Site icon Vistara News

ವಿಸ್ತಾರ ಸಂಪಾದಕೀಯ: ಭಾರತದ ನ್ಯಾಯಪ್ರಕ್ರಿಯೆಯಲ್ಲಿ ಅಮೆರಿಕದ ಹಸ್ತಕ್ಷೇಪ ಅಧಿಕ ಪ್ರಸಂಗತನ

Joe Biden And Arvind Kejriwal

Vistara Editorial: US interference in India's judicial process is a high occurrence

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರನ್ನು ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಸಂಬಂಧಿಸಿರುವ ಕುರಿತು ಅಮೆರಿಕದ ವಿದೇಶಾಂಗ ಇಲಾಖೆ ನೀಡಿರುವ ಅನಗತ್ಯ ಪ್ರತಿಕ್ರಿಯೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀವ್ರ ಆಕ್ಷೇಪಣೆ, ಕಳವಳ ವ್ಯಕ್ತಪಡಿಸಿದೆ. ಇದನ್ನು ತಿಳಿಸಲು ಅಮೆರಿಕದ ಹಂಗಾಮಿ ಉಪ ರಾಯಭಾರಿ ಗ್ಲೋರಿಯಾ ಬರ್ಬೆನಾ ಅವರನ್ನು ಬುಧವಾರ ಕರೆಸಿ, ಭಾರತದ ನಿಲುವನ್ನು ಅವರಿಗೆ ವಿವರಿಸಲಾಗಿದೆ. “ರಾಜತಾಂತ್ರಿಕತೆಯಲ್ಲಿ, ದೇಶಗಳು ಇತರರ ಸಾರ್ವಭೌಮತ್ವ ಮತ್ತು ಆಂತರಿಕ ವ್ಯವಹಾರಗಳನ್ನು ಗೌರವಿಸುತ್ತವೆ ಎಂದು ನಿರೀಕ್ಷಿಸಲಾಗಿದೆ. ಸಹವರ್ತಿ ಪ್ರಜಾಪ್ರಭುತ್ವಗಳಲ್ಲಿ ಈ ಜವಾಬ್ದಾರಿ ಇನ್ನೂ ಹೆಚ್ಚು. ಇದು ಇಲ್ಲದಿದ್ದರೆ ಅನಾರೋಗ್ಯಕರ ಪೂರ್ವನಿದರ್ಶನಗಳು ಸೃಷ್ಟಿಯಾಗಬಹುದು. ಭಾರತದ ಕಾನೂನು ಪ್ರಕ್ರಿಯೆಗಳು ವಸ್ತುನಿಷ್ಠವಾದ ಮತ್ತು ಸಮಯೋಚಿತ ಫಲಿತಾಂಶಗಳಿಗೆ ಬದ್ಧವಾಗಿರುವ ಸ್ವತಂತ್ರ ನ್ಯಾಯಾಂಗವನ್ನು ಆಧರಿಸಿವೆ. ಅದರ ಮೇಲೆ ನಮ್ಮ ಹೇರಿಕೆ ಅನಗತ್ಯ” ಎಂದು ಎಂಇಎ ಅಮೆರಿಕಕ್ಕೆ ತಿಳಿಸಿದೆ.

ಅರವಿಂದ್ ಕೇಜ್ರಿವಾಲ್ ಬಂಧನ ಕುರಿತಾದ ವರದಿಗಳನ್ನು ತಾನು ಪರಿಶೀಲಿಸುತ್ತಿರುವುದಾಗಿ ಮಂಗಳವಾರ ಅಮೆರಿಕ ವಿದೇಶಾಂಗ ಇಲಾಖೆ ಹೇಳಿದ್ದು, ನ್ಯಾಯಸಮ್ಮತ ಹಾಗೂ ಸಕಾಲಿಕ ಕಾನೂನು ಪ್ರಕ್ರಿಯೆಯನ್ನು ಖಾತರಿಪಡಿಸುವಂತೆ ಭಾರತಕ್ಕೆ ಸಲಹೆ ನೀಡಿತ್ತು. ಆರೋಪ ಎದುರಿಸುವ ಭಾರತದ ಇತರೆ ಯಾವುದೇ ಪ್ರಜೆಯಂತೆ ಅರವಿಂದ್ ಕೇಜ್ರಿವಾಲ್ ಅವರು ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತಿ ವಿಚಾರಣೆಗೆ ಅರ್ಹರಾಗಿದ್ದಾರೆ ಎಂದು ಜರ್ಮನಿಯ ವಿದೇಶಾಂಗ ಕಚೇರಿ ಕೂಡ ಕೆಲವು ದಿನಗಳ ಹಿಂದೆ ಹೇಳಿತ್ತು. ಜರ್ಮನಿಯ ರಾಯಭಾರಿಗೂ ಸಮನ್ಸ್ ನೀಡಿ ಭಾರತ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು.

