ಮಣಿಪುರದಲ್ಲಿ ಹಿಂಸಾಚಾರ (manipur violence) ಮತ್ತೆ ಭುಗಿಲೆದ್ದಿದೆ. ಮೂರು ವಾರಗಳ ಹಿಂದೆ ಇಲ್ಲಿ ಹಿಂಸಾಚಾರ ತೀವ್ರಗೊಂಡು, ನಂತರ ತಣ್ಣಗಾಗಿತ್ತು. ಇದೀಗ ರಾಜಧಾನಿ ಇಂಫಾಲದ ಮಾರುಕಟ್ಟೆಯೊಂದರಲ್ಲಿ ಮೈತೆಯಿ ಬುಡಕಟ್ಟಿನವರ ಅಂಗಡಿಗಳ ಮೇಲೆ ಕೆಲವರು ದಾಳಿ ಮಾಡುವುದರೊಂದಿಗೆ ಮತ್ತೆ ಹಿಂಸೆ ತೊಡಗಿದೆ. ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಅರೆ ಸೇನಾಪಡೆಗಳು ಸ್ಥಳಕ್ಕೆ ಧಾವಿಸಿದ್ದು , ಸೆಕ್ಷನ್ 144 ವಿಧಿಸಲಾಗಿದೆ.
ಫೆಬ್ರವರಿಯಲ್ಲಿ ಇಲ್ಲಿ ಶಾಂತಿ ಕದಡಿತ್ತು; ಎರಡು ಬುಡಕಟ್ಟುಗಳು ಕಾದಾಟದಲ್ಲಿ ತೊಡಗಿದ್ದರಿಂದ ಸಾವು- ಗಾಯ- ಹಿಂಸೆ ಸೃಷ್ಟಿಯಾಗಿತ್ತು. 7,500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು. ಮನೆ- ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. 50ಕ್ಕೂ ಅಧಿಕ ಮಂದಿ ಸತ್ತಿದ್ದರು. ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಮಣಿಪುರ ರಾಜ್ಯಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದವು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರೊಂದಿಗೆ ಸಂಪರ್ಕದಲ್ಲಿದ್ದು ಪರಿಸ್ಥಿತಿಯ ನಿಗಾ ವಹಿಸಿದ್ದರು.
ಆದರೆ ಇದ್ದಕ್ಕಿದ್ದಂತೆ ಮಣಿಪುರ ಹೊತ್ತಿಕೊಂಡು ಉರಿಯಲು ಕಾರಣವೇನು? ಈ ಹಿಂಸೆಯ ಹಿಂದೆ ಏನಿದೆ? ವಿವರವಾಗಿ ನೋಡೋಣ:
ಮೇ ತಿಂಗಳ ಮೊದಲ ವಾರದಲ್ಲಿ ಆಲ್ ಟ್ರೈಬಲ್ ಸ್ಟೂಡೆಂಟ್ ಯೂನಿಯನ್ ಮಣಿಪುರ (ATSUM) ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ಯನ್ನು ಚುರಾಚಂದ್‌ಪುರ ಜಿಲ್ಲೆಯ ಟೋರ್ಬಂಗ್ ಪ್ರದೇಶದಲ್ಲಿ ಆಯೋಜಿಸಿತ್ತು. ಮೈತೈ (Meitei) ಬುಡಕಟ್ಟಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವುದನ್ನು ವಿರೋಧಿಸಿ ಈ ಪ್ರತಿಭಟನೆ ನಡೆದಿತ್ತು. ನಾಗಾಗಳು, ಜೋಮಿಗಳು ಮತ್ತು ಕುಕಿಗಳು ಸೇರಿದಂತೆ ಹಲವು ಬುಡಕಟ್ಟು ಜನಾಂಗದವರು ಒಟ್ಟು ಸೇರಿ ಈ ಮೆರವಣಿಗೆಯನ್ನು ಆಯೋಜಿಸಿದ್ದರು. ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು 40 ಪ್ರತಿಶತ ಈ ಸಮುದಾಯಗಳ ಜನಸಂಖ್ಯೆ ಇದೆ.
