Site icon Vistara News

ವಿಸ್ತಾರ ಸಂಪಾದಕೀಯ: ಸಿಆರ್‌ಪಿಎಫ್ ಆಯ್ಕೆ ಪರೀಕ್ಷೆ ಕನ್ನಡದಲ್ಲಿ ಏಕಿಲ್ಲ?

why CRPF selection test is not available in Kannada?

why CRPF selection test is not available in Kannada?

ಕೇಂದ್ರ ಮೀಸಲು ಪೊಲೀಸ್ ಪಡೆಯ 9212 ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಕರ್ನಾಟಕದ 466 ಹುದ್ದೆಗಳೂ ಸೇರಿವೆ. ಆದರೆ ಈ ಹುದ್ದೆಗಳ ನೇಮಕಕ್ಕೆ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ. ರಾಜ್ಯದಲ್ಲಿರುವ ಖಾಲಿ ಹುದ್ದೆಗಳಿಗೂ ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಪರೀಕ್ಷೆ ನಡೆಸುತ್ತಿರುವುದಕ್ಕೆ ಹೆಚ್ಚಿನ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʻʻನಮ್ಮ ರಾಜ್ಯದಲ್ಲಿರುವ ಹುದ್ದೆಗಳಿಗೆ ಹಿಂದಿಯಲ್ಲಿ, ಇಂಗ್ಲಿಷ್‌ನಲ್ಲಿ ಏಕೆ ಪರೀಕ್ಷೆ ನಡೆಸಬೇಕುʼʼ ಎಂದ ಪ್ರಶ್ನಿಸಿದ್ದಾರೆ. ಹಿಂದಿಯ ಬದಲು ಕನ್ನಡದಲ್ಲಿ ಪರೀಕ್ಷೆ ನಡೆಸಿ ಎಂದು ಒತ್ತಾಯಿಸಿದ್ದಾರೆ. ಒಕ್ಕೂಟ ಸರ್ಕಾರ ಈ ಮಾತುಗಳಲ್ಲಿರುವ ಆಕ್ರೋಶ, ಆತಂಕ, ಕಳವಳ ಹಾಗೂ ಬೇಡಿಕೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಮೊದಲಿಗೆ, ಈ ಹುದ್ದೆಗಳ ವಿದ್ಯಾರ್ಹತೆ ಏನು ಎಂಬುದನ್ನು ಗಮನಿಸಬೇಕು. ಬಹುತೇಕ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಕೆಲವು ಹುದ್ದೆಗಳಿಗೆ ಮಾತ್ರ ದ್ವಿತೀಯ ಪಿಯುಸಿ ವಿದ್ಯಾರ್ಹತೆ. ಇವರಿಗೆ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ನಡೆಸುವ ಪರೀಕ್ಷೆ ಎದುರಿಸುವುದು ಕಷ್ಟ. ಇದರಿಂದ ಯಾರಿಗೆ ಲಾಭವೆಂದರೆ, ಹಿಂದಿಯಲ್ಲಿ ಪರೀಕ್ಷೆ ಬರೆಯಬಲ್ಲ ಉತ್ತರ ಭಾರತೀಯರಿಗೆ ಮಾತ್ರ. ಇನ್ನು ಇಂಗ್ಲಿಷ್‌ ಚೆನ್ನಾಗಿ ಬಲ್ಲವರು ಸಿಆರ್‌ಪಿಎಫ್‌ ಪರೀಕ್ಷೆಗಳಿಗೆ ಬರೆಯುತ್ತಾರೆ ಎಂದು ಭಾವಿಸುವಂತಿಲ್ಲ. ಸಾಮಾನ್ಯವಾಗಿ ಸಮಾಜದ ತಳಮಟ್ಟದಿಂದ ಬಂದವರು, ಕಡಿಮೆ ವಿದ್ಯಾರ್ಹತೆ ಹೊಂದಿದವರು, ದೈಹಿಕ ಪರಿಶ್ರಮದ ದುಡಿಮೆಯತ್ತ ಗಮನ ನೆಟ್ಟವರು ಈ ಹುದ್ದೆ ಬಯಸುತ್ತಾರೆ. ಇವರಲ್ಲಿ ಹೆಚ್ಚಿನವರಿಗೆ ಸ್ಥಳೀಯ ಭಾಷೆ, ಮಾತೃಭಾಷೆಗಳೇ ಅನ್ನ ಕೊಡುವ ಸಂಗಾತಿಗಳು. ಹೀಗಿರುವಾಗ ಕನ್ನಡಿಗರು ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಬರೆಯಲಿ ಎಂದರೆ ಹೇಗೆ?

