Site icon Vistara News

ವಿಸ್ತಾರ ಸಂಪಾದಕೀಯ | ಬೆಚ್ಚಿ ಬೀಳಿಸಿದ ದೆಹಲಿ ಅಪರಾಧ

Delhi Crime

ದೆಹಲಿಯಲ್ಲಿ ನಡೆದ ಬರ್ಬರ ಅಪರಾಧ ಕೃತ್ಯವೊಂದು ದೇಶವನ್ನೇ ಬೆಚ್ಚಿಬೀಳಿಸಿದೆ. ಅಫ್ತಾಬ್‌ ಪೂನಾವಾಲಾ ಎಂಬ ತರುಣ, ತಾನು ಹಲವು ವರ್ಷಗಳಿಂದ ಲಿವ್‌ ಇನ್‌ ಸಂಬಂಧದಲ್ಲಿದ್ದ ಶ್ರದ್ಧಾ ವಾಕರ್‌ ಎಂಬ ಯುವತಿಯನ್ನು ಕೊಂದು ಹಾಕಿದ್ದೂ ಅಲ್ಲದೆ, ಆಕೆಯ ದೇಹವನ್ನು ಚೂರು ಚೂರಾಗಿ ಕತ್ತರಿಸಿ, ಚೂರುಗಳನ್ನು ಪ್ರತಿರಾತ್ರಿ ಕಾಡಿಗೆ ಹೋಗಿ ಎಸೆದು ಬಂದಿದ್ದಾನೆ. ಈ ಪಾತಕದ ಹಿಂದಿನ ಬರ್ಬರತೆ, ಇದರ ಹಿಂದೆ ಕೆಲಸ ಮಾಡಿರಬಹುದಾದ ಮನಸ್ಥಿತಿ, ಇಂಥ ಕೊಲೆಗಡುಕತನವನ್ನು ಪ್ರೇರಿಸುತ್ತಿರುವ ಸಾಮಾಜಿಕ- ಸಾಂಸಾರಿಕ ಕ್ಷೋಭೆಗಳು- ಎಲ್ಲವನ್ನೂ ಈ ಹಿನ್ನೆಲೆಯಲ್ಲಿ ನಾವು ಪರಿಶೀಲಿಸಬೇಕಿದೆ.

ನಮ್ಮಲ್ಲಿ ಅಪರಾಧ ತನಿಖೆ ಸಾಕಷ್ಟು ಆಧುನಿಕವಾಗಿದೆ. ನಮ್ಮ ಪೊಲೀಸ್‌ ವ್ಯವಸ್ಥೆ ಸಂಪೂರ್ಣ ಚುರುಕಾಗಿ ಕೆಲಸ ಮಾಡಿದರೆ ಎಂಥ ಅಪರಾಧಿಗಳನ್ನೂ ಒಳಗೆ ತಳ್ಳಬಹುದು ಎಂಬುದನ್ನು ನಾವು ಕಂಡಿದ್ದೇವೆ. ಅದರೆ ತುಂಬಾ ಪ್ರಕರಣಗಳಲ್ಲಿ ಸಡಿಲವಾದ ತನಿಖೆ, ಸಾಕ್ಷ್ಯಗಳ ಕೊರತೆ, ಗಟ್ಟಿ ಪ್ರಾಸಿಕ್ಯೂಶನ್‌ ಇಲ್ಲದಿರುವುದರಿಂದ ಫೋರ ಅಪರಾಧಗಳೂ ಖುಲಾಸೆಯಾಗಿಬಿಡುತ್ತಾರೆ. ನ್ಯಾಯಾಂಗವೂ ಅಸಹಾಯಕವಾಗಿಬಿಡುತ್ತದೆ. ಹೀಗಾಗದಿರಲು, ಈ ಕೃತ್ಯದ ಸಮಗ್ರ ತನಿಖೆ, ಪೂರಕ ಸಾಕ್ಷ್ಯಗಳ ಕಲೆಹಾಕುವಿಕೆ, ದೃಢವಾದ ಪ್ರಾಸಿಕ್ಯೂಶನ್‌ ನಿಯೋಜನೆ ಇವೆಲ್ಲವೂ ನಡೆಯಬೇಕು. ಹಾಗೆಯೇ ಕ್ಷಿಪ್ರ ವಿಚಾರಣೆಯೂ ನಡೆದು ಮೃತ ವ್ಯಕ್ತಿಗೆ ನ್ಯಾಯ ದೊರಕಿಸುವ ಪ್ರಕ್ರಿಯೆಯೂ ನಡೆಯಬೇಕು. ಇಂಥ ಕ್ರೌರ್ಯ ಮೆರೆದ ವ್ಯಕ್ತಿಗೆ ಗಲ್ಲು ಶಿಕ್ಷೆಯಲ್ಲದೆ ಬೇರೊಂದು ಸೂಕ್ತವಾಗದು. ಆದರೆ ಇದನ್ನು ಸಾಬೀತುಪಡಿಸುವುದು ಮತ್ತು ಜಾರಿಗೊಳಿಸುವುದು ನಮ್ಮ ತನಿಖಾ ಸಂಸ್ಥೆಗಳ ಹಾಗೂ ನ್ಯಾಯಾಂಗದ ಬದ್ಧತೆಯಾಗಬೇಕು.