ಅಮೆರಿಕದ ಈ ನಡೆ ಆ ದೇಶದ ತಿಕ್ಕಲುತನವನ್ನು ತೋರಿಸುತ್ತದಲ್ಲದೇ ಇನ್ನೇನೂ ಅಲ್ಲ. ಭಾರತವು ಕಾನೂನಿನ ಆಳ್ವಿಕೆಯನ್ನು ಹೊಂದಿರುವ ದೃಢವಾದ ಪ್ರಜಾಪ್ರಭುತ್ವ ಎಂಬುದರಲ್ಲಿ ಸಂಶಯವಿಲ್ಲ. ಭಾರತದ ನ್ಯಾಯಾಂಗ ಬೇರೆ ದೇಶಗಳಿಗಿಂತ ಎಷ್ಟೋ ಪಕ್ವವಾಗಿದೆ; ಪಾರದರ್ಶಕವಾಗಿದೆ. ಇಲ್ಲಿನ ನ್ಯಾಯಾಧೀಶರು ಆಳುವವರ ಕೈಗೊಂಬೆಗಳಲ್ಲ. ಪ್ರಕರಣ ಸತ್ಯಾಸತ್ಯತೆಗಳನ್ನು ಪರಿಗಣಿಸಿ ನ್ಯಾಯ ನೀಡಬಲ್ಲ ಸಮರ್ಥರು. ಆರೋಪಿಯು ತನ್ನ ಪರವಾಗಿ ವಾದವನ್ನು ಮಂಡಿಸಲು, ಸಾಕ್ಷಿಗಳನ್ನು ಒದಗಿಸಲು, ಕಟಕಟೆಯಿಂದ ಪಾರಾಗಲು ಇಲ್ಲಿ ಸಾಕಷ್ಟು ಕಾನೂನಾತ್ಮಕ ಅವಕಾಶಗಳಿವೆ. ಇಡಿ ವಿಚಾರಣೆಯನ್ನು ಎದುರಿಸುತ್ತಿದ್ದರು ಎಲ್ಲರೂ ಅಪರಾಧಿಗಳಾಗಿರಲಾರರು. ವಿಚಾರಣೆ ಎದುರಿಸಿ ಬಳಿದ ಖುಲಾಸೆ ಆದವರೂ ಇದ್ದಾರೆ. ಕೇಜ್ರಿವಾಲ್‌ ನಿರ್ದೋಷಿಯಾಗಿದ್ದರೆ ಅವರು ಮತ್ತು ಅವರ ಪರ ಸಹಾನುಭೂತಿ ವ್ಯಕ್ತಡಿಸುವವರು ಅಂಜುವ ಅಗತ್ಯವಿಲ್ಲ. ಎಲ್ಲಾ ಪ್ರಜಾಪ್ರಭುತ್ವಗಳಂತೆ ಭಾರತ ದೇಶದ ಎಲ್ಲಾ ಕಾನೂನು ಪ್ರಕರಣಗಳಲ್ಲಿ ತ್ವರಿತ ವಿಷಯಗಳಲ್ಲಿ ಕಾನೂನು ತನ್ನದೇ ಆದ ಕ್ರಮವನ್ನು ಕೈಗೊಳ್ಳುತ್ತದೆ. ಈ ವಿಚಾರದಲ್ಲಿ ಅಮೆರಿಕ ಮಾಡಿರುವ ಊಹೆಗಳು ಅನಗತ್ಯವಾಗಿವೆ.