ಇದಕ್ಕೂ ಮುನ್ನ, ಎಸ್‌ಟಿ ಸ್ಥಾನಮಾನಕ್ಕಾಗಿ ಮೈತೈ ಬುಡಕಟ್ಟಿನ ಬೇಡಿಕೆಯ ಕುರಿತು ನಾಲ್ಕು ವಾರಗಳಲ್ಲಿ ಕೇಂದ್ರಕ್ಕೆ ಶಿಫಾರಸು ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ಮಣಿಪುರ ಹೈಕೋರ್ಟ್ ಕಳೆದ ತಿಂಗಳು ಸೂಚಿಸಿತ್ತು. ಮೈತೈಗಳು ರಾಜ್ಯದ ಜನಸಂಖ್ಯೆಯ ಸುಮಾರು 53 ಪ್ರತಿಶತದಷ್ಟು ಇದ್ದಾರೆ. ಆದರೆ ಇವರು ರಾಜ್ಯದ ಕೇವಲ 10 ಪ್ರತಿಶತದಷ್ಟು ಜಾಗದಲ್ಲಿ ಇದ್ದಾರೆ. ರಾಜ್ಯ ವಿಧಾನಸಭೆಯ 2/3ನೇ ಭಾಗವನ್ನು ಮೈತೈಗಳು ಹೊಂದಿದ್ದಾರೆ. ಆದರೆ ಇತರ ಬುಡಕಟ್ಟು ಜನಾಂಗದವರು, ಅರ್ಧಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದರೂ, 90 ಪ್ರತಿಶತದಷ್ಟು ಭೂಪ್ರದೇಶದಲ್ಲಿ ಹರಡಿದ್ದಾರೆ.
ಈಗ ಮೈತೈಗಳ ಬೇಡಿಕೆ ಎಂದರೆ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಿಂದ ನಿರಂತರವಾಗಿ ನಡೆಯುತ್ತಿರುವ ದೊಡ್ಡ ಪ್ರಮಾಣದ ಅಕ್ರಮ ವಲಸೆಯಿಂದಾಗಿ ತಮ್ಮ ಅಸ್ತಿತ್ವಕ್ಕೆ, ಬದುಕುವ ಅವಕಾಶಗಳಿಗೆ ಧಕ್ಕೆಯಾಗಿದೆ. ಹೀಗಾಗಿ ST ಸ್ಥಾನಮಾನ ಬೇಕು.
ಕುಕೀ, ನಾಗಾಗಳ ಆತಂಕವೇನು?
ಆದರೆ ಅದನ್ನು ಇತರ ಬುಡಕಟ್ಟುಗಳು ವಿರೋಧಿಸುತ್ತಿವೆ. ಮೈತೈಯಂತಹ ಹೆಚ್ಚು ಮುಂದುವರಿದ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡುವುದು ತಪ್ಪು. ಇದರಿಂದ ಇತರ ತಳ ಸಮುದಾಯಗಳ ಉದ್ಯೋಗಾವಕಾಶ ನಷ್ಟವಾಗಲಿದೆ. ಹೆಚ್ಚಿನ ಮೈತೈಗಳು ಮಾತನಾಡುವ ಭಾಷೆಯಾದ ಮಣಿಪುರಿಯನ್ನು ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಈಗಾಗಲೇ ಸೇರಿಸಲಾಗಿದೆ. ಮೈತೈ ಸಮುದಾಯದ ಕೆಲವು ವಿಭಾಗಗಳನ್ನು ಈಗಾಗಲೇ ಪರಿಶಿಷ್ಟ ಜಾತಿಗಳು (SC) ಅಥವಾ ಇತರೆ ಹಿಂದುಳಿದ ವರ್ಗಗಳ (OBC) ಅಡಿಯಲ್ಲಿ ವರ್ಗೀಕರಿಸಲಾಗಿದೆ ಮತ್ತು ಅದರಿಂದ ಒದಗಿಸಲಾದ ಅವಕಾಶಗಳನ್ನು ಅವು ಪಡೆಯುತ್ತಿವೆ.
