- ನಂಜೇಗೌಡ ನಂಜುಂಡ, ಸಂಸ್ಥಾಪಕ ಅಧ್ಯಕ್ಷರು ಒಕ್ಕಲಿಗ ಯುವ ಬ್ರಿಗೇಡ್ ಹಾಗೂ ಎನ್ಆರ್ಐ ಒಕ್ಕಲಿಗ ಬ್ರಿಗೇಡ್
ದೇಶ ಕಂಡ ಏಕೈಕ ಸಂತ ವಿಜ್ಞಾನಿ, ಶಿಕ್ಷಣ ಸಂತ, ಅನ್ನ ದಾಸೋಹಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಪೀಠಾಧ್ಯಕ್ಷರಾಗಿ ಪ್ರಪಂಚದ ಉದ್ದಗಲಕ್ಕೂ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಮಠವಾಗಿದೆ. ಧರ್ಮ ಕ್ಷೇತ್ರ ತಪೋಭೂಮಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಸುಮಾರು 2000 ವರ್ಷಗಳ ಇತಿಹಾಸವನ್ನು ಹೊಂದಿದೆ. ಸ್ವಾತಂತ್ರ್ಯದ ನಂತರದಲ್ಲಿ ಮಠದ ಜವಾಬ್ದಾರಿಯನ್ನು ವಹಿಸಿದ ಪರಮಪೂಜ್ಯ, ಶತಮಾನದ ಸಂತ, ಭೈರವೈಕ್ಯ, ಪದ್ಮವಿಭೂಷಣ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರು ತಮ್ಮ ಆಡಳಿತದಲ್ಲಿ ದಾಸೋಹ ಮತ್ತು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಮಠವನ್ನು ಉನ್ನತ ಸ್ಥಾನದಲ್ಲಿ ಕೊಂಡೊಯ್ಯಲು ಶ್ರಮಿಸಿದ್ದರು. ತಮ್ಮ ನಂತರ 500ಕ್ಕೂ ಹೆಚ್ಚು ಶಾಲಾ ಕಾಲೇಜುಗಳು, ಅಂಧ ಮಕ್ಕಳ ಶಾಲೆ, ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸೇರಿದಂತೆ ಹತ್ತು ಹಲವು ಸಂಸ್ಥೆಗಳನ್ನು, ಶ್ರೀಕ್ಷೇತ್ರದಲ್ಲಿರುವ ಅದ್ಭುತ ದೇವಾಲಯವನ್ನು, ಶ್ರೀಕ್ಷೇತ್ರದ ಆಸ್ತಿಪಾಸ್ತಿ, ಭಕ್ತಾದಿಗಳ ನೋಡಿಕೊಳ್ಳುವ ಮಹೋನ್ನತ ಜವಾಬ್ದಾರಿಯನ್ನು ಮುಂದಾಲೋಚನೆ ಮಾಡಿ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳಿಗೆ ಒಪ್ಪಿಸಬೇಕೆಂದು ಬಯಸಿದ್ದರು. ಅದರಂತೆ ಈ ಎಲ್ಲ ಜವಾಬ್ದಾರಿಗಳನ್ನು ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ತಮ್ಮ ಹೆಗಲ ಮೇಲೆ ಹಾಕಿಕೊಂಡು ಅತ್ಯಂತ ಪ್ರೀತಿಯಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಜಗದ್ಗುರುಗಳ ಬಾಲ್ಯ ಜೀವನ:
“Success is the journey of determination, result of Hard Work, learning from failure , Loyalty and Persistence “ಎನ್ನುವಂತೆ ಶ್ರೀಗಳು ಬಾಲ್ಯದಲ್ಲಿ ಅನುಭವಿಸಿದ ನೋವು, ಸಂಕಷ್ಟಗಳು ಹೇಳ ತೀರದು. ಆದರೆ ಛಲ ಬಿಡದ ವಿಕ್ರಮನಂತೆ ಮೇಲೆದ್ದು ಬಂದ ಶ್ರೀಗಳ ಬದುಕು ಸರ್ವಕಾಲಕ್ಕೂ ಮಾದರಿ.
