ಹೊಸದಿಲ್ಲಿ: “ಸಂಪತ್ತು ಮರುಹಂಚಿಕೆ” (Wealth redistribution) ಕುರಿತ ವಿವಾದ (controversy) ರಾಷ್ಟ್ರ ರಾಜಕೀಯದಲ್ಲಿ ಜೋರಾಗುತ್ತಿರುವಂತೆ, ವ್ಯಕ್ತಿಯ ಖಾಸಗಿ ಒಡೆತನದ (Private property) ಆಸ್ತಿಯನ್ನು “ಸಮುದಾಯದ ವಸ್ತು ಸಂಪನ್ಮೂಲ” (community property) ಎಂದು ಪರಿಗಣಿಸಬಹುದೇ ಎಂದು ನಿರ್ಧರಿಸಲು ಮೂರು ದಶಕಗಳಷ್ಟು ಹಳೆಯ ಪ್ರಕರಣವನ್ನು ಸುಪ್ರೀಂ ಕೋರ್ಟ್ (Supreme Court) ಪೀಠ ಮರಳಿ ಕೈಗೆತ್ತಿಕೊಂಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (CJI DY Chandrachud) ನೇತೃತ್ವದ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಪೀಠವು (nine judges bench) ಇಂದಿನಿಂದ ಈ ಪ್ರಕರಣದ ವಿಚಾರಣೆ ನಡೆಸಲಿದೆ.
ವಿವಾದವೇನು?
ಬಿರುಸಿನ ಲೋಕಸಭೆ ಚುನಾವಣೆ (lok Sabha Election 2024) ಪ್ರಚಾರ ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇದ್ದ ಒಂದು ಉಲ್ಲೇಖವನ್ನು ಎತ್ತಿ ಆಡಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi), “ಸಂಪತ್ತು ಪುನರ್ ವಿತರಣಾ ಯೋಜನೆಯ ಭಾಗವಾಗಿ ಮನೆ, ಚಿನ್ನ, ವಾಹನ ಸೇರಿದಂತೆ ಖಾಸಗಿ ಆಸ್ತಿಯನ್ನು ಕಿತ್ತುಕೊಳ್ಳುವುದಾಗಿ ಕಾಂಗ್ರೆಸ್ (Congress) ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ” ಎಂದಿದ್ದರು. ಇದು ರಾಜಕೀಯ ಬಿರುಗಾಳಿ ಎಬ್ಬಿಸಿತ್ತು.
ಅಂತಹ ಯಾವುದೇ ಯೋಜನೆಯನ್ನು ಕಾಂಗ್ರೆಸ್ ನಿರಾಕರಿಸಿದೆ. ಪ್ರಧಾನಿ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ. ಕಾಂಗ್ರೆಸ್ ಆಯ್ಕೆಯಾದರೆ ರಾಷ್ಟ್ರವ್ಯಾಪಿ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ ನಡೆಸಲಿದೆ ಎಂದು ಅದರ ಪ್ರಣಾಳಿಕೆ ಹೇಳುತ್ತದೆ. “ಜಾತಿಗಳು ಮತ್ತು ಉಪ-ಜಾತಿಗಳು ಮತ್ತು ಅವರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಎಣಿಸಲು ಕಾಂಗ್ರೆಸ್ ರಾಷ್ಟ್ರವ್ಯಾಪಿ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯನ್ನು ನಡೆಸುತ್ತದೆ. ದತ್ತಾಂಶದ ಆಧಾರದ ಮೇಲೆ, ನಾವು ಸಕಾರಾತ್ಮಕ ಕ್ರಮಕ್ಕಾಗಿ ಕಾರ್ಯಸೂಚಿಯನ್ನು ಬಲಪಡಿಸುತ್ತೇವೆ.” ಖಾಸಗಿ ಆಸ್ತಿ ಮರುಹಂಚಿಕೆ ಯೋಜನೆ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಿಲ್ಲ.