ಮಣಿಪುರದ ಕೆಲವು ಶಾಸಕರು ಎಸ್‌ಟಿ ಸ್ಥಾನಮಾನಕ್ಕಾಗಿ ಮೈತೈ ಸಂಘಟನೆಗಳ ಬೇಡಿಕೆಯನ್ನು ಈ ಹಿಂದೆ ಬಹಿರಂಗವಾಗಿ ಅನುಮೋದಿಸಿದ್ದರು. ಇದರಿಂದ ಪರಿಶಿಷ್ಟ ಸಮುದಾಯಗಳು ವ್ಯಗ್ರಗೊಂಡಿದ್ದವು. ರಾಜ್ಯದ ಹೆಚ್ಚಿನ ಭೂಮಿ ಗುಡ್ಡಗಾಡು ಜಿಲ್ಲೆಗಳಿಂದ ಕೂಡಿದೆ. ಇಲ್ಲಿ ಹೆಚ್ಚಾಗಿ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಮುಖ್ಯವಾಗಿ ಕ್ರಿಶ್ಚಿಯನ್ನರಾದ ನಾಗಾಗಳು ಮತ್ತು ಕುಕಿಗಳು.
ಇದೀಗ ಹಲವು ಕಡೆ ಅರಣ್ಯ ಭೂಮಿಗಳಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ತಲೆಮಾರುಗಳಿಂದ ಇಲ್ಲಿ ವಾಸಿಸುತ್ತಿರುವ ತಮ್ಮನ್ನು ತೆರವು ಮಾಡಲಾಗುತ್ತಿದೆ ಎಂಬುದು ಕುಕಿಗಳ ಹಾಗೂ ನಾಗಾಗಳ ಸಿಟ್ಟು. ರಾಜ್ಯ ಸರ್ಕಾರ ಒಂದೆಡೆಯಿಂದ ಮೈತೈಗಳನ್ನು ಓಲೈಸುತ್ತಿದೆ; ತಮ್ಮನ್ನು ಹಣಿಸಯುತ್ತಿದೆ ಎಂಬುದು ಇವರ ಆಕ್ರೋಶ.
ಸಂವಿಧಾನದ ಆರ್ಟಿಕಲ್ 371ಸಿ ಗುಡ್ಡಗಾಡು ಪ್ರದೇಶಗಳಿಗೆ ಕೆಲವು ಆಡಳಿತಾತ್ಮಕ ಸ್ವಾಯತ್ತತೆಯನ್ನು ನೀಡುತ್ತದೆ. ಅದನ್ನು ಸರ್ಕಾರ ಉಲ್ಲಂಘಿಸಿದೆ ಎಂದು ಕುಕಿ ನಾಯಕರು ಆರೋಪಿಸಿದ್ದಾರೆ. ಆದರೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು, “ಅಕ್ರಮ ನಿವಾಸಿಗಳು ಮೀಸಲು ಅರಣ್ಯಗಳು, ಸಂರಕ್ಷಿತ ಅರಣ್ಯಗಳು ಮತ್ತು ವನ್ಯಜೀವಿ ಅಭಯಾರಣ್ಯಗಳನ್ನು ಅತಿಕ್ರಮಿಸಿ ಅಲ್ಲಿ ಗಾಂಜಾ ಮತ್ತಿತರ ಮಾದಕ ದ್ರವ್ಯ ವ್ಯವಹಾರ ನಡೆಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಮೈತೈಗಳು ಎಸ್‌ಟಿ ಸ್ಥಾನಮಾನ ಬಯಸಿದ್ದಾರೆ. ಆದರೆ ಮುಂದುವರಿದ ಸಮುದಾಯವಾದ ಅವರು ಎಸ್‌ಟಿ ಸ್ಥಾನಮಾನ ಹೊಂದಲು ಹೇಗೆ ಸಾಧ್ಯ? ಅವರು ಎಸ್‌ಟಿ ಸ್ಥಾನಮಾನ ಪಡೆದರೆ ನಮ್ಮ ಎಲ್ಲಾ ಭೂಮಿಯನ್ನು ವಶಪಡಿಸಿಕೊಳ್ಳುತ್ತಾರೆ” ಎಂಬುದು ಆಲ್ ಮಣಿಪುರ ಬುಡಕಟ್ಟು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆಲ್ವಿನ್ ನೆಹ್ಸಿಯಲ್ ಅವರ ಆತಂಕ. ʼʼಕುಕಿಗಳು ಅತ್ಯಂತ ಬಡವರು. ಶಾಲಾ ಶಿಕ್ಷಣ ಇಲ್ಲಿ ಇಲ್ಲದುದರಿಂದ ಜುಮ್ಮಾ ಕೃಷಿಯ ಮೇಲೆ ಬದುಕುಳಿದಿದ್ದಾರೆ. ಇದೀಗ ಮೈತೈಗಳು ಅದರ ಮೇಲೆ ಕಣ್ಣು ಹಾಕಿದ್ದಾರೆʼʼ ಎಂಬುದು ಅವರ ದೂರು. ಇತ್ತೀಚೆಗೆ ಸರ್ಕಾರ ಮೀಸಲು ಅರಣ್ಯ ಪ್ರದೇಶಗಳಿಂದ ಅಕ್ರಮ ವಲಸಿಗರನ್ನು ಹೊರಹಾಕಲು ಆರಂಭಿಸಿದೆ. ಇದರಿಂದ ಕುಕಿಗಳು ವಿಚಲಿತರಾಗಿದ್ದಾರೆ.
ಅಕ್ರಮ ವಲಸೆಯ ಆತಂಕ
ಇತ್ತ ಮೈತೈಗಳ ಹಾಗೂ ಸರ್ಕಾರ ನಡೆಸುತ್ತಿರುವ ಬಿಜೆಪಿಯ ಆತಂಕವೆಂದರೆ ಅಕ್ರಮ ವಲಸೆಯದ್ದು. ಈ ವರ್ಷದ ಮಾರ್ಚ್‌ನಲ್ಲಿ, ಹಲವಾರು ಮಣಿಪುರಿ ಸಂಘಟನೆಗಳು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದವು. 1951 ಅನ್ನು ಮೂಲ ವರ್ಷವಾಗಿಟ್ಟುಕೊಂಡು ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಅನುಷ್ಠಾನಿಸಲು ಒತ್ತಾಯಿಸಿದವು.
ಮಣಿಪುರದಲ್ಲಿ ಹಠಾತ್ ಜನಸಂಖ್ಯೆಯ ಏರಿಕೆಯಾಗಿದೆ. ರಾಷ್ಟ್ರೀಯ ಸರಾಸರಿ 17.64 ಪ್ರತಿಶತಕ್ಕೆ ಬದಲಾಗಿ ಶೇಕಡಾ 24.5ರ ಬೆಳವಣಿಗೆಯ ದರ ಕಂಡುಬಂದಿದೆ. ಇದಕ್ಕೆ ಕಾರಣ ಮಣಿಪುರದ ಗುಡ್ಡಗಾಡು ಪ್ರದೇಶಗಳನ್ನು ಮ್ಯಾನ್ಮಾರ್ ಹಾಗೂ ಬಾಂಗ್ಲಾದವರು ಬಂದು ಸೇರಿಕೊಳ್ಳುತ್ತಿರುವುದು. ಎನ್‌ಆರ್‌ಸಿಯಿಂದ ಮಣಿಪುರದ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಬಹುದು ಎಂದು ಮೈತೈ ಸಂಸ್ಥೆಗಳು ಆಗ್ರಹಿಸಿವೆ.