ಈ ನಿಯಮದಿಂದಾಗಿ ಹಿಂದಿ ಭಾಷೆ ಬಲ್ಲ ಉತ್ತರ ಭಾರತದ ಯುವ ಜನ ಸರಾಗವಾಗಿ ಪರೀಕ್ಷೆ ಬರೆಯುತ್ತಾರೆ‌. ಆದರೆ ದಕ್ಷಿಣ ಭಾರತದ ಯುವಜನ ಅನಿವಾರ್ಯವಾಗಿ ಇಂಗ್ಲಿಷ್‌ನಲ್ಲೇ ಪರೀಕ್ಷೆ ಬರೆಯಬೇಕಾಗುತ್ತದೆ. ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳ ಯುವ ಜನರಿಗೆ ಈ ಉದ್ಯೋಗ ಗಿಟ್ಟಿಸುವಲ್ಲಿ ಹಿನ್ನಡೆ ಆಗುವಂತಾಗಿದೆ. ಸಿಆರ್‌ಪಿಎಫ್‌ನಂಥ ಹುದ್ದೆಗಳಿಗೆ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡುವುದು ಅಗತ್ಯ. ಈ ಕೇಂದ್ರ ಮೀಸಲು ಪೊಲೀಸ್‌ ಪಡೆಗೆ ಸೇರಿದವರು ದೇಶದ ಎಲ್ಲೇ ನೇಮಕಾತಿಯಾದರೂ ಅಲ್ಲಿಗೆ ತೆರಳಬೇಕು ಎಂಬುದು ನಿಜ; ಆದರೆ ದಿನಚರಿಯ ಭಾಷೆ ಬೇರೆ, ಪರೀಕ್ಷೆ ಬರೆಯಬೇಕಾದ ಭಾಷೆ ಬೇರೆ. ಈ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಏನೇ ಇರಲಿ, ಕೇಂದ್ರ ಮಟ್ಟದ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಅವಕಾಶ ಅಗತ್ಯ.

ಇಂಥ ಅನ್ಯಾಯ ಕನ್ನಡಿಗರಿಗೂ ಇತರ ದಕ್ಷಿಣ ಭಾರತೀಯ ಭಾಷಿಕರಿಗೂ ಹಲವೆಡೆಗಳಲ್ಲಿ ಆಗುತ್ತಲೇ ಇದೆ. 2011ಕ್ಕಿಂತ ಮೊದಲು ರೈಲ್ವೆ ನೇಮಕಾತಿ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಡೆಯುತ್ತಿದ್ದವು. ಆಗ ರೈಲ್ವೆ ಇಲಾಖೆಯಲ್ಲಿ ಹಿಂದಿ ಭಾಷಿಕರೇ ತುಂಬಿ ತುಳುಕುತ್ತಿದ್ದರ. ಇತ್ತೀಚೆಗೆ ಭಾರಿ ಹೋರಾಟದ ಬಳಿಕ ಕನ್ನಡದಲ್ಲೂ ರೈಲ್ವೆ ನೇಮಕಾತಿ ಪರೀಕ್ಷೆ ಲಭ್ಯವಾಗುವಂತಾಗಿದೆ. ಆದರೆ ಬ್ಯಾಂಕಿಂಗ್‌ ಪರೀಕ್ಷೆಗಳು, ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌, ಸಿಆರ್‌ಪಿಎಫ್‌, ಎಲ್‌ಐಸಿ, ಸೇನಾ ನೇಮಕಾತಿ ಮುಂತಾದ ಕೇಂದ್ರ ಇಲಾಖೆಗಳು ನಡೆಸುವ ಪರೀಕ್ಷೆಗಳು ಕನ್ನಡದಲ್ಲಿ ಲಭ್ಯವಿಲ್ಲ. ಪರಿಣಾಮವಾಗಿ ಕರ್ನಾಟಕದ ಬ್ಯಾಂಕ್‌ಗಳಲ್ಲಿ ಉತ್ತರ ಭಾರತೀಯರೇ ತುಂಬಿ ಹೋಗಿದ್ದಾರೆ. ಕನ್ನಡಿಗರ ಪಾಲಿನ ಹುದ್ದೆಗಳನ್ನು ಇತರರು ದೋಚುತ್ತಿದ್ದಾರೆ. ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ನೀಡುವ ಬ್ಯಾಂಕಿಂಗ್‌ ವಲಯದಲ್ಲಿ ಕನ್ನಡಿಗರ ನೇಮಕ ಕೆಲವು ನೂರುಗಳನ್ನು ದಾಟುವುದಿಲ್ಲ. ಇನ್ನು ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯಬಹುದು ಎಂಬ ಅವಕಾಶ ನೀಡಲಾಗಿದೆ; ಆದರೆ ಇಲ್ಲೂ ಪೂರ್ವಭಾವಿ ಪರೀಕ್ಷೆಗಳನ್ನು ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿಯೇ ಬರೆಯಬೇಕು. ಈ ಅನ್ಯಾಯಕ್ಕೆ ಕೊನೆಯೇ ಇರುವಂತೆ ಕಾಣುವುದಿಲ್ಲ.

