ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (NCP)ದ ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್ (Sharad Pawar) ರಾಜೀನಾಮೆ ನೀಡಿದ್ದಾರೆ. ಪವಾರ್ ಬೆಂಬಲಿಗರು ಹಾಗೂ ಅಭಿಮಾನಿಗಳು ಅವರ ನಿವಾಸದ ಮುಂದೆ ಸೇರಿ, ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ರಾಜಕೀಯ ತಜ್ಞರು ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದಾರೆ.
ಆದರೆ ಇನ್ನೂ ಕುತೂಹಲಕಾರಿ ಸಂಗತಿ ಎಂದರೆ, ಪವಾರ್ ಅವರ ಮಗಳು ಸುಪ್ರಿಯಾ ಸುಳೆ ಮಾಡಿರುವ ಟ್ವೀಟ್. ʼʼಇನ್ನು 15 ದಿನಗಳಲ್ಲಿ ಎರಡು ದೊಡ್ಡ ರಾಜಕೀಯ ಆಸ್ಫೋಟಗಳು ನಡೆಯಲಿವೆ. ಒಂದು ದಿಲ್ಲಿಯಲ್ಲಿ, ಇನ್ನೊಂದು ಮಹಾರಾಷ್ಟ್ರದಲ್ಲಿʼʼ ಎಂದಿದ್ದಾರೆ ಅವರು. ಅದು ಏನಿರಬಹುದು ಎಂಬ ಕುತೂಹಲಕಾರಿ ಲೆಕ್ಕಾಚಾರಗಳು ಆರಂಭವಾಗಿವೆ.
ಶರದ್ ಪವಾರ್ ಅವರ ನಿರ್ಧಾರದ ಹಿಂದೆ ಅವರ ಅಳಿಯ, ಎನ್‌ಸಿಪಿಯ ಇನ್ನೊಬ್ಬ ನಾಯಕ ಅಜಿತ್ ಪವಾರ್ ಇದ್ದಾರೆ ಎಂದು ಹೇಳಲಾಗುತ್ತಿದೆ. ʼʼಶರದ್ ಪವಾರ್ ತಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡಲಿದ್ದಾರೆʼʼ ಎಂದು ಅವರು ಭರವಸೆ ನೀಡಿದ್ದಾರೆ.
ಶರದ್ ಅಳಿಯ ಅಜಿತ್ ಪವಾರ್ ರಾಜಕೀಯದಲ್ಲಿ ಮಹತ್ವಾಕಾಂಕ್ಷೆಯನ್ನು ಹೊಂದಿದವರು. ಎನ್‌ಸಿಪಿಯ ಹಲವು ಶಾಸಕರನ್ನು ತಮ್ಮ ಜತೆಗೆ ಇಟ್ಟುಕೊಂಡಿರುವ ಅಜಿತ್, ಪಕ್ಷದಲ್ಲಿ ಒಂದು ಬಣವನ್ನು ಪ್ರತ್ಯೇಕಗೊಳಿಸಿ ಬಿಜೆಪಿ ಜತೆಗೆ ಕೈ ಜೋಡಿಸಲು ಮುಂದಾಗಿದ್ದಾರೆ; ಅಥವಾ ಬಿಜೆಪಿಗೆ ಸೇರಲಿದ್ದಾರೆ; ಬಂಡಾಯ ಎದ್ದಿರುವ 16 ರೆಬೆಲ್ ಶಾಸಕರನ್ನು ಸುಪ್ರೀಂ ಕೋರ್ಟ್ ಅನರ್ಹಗೊಳಿಸಿದರೆ ಅಜಿತ್ ತಮ್ಮ ಶಾಸಕರೊಂದಿಗೆ ಏಕನಾಥ ಶಿಂಧೆ ಅವರ ಸರ್ಕಾರವನ್ನು ಬೆಂಬಲಿಸಲಿದ್ದಾರೆ ಎಂಬಿತ್ಯಾದಿ ಊಹಾಪೋಹಗಳು ಹರಿದಾಡುತ್ತಿವೆ.