1969 ಜುಲೈ 20 ರಂದು ಜನಿಸಿದ ನಿರ್ಮಲಾನಂದ ಸ್ವಾಮಿಗಳ ಪೂರ್ವಾಶ್ರಮದ ಹೆಸರು ನಾಗರಾಜ. ಇವರು ಜನಿಸಿದ್ದು ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಚೀಕನಹಳ್ಳಿಯಲ್ಲಿ. ಶ್ರೀನರಸೇಗೌಡ ಮತ್ತು ಶ್ರೀಮತಿ ನಂಜಮ್ಮನವರು ಸ್ವಾಮಿಗಳ ಮಾತಾಪಿತರು ಸ್ವಾಮೀಜಿಗಳು ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಮೈಸೂರಿನ ನ್ಯಾಶನಲ್ ಇನ್ಸ್‌ಟಿಟ್ಯೂಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಪದವಿ ಪಡೆದುಕೊಂಡಿದ್ದಾರೆ. ಮದ್ರಾಸ್‌ನ ಪ್ರತಿಷ್ಠಿತ ಐಐಟಿ (ಇಂಡಿಯನ್ ಇನ್ಸ್‌ಇಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ) ಎಂ. ಟೆಕ್ ಪದವಿ ಪಡೆದರು.
ಲೋಕಕಲ್ಯಾಣಕ್ಕಾಗಿ ಸಂತರಾದ ಏಕೈಕ ವಿಜ್ಞಾನಿ
ಐಐಟಿಯಲ್ಲಿ ಪದವಿ ಪಡೆದಿದ್ದ ಶ್ರೀಗಳಿಗೆ ಪುಣೆಯಲ್ಲಿರುವ ಕೇಂದ್ರ ಜಲಶಕ್ತಿ ಸಂಶೋಧನಾಲಯದಲ್ಲಿ ವಿಜ್ಞಾನಿಯಾಗಿ ಉದ್ಯೋಗ ಲಭಿಸಿತ್ತು. ಎಷ್ಟೇ ಶಿಕ್ಷಣ ಪಡೆದಿದ್ದರೂ, ಉದ್ಯೋಗ ದೊರೆತಿದ್ದರೂ ಅವರ ಸ್ವಾಮೀಜಿಗಳು ಮನಸ್ಸು ಲೌಕಿಕಕ್ಕಿಂತಲೂ ಪಾರಮಾರ್ಥಿಕದ ಕಡೆ ಒಲಿಯಿತು. ಸಮಾಜಸೇವೆಗಾಗಿ ಅವರ ಮನಸ್ಸು ತುಡಿಯಿತು. ಬಾಲಗಂಗಾಧರನಾಥ ಸ್ವಾಮಿಗಳು ಚುಂಚನಗಿರಿಯನ್ನು ಚಿನ್ನದ ಗಿರಿಯನ್ನಾಗಿ ಮಾಡಿದರೆ ಸ್ವಾಮಿ ನಿರ್ಮಲಾನಂದರು ಆ ಚಿನ್ನದ ಗಿರಿಗೆ ಸಾತ್ವಿಕ ಲೇಪಮಾಡಿ ಗಟ್ಟಿಗೊಳಿಸುತ್ತಿದ್ದಾರೆ.
ಸನಾತನ ಧರ್ಮ ಪರಿಚಾಲಕರು
ಶ್ರೀಗಳು ಪೀಠಾಧ್ಯಕ್ಷರಾದ ಕೆಲವೇ ವರ್ಷಗಳಲ್ಲಿ ತಮಿಳುನಾಡಿನ ರಾಮೇಶ್ವರಂ, ಕಂಬಂ, ಉತ್ತರಪ್ರದೇಶದ ನೈಮಿಷಾರಣ್ಯ, ಮಧ್ಯಪ್ರದೇಶದ ಚಿತ್ರಕೂಟ, ಅಮೇರಿಕಾದ ನ್ಯೂಜೆರ್ಸಿಯಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠಗಳನ್ನು ತೆರೆದು ಧರ್ಮ ಸೇವೆಯನ್ನು ಪ್ರಪಂಚದಾದ್ಯಂತ ವಿಸ್ತರಿಸಿದರು. ಜನರನ್ನು ತನ್ಮೂಲಕ ಸನ್ಮಾರ್ಗದೆಡೆ ಕರೆದುಹೋಗುವ ಕಾಯಕವನ್ನು ಮಾಡುತ್ತಿದ್ದಾರೆ.