ಕೋರ್ಟ್ ಮುಂದಿರುವ ಪ್ರಕರಣ ಮತ್ತು ಅದರ ಇತಿಹಾಸ
ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಪೀಠದ ಮುಂದಿರುವ ಪ್ರಕರಣವು 1986ರ ಹಿಂದಿನದು. ಮಹಾರಾಷ್ಟ್ರ ಸರ್ಕಾರವು ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಕಾಯಿದೆ- 1976 (MHADA) ಇದನ್ನು ತಿದ್ದುಪಡಿ ಮಾಡಿತ್ತು. 70 ಪ್ರತಿಶತ ನಿವಾಸಿಗಳ ಒಪ್ಪಿಗೆಯಿದ್ದರೆ ಮರುಸ್ಥಾಪನೆ ಉದ್ದೇಶಗಳಿಗಾಗಿ ಕೆಲವು “ಸೆಸ್ಡ್ ಆಸ್ತಿಗಳನ್ನು” ಸ್ವಾಧೀನಪಡಿಸಿಕೊಳ್ಳಬಹುದು ಎಂಬ ಅಧಿಕಾರವನ್ನು ಇದು ಮುಂಬೈ ಕಟ್ಟಡ ದುರಸ್ತಿ ಮತ್ತು ಪುನರ್ನಿರ್ಮಾಣ ಮಂಡಳಿಗೆ ಹೊಂದಲು ಅವಕಾಶ ಮಾಡಿಕೊಟ್ಟಿತು. ತಿದ್ದುಪಡಿಯು ಸಂವಿಧಾನದ 39(ಬಿ) ವಿಧಿಯನ್ನು ಉಲ್ಲೇಖಿಸಿದೆ. ಅದು “ಸಮುದಾಯದ ವಸ್ತು ಸಂಪನ್ಮೂಲಗಳ ಮಾಲೀಕತ್ವ ಮತ್ತು ನಿಯಂತ್ರಣವನ್ನು ಸಾಮಾನ್ಯ ಒಳಿತಿಗಾಗಿ ಉತ್ತಮ ರೀತಿಯಲ್ಲಿ ವಿತರಿಸಲಾಗುವುದು” ಎಂದು ಹೇಳುತ್ತದೆ.
ಮುಂಬೈನಲ್ಲಿರುವ 20,000ಕ್ಕೂ ಹೆಚ್ಚು ಭೂಮಾಲೀಕರನ್ನು ಪ್ರತಿನಿಧಿಸುವ ಆಸ್ತಿ ಮಾಲೀಕರ ಸಂಘ (POA) ಈ ತಿದ್ದುಪಡಿಯನ್ನು ಪ್ರಶ್ನಿಸಿದೆ ಮತ್ತು ವಸತಿ ಸಂಕೀರ್ಣಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಮಂಡಳಿಗೆ ಇದು ಅನಿಯಂತ್ರಿತ ಅಧಿಕಾರವನ್ನು ನೀಡಿದೆ ಎಂದು ವಾದಿಸಿದೆ. ಡಿಸೆಂಬರ್ 1991ರಲ್ಲಿ, ಬಾಂಬೆ ಉಚ್ಚ ನ್ಯಾಯಾಲಯವು, “ಸಾಮಾನ್ಯ ಜನರಿಗೆ ಆಶ್ರಯ ನೀಡುವುದು ಸರ್ಕಾರವು ಕರ್ತವ್ಯವಾಗಿದೆ” ಎಂಬ ಕಾರಣಕ್ಕಾಗಿ ಅರ್ಜಿಗಳನ್ನು ರದ್ದುಗೊಳಿಸಿತು.
