Site icon Vistara News

Semiconductor : ಧೊಲೆರಾದಲ್ಲಿ ದೇಶದ ಮೊದಲ ಸೆಮಿಕಂಡಕ್ಟರ್ ಘಟಕ, ಜಾಗತಿಕ ಭವಿತವ್ಯದಲ್ಲಿ ಏನಿದರ ಪ್ರಾಮುಖ್ಯ?

Semi Conductor
ಚೈತನ್ಯ ಹೆಗಡೆ, ಪತ್ರಕರ್ತ

ಟೀಯಿಂದ ಐಟಿವರೆಗೆ ಭಾರತದ ನಾನಾ ಉದ್ಯಮವಲಯವನ್ನು ಮುಂಚೂಣಿಯಲ್ಲಿ ನಿರೂಪಿಸಿದ ಟಾಟಾ ಸಮೂಹ ಇದೀಗ ಹೊಸಕಾಲದ ಸಾಹಸದಲ್ಲೂ ಭಾರತದ ಪಾಲಿಗೆ ಅಗ್ರೇಸರನಾಗಿ ನಿಂತಿದೆ. ಗುಜರಾತಿನ ಧೊಲೆರಾದಲ್ಲಿ ಮಾರ್ಚ್ 13ರಂದು ಪ್ರಧಾನಿ ಮೋದಿಯವರಿಂದ ಅಡಿಗಲ್ಲು ಹಾಕಿಸಿಕೊಂಡಿರುವ ಭಾರತದ ಮೊಟ್ಟ ಮೊದಲ ಸೆಮಿಕಂಡಕ್ಟರ್ (Semiconductor) ಫ್ಯಾಬ್ರಿಕೇಶನ್ ಘಟಕವು 2026ರ ವರ್ಷಾಂತ್ಯದಲ್ಲಿ ಭಾರತದಲ್ಲೇ ವಿನ್ಯಾಸಗೊಳಿಸಿರುವ ಮೊದಲ ಚಿಪ್ ಅನ್ನು ಮಾರುಕಟ್ಟೆಗೆ ಬಿಡಲಿದೆ. 

ಇದೇಕೆ ಭಾರತದ ಪಾಲಿಗೆ ಅಷ್ಟೊಂದು ಮುಖ್ಯ? 

ನಮ್ಮ ಕೈಲಿರುವ ಸ್ಮಾರ್ಟ್ ಫೋನ್, ದಿಕ್ಸೂಚಿ- ಎಲೆಕ್ಟಾನಿಕ್ ಉಪಕರಣಗಳನ್ನು ಹೊಂದಿರುವ ಈಗಿನ ಕಾರುಗಳು, ಸ್ಮಾರ್ಟ್ ಟಿವಿ, ಲ್ಯಾಪ್ಟಾಪ್, ಕಂಪ್ಯೂಟರ್ ಹೀಗೆ ನಾವು ತಂತ್ರಜ್ಞಾನ ಯುಗದಲ್ಲಿದ್ದೇವೆಂಬುದನ್ನು ಯಾವ ಸಂಗತಿಗಳೆಲ್ಲ ಸಾರುತ್ತಿವೆಯೋ ಅವೆಲ್ಲವೂ ಕೆಲಸ ಮಾಡುವುದಕ್ಕೆ ಬೇಕಿರುವುದು ಚಿಪ್. ಈ ವಿಭಾಗದಲ್ಲಿ ನಿರ್ಣಾಯಕವಾಗಿ ಸಾಮರ್ಥ್ಯಾಭಿವೃದ್ಧಿ ಮಾಡಿಕೊಳ್ಳದೇ ಹೋದರೆ ಭವಿಷ್ಯದ ದಶಕಗಳು ಭಾರತದ್ದು ಅಂತ ಹೇಳುವ ಯಾವ ಧೈರ್ಯವೂ ನಮಗಿರುವುದಿಲ್ಲ. 

ಸದ್ಯಕ್ಕೆ ಜಾಗತಿಕ ಸೆಮಿಕಂಡಕ್ಟರ್ ಸಾಮರ್ಥ್ಯ ಹೇಗಿದೆ? 