ಇದನ್ನೂ ಓದಿ: CRPF Recruitment 2023 : ಸಿಆರ್‌ಪಿಎಫ್‌ನಲ್ಲಿ ನಡೆಯಲಿದೆ ಭರ್ಜರಿ ನೇಮಕ; 1.30 ಲಕ್ಷ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅಧಿಸೂಚನೆ

ನಮ್ಮದು ಒಕ್ಕೂಟ ವ್ಯವಸ್ಥೆ. ಎಲ್ಲ ಪ್ರಾದೇಶಿಕ ಭಾಷೆಗಳನ್ನು ಒಟ್ಟಿಗೇ ತೆಗೆದುಕೊಂಡು ಹೋದರೆ ಮಾತ್ರ ಸರ್ವಾಂಗೀಣ ಬೆಳವಣಿಗೆ ಸಾಧ್ಯ. ಒಂದು ಕಡೆಯ ಭಾಷೆ ಇನ್ನೊಂದೆಡೆ ಹೇರಿಕೆಯಾದಾಗ ಅಲ್ಲಿ ಆಕ್ರೋಶ ಭುಗಿಲೇಳುತ್ತದೆ. ಇದನ್ನು ತಮಿಳುನಾಡಿನಲ್ಲಿ ನಡೆದ ಹಿಂದಿ ವಿರೋಧಿ ಚಳವಳಿಯಲ್ಲಿ ಗಮನಿಸಬಹುದು. ಇತ್ತೀಚೆಗೆ ಕರ್ನಾಟಕದಲ್ಲೂ ಹಿಂದಿ ಹೇರಿಕೆಯ ವಿರುದ್ಧ ಕೂಗು ಜೋರಾಗುತ್ತಿದೆ. ಇದು ದಾವಾನಲವಾಗುವ ಮುನ್ನ ಒಕ್ಕೂಟ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಪ್ರಧಾನಿ ಮೋದಿ ಅವರು ಆಗಾಗ ಪ್ರಾದೇಶಿಕ ಭಾಷೆಗಳ ಸ್ಥಾನಮಾನ, ಅದರ ಮಹತ್ವದ ಬಗ್ಗೆ ಒತ್ತಿ ಹೇಳುತ್ತಾರೆ. ಆದರೆ ಇದು ಬರಿಯ ಹೇಳಿಕೆಯಾಗಿ ಉಳಿಯಬಾರದು. ವಾಸ್ತವಿಕವಾಗಿ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ಸಿಗಬೇಕು. ಪ್ರಾದೇಶಿಕ ಭಾಷೆಯನ್ನೇ ಅವಲಂಬಿಸಿರುವ ಯುವ ಜನ ಕೇವಲ ಭಾಷೆಯ ಕಾರಣಕ್ಕೆ ಉದ್ಯೋಗ ವಂಚಿತರಾಗಬಾರದು.

Exit mobile version