ಪಿಒಎ ಮತ್ತು ಇತರ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಅವರ ಅರ್ಜಿಯನ್ನು ಇನ್ನೆರಡು ಪ್ರಕರಣಗಳಿಗೆ ಜೋಡಿಸಲಾಗಿದೆ. ಅವು ಶಿವರಾಮ ರಾಮಯ್ಯ ಯೆರಾಳ ವರ್ಸಸ್ ಮಹಾರಾಷ್ಟ್ರ ಸರ್ಕಾರ ಪ್ರಕರಣ ಹಾಗೂ ಬಾಂಬೆಯ ಪ್ರಮೀಳಾ ಚಿಂತಾಮಣಿ ಮೋಹನ್‌ದಾಸ್ ವರ್ಸಸ್ ಮಹಾರಾಷ್ಟ್ರ ರಾಜ್ಯ ಸರ್ಕಾರ. ಇವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಅತ್ಯಂತ ಹಳೆಯ ಪ್ರಕರಣಗಳಾಗಿವೆ. ಸುಪ್ರೀಂ ಕೋರ್ಟ್ ಪೀಠವು ಇವನ್ನು ಐದು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾಯಿಸಿತ್ತು. ಅದು ಇವನ್ನು ಏಳು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಿತು. 2002ರಲ್ಲಿ, ಆಗಿನ ಮುಖ್ಯ ನ್ಯಾಯಮೂರ್ತಿ ಎಸ್‌ಪಿ ಭರೂಚಾ ನೇತೃತ್ವದ ಏಳು ನ್ಯಾಯಾಧೀಶರ ಪೀಠವು ಈ ವಿಷಯವನ್ನು ಒಂಬತ್ತು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಿತು.
2019ರಲ್ಲಿ, ಮತ್ತೊಂದು ಪ್ರಮುಖ ಬೆಳವಣಿಗೆ ನಡೆಯಿತು. ಮಹಾರಾಷ್ಟ್ರ ಸರ್ಕಾರ ಮತ್ತೆ ಕಾನೂನನ್ನು ತಿದ್ದುಪಡಿ ಮಾಡಿತು. ಹೊಸ ತಿದ್ದುಪಡಿಯ ಪ್ರಕಾರ, ಗಡುವಿನೊಳಗೆ ಆಸ್ತಿ ಮರುಸ್ಥಾಪಿಸಲು ಭೂಮಾಲೀಕರು ವಿಫಲವಾದರೆ, ರಾಜ್ಯ ಸರ್ಕಾರವು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಬಹುದಿತ್ತು. ಇದು ಕಲ್ಯಾಣ ಶಾಸನ ಎಂದು ರಾಜ್ಯ ಸರ್ಕಾರ ಒತ್ತಿಹೇಳಿತು. ಆದರೆ ಆಸ್ತಿಯನ್ನು ಕಡಿಮೆ ಬೆಲೆಗೆ ಕಿತ್ತುಕೊಂಡು ಗುತ್ತಿಗೆದಾರರಿಗೆ ಹಸ್ತಾಂತರಿಸುವ ಯೋಜನೆ ಇದು ಎಂದು ಭೂಮಾಲೀಕರು ಆರೋಪಿಸಿದರು.
ಕಳೆದ ವರ್ಷ, ವಿಚಾರಣೆಗೆ ಬಾಕಿ ಇರುವ ಒಂಬತ್ತು ನ್ಯಾಯಾಧೀಶರ ಪೀಠದ ಪ್ರಕರಣಗಳನ್ನು ಪಟ್ಟಿ ಮಾಡುವುದಾಗಿ ಸುಪ್ರೀಂ ಕೋರ್ಟ್ ಹೇಳಿತ್ತು. ಈ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ನಿನ್ನೆ ನಡೆಸಿತು. ನ್ಯಾಯಮೂರ್ತಿ ಹೃಷಿಕೇಶ್ ರಾಯ್, ನ್ಯಾಯಮೂರ್ತಿ ಬಿವಿ ನಾಗರತ್ನ, ನ್ಯಾಯಮೂರ್ತಿ ಸುಧಾಂಶು ಧುಲಿಯಾ, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ, ನ್ಯಾಯಮೂರ್ತಿ ರಾಜೇಶ್ ಬಿಂದಾಲ್, ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರು ಪೀಠದಲ್ಲಿರುವ ಇತರ ಎಂಟು ನ್ಯಾಯಾಧೀಶರು. ಒಟ್ಟು 16 ಅರ್ಜಿಗಳು ನ್ಯಾಯಾಲಯದ ಮುಂದಿವೆ.