ಚೀನಾದ ಪೂರ್ವ ಸಮುದ್ರದ ಭಾಗದಲ್ಲಿರುವ ತೈವಾನ್ ದ್ವೀಪರಾಷ್ಟ್ರ ಸೆಮಿಕಂಡಕ್ಟರ್ ವಿಭಾಗದಲ್ಲಿ ಜಾಗತಿಕ ಮಾರುಕಟ್ಟೆಯ ಶೇಕಡ 56.4 ಪಾಲನ್ನು ಇದು ಹೊಂದಿದೆ. ಅದರಲ್ಲೂ ಮುಂದುವರಿದ ತಂತ್ರಜ್ಞಾನಗಳಿಗೆ ಬೇಕಾದ ಚಿಪ್ ಶೇಕಡ 90ರಷ್ಟು ಇಲ್ಲೇ ಉತ್ಪಾದನೆಯಾಗುತ್ತಿದೆ ಎಂಬುದೊಂದು ಅಂದಾಜು. ಎನ್ವಿಡಿಯಾ, ಮೆಟಾ, ಗೂಗಲ್, ಆ್ಯಪಲ್, ಒಪನ್ ಎಐ ಹೀಗೆಲ್ಲ ತಂತ್ರಜ್ಞಾನ ದಿಗ್ಗಜ ಕಂಪನಿಗಳು ಅಮೆರಿಕದಲ್ಲೇ ಬೀಡುಬಿಟ್ಟಿದ್ದರೂ ಚಿಪ್’ಗಾಗಿ ತೈವಾನ್ ಮೇಲೆಯೇ ಅವಲಂಬನೆ.

ಇದನ್ನೂ ಓದಿ : ಹಲವು ಅಣುಬಾಂಬ್‌ ಏಕಕಾಲಕ್ಕೆ ಕೊಂಡೊಯ್ಯಬಲ್ಲ Agni-V ಕ್ಷಿಪಣಿ! ಏನಿದರ ವಿಶೇಷತೆ?

ಹೀಗಿರುವ ತೈವಾನ್ ತನ್ನದೇ ಭಾಗ ಹಾಗೂ ಒಂದು ದಿನ ಅದರ ವಿಲೀನ ಸಾಧಿಸಿಯೇ ಸಿದ್ಧ ಎಂಬುದು ಚೀನಾದ ನಿಲವು. ಅಮೆರಿಕವು ತೈವಾನಿಗೆ ನೀಡಿರುವ ಮಿಲಿಟರಿ ಬೆಂಬಲದಿಂದ ಚೀನಾಕ್ಕೆ ಏಕಾಏಕಿ ದುಸ್ಸಾಹಸ ಮಾಡುವುದಕ್ಕಾಗುತ್ತಿಲ್ಲವಾದರೂ, ತಂತ್ರಜ್ಞಾನ ವಲಯದ ತುರುಸು ಹೆಚ್ಚಾಗುತ್ತಲೇ ಅದು ತೈವಾನಿನಲ್ಲಿ ಸಂಘರ್ಷವೊಂದಕ್ಕೆ ಕಾರಣವಾಗಬಹುದು ಎಂಬುದನ್ನು ಜಾಗತಿಕ ವಿದ್ಯಮಾನಗಳ ವಿಶ್ಲೇಷಕರೆಲ್ಲ ಹೇಳುತ್ತಿದ್ದಾರೆ. 

ಇದೀಗ ಧೊಲೆರಾದಲ್ಲಿ ಟಾಟಾ ಸಮೂಹದ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ತಲೆಎತ್ತಲಿರುವುದು ಇದೇ ತೈವಾನಿನ ‘ಪವರ್’ಚಿಪ್ ಸೆಮಿಕಂಡಕ್ಟರ್ ಮನುಫಾಕ್ಚರಿಂಗ್ ಕಾರ್ಪೋರೇಷನ್’ (ಪಿ ಎಸ್ ಎಮ್ ಸಿ) ಸಹಭಾಗಿತ್ವದಲ್ಲಿ. ಸೆಮಿಕಂಡಕ್ಟರ್ ವಿಭಾಗದಲ್ಲಿ ತಂತ್ರಜ್ಞಾನವನ್ನು ಚೆನ್ನಾಗಿ ಅರೆದು ಕುಡಿದಿರುವ ತೈವಾನಿಗರು ಭಾರತದ ಶಕ್ತಿಶಾಲಿ ಕಂಪನಿಯೊಂದರ ಜತೆ ಕೈಜೋಡಿಸಿರುವಾಗ ಫಲಿತಾಂಶ ಉತ್ತಮವಾಗಿರಲೇಬೇಕು ಎಂಬುದು ಎಲ್ಲರ ನಿರೀಕ್ಷೆ. ಇದಕ್ಕೆ ಕೇಂದ್ರ ಮತ್ತು ಗುಜರಾತ್ ಸರ್ಕಾರಗಳ ದೊಡ್ಡಮಟ್ಟದ ಬಂಡವಾಳ ಸಬ್ಸಿಡಿಯೂ ಜತೆಯಾಗಿದೆ. 