ಶರದ್ ಪವಾರ್ ನಿರ್ಧಾರಕ್ಕೆ ಬಂದ ಪ್ರತಿಕ್ರಿಯೆಗಳೇ ಅಲ್ಲಿ ನಡೆಯುತ್ತಿರುವುದೇನು ಎಂಬುದನ್ನು ಹೇಳುವಂತಿವೆ. ಬಿಜೆಪಿ ನಾಯಕರು ಈ ಬೆಳವಣಿಗೆಯನ್ನು ಸ್ವಾಗತಿಸಿ ʼಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಬೆಳವಣಿಗೆ ಆಗಲಿದೆʼ ಎಂದು ಹೇಳಿದ್ದಾರೆ. ʼʼಎನ್‌ಸಿಪಿಯ ಮೇಲಿನ ಶರದ್ ಪವಾರ್ ಅವರ ಹಿಡಿತ ಶಿಥಿಲಗೊಂಡಿದೆ. ಹಲವು ಮಾತುಕತೆಗಳು ನಡೆಯುತ್ತಿವೆ. ಇದು ಅದರ ಫಲಿತಾಂಶʼʼ ಎಂದು ಹೇಳಿದ್ದಾರೆ.
ನಿಜಕ್ಕೂ ಶರದ್ ಪವಾರ್ ತಮ್ಮ ಪಕ್ಷದ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದಾರೆಯೇ?
ಶರದ್ ಪವಾರ್ ಅವರ ನಡೆಗಳನ್ನು ಊಹಿಸುವುದು ಸುಲಭವಲ್ಲ.
1999ಕ್ಕೂ ಮೊದಲು ಕಾಂಗ್ರೆಸ್ನಲ್ಲಿ ಇದ್ದ ಶರದ್ ಪವಾರ್ ಅವರು ಮಹಾರಾಷ್ಟ್ರದ ಪ್ರಬಲ, ಮುತ್ಸದ್ದಿ ರಾಜಕಾರಣಿ. ಒಟ್ಟು ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಕ್ಯಾಬಿನೆಟ್ನಲ್ಲಿ ರಕ್ಷಣಾ ಸಚಿವರಾಗಿದ್ದರು. ಮನ್ಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕೇಂದ್ರ ಕೃಷಿ ಸಚಿವರೂ ಆಗಿ ಕಾರ್ಯನಿರ್ವಹಿಸಿದ್ದಾರೆ.
ಶರದ್ ಪವಾರ್ ಅವರು ಎನ್‌ಸಿಪಿಯ ಸಹಸಂಸ್ಥಾಪಕರಲ್ಲಿ ಒಬ್ಬರು. 1999ರಲ್ಲಿ ಶರದ್ ಪವಾರ್, ತಾರಿಕ್ ಅನ್ವರ್ ಮತ್ತು ಪಿ.ಎ.ಸಂಗ್ಮಾ ಸೇರಿ ಈ ಪಕ್ಷವನ್ನು ಸ್ಥಾಪಿಸಿದ್ದಾರೆ. ಆಗಿನಿಂದಲೂ ಶರದ್ ಪವಾರ್ ಅವರೇ ಎನ್‌ಸಿಪಿ ಮುಖ್ಯಸ್ಥರಾಗಿದ್ದಾರೆ. ಈ ಮೂವರೂ ಕಾಂಗ್ರೆಸ್ನಲ್ಲಿ ಇದ್ದರು. ಬಳಿಕ ಭಾರತೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಜತೆ ಭಿನ್ನಾಭಿಪ್ರಾಯ ಉಂಟಾಗಿ, ಈ ಮೂವರನ್ನೂ ಪಕ್ಷ ಉಚ್ಚಾಟನೆ ಮಾಡಿತ್ತು. ನಂತರ ಎನ್‌ಸಿಪಿ ಸ್ಥಾಪಿಸಿದ್ದರು.
2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಳಿಕ ಶಿವಸೇನೆ ಮತ್ತು ಕಾಂಗ್ರೆಸ್ನೊಟ್ಟಿಗೆ ಮೈತ್ರಿ ಮಾಡಿಕೊಂಡು, ಮಹಾ ವಿಕಾಸ್ ಅಘಾಡಿ ಸರ್ಕಾರದ ಒಂದು ಭಾಗವಾಗಿದ್ದರು.