ನಿರ್ಣಾಯಕ ಪ್ರಶ್ನೆ
ನ್ಯಾಯಾಲಯದ ಮುಂದಿರುವ ಪ್ರಮುಖ ಸಮಸ್ಯೆಯು ಸಂವಿಧಾನದಲ್ಲಿನ ಎರಡು ನಿಬಂಧನೆಗಳಿಗೆ ಸಂಬಂಧಿಸಿದೆ- ಆರ್ಟಿಕಲ್ 31 ಸಿ ಮತ್ತು ಆರ್ಟಿಕಲ್ 39 (ಬಿ). ಇವುಗಳು ರಾಜ್ಯ ನೀತಿಯ ಡೈರೆಕ್ಟಿವ್ ಪ್ರಿನ್ಸಿಪಲ್ಸ್‌ಗೆ ಸಂಬಂಧಿಸಿವೆ. ಈ ತತ್ವಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡುವುದಿಲ್ಲ. ಆದರೆ ದೇಶದ ಆಡಳಿತಕ್ಕೆ ಇವು ಮೂಲಭೂತವಾಗಿವೆ. ಕಾನೂನುಗಳನ್ನು ರಚಿಸುವಾಗ ಈ ತತ್ವಗಳನ್ನು ಅನ್ವಯಿಸುವುದು ರಾಜ್ಯದ ಕರ್ತವ್ಯ ಎಂದು ಸಂವಿಧಾನ ಹೇಳುತ್ತದೆ.
ಆರ್ಟಿಕಲ್ 39(ಬಿ) ಹೇಳುವಂತೆ, ಸಮುದಾಯದ ವಸ್ತು ಸಂಪನ್ಮೂಲಗಳ ಮಾಲೀಕತ್ವ ಮತ್ತು ನಿಯಂತ್ರಣವನ್ನು ಸಾಮಾನ್ಯ ಒಳಿತಿಗಾಗಿ ಉತ್ತಮ ರೀತಿಯಲ್ಲಿ ವಿತರಿಸಬಹುದು. ಆರ್ಟಿಕಲ್ 31(ಸಿ) ಕೆಲವು ನಿರ್ದೇಶನ ತತ್ವಗಳನ್ನು ಜಾರಿಗೆ ತರುವ ಕಾನೂನುಗಳನ್ನು ರಕ್ಷಿಸುತ್ತದೆ. ಇದರ ಅರ್ಥವೇನೆಂದರೆ, ನಿರ್ದೇಶನದ ತತ್ವಗಳ ಅಡಿಯಲ್ಲಿ ರಾಜ್ಯವು ಜಾರಿಗೊಳಿಸಿದ ಯಾವುದೇ ಕಾನೂನನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಹಕ್ಕು ಸೇರಿದಂತೆ ಮೂಲಭೂತ ಹಕ್ಕುಗಳೊಂದಿಗೆ ವ್ಯವಹರಿಸುವ ಸಂವಿಧಾನದ ಆರ್ಟಿಕಲ್ 14 ಮತ್ತು ಆರ್ಟಿಕಲ್ 19ನ್ನು ಮುಂದಿಟ್ಟುಕೊಂಡು ಕೂಡ ಪ್ರತಿಭಟಿಸಲು ಸಾಧ್ಯವಿಲ್ಲ.