ಇದರೊಂದಿಗೆ ಟಾಟಾ ಸಮೂಹವೇ ಅಸ್ಸಾಮಿನಲ್ಲೊಂದು ಚಿಪ್ ಸಂಯೋಜನೆಯ ಘಟಕ ನಿರ್ಮಿಸುತ್ತಿದೆ ಹಾಗೂ ಸಿಜಿ ಪವರ್ ಎಂಬ ಕಂಪನಿ ಇಂಥದ್ದೇ ಒಂದನ್ನು ಗುಜರಾತಿನಲ್ಲಿ ನಿರ್ಮಿಸುತ್ತಿದೆ. ಆದರೆ ಇವೆರಡೂ ಚಿಪ್ ವಿನ್ಯಾಸ ಮಾಡುವ ಘಟಕಗಳೇನಲ್ಲ, ಬೇರೆಡೆ ವಿನ್ಯಾಸಗೊಂಡಿರುವುದನ್ನು ಸಂಯೋಜಿಸುತ್ತವಷ್ಟೆ. 

ಟಾಟಾ- ಪಿ ಎಸ್ ಎಮ್ ಸಿ ಸಹಭಾಗಿತ್ವದ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕದ ಮಹತ್ವ ಎಂಥಾದ್ದು ಎಂಬುದನ್ನು ಅಲ್ಲಿ ಹೂಡಿಕೆಯಾಗುತ್ತಿರುವ ಬಂಡವಾಳವೇ ಹೇಳುತ್ತದೆ. ಬರೋಬ್ಬರಿ 1,18,000 ಕೋಟಿ ರುಪಾಯಿಗಳ ಹೂಡಿಕೆ ಇದು. ಇಲ್ಲಿರುವುದು ಕೇವಲ ಹಣದ ವಿಷಯ ಅಲ್ಲ. ಅದಾಗಿದ್ದರೆ, ಅಮೆರಿಕ ಮತ್ತು ತೈವಾನುಗಳು ತಮ್ಮಲ್ಲೇ ಎಲ್ಲವನ್ನೂ ಮಾಡಿಕೊಳ್ಳುತ್ತಿದ್ದವು. ಇಲ್ಲಿ ಎಂಜಿನಿಯರಿಗ್ ಕೌಶಲವೂ ಬೇಕು. 

ಸೆಮಿಕಂಡಕ್ಟರ್ ಅಭಿವೃದ್ಧಿಯನ್ನು ಒಂದು ವ್ಯಾಖ್ಯೆಯಲ್ಲಿ ಹಿಡಿದಿಡುವ ಪ್ರಯತ್ನ ಮಾಡುವುದಾದರೆ, ಸಿಲಿಕಾನ್ ಪದರಗಳನ್ನು ಸೂಕ್ಷ್ಮ ಸಂಯೋಜಿತ ಸರ್ಕೀಟುಗಳನ್ನಾಗಿಸಿ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಶಕ್ತಿ ಒದಗಿಸುವ ಕೌಶಲವಿದು. ಇದನ್ನು ಮಾಡುವ ಫ್ಯಾಬ್ರಿಕೇಶನ್ ಘಟಕದಲ್ಲಿ ಧೂಳಿನ ಕಣವೂ ಸೇರುವಂತಿಲ್ಲ. ಏಕೆಂದರೆ ಧೂಳಿನ ಕಣಕ್ಕಿಂತ ಸೂಕ್ಷ್ಮ ಹರವಿನಲ್ಲಿ ಸಿಲಿಕಾನ್ ಚಿಪ್ಪಿನ ಸರ್ಕೀಟ್ ತಯಾರಾಗುವಾಗ, ನಡುವಲ್ಲಿ ಸಿಲುಕುವ ಸಣ್ಣ ಧೂಳ ಕಣವೂ ಅದನ್ನು ಅನುಪಯುಕ್ತಗೊಳಿಸಬಲ್ಲದು. ಹಾಗೆಂದೇ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕದ ಕ್ಲೀನ್ ರೂಮುಗಳ ಸ್ವಚ್ಛತೆ, ತೇವ, ತಾಪಮಾನ, ಅಷ್ಟೇ ಅಲ್ಲದೇ ಆ ರೂಮಿನೊಳಗಿನ ಕಂಪನಗಳು ಎಲ್ಲವನ್ನೂ ನಿಯಂತ್ರಣದಲ್ಲಿಟ್ಟು ಚಿಪ್ ವಿನ್ಯಾಸವಾಗುತ್ತದೆ.