“ಕುಕಿಗಳು ಮ್ಯಾನ್ಮಾರ್ ಗಡಿಯಿಂದ ಅಕ್ರಮವಾಗಿ ವಲಸೆ ಬರುತ್ತಿದ್ದಾರೆ ಮತ್ತು ಮಣಿಪುರದಲ್ಲಿ ಅರಣ್ಯ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ. ಇತ್ತೀಚೆಗೆ ಮಣಿಪುರ ಸರ್ಕಾರ ಮೀಸಲು ಅರಣ್ಯ ಪ್ರದೇಶಗಳಲ್ಲಿನ ಅಕ್ರಮ ವಸಾಹತುಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ಪ್ರಾರಂಭಿಸಿತು. ಕುಕೀಗಳು ಪ್ರತಿಭಟಿಸಿದರು. ಮೈತೈಗಳನ್ನೂ ವಿರೋಧಿಸುತ್ತಿದ್ದಾರೆʼʼ ಎಂದು ಆಲ್ ಮೈತೈ ಕೌನ್ಸಿಲ್ ಅಧ್ಯಕ್ಷರು ಹೇಳುತ್ತಾರೆ.
ತೆರವು ಕಾರ್ಯಾಚರಣೆ ಮತ್ತು ಮೈತೈಗಳ ಎಸ್‌ಟಿ ಸ್ಥಾನಮಾನದ ಬೇಡಿಕೆ ತಮ್ಮನ್ನು ನಮ್ಮದೇ ಭೂಮಿಯಿಂದ ಓಡಿಸುವ ಕಾರಸ್ಥಾನ ಎಂದು ಕುಕಿಗಳು ಬಲವಾಗಿ ನಂಬಿದ್ದಾರೆ.
ರ್ಯಾಲಿಯ ಬಳಿಕ ಏನಾಯಿತು?
ಮೇ ಮೊದಲ ವಾರ ನಡೆದ ರ್ಯಾಲಿಯಲ್ಲಿ ಸಾವಿರಾರು ನಾಗಾ ಹಾಗೂ ಕುಕೀ ಬುಡಕಟ್ಟುಗಳ ಚಳವಳಿಗಾರರು ಭಾಗವಹಿಸಿದ್ದರು. ಈ ಮೆರವಣಿಗೆಯ ವೇಳೆ, ಶಸ್ತ್ರಸಜ್ಜಿತ ಗುಂಪೊಂದು ಮೈತೈ ಸಮುದಾಯದ ಜನರ ಮೇಲೆ ದಾಳಿ ನಡೆಸಿತು. ಪ್ರತಿಸ್ಪರ್ಧಿ ಸಮುದಾಯಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆಯಿತು. ಇದು ಕಣಿವೆ ಜಿಲ್ಲೆಯ ಮೂಲೆ ಮೂಲೆಗೂ ಹಬ್ಬಿತು. ನಂತರ ಇತರ ಜಿಲ್ಲೆಗಳಲ್ಲೂ ಇದಕ್ಕೆ ಪ್ರತೀಕಾರದ ದಾಳಿಗಳು ನಡೆದವು. ಇದು ರಾಜ್ಯದಾದ್ಯಂತ ಹಿಂಸಾಚಾರವನ್ನು ಉಲ್ಬಣಗೊಳಿಸಿತು.
ಟೋರ್ಬಂಗ್‌ನಲ್ಲಿ ಹೆಚ್ಚು ಗಲಭೆ ನಡೆದಿದೆ. ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಗಲಭೆಯಲ್ಲಿ ಅನೇಕ ಅಂಗಡಿಗಳು ಮತ್ತು ಮನೆಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಸುಟ್ಟು ಹಾಕಲಾಯಿತು. ನೂರಾರು ಜನರು ಗಾಯಗೊಂಡರು. ಬಂಗ್‌ಮುಯಲ್, ಸಿಂಗ್ನಾತ್, ಮುಅಲ್ಲಮ್ ಮತ್ತು ಮಾತಾ ಮುಲ್ತಮ್‌ನಂತಹ ಸ್ಥಳಗಳಲ್ಲಿ ಅರಣ್ಯ ಇಲಾಖೆ ಕಚೇರಿಗಳಿಗೆ ಬೆಂಕಿ ಹಚ್ಚಲಾಯಿತು.