ನಿರ್ದೇಶನದ ತತ್ವಗಳಲ್ಲಿ ರಾಜ್ಯವು “ಆದಾಯದಲ್ಲಿನ ಅಸಮಾನತೆಗಳನ್ನು ಕಡಿಮೆ ಮಾಡಲು ಶ್ರಮಿಸಬೇಕು ಮತ್ತು ವ್ಯಕ್ತಿಗಳ ನಡುವೆ ಮಾತ್ರವಲ್ಲದೆ ವಿವಿಧ ಪ್ರದೇಶಗಳಲ್ಲಿ ವಾಸಿಸುವ ಅಥವಾ ವಿವಿಧ ಕೆಲಸಗಳಲ್ಲಿ ತೊಡಗಿರುವ ಜನರ ಗುಂಪುಗಳ ನಡುವೆಯೂ ಸಹ ಸ್ಥಾನಮಾನ, ಸೌಲಭ್ಯಗಳು ಮತ್ತು ಅವಕಾಶಗಳಲ್ಲಿನ ಅಸಮಾನತೆಗಳನ್ನು ತೊಡೆದುಹಾಕಲು ಪ್ರಯತ್ನಿಸಬೇಕು” ಎಂದು ಹೇಳುತ್ತದೆ.
ಹಾಗಾಗಿ ಖಾಸಗಿ ಆಸ್ತಿಯನ್ನು ʼಸಮುದಾಯದ ವಸ್ತು ಸಂಪನ್ಮೂಲಗಳು’ ಎಂದು ಪರಿಗಣಿಸಬಹುದೇ ಮತ್ತು ಸಾಮಾನ್ಯ ಒಳಿತಿಗಾಗಿ ರಾಜ್ಯವು ಸ್ವಾಧೀನಪಡಿಸಿಕೊಳ್ಳಬಹುದೇ ಎಂಬುದು ನ್ಯಾಯಾಲಯದ ಮುಂದಿರುವ ಪ್ರಮುಖ ಪ್ರಶ್ನೆಯಾಗಿದೆ.
ಪ್ರಮುಖ ಅವಲೋಕನಗಳು
ನಿನ್ನೆ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳು ಕೆಲವು ಪ್ರಮುಖ ಅವಲೋಕನಗಳನ್ನು ಮಾಡಿದರು. “ನೀವು ಆಸ್ತಿಯ ಬಂಡವಾಳಶಾಹಿ ಪರಿಕಲ್ಪನೆಯನ್ನು ನೋಡಿದರೆ, ಅದು ಆಸ್ತಿಗೆ ಪ್ರತ್ಯೇಕತೆಯ ಭಾವನೆಯನ್ನು, ಇದು ಪ್ರತ್ಯೇಕವಾಗಿ ನನ್ನದು ಎಂಬ ಭಾವನೆಯನ್ನು ಆರೋಪಿಸುತ್ತದೆ. ಆಸ್ತಿಯ ಸಮಾಜವಾದಿ ಪರಿಕಲ್ಪನೆಯು ಕನ್ನಡಿ ಪ್ರತಿಬಿಂಬವಾಗಿದೆ. ಇದು ಆಸ್ತಿಗೆ ಸಾಮಾನ್ಯತೆಯ ಕಲ್ಪನೆಯನ್ನು ಸೂಚಿಸುತ್ತದೆ. ಯಾವುದೂ ವ್ಯಕ್ತಿಗೆ ಪ್ರತ್ಯೇಕವಾಗಿಲ್ಲ. ಎಲ್ಲಾ ಆಸ್ತಿಯೂ ಸಮುದಾಯಕ್ಕೆ ಸಾಮಾನ್ಯವಾಗಿದೆ. ಇದು ತೀವ್ರ ಸಮಾಜವಾದಿ ದೃಷ್ಟಿಕೋನ” ಎಂದು ಹೇಳಿದರು.