ಪಾತಕಿ ಅಫ್ತಾಬ್‌ಗೆ ತನ್ನ ಕೃತ್ಯದ ಬಗ್ಗೆ ಎಳ್ಳಿನಿತೂ ಖೇದವಾಗಿಲ್ಲ ಎಂಬ ವಿವರದ ಹಿಂದೆ, ಇಂಥ ಕ್ರೌರ್ಯವನ್ನು ಅತಿ ಸಾಮಾನ್ಯ ಎಂದು ಸ್ವೀಕರಿಸುವ ಮನಸ್ಥಿತಿ ಇರಬಹುದು. ಇದು ಅಫ್ತಾಬ್‌ನಲ್ಲಿ ಮಾತ್ರವೇ ಇರಬಹುದು ಎನ್ನುವಂತಿಲ್ಲ; ಆತನಲ್ಲಿ ಇರಬಹುದಾದರೆ, ಆತನಂಥದೇ ಸಾಮಾಜಿಕ ಸನ್ನಿವೇಶಗಳಲ್ಲಿ ಬೆಳೆದ ಅವನ ವಯೋಮಾನದ ಬಹಳ ಮಂದಿಯಲ್ಲೂ ಇದು ಇರುವ ಸಾಧ್ಯತೆ ಇದೆ. ಇದೊಂದು ಮಾನಸಿಕ ಕಾಯಿಲೆ ಎಂದು ತಳ್ಳಿಹಾಕುವಂತಿಲ್ಲ. ಅಪರಾಧ ಮನಸ್ಥಿತಿಯೊಂದು ಕಾಯಿಲೆಯಲ್ಲ. ಅದು ಪರಿಣಾಮದ ಅರಿವಿದ್ದೂ ಜಾಣತನದಿಂದ ಮಾಡುವ ದುಷ್ಕೃತ್ಯ. ತನ್ನ ಅಪರಾಧವನ್ನು ಮುಚ್ಚಿಡಲು, ಸಾಕ್ಷಿನಾಶ ಮಾಡಲು ಆತ ಮಾಡಿದ ಪ್ರಯತ್ನಗಳು ಇದನ್ನೇ ಸಾರುತ್ತಿವೆ. ಪಾತಕದ ಹಿಂದೆ ವೆಬ್‌ ಸರಣಿಯೊಂದರ ಪ್ರೇರಣೆ ಇದೆ ಎಂಬುದೂ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ, ನಮ್ಮ ಯುವಜನತೆ ಹೆಚ್ಚಾಗಿ ವೀಕ್ಷಿಸುವ ವಿದೇಶಿ ಒಟಿಟಿಗಳ ಹಾಗೂ ಹಾಲಿವುಡ್‌ ಸರಣಿಗಳಲ್ಲಿ ಪ್ರಸಾರವಾಗುವ ಹಿಂಸಾತ್ಮಕ ದೃಶ್ಯಗಳ ಪ್ರೇರಣೆ ನಮ್ಮ ಯುವಜನತೆಯ ಮೇಲೆ ಹೇಗೆ ಆಗುತ್ತಿದೆ ಎಂಬುದನ್ನೂ ಪರಿಶೀಲಿಸಬೇಕಾದ ಅಗತ್ಯವಿದೆ.

