Site icon Vistara News

Weight Lifting: ಮೊಣಕಾಲಿನ ಸಂಧಿವಾತವಿದ್ದರೂ 68ನೇ ವಯಸ್ಸಿನಲ್ಲಿ 60 ಕೆಜಿ ಭಾರ ಎತ್ತುವ ಅಜ್ಜಿ!

weight lifting

ಬೆಂಗಳೂರು: ನಮ್ಮಲ್ಲಿ ಹೆಚ್ಚಿನ ಜನರು ವಯಸ್ಸಾದ ಮೇಲೆ ಸಂಧಿವಾತ ಸಮಸ್ಯೆಯಿಂದ ನರಳುತ್ತಿರುವುದನ್ನು ನಾವು ನೋಡಿರುತ್ತೇವೆ. ಇದರಿಂದ ಅವರಿಗೆ ನಡೆಯಲು, ಕುಳಿತುಕೊಳ್ಳಲು, ಕೆಲಸ ಮಾಡಲು ಕಷ್ಟವಾಗುತ್ತದೆ. ಈ ಸಮಸ್ಯೆಗೆ ಸರಿಯಾದ ಚಿಕಿತ್ಸೆ ಪಡೆಯಬೇಕು ಇಲ್ಲವಾದರೆ ಇದು ನಮ್ಮನ್ನು ಹಾಸಿಗೆ ಹಿಡಿಯುವಂತೆ ಮಾಡುತ್ತದೆ. ಇನ್ನು ಈಗಿನ ಯುವಜನತೆ ಬೆಳಿಗ್ಗೆದ್ದು ವಾಕಿಂಗ್‌ ಮಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಇಲ್ಲೊಬ್ಬರು ಅಜ್ಜಿ ಮೊಣಕಾಲಿನ ಸಂಧಿವಾತ ಸಮಸ್ಯೆ ಇದ್ದರೂ ವೇಟ್‌ಲಿಪ್ಟಿಂಗ್ (Weight Lifting )ಮಾಡುವ ಮೂಲಕ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದ್ದಾರೆ. ಸಂಧಿವಾತದಿಂದ ಬಳಲುತ್ತಿದ್ದ 68 ವರ್ಷದ ಈ ಅಜ್ಜಿ ಪ್ರತಿದಿನ 60 ಕೆಜಿ ತೂಕವನ್ನು ಎತ್ತುತ್ತಾರಂತೆ. ಇದಕ್ಕೆ ಸಂಬಂಧಿಸಿದ ಪೋಸ್ಟ್ ಇನ್ ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ.

ಅಜ್ಜಿಯ ವೇಟ್‌ಲಿಪ್ಟಿಂಗ್ ಹಿಂದಿನ ಕತೆ

ಕೆಲವರು ಯಾವುದಾದರೂ ಆರೋಗ್ಯ ಸಮಸ್ಯೆ ಬರುವವರೆಗೂ ಆರೋಗ್ಯದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ. ಇನ್ನು ಕೆಲವರು ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದಾಗ ಕಾಳಜಿ ವಹಿಸಿ ಅದರಿಂದ ಹೊರಗೆ ಬರುವುದಕ್ಕೆ ನೋಡುತ್ತಾರೆ. ಈ ಅಜ್ಜಿಯ ವಿಷಯದಲ್ಲೂ ಅದೇ ಆಗಿದ್ದು. ಸೆಪ್ಟೆಂಬರ್ 2022ರಲ್ಲಿ ಇವರಿಗೆ ಸಂಧಿವಾತ ಸಮಸ್ಯೆ ಇರುವುದು ಗೊತ್ತಾಯಿತು. ವಯಸ್ಸಾಯಿತು ಎಂದು ಸುಮ್ಮನಿರದೇ ಈ ಅಜ್ಜಿ ತಾನು ಫಿಟ್‌ ಆಗಿರಬೇಕು ಎಂದು ವೇಟ್‌ಲಿಪ್ಟಿಂಗ್ ಮಾಡುವುದಕ್ಕೆ ಶುರುಮಾಡಿದರಂತೆ. ತಾಯಿಗೆ ಬೆಂಬಲವಾಗಿ ನಿಂತಿದ್ದು ಅವರ ಮಗ. ನಂತರ ವೇಟ್‌ಲಿಪ್ಟಿಂಗ್‌ ತರಬೇತುದಾರರ ಅಡಿಯಲ್ಲಿ ಕೂಡ ಇವರು ಕಲಿಯುತ್ತಿದ್ದಾರಂತೆ. ಈಗ ಯಾವುದೇ ನೋವು ಇಲ್ಲ ಎಂಬುದಾಗಿ ಅವರ ಮಗ ತಿಳಿಸಿದ್ದಾರೆ. ಈ ಅಜ್ಜಿಯ ಆರೋಗ್ಯದ ಕಾಳಜಿ, ಹುಮ್ಮಸ್ಸು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