“ಭಾರತದ ರಾಜ್ಯ ನೀತಿಯ ನಿರ್ದೇಶನ ತತ್ವಗಳು ಗಾಂಧಿ ತತ್ವ ಮತ್ತು ಸಿದ್ಧಾಂತಕ್ಕೆ ಅನುಗುಣವಾಗಿವೆ. ಆ ತತ್ವಗಳೇನು? ನಮ್ಮ ನೀತಿಯು ನಂಬಿಕೆಯ ಆಸ್ತಿಯನ್ನು ಪರಿಗಣಿಸುತ್ತದೆ. ಖಾಸಗಿ ಆಸ್ತಿ ಇಲ್ಲ ಎಂಬುದಕ್ಕಾಗಿ ನಾವು ಸಮಾಜವಾದಿ ಮಾದರಿಯನ್ನು ಅಳವಡಿಸಿಕೊಳ್ಳಲು ಹೋಗಿಲ್ಲ. ಆದರೆ ಖಾಸಗಿ ಆಸ್ತಿ ಇದೆ” ಎಂದವರು ಗಮನಿಸಿದರು.
“ನಮ್ಮ ಆಸ್ತಿಯ ಪರಿಕಲ್ಪನೆಯು ತೀವ್ರ ಬಂಡವಾಳಶಾಹಿ ದೃಷ್ಟಿಕೋನದಿಂದ ಅಥವಾ ತೀವ್ರ ಸಮಾಜವಾದಿ ದೃಷ್ಟಿಕೋನದಿಂದ ಅತ್ಯಂತ ವಿಭಿನ್ನವಾದ, ಅತ್ಯಂತ ಸೂಕ್ಷ್ಮವಾದ ಬದಲಾವಣೆ ಹೊಂದಿದೆ. ನಾವು ಆಸ್ತಿಯನ್ನು ನಂಬುವ ವಿಷಯವೆಂದು ಪರಿಗಣಿಸುತ್ತೇವೆ. ನಾವು ಕುಟುಂಬದಲ್ಲಿ ಮುಂದಿನ ಪೀಳಿಗೆಗೆ ಆಸ್ತಿಯನ್ನು ನೀಡುವ ನಂಬಿಕೆಯನ್ನು ಇರಿಸಿದ್ದೇವೆ. ಆದರೆ ವಿಶಾಲವಾಗಿ ನಾವು ಆಸ್ತಿಯನ್ನು ವಿಶಾಲ ಸಮುದಾಯದ ವಿಶ್ವಾಸದಲ್ಲಿರಿಸುತ್ತೇವೆ. ಅದು ಸುಸ್ಥಿರ ಅಭಿವೃದ್ಧಿಯ ಸಂಪೂರ್ಣ ಪರಿಕಲ್ಪನೆಯಾಗಿದೆ. ಅದನ್ನೇ ನಾವು ಇಂಟರ್‌ಜೆನೆರೇಶನಲ್ ಇಕ್ವಿಟಿ ಎಂದು ಕರೆಯುತ್ತೇವೆ,” ಎಂದು ಅವರು ಹೇಳಿದರು.
“ಸಮುದಾಯದ ವಸ್ತು ಸಂಪನ್ಮೂಲಗಳು ಎಂದರೆ ಸಾರ್ವಜನಿಕ ಸಂಪನ್ಮೂಲಗಳು ಮತ್ತು ನಾವು ವ್ಯಕ್ತಿಯ ಖಾಸಗಿ ಆಸ್ತಿಯಲ್ಲಿ ಅದಿಲ್ಲ ಎಂದು ಸೂಚಿಸುವುದು ಸ್ವಲ್ಪ ವಿಪರೀತ. ಆ ದೃಷ್ಟಿಕೋನವನ್ನು ತೆಗೆದುಕೊಳ್ಳುವುದು ಏಕೆ ಅಪಾಯಕಾರಿ ಎಂದು ನಾನು ಹೇಳುತ್ತೇನೆ. ಗಣಿಗಳು ಮತ್ತು ಖಾಸಗಿ ಅರಣ್ಯಗಳಂತಹ ಸರಳ ವಿಷಯಗಳನ್ನು ತೆಗೆದುಕೊಳ್ಳಿ. ಉದಾಹರಣೆಗೆ, 39 (ಬಿ) ಅಡಿಯಲ್ಲಿ ಖಾಸಗಿ ಅರಣ್ಯಗಳಿಗೆ ಸರ್ಕಾರಿ ನೀತಿ ಅನ್ವಯಿಸುವುದಿಲ್ಲ ಎಂದು ನಾವು ಹೇಳುತ್ತೇವೆ. ಆದ್ದರಿಂದ ಪ್ರತಿಪಾದನೆಯಾಗಿ ಅತ್ಯಂತ ಅಪಾಯಕಾರಿ,” ಅವರು ಹೇಳಿದರು.
