ ಅವಕಾಶವಿದೆ. ಇದಕ್ಕೆ ನಮ್ಮ ಹೆಮ್ಮೆಯ ಸಂಸ್ಥೆಗಳಾದ ಎಚ್‌ಎಎಲ್, ಡಿಆರ್‌ಡಿಒ, ಇಸ್ರೋ ಮುಂತಾದವುಗಳು ನೀಡಿದ ಕೊಡುಗೆ ಬಹಳಷ್ಟಿದೆ.
ಇದನ್ನೂ ಓದಿ : ವಿಸ್ತಾರ TOP 10 NEWS: ಐದು ದಿನದ ಏರೋ ಇಂಡಿಯಾಕ್ಕೆ ಭವ್ಯ ಚಾಲನೆಯಿಂದ, ಮಹದಾಯಿ ಕುರಿತು ಗೋವಾ ಅರ್ಜಿ ವಜಾವರೆಗಿನ ಪ್ರಮುಖ ಸುದ್ದಿಗಳಿವು
ಇತ್ತೀಚೆಗೆ ಪ್ರಧಾನಿ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಉದ್ಘಾಟಿಸಿದ, ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಘಟಕ ಎನಿಸಿದ ಎಚ್‌ಎಎಲ್ ಫ್ಯಾಕ್ಟರಿಯಲ್ಲಿ 3 ಟನ್‌ನಿಂದ 12 ಟನ್ ತೂಕದ ತನಕ ವಿವಿಧ ಶ್ರೇಣಿಗಳ ಹೆಲಿಕಾಪ್ಟರ್‌ಗಳು ನಿರ್ಮಾಣವಾಗಲಿವೆ. ಇವು ದೇಶದ ಮಿಲಿಟರಿ ಮತ್ತು ನಾಗರಿಕ ಅಗತ್ಯಗಳನ್ನು ಪೂರೈಸಲಿವೆ. ಹಾಗೆಯೇ ದೇಶದ ಮೊದಲ ಮೇಕ್ ಇನ್ ಇಂಡಿಯಾ ಹಗುರ ಯುದ್ಧ ವಿಮಾನ ತೇಜಸ್ ನಮ್ಮ ಹೆಮ್ಮೆ. ವೈಮಾನಿಕ ಕ್ಷೇತ್ರ ಭವಿಷ್ಯದ ಕ್ಷೇತ್ರ. ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಈ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಕಟಿಬದ್ಧವಾಗಿದೆ. ಇದರೊಂದಿಗೆ ಇದರ ಸುತ್ತಲಿನ ಇತರ ಹಲವು ವಲಯಗಳೂ ಬೆಳೆಯಲಿವೆ. ಇದು ಸ್ಟಾರ್ಟಪ್‌ಗಳಿಗೆ, ಯುವ ಉದ್ಯಮಿಗಳಿಗೆ ಹೊಸ ಆವಿಷ್ಕಾರಗಳಿಗೆ ನೆರವಾಗಲಿದೆ. ಆರ್ಥಿಕತೆಗೆ ಇನ್ನಷ್ಟು ಉತ್ತೇಜನ ಸಿಗಲಿದೆ. ಉದ್ಯಮಶೀಲತೆಯನ್ನೂ ಸುಗಮಗೊಳಿಸಲಾಗಿದ್ದು, ಕೆಂಪು ಪಟ್ಟಿಯ ಬದಲಿಗೆ ಕೆಂಪು ಹಾಸು ಹಾಸಲಾಗುತ್ತಿದೆ. ಸುಸ್ಥಿರವಾದ ಅಭಿವೃದ್ಧಿಗೆ ಇದು ಮೂಲವಾಗಬೇಕು. ಸ್ಥಳೀಯರಿಗೂ ಹೆಚ್ಚಿನ ಉದ್ಯೋಗ, ಕೌಶಲ ವೃದ್ಧಿಗೆ ಕಾರಣವಾಗಬೇಕು. ದೇಶದ ಲಕ್ಷ ಕೋಟಿ ಜಿಡಿಪಿ ಕನಸಿಗೆ ವೈಮಾನಿಕ ಕ್ಷೇತ್ರವೂ ಕೊಡುಗೆ ನೀಡುವಂತಾಗಬೇಕು.