ಇದರ ಜೊತೆಗೇ ಇಟ್ಟು ನೋಡಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ, ದೊಡ್ಡ ಪ್ರಮಾಣದ ಯುವಜನತೆಯಲ್ಲಿ ಕಂಡುಬರುತ್ತಿರುವ ಸ್ವೇಚ್ಛಾ ಮನಸ್ಥಿತಿ. ನಮ್ಮ ಸಂವಿಧಾನ ಇಲ್ಲಿನ ನಾಗರಿಕರಿಗೆ ವ್ಯಕ್ತಿ ಸ್ವಾತಂತ್ರ್ಯವನ್ನೂ ಧಾರ್ಮಿಕ ಸ್ವಾತಂತ್ರ್ಯವನ್ನೂ ನೀಡಿದೆ. ಇಂದು ಮಧ್ಯಮ, ಮೇಲ್ಮಧ್ಯಮ ವರ್ಗಕ್ಕೆ ಆಧುನಿಕ ಶಿಕ್ಷಣವೂ ದೊರೆಯುತ್ತಿದೆ. ಅದರ ಜತೆಗೇ ಹಲವಾರು ಆಧುನಿಕ ವಿಕೃತಿಗಳೂ ಸೇರಿಕೊಂಡಿವೆ. ತಂದೆ ತಾಯಿ ಕಷ್ಟಪಟ್ಟು ಮಕ್ಕಳ ಬಾಳು ಬೆಳಕಾಗಲೆಂದು ಉನ್ನತ ಶಿಕ್ಷಣ ಕೊಡಿಸುತ್ತಾರೆ. ಆದರೆ ತಾರುಣ್ಯಾವಸ್ಥೆಯಲ್ಲಿಯೇ, ಸೂಕ್ತ ಉದ್ಯೋಗ ಹಾಗೂ ಬದುಕಿನ ಉದ್ದಿಶ್ಯಗಳನ್ನು ಕಂಡುಕೊಳ್ಳುವ ಮುನ್ನವೇ ಈ ವಿಕೃತಿಗಳು ಅವರನ್ನು ಸೆಳೆಯುತ್ತವೆ. ಭಾರತೀಯ ಪರಂಪರೆಗೆ ಸಹಜವಾದ, ಒಟ್ಟು ಸಾಮಾಜಿಕ ವ್ಯವಸ್ಥೆಗೆ ಉತ್ತರದಾಯಿಯೂ ಆದ ದಾಂಪತ್ಯವೆಂಬ ಸಂಸ್ಥೆಯನ್ನು ಧಿಕ್ಕರಿಸಿ, ಲಿವ್‌ ಇನ್‌ ಎಂಬ ಸಂಬಂಧದ ಸುಳಿಗೆ ಬೀಳುತ್ತಾರೆ. ಮದುವೆಗೆ ಮುನ್ನ ಪರಸ್ಪರ ಅರ್ಥ ಮಾಡಿಕೊಳ್ಳುವ ಒಳ್ಳೆಯ ಉದ್ದೇಶದಿಂದ ಸೃಷ್ಟಿಯಾಗಿರಬಹುದಾದ ಇದು, ಇಂದು ಸಮಾಜಹಿತವನ್ನೇ ಬೆದರಿಸುವ ಮಟ್ಟಕ್ಕೆ ಬಂದಿದೆ. ಇಲ್ಲಿ ದೈಹಿಕ ಸಂಬಂಧವಿದೆಯೇ ಹೊರತು ಬೇರೆ ಯಾವ ಉತ್ತರದಾಯಿತ್ವವೂ ಇಲ್ಲ. ಸಂಬಂಧದ ಒಂದು ಹಂತದಲ್ಲಿ ಹೆಣ್ಣಿನ ಮನದಲ್ಲಿ ಸೃಷ್ಟಿಯಾಗಬಹುದಾದ ಅಭದ್ರತೆಗೆ ಉತ್ತರಿಸುವ ಶಕ್ತಿ ಈ ಲಿವ್‌ ಇನ್‌ ಸಂಬಂಧಕ್ಕಿಲ್ಲ. ದೆಹಲಿಯ ಅಪರಾಧದಲ್ಲಿಯೂ, ತನ್ನನ್ನು ಮದುವೆಯಾಗೆಂದು ಪೀಡಿಸಿದ್ದರಿಂದಲೇ ಶ್ರದ್ಧಾಳನ್ನು ಅಫ್ತಾಬ್‌ ಕೊಂದುಹಾಕಿದ್ದು ಸ್ಪಷ್ಟವಾಗಿದೆ. ಅಂದರೆ, ಲಿವ್‌ ಇನ್‌ ಎಂಬ ಬದ್ಧತೆರಹಿತವಾದ ಸಂಬಂಧವೇ ಈ ಅಪರಾಧಕ್ಕೆ ಕಾರಣವಾಗಿದೆ. ಇದನ್ನೂ ಕೂಡ ಭಾರತೀಯ ಸಮಾಜ, ಯುವಜನತೆ ಮನಗಾಣಬೇಕು.

ಈ ಪ್ರಕರಣದಲ್ಲಿರುವ ಮತಾಂತರ ಹಾಗೂ ಲವ್‌ ಜಿಹಾದ್‌ ಆಯಾಮದ ಬಗ್ಗೆಯೂ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಈ ಬಗ್ಗೆಯೂ ತನಿಖೆಯಾಗಬೇಕು. ಹೀಗೊಂದು ಆಯಾಮ ಇದಕ್ಕಿದ್ದರೆ, ಇಂಥ ಪ್ರಕರಣಗಳು ಇನ್ನಷ್ಟು ನಡೆಯದಂತೆ ಕ್ರಮ ತೆಗೆದುಕೊಳ್ಳುವುದೂ ಸಾಧ್ಯವಾಗಬೇಕು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಬಾಲಿಯಲ್ಲಿ ಭಾರತದ ರಾಜತಾಂತ್ರಿಕ ವಿವೇಕ

Exit mobile version