ದಾಳಿಗಳು ಮತ್ತು ಪ್ರತಿದಾಳಿಗಳು ರಾತ್ರಿಯಿಡೀ ಮುಂದುವರಿದವು. ಎರಡೂ ಕಡೆಯ ಬುಡಕಟ್ಟು ಜನಾಂಗದವರು ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟರು. ರಾಜ್ಯದ ಕೆಲವು ಭಾಗಗಳಲ್ಲಿ ಕೆಲವು ಮನೆಗಳಿಗೆ ಬೆಂಕಿ ಹಚ್ಚಿದ ಚಿತ್ರಗಳನ್ನು ಪ್ರಸಾರ ಮಾಡಲಾಗುತ್ತಿದೆ. ಪಶ್ಚಿಮ ಇಂಫಾಲ್, ಕಾಕ್ಚಿಂಗ್, ತೌಬಲ್, ಜಿರಿಬಾಮ್, ಬಿಷ್ಣುಪುರ್, ಚುರಾಚಂದ್‌ಪುರ, ಕಾಂಗ್‌ಪೋಕ್ಪಿ ಮತ್ತು ತೆಂಗ್‌ನೌಪಾಲ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಇಂಫಾಲ್ ಕಣಿವೆಯಲ್ಲಿ ಕುಕಿ ಬುಡಕಟ್ಟು ಜನಾಂಗದ ಹಲವರ ಮನೆಗಳನ್ನು ದರೋಡೆ ಮಾಡಲಾಗಿದೆ. ಅವರನ್ನು ಮನೆ ಬಿಟ್ಟು ಓಡಿಸಲಾಗಿದೆ. ಇಂಫಾಲ್ ವೆಸ್ಟ್‌ನಲ್ಲಿರುವ ಕುಕಿ ಪ್ರಾಬಲ್ಯದ ಲಾಂಗೋಲ್ ಪ್ರದೇಶದ 500ಕ್ಕೂ ಹೆಚ್ಚು ನಿವಾಸಿಗಳು ತಮ್ಮ ಮನೆಗಳನ್ನು ತೊರೆದಿದ್ದಾರೆ. ಪ್ರಸ್ತುತ ಲ್ಯಾಂಫೆಲ್‌ಪಟ್‌ನಲ್ಲಿರುವ ಸಿಆರ್‌ಪಿಎಫ್ ಶಿಬಿರದಲ್ಲಿ ತಂಗಿದ್ದಾರೆ. ಇಂಫಾಲ್ ಕಣಿವೆಯಲ್ಲಿ ಕೆಲವು ಪೂಜಾ ಸ್ಥಳಗಳಿಗೆ ಬೆಂಕಿ ಹಚ್ಚಲಾಗಿದೆ.
ಬುಡಕಟ್ಟು ಪ್ರಾಬಲ್ಯದ ಚುರಾಚಂದ್‌ಪುರ ಜಿಲ್ಲೆಯ ಸುಮಾರು 1,000 ಮೈತೈಗಳು ಕ್ವಾಕ್ಟಾ ಮತ್ತು ಮೊಯಿರಾಂಗ್ ಸೇರಿದಂತೆ ಬಿಷ್ಣುಪುರ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಓಡಿಹೋಗಿದ್ದಾರೆ. ಕಾಂಗ್‌ಪೋಕ್ಪಿ ಜಿಲ್ಲೆಯ ಮೋಟ್‌ಬಂಗ್ ಪ್ರದೇಶದಲ್ಲಿ ಇಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೆಂಗ್ನೌಪಾಲ್ ಜಿಲ್ಲೆಯ ಮ್ಯಾನ್ಮಾರ್ ಗಡಿ ಬಳಿಯ ಮೊರೆಃನಿಂದಲೂ ಹಿಂಸಾಚಾರ ವರದಿಯಾಗಿದೆ.