ಈಗಲೂ, ಪವಾರ್ ಪಕ್ಷದ ಮೇಲಿನ ಹಿಡಿತ ಕಳೆದುಕೊಂಡಿಲ್ಲ; ಇದು ಅವರ ʼಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆಯುವʼ ವಿಶಿಷ್ಟ ರಾಜಕೀಯ ಶೈಲಿಯ ದ್ಯೋತಕ ಎಂದಿದ್ದಾರೆ ಕೆಲವರು. ಹಾಗಿದ್ದರೆ ಅವರು ಏನು ಮಾಡುತ್ತಿದ್ದಾರೆ? ʼʼನೋಡ್ತಿರಿ, ಬಿಜೆಪಿಗೆ ಈಗ ಎನ್‌ಸಿಪಿ ಶಾಸಕರ ಅಗತ್ಯವಿದೆ. ಇದನ್ನು ಬಳಸಿಕೊಂಡು ಅಜಿತ್ ಪವಾರ್ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಸುಪ್ರಿಯಾ ಸುಳೆ ಎನ್‌ಸಿಪಿ ಅಧ್ಯಕ್ಷರಾಗುತ್ತಾರೆ. ನಂತರ ಇದೆಲ್ಲಾ ಪಕ್ಷದ ನಿರ್ಧಾರ ಎಂದು ಶರದ್ ಪವಾರ್ ಹೇಳುತ್ತಾರೆʼʼ ಎಂದು ಕೆಲವರು ಊಹಿಸಿದ್ದಾರೆ.
ಪಕ್ಷಕ್ಕೊಬ್ಬ ಕಾರ್ಯಾಧ್ಯಕ್ಷರನ್ನು ಶರದ್ ನೇಮಿಸಬಹುದು. ಅದು ಅಜಿತ್ ಪವಾರ್, ಸುಪ್ರಿಯಾ ಸುಳೆ ಅಥವಾ ಇನ್ಯಾವುದಾದರೂ ಹಿರಿಯ ನಾಯಕ ಆಗಿರಬಹುದು ಎಂದಿದ್ದಾರೆ.
2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಳಿಕ ಶಿವಸೇನೆ ಮತ್ತು ಕಾಂಗ್ರೆಸ್ನೊಟ್ಟಿಗೆ ಮೈತ್ರಿ ಮಾಡಿಕೊಂಡು, ಮಹಾ ವಿಕಾಸ್ ಅಘಾಡಿ ಸರ್ಕಾರ ರಚನೆಯಾಗಲು ಕಾರಣಸ್ಥಾನದಲ್ಲಿ ಶರದ್ ಇದ್ದರು. ಉದ್ಧವ ಠಾಕ್ರೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಲು ಕಾರಣವಾಗಿದ್ದರು. ಆದರೆ ನಂತರ ಪಕ್ಷದಲ್ಲಿ ಎದ್ದ ಶಿಂಧೆ ನೇತೃತ್ವದ ಬಂಡಾಯದ ಬಿರುಗಾಳಿಗೆ ಉದ್ಧವ್ ತಮ್ಮ ಪದವಿಯನ್ನು ತೆತ್ತಿದ್ದರು.
ಈಗಲೂ, 2024ರ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮೈತ್ರಿಗೆ ಕಾರಣವಾಗಬಹುದಾದ ಒಂದು ಪ್ರಮುಖ ಶಕ್ತಿಯಾಗಿ ಶರದ್ ಅವರನ್ನು ಪರಿಗಣಿಸಲಾಗುತ್ತಿದೆ.
ಇತ್ತೀಚೆಗೆ ತಮ್ಮ ಆತ್ಮಕತೆಯಲ್ಲಿ ಶರದ್ ಪವಾರ್ ಅವರು, ʼʼಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಲು ಮೊದಲಿಂದಲೂ ಪ್ರಯತ್ನಗಳು ನಡೆಯುತ್ತವೆ ಎಂಬುದು ನಮಗೆ ಗೊತ್ತಿತ್ತು. ಈ ಸರ್ಕಾರ ಉರುಳಿದ ಕಾರಣವೆಂದರೆ, ಉದ್ಧವ್ ಯಾವುದೇ ಹೋರಾಟವಿಲ್ಲದೆ ಸ್ಥಾನ ಬಿಟ್ಟುಕೊಟ್ಟರುʼʼ ಎಂದು ಶರದ್ ಬರೆದಿದ್ದರು.
ಇದನ್ನೂ ಓದಿ: Sharad Pawar: ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಶರದ್ ಪವಾರ್ ನಿರ್ಧಾರ
ಇದೀಗ ಎಲ್ಲರ ಮುಂದಿರುವ ಪ್ರಶ್ನೆ ಎಂದರೆ ಸ್ವತಃ ಶರದ್ ಪವಾರ್ ಅವರು ಯಾವುದೇ ಹೋರಾಟವಿಲ್ಲದೆ ಎನ್‌ಸಿಪಿಯ ಮೇಲಿನ ತಮ್ಮ ಹಿಡಿತವನ್ನು ಬಿಟ್ಟುಕೊಟ್ಟಾರೆ? ಎಂಬುದು.
ಮಹಾರಾಷ್ಟ್ರದಲ್ಲಿ ಏನಾಗುತ್ತಿದೆ ಎಂಬುದು ಯಾಕೆ ಮುಖ್ಯ?
ಯಾಕೆಂದರೆ ಇಲ್ಲಿಂದ 48 ಲೋಕಸಭಾ ಸದಸ್ಯರು ಆಯ್ಕೆಯಾಗುತ್ತಾರೆ. ಹೀಗಾಗಿ ಲೋಕಸಭೆಯನ್ನು ನಿಯಂತ್ರಿಸುವ ನಿರ್ಣಾಯಕ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಒಂದು. 2024ರಲ್ಲಿ ಈ ನಂಬರ್ ವಿಶೇಷ ಶಕ್ತಿ ಪಡೆಯಲಿದೆ. ಇಲ್ಲಿನ ವಿಧಾನಸಭೆ ಚುನಾವಣೆಯೂ 2024ರಲ್ಲೇ ನಡೆಯಲಿದೆ. ಇಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಗಳು ಈ ಚುನಾವಣೆಗಳಿಗೆ ಪೂರ್ವಪೀಠಿಕೆಯಾಗಿವೆ.
ಪವಾರ್ ಲೆಕ್ಕಾಚಾರಗಳೇನು?
- ರಾಜೀನಾಮೆ ನಿರ್ಧಾರ ಪ್ರಕಟಣೆಯ ಮೂಲಕ ಪಕ್ಷದ ಮೇಲಿನ ತಮ್ಮ ಹಿಡಿತವನ್ನು ಬಿಗಿಗೊಳಿಸಿದ್ದಾರೆ.
- ಮುಂದಿನ ನಿರ್ಧಾರಗಳನ್ನು ಅಜಿತ್ ಪವಾರ್ ಅಥವಾ ಸುಪ್ರಿಯಾ ಸುಳೆಯ ನೇತೃತ್ವದಲ್ಲಿ ಅವರು ಮಾಡಬಹುದು.
- ಬಿಜೆಪಿ ಜತೆಗೆ ಹೋಗುವುದಾದರೆ ಅಜಿತ್ ಪವಾರ್ ಅವರನ್ನು ಮುಂದೆ ಬಿಡಬಹುದು.
- ಯುಪಿಎ ಜತೆಗೆ ಉಳಿಯುವುದಾದರೆ ಸುಪ್ರಿಯಾ ಸುಳೆ ನೇತೃತ್ವದಲ್ಲಿ ಚಲಿಸಬಹುದು.
ಬಿಜೆಪಿಯೊಂದಿಗೂ ಉತ್ತಮ ಸಂಬಂಧ
ಪವಾರ್ ಅವರು ದೇಶದ ಪ್ರಮುಖ ಪ್ರತಿಪಕ್ಷ ನಾಯಕರಲ್ಲಿ ಒಬ್ಬರು; ಆದರೆ ಆಡಳಿತಾರೂಢ ಬಿಜೆಪಿಯೊಂದಿಗೂ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಏಳು ವರ್ಷಗಳ ಹಿಂದೆ ಮೋದಿ ಸರ್ಕಾರ ಪವಾರ್ ಅವರಿಗೆ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ನೀಡಿ ಗೌರವಿಸಿತ್ತು. ರಾಜೀವ್ ಗಾಂಧಿಯವರ ಹತ್ಯೆಯ ನಂತರ, ಪ್ರಧಾನಿ ಹುದ್ದೆಗೆ ಪವಾರ್ ಅವರನ್ನು ಪ್ರಮುಖ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಆದರೆ ಪವಾರ್ ಅವರನ್ನು ಅತ್ತ ತಳ್ಳಿ ನೆಹರೂ ಕುಟುಂಬದ ಆಪ್ತರಾದ ನರಸಿಂಹರಾವ್ ಆ ಸ್ಥಾನವನ್ನು ಆಕ್ರಮಿಸಿಕೊಂಡಿದ್ದರು. ಹಲವು ಬಾರಿ ರಾಷ್ಟ್ರಪತಿ ಸ್ಥಾನಕ್ಕೂ ಅವರ ಹೆಸರು ಪರಿಗಣನೆಯಾಗುತ್ತಲೇ ಬಂದಿದೆ; ತಪ್ಪುತ್ತಲೇ ಹೋಗಿದೆ.
ಇದನ್ನೂ ಓದಿ: Gautam Adani: ಶರದ್ ಪವಾರ್ ಮನೆಗೆ ಗೌತಮ್ ಅದಾನಿ; ಎರಡು ಗಂಟೆ ಮಾತುಕತೆ!