2030ರ ವೇಳೆಗೆ ಇಂಥ ಸುಮಾರು 67,000 ತಂತ್ರಜ್ಞರ ಕೊರತೆ ಬೀಳಲಿದೆ ಎಂದು ಅಮೆರಿಕದ ಅಧ್ಯಯನ ವರದಿಯೊಂದು ಸಾರಿದೆ. ವರ್ಷಕ್ಕೆ 20 ಲಕ್ಷಕ್ಕಿಂತ ಹೆಚ್ಚು ಎಂಜಿನಿಯರ್ ತಯಾರು ಮಾಡುವ ಭಾರತದಲ್ಲಿ ವಾರ್ಷಿಕವಾಗಿ ಸುಮಾರು 6 ಲಕ್ಷ ಎಲೆಕ್ಟ್ರಾನಿಕ್ಸ್ ಎಂಜಿನಿಯರುಗಳು ಹೊರಬೀಳುತ್ತಾರೆ. ಇದಲ್ಲದೇ, ಕೆಮಿಕಲ್ ಮತ್ತು ಮೆಕ್ಯಾನಿಕಲ್ ಹಿನ್ನೆಲೆಯಿಂದಲೂ ಪ್ರತಿಭೆಗಳು ಈ ವಲಯಕ್ಕೆ ಬೇಕು. ಏಕೆಂದರೆ ತಯಾರಾದ ಮೈಕ್ರೊ ಚಿಪ್ ಗಳನ್ನು ಪರೀಕ್ಷೆಗೆ ಒಳಪಡಿಸುವುದು, ಅವುಗಳ ಸಾಗಣೆಗೆ ಪ್ಯಾಕೇಜ್ ಮಾಡುವುದು, ಗುಣಮಟ್ಟದ ನಿಗಾ ಇವೆಲ್ಲ ಹೊಸದೊಂದು ಪೂರಕ ಉದ್ದಿಮೆಯನ್ನೇ ಎದ್ದುನಿಲ್ಲಿಸುವಂಥದ್ದು. ಈ ಎಲ್ಲ ವಿಭಾಗಗಳಲ್ಲಿ ಮಾನವ ಸಂಪನ್ಮೂಲ ಸಿದ್ಧವಾಗದಿದ್ದರೆ ಭವಿಷ್ಯದಲ್ಲಿ ಭಾರತ ಅಂತಲ್ಲ, ಜಗತ್ತಿನ ಕಾರ್ಯಯೋಜನೆಗಳೇ ಅನುಷ್ಠಾನಕ್ಕೆ ಬರುವುದು ಕಷ್ಟವಾಗಲಿದೆ. 

ಈ ಎಂಜನಿಯರಿಂಗ್ ಕೌಶಲವನ್ನು ತಮಗೆ ಬೇಕಾದಂತೆ, ಸೆಮಿಕಂಡಕ್ಟರ್ ಇಂಡಸ್ಟ್ರಿಗೆ ಬೇಕಾದಂತೆ ಸಿದ್ಧಗೊಳಿಸುವುದಕ್ಕೆ ಭಾರತೀಯ ಮಾನವ ಸಂಪನ್ಮೂಲವೇ ಬೇಕು ಎಂಬುದನ್ನು ಜಗತ್ತು ಅರ್ಥಮಾಡಿಕೊಂಡಿದೆ. ಇದೀಗ ಟಾಟಾ ಜತೆ ಸಹಭಾಗಿತ್ವ ಹೊಂದಿರುವ ತೈವಾನಿನ ಪಿ ಎಸ್ ಎಮ್ ಸಿ ಸಹ ಹೇಳಿರುವುದು- ತಂತ್ರಜ್ಞಾನವನ್ನು ತಾನು ತರುತ್ತೇನೆ, ಎಂಜನಿಯರಿಂಗ್ ಮಾನವ ಸಂಪನ್ಮೂಲವನ್ನು ಭಾರತ ಒದಗಿಸಲಿದೆ ಎಂದೇ.