“ಪರಿಸ್ಥಿತಿ ಉದ್ವಿಗ್ನವಾಗಿದೆ. ಕೋಮು ಘರ್ಷಣೆ ತಡೆಯಲು ನಾವು ಸೈನ್ಯ ಮತ್ತು ಅರೆಸೈನಿಕ ಪಡೆಗಳೊಂದಿಗೆ ಯುದ್ಧದೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸಮುದಾಯದ ಮುಖಂಡರನ್ನು ಸಂವಾದದಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ” ಎಂದು ಈ ಪ್ರದೇಶದ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದರು.
ಇದನ್ನೂ ಓದಿ: ಮಣಿಪುರ ಸಿಎಂ ಕಾರ್ಯಕ್ರಮ ನಡೆಯಬೇಕಿದ್ದ ಸ್ಥಳಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು; ಉದ್ವಿಗ್ನತೆ
ಸೈನಿಕ ಪಡೆಗಳು ಮತ್ತು ಅರೆಸೇನಾ ಪಡೆಗಳು, ಅಸ್ಸಾಂ ರೈಫಲ್ಸ್ ದಳಗಳು ವಿವಿಧ ಸಮುದಾಯಗಳ 7,500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿ, ಸೈನಿಕರ ಶಿಬಿರಗಳು ಮತ್ತು ಸರ್ಕಾರಿ ಆವರಣದಲ್ಲಿ ಅವರಿಗೆ ಆಶ್ರಯ ನೀಡಿದವು. ಗುರುವಾರ ಭಾರತೀಯ ಸೇನೆಯ ಯೋಧರು ಜಿಲ್ಲೆಯಲ್ಲಿ ಪಥಸಂಚಲನ, ಧ್ವಜ ಮೆರವಣಿಗೆ ನಡೆಸಿದರು.
ಮುಖ್ಯಮಂತ್ರಿ ಬಿರೇನ್ ಸಿಂಗ್ ಶಾಂತಿ ಕಾಪಾಡಲು ಜನರನ್ನು ಒತ್ತಾಯಿಸಿದ್ದಾರೆ. ಹಿಂಸಾಚಾರದಲ್ಲಿ ತೊಡಗಿರುವ ವ್ಯಕ್ತಿಗಳು ಮತ್ತು ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಪಡೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ. ನೆರೆಯ ಮಿಜೋರಾಂನ ಮುಖ್ಯಮಂತ್ರಿ ಝೋರಾಂತಂಗ ಅವರು ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಯಾಕೆಂದರೆ ನಾಗಾಗಳು, ಕುಕೀಗಳು ಹಾಗೂ ಮೈತೈಗಳೂ ಅಲ್ಲೂ ಇದ್ದಾರೆ. ಈ ಹಿಂಸಾಚಾರ ಅಲ್ಲಿಗೆ ಹಬ್ಬದಿರಲಿ ಎಂಬ ಆಶಯ ಅವರದು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ.
ʼಬೀರೇನ್ ಸಿಂಗ್ ಸರ್ಕಾರ ದ್ವೇಷದ ರಾಜಕಾರಣ ನಡೆಸುತ್ತಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ. ʼಬಿಜೆಪಿ ತನ್ನ ದ್ವೇಷದ ರಾಜಕಾರಣದಿಂದ ಸಮುದಾಯಗಳ ನಡುವೆ ಬಿರುಕುಗಳನ್ನು ಸೃಷ್ಟಿಸಿರುವುದರಿಂದ ಮಣಿಪುರ ಹೊತ್ತಿ ಉರಿಯುತ್ತಿದೆʼ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ತೀವ್ರ ಹಿಂಸಾಚಾರ; ರಕ್ಷಿಸಿ ಎಂದು ಟ್ವೀಟ್ ಮಾಡಿ, ಪ್ರಧಾನಿ ಮೋದಿಯನ್ನು ಟ್ಯಾಗ್ ಮಾಡಿದ ಮೇರಿ ಕೋಮ್