ಇಷ್ಟಕ್ಕೂ ಕೇಜ್ರಿವಾಲ್‌ ಅವರ ಬಂಧನ ಆಗಿರುವುದು ಸತತ ಒಂಬತ್ತನೇ ಬಾರಿ ಅವರು ಇಡಿ ಸಮನ್ಸ್‌ ಅನ್ನು ತಿರಸ್ಕರಿಸಿದ ನಂತರ. ಸಮನ್ಸ್‌ ನಿರಾಕರಿಸಿ ಕೋರ್ಟ್‌ಗೂ ಹಾಜರಾಗದೆ ಇದ್ದ ಕೇಜ್ರಿವಾಲ್‌ ಅವರನ್ನು ಹೈಕೋರ್ಟ್ ನಿರ್ದೇಶನದಂತೆ ಜಾರಿ ನಿರ್ದೇಶನಾಲಯ ಬಂಧಿಸಿದೆ. ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿ ಜಾರಿ ಸಂದರ್ಭದ ಅಕ್ರಮ, ಭ್ರಷ್ಟಾಚಾರಕ್ಕೆ ಸಂಬಂಧಿಸಿದೆ. ಇದರಲ್ಲಿ ಕೇಜ್ರಿವಾಲ್‌ ವಿರುದ್ಧ ಬಲಿಷ್ಠವಾದ ಸಾಕ್ಷಿಗಳು, ಮಾಫಿ ಸಾಕ್ಷಿಗಳು ಕೂಡ ಇವೆ. ಕಾನೂನು ತನ್ನದೇ ಆದ ರೀತಿಯ ನಡೆಯನ್ನು ಹೊಂದಿದ್ದು, ಅದಕ್ಕೆ ತಕ್ಕಂತೆ ಕ್ರಮವನ್ನು ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: Arvind Kejriwal: ಕೇಜ್ರಿವಾಲ್‌ಗಿಲ್ಲ ಮಧ್ಯಂತರ ರಿಲೀಫ್‌; ಇನ್ನೂ 7 ದಿನ ಜೈಲೇ ಗತಿ

ಇನ್ನು ಪ್ರಜಾಪ್ರಭುತ್ವದ ಬಗ್ಗೆ ಪಾಠ ಹೇಳುವ ಅಮೆರಿಕ, ಜಗತ್ತಿನಾದ್ಯಂತ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ನೆಪದಲ್ಲಿ ಮಾಡಿರುವ ಸೇನಾ ದಾಳಿಗಳು ಕಡಿಮೆಯಲ್ಲ. ಅಫಘಾನಿಸ್ತಾನ, ವಿಯೆಟ್ನಾಂ, ಇರಾಕ್‌, ಹೀಗೆ ಎಲ್ಲಾ ಕಡೆ ಅದು ಸೈನ್ಯ ಕಳುಹಿಸಿ ಪರೋಕ್ಷವಾಗಿ ತನ್ನ ಆಡಳಿತವನ್ನು ಬಿತ್ತಿದೆ. ನ್ಯಾಟೋ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಹೆಸರಿನಲ್ಲಿ ತನ್ನದೇ ಅಜೆಂಡಾ ಜಾರಿ ಮಾಡುವುದರಲ್ಲಿ ಅದು ಸಿದ್ಧಹಸ್ತವಾಗಿದೆ. ತನ್ನ ಮೇಲೆ 9/11 ದಾಳಿ ನಡೆಸಿದ ಇಸ್ಲಾಮಿಕ್‌ ಉಗ್ರರನ್ನು ಹುಡುಕುವ ನೆವದಲ್ಲಿ ಅಮೆರಿಕ ಅಫಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ ಎಷ್ಟು ಮಂದಿಯನ್ನು ಕೊಂದಿದೆಯೋ, ಅವರೆಲ್ಲರಿಗೂ ನಿಷ್ಪಕ್ಷಪಾತ ನ್ಯಾಯದ ಹಸ್ತವನ್ನು ಅದು ಚಾಚಿದೆಯೋ? ಅಥವಾ ತಾನು ನ್ಯಾಯ ಎಂದು ಏನನ್ನು ಭಾವಿಸಿದೆಯೋ ಅದನ್ನು ಜಾರಿ ಮಾಡಿದೆಯೋ? ಇಂಥ ದೇಶ ಭಾರತಕ್ಕೆ ಬುದ್ಧಿವಾದ ಹೇಳುವ ನೈತಿಕ ಹಕ್ಕನ್ನು ಹೊಂದಿದೆ ಎಂಬುದರಲ್ಲಿ ಅನುಮಾನವಿದೆ. ಹೀಗಾಗಿ, ಭಾರತದ ನ್ಯಾಯವ್ಯವಸ್ಥೆಯ ಬಗ್ಗೆ ನಂಬಿಕೆಯಿಟ್ಟು ಅದು ಸುಮ್ಮನಿರುವುದು ಒಳಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version