ತೂಕ ಎತ್ತುವುದು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದರೂ ಕೂಡ ಮೊಣಕಾಲಿನ ಸಂಧಿವಾತ ಸಮಸ್ಯೆ ಇರುವವರು ಇದನ್ನು ಮಾಡುವಾಗ ಎಚ್ಚರಿಕೆಯಿಂದಿರಬೇಕು. ಭಾರೀ ತೂಕ ಎತ್ತುವುದು ಮೊಣಕಾಲುಗಳನ್ನು ಒಳಗೊಂಡಂತೆ ಕೀಳುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದ ಮೊಣಕಾಲಿನ ಸಂಧಿವಾತ ಹೊಂದಿರುವವರಿಗೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಮೂಳೆ ತಜ್ಞರು ಹೇಳಿದ್ದಾರೆ.

ವೇಟ್‌ಲಿಪ್ಟಿಂಗ್ ಪ್ರಾರಂಭಿಸುವ ಮುನ್ನ ಆರೋಗ್ಯ ತಜ್ಞರು ಮತ್ತು ವೈದ್ಯರ ಬಳಿ ಸಮಾಲೋಚನೆ ಮಾಡುವುದು ಸೂಕ್ತ. ಅವರು ವ್ಯಕ್ತಿ ನಿರ್ದಿಷ್ಟ ಸ್ಥಿತಿ ಮತ್ತು ವೈದ್ಯಕೀಯ ಇತಿಹಾಸದ ಆಧಾರದ ಮೇಲೆ ನಿಮಗೆ ಸೂಕ್ತವಾದ ಸಲಹೆಗಳನ್ನು ನೀಡುತ್ತಾರೆ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: Terror attack : ಉಗ್ರರ ದಾಳಿ; ತನ್ನ ಪ್ರಾಣ ತ್ಯಾಗ ಮಾಡಿ ಪ್ರಯಾಣಿಕರ ಜೀವ ಉಳಿಸಿದ ಬಸ್‌ ಚಾಲಕ

ಅಲ್ಲದೇ ಕಡಿಮೆ ಪ್ರಭಾವ ಬೀರುವ ವ್ಯಾಯಾಮಗಳು ಅಥವಾ ವಾಟರ್ ಏರೋಬಿಕ್ಸ್ ನಂತಹ ಪರ್ಯಾಯಗಳು ಮೊಣಕಾಲುಗಳ ಮೇಲೆ ಕಡಿಮೆ ಒತ್ತಡವನ್ನುಂಟುಮಾಡುತ್ತದೆ ಮತ್ತು ಪ್ರಯೋಜನಕಾರಿಯಾಗಿದೆ. ಕೀಲುಗಳು ಮತ್ತು ಬೆನ್ನಿನ ಮೇಲೆ ಒತ್ತಡ ಹೇರುವ ಬದಲು ಸ್ನಾಯುಗಳನ್ನು ಬಲಪಡಿಸುವುದು ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ.
ಹಾಗಾಗಿ ವೇಟ್‌ಲಿಪ್ಟಿಂಗ್ ಮಾಡುವುದು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾದರೂ ಕೂಡ ಸಂಧಿವಾತ ಸಮಸ್ಯೆ ಇರುವವರು ಇದನ್ನು ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ಹಾಗೇ ತಮ್ಮ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

Exit mobile version