ಸಂವಿಧಾನ ರಚನೆಯಾದ 1950ರ ಪರಿಸ್ಥಿತಿಯನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿಗಳು, “ಸಂವಿಧಾನವು ಸಾಮಾಜಿಕ ಪರಿವರ್ತನೆಯನ್ನು ತರಲು ಉದ್ದೇಶಿಸಲಾಗಿತ್ತು. ಆಸ್ತಿಯನ್ನು ಖಾಸಗಿಯಾಗಿ ಹೊಂದಿರುವ ನಂತರ 39 (ಬಿ) ವಿಧಿಗೆ ಯಾವುದೇ ಅನ್ವಯವಿಲ್ಲ ಎಂದು ನಾವು ಹೇಳಲು ಸಾಧ್ಯವಿಲ್ಲ.” ಎಂದರು.
ಆದಾಗ್ಯೂ, ಮಹಾರಾಷ್ಟ್ರದ ಕಾನೂನು ಶಿಥಿಲಗೊಂಡ ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕಾರಿಗಳಿಗೆ ಅಧಿಕಾರ ನೀಡಿದೆಯೇ ಎಂಬುದು ವಿಭಿನ್ನ ವಿಷಯವಾಗಿದೆ ಮತ್ತು ಅದನ್ನು ಸ್ವತಂತ್ರವಾಗಿ ನಿರ್ಧರಿಸಲಾಗುತ್ತದೆ ಎಂದು ಅದು ಒತ್ತಿಹೇಳಿತು. ‘ಜಮೀಂದಾರಿ’ ಪದ್ಧತಿಯ ರದ್ದತಿಯನ್ನೂ ಮುಖ್ಯ ನ್ಯಾಯಮೂರ್ತಿ ಉಲ್ಲೇಖಿಸಿದರು. “ಸಂವಿಧಾನವು ಸಾಮಾಜಿಕ ಪರಿವರ್ತನೆಯನ್ನು ತರಲು ಉದ್ದೇಶಿಸಿರುವುದರಿಂದ ಸಂವಿಧಾನದಲ್ಲಿ 39 (ಬಿ) ವಿಧವನ್ನು ನಿರ್ದಿಷ್ಟ ರೀತಿಯಲ್ಲಿ ರಚಿಸಲಾಗಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ನಾವು ಖಾಸಗಿ ಆಸ್ತಿಯನ್ನು ಖಾಸಗಿ ಆಸ್ತಿ ಎಂದು ಹೇಳಿದಾಗ ಆರ್ಟಿಕಲ್ 39 (ಬಿ) ಯಾವುದೇ ಅನ್ವಯವನ್ನು ಹೊಂದಿರುವುದಿಲ್ಲ” ಎಂದು ಅವರು ಹೇಳಿದರು. ಇಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: Wealth Redistribution: ಸಂಪತ್ತು ಮರು ಹಂಚಿಕೆ ವಿವಾದದ ಬೆಂಕಿಗೆ ತುಪ್ಪ ಸುರಿದ ಸ್ಯಾಮ್ ಪಿತ್ರೊಡಾ; ಕಾಂಗ್ರೆಸ್‌ಗೆ ಫಜೀತಿ!