ಈಗ ಪ್ರಾರಂಭಿಕವಾಗಿ ಧೊಲೆರಾದಲ್ಲಿ ವಿನ್ಯಾಸಗೊಳಿಸುವುದಕ್ಕೆ ಉದ್ದೇಶಿಸಿರುವುದು 28 ನ್ಯಾನೋಮೀಟರ್ಸ್ ವ್ಯಾಪ್ತಿಯ ಚಿಪ್ಪುಗಳನ್ನು. ವಾಹನ, ಸ್ಮಾರ್ಟ್ ಟಿವಿ, ಮೊಬೈಲ್ ಫೋನು, ಟ್ಯಾಬ್ಲೆಟ್, ಗೇಮಿಂಗ್ ಮತ್ತು ಗ್ರಾಫಿಕ್ಸ್ ಗಳಿಗೆ ಬಳಸುವ ಒಂದು ಹಂತದ ಕಂಪ್ಯೂಟರುಗಳು ಇಲ್ಲೆಲ್ಲ ಇದರ ಬಳಕೆ ಆಗಬಹುದು. ಆದರೆ 28 ನ್ಯಾನೊಮೀಟರ್ಸ್ ಚಿಪ್ಪು ಅಂದರೆ ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದು ನಮ್ಮ ಮನಸ್ಸಿಗೆ ಇಳಿಯಬೇಕಾದರೆ, ಜಗತ್ತಿನ ಅಗ್ರಮಾನ್ಯ ಕಂಪನಿಯಾದ ಟಿ ಎಸ್ ಎಂ ಸಿ (ತೈವಾನ್ ಸೆಮಿಕಂಡಕ್ಟರ್ ಮನುಫಾಕ್ಚರಿಂಗ್ ಕಂಪನಿ) 5 ನ್ಯಾನೊಮೀಟರ್ಸ್ ಚಿಪ್ ಅನ್ನು ಹಾಗೂ ಐಬಿಎಂ 2 ನ್ಯಾನೋ ಮೀಟರ್ ಚಿಪ್ ಅನ್ನು ವಿನ್ಯಾಸಗೊಳಿಸಿದೆ ಎಂಬುದನ್ನು ಗಮನಕ್ಕೆ ತಂದುಕೊಳ್ಳಬೇಕು. 

ನ್ಯಾನೋಮೀಟರ್ ಅಳತೆ ಚಿಕ್ಕದಾದಷ್ಟೂ ಪರಿಣಾಮಕಾರಿ, ಕಡಿಮೆ ವಿದ್ಯುತ್ ಬಳಕೆಯ, ಹೆಚ್ಚು ಗಣಕ ಸಾಮರ್ಥ್ಯವನ್ನು ಬೆಂಬಲಿಸುವ ಸೆಮಿಕಂಡಕ್ಟರ್ ಸಾಧನಗಳು ರೂಪುಗೊಳ್ಳುತ್ತವೆ. ಬೃಹತ್ ಭಾಷಾ ಮಾದರಿಗಳಿಗೆ ಕೃತಕ ಬುದ್ಧಿಮತ್ತೆಯ ತಂತ್ರಾಂಶ ಸಿದ್ಧಗೊಳಿಸುವಾಗ ಅಲ್ಲಿ ಬೇಕಾಗುವುದು ತ್ವರಿತ ಗಣಕ ಸಾಮರ್ಥ್ಯ ಹೊಂದಿದ ಗ್ರಾಫಿಕ್ ಪ್ರಾಸೆಸರ್ ಗಳು. ಇಲ್ಲೆಲ್ಲ ನ್ಯಾನೊಮೀಟರ್ ಕಡಿಮೆ ಇರುವ ಅತ್ಯುನ್ನತ ಮಾದರಿ ಚಿಪ್ ತಂತ್ರಜ್ಞಾನವೇ ಅತಿಮುಖ್ಯ.  

ಈ ಅರ್ಥದಲ್ಲಿ ಭಾರತ ಈಗ ಸೊಲ್ಲೆತ್ತಿರುವುದಿನ್ನೂ ಶ್ರೀ ಗಣೇಶಾಯ ನಮಃ. ಆದರೆ, ದೇಶದ ಅತಿ ಹಳೆಯ ಉದ್ಯಮ ಸಾಮ್ರಾಜ್ಯ, ಸರ್ಕಾರಗಳು ಒಂದಾಗಿ ಜಗತ್ತಿನ ಅತಿಕುಶಲ ಸೆಮಿಕಂಡಕ್ಟರ್ ಕಸಬುದಾರನೊಂದಿಗೆ ಕೈಜೋಡಿಸಿರುವುದರಿಂದ ಮುಂದಿನ ಪ್ರಯಾಣ ಬೃಹತ್ ಆಗಲಿದೆ ಎಂದು ಆಶಿಸಬಹುದು. 

Exit mobile version