ಸತ್ಸಂಗ ಕಾರ್ಯಕ್ರಮದ ಮೂಲಕ ಸದಾ ಜನರನ್ನು ಸನ್ಮಾರ್ಗದ ಕಡೆಗೆ ಕರೆದು ಹೋಗುವುದರ ಜೊತೆಗೆ ಅವರಲ್ಲಿ ಅಂತರ್ ಪ್ರಜ್ಱೆ ಯನ್ನು ಮೂಡಿಸುತ್ತಿದ್ದಾರೆ. ‘ಗಿರಿ ಪ್ರದಕ್ಷಿಣೆ’ ಎಂಬ ಕಾರ್ಯಕ್ರಮದ ಮೂಲಕ ಪ್ರತಿ ತಿಂಗಳಿನ ಹುಣ್ಣಿಮೆಯಂದು ಮಾನವ ಹಾಗೂ ಚಂದಿರ ನಡುವಿನ ಸಂಬಂಧವನ್ನು ಬೆಸೆಯುವ ಕಾರ್ಯದ ಮೂಲಕ ಸನಾತನ ಧರ್ಮದ ಬೆಳಕನ್ನು ಪ್ರಪಂಚದಾದ್ಯಂತ ಪಸರಿಸುತ್ತಿದ್ದಾರೆ.
ಶಿಕ್ಷಣ ಪ್ರೇಮಿ, ಅನಾಥಮಕ್ಕಳ ಆರಾಧ್ಯ ದೈವ
ಶ್ರೀಗಳು ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಸಂಸ್ಥೆಯನ್ನಾಗಿ ಪರಿವರ್ತಿಸಿ ಮತ್ತಷ್ಟು ಶೋಭಿಸುವಂತೆ ಮಾಡಲು ಹಗಲು ರಾತ್ರಿಯೆನ್ನದೇ ಶ್ರಮಿಸುತ್ತಿದ್ದಾರೆ. ಬೆಂಗಳೂರಿನ ನಗಳೂರಿನಲ್ಲಿ BGS ಆಯುರ್ವೇದಿಕ್ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಮಹಾಲಕ್ಷ್ಮಿ ಲೇಔಟ್ನಲ್ಲಿ ಬಿಜಿಎಸ್ ಎಂಜಿನಿಯರಿಂಗ್ ಕಾಲೇಜು, ಮೈಸೂರು, ಮಾಲೂರು, ಮಂಗಳೂರಿನಲ್ಲಿ ಪದವಿ ಕಾಲೇಜುಗಳನ್ನು ತೆರೆದು ರೈತಾಪಿ ವರ್ಗದ , ಬಡವರ ಮಕ್ಕಳಿಗೆ ಶಿಕ್ಷಣ ನೀಡುವ ಪುಣ್ಯಕಾರ್ಯವನ್ನು ಶ್ರೀಗಳು ಮಾಡುತ್ತಿದ್ದಾರೆ. ಇದರ ಜೊತೆಯಲ್ಲಿ ಪ್ರತಿಭಾವಂತ, ಬಡ , ಅನಾಥ ಮಕ್ಕಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಲು ಶ್ರೀಗಳು (SAMVIT) ಶ್ರೀ ಆದಿಚುಂಚನಗಿರಿ ಪ್ರತಿಭಾವಂತ ಮಕ್ಕಳ ಉಚಿತ ಶಾಲೆ ತೆರೆದು ಸಾವಿರಾರು ಮಕ್ಕಳಿಗೆ ಪ್ರತಿವರ್ಷ ಶಿಕ್ಷಣ ಒದಗಿಸುವ ಜವಾಬ್ದಾರಿಯನ್ನು ಗುರುಗಳು ನೆರೆವೇರಿಸುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಶ್ರೀ ಗಳು BGS ವಿದ್ಯಾನಿಧಿಯ ಮೂಲಕ ಪ್ರತಿವರ್ಷ ಸಾವಿರಾರು ಮಕ್ಕಳಿಗೆ SSLC ಹಾಗು PUCಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಿದ್ಯಾರ್ಥಿವೇತನ ನೀಡುವುದರ ಜೊತೆಗೆ ಅವರ ಭವಿಷ್ಯ ರೂಪಿಸುವ ಕಾಯಕದಲ್ಲಿ ಶ್ರೀಗಳು ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ರೈತರ ಬದುಕಿನ ಆಶಾಕಿರಣ, ಭರವಸೆಯ ಬೆಳಕು
ಅತ್ಯಂತ ಚಿಕ್ಕವಯಸ್ಸಿನಿಂದಲೇ ರೈತರ ನೋವು, ಕಷ್ಟ ನೋಡಿರುವ ಶ್ರೀಗಳು ನಾಡಿನಾದ್ಯಂತ ರೈತರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಉನ್ನತ ಮಟ್ಟದ ಸಂಸ್ಥೆಗಳಲ್ಲಿ ಉದ್ಯೋಗ ನೀಡುವುದರ ಮೂಲಕ ಅವರ ಬಾಳಿಗೆ ನಂದಾದೀಪವಾಗಿದ್ದಾರೆ. ರೈತರ ಪರವಾಗಿ ಸೇವೆ ಮಾಡುವ ಶ್ರೀಗಳು ಕಾವೇರಿ ನೀರಿನ ಸಮಸ್ಯೆ, ರೈತರ ಆತ್ಮಹತ್ಯೆಯಂಥ ಕಠಿಣ ಸಂದರ್ಭಗಳಲ್ಲಿ ರೈತರ ಜೊತೆ ನಿಂತು ಅವರಿಗೆ ಆಸರೆಯಾಗಿದ್ದಾರೆ.
ಮಾನವೀಯ ಮೌಲ್ಯದ ಮೇರು ಸಂತ
ಕೊರೊನಾ ಮಹಾಮಾರಿಯಿಂದ ಜನರ ಬದುಕು ಅಲೋಲ ಕಲ್ಲೋಲವಾದಾಗ ಶ್ರೀಗಳು ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಜನರಿಗೆ ಆತ್ಮಸ್ಥೈರ್ಯ ತುಂಬಿದ್ದರು. ಉಚಿತ ಚಿಕಿತ್ಸೆ, ಧವಸ ಧಾನ್ಯಗಳನ್ನು ಪ್ರತಿ ಮನೆಗೆ ತಲುಪಿಸಿ ಸಾವಿರಾರು ಜನರ ಬದುಕುನ್ನು ಉಳಿಸಿದ್ದರು. ಇತೀಚಿಗೆ ರೈತರು ಮಕ್ಕಳ ಮದುವೆಗಾಗಿ ತಮ್ಮ ಅಲ್ಪ ಪ್ರಮಾಣದ ಜಮೀನುಗಳನ್ನು ಮಾರುವುದನ್ನು ಕಣ್ಣಾರೆ ಕಂಡ ಶ್ರೀಗಳು 2014ರಿಂದ ಉಚಿತ ಸಾಮೂಹಿಕ ವಿವಾಹಗಳನ್ನು ಆಯೋಜಿಸುತ್ತಿದ್ದಾರೆ. ಈ ಮೂಲಕ ಪ್ರತಿವರ್ಷ ಸಾವಿರಾರು ಬಡ ಕುಟುಂಬಗಳಿಗೆ ಆಸರೆಯಾಗಿ ನಿಂತಿದ್ದಾರೆ.
ಕಲೆ, ವಿಜ್ಞಾನ, ಸಾಹಿತ್ಯ ಪರಂಪರೆಯ ಪ್ರೋತ್ಸಾಹಕರು
ಶ್ರೀಗಳು ಪ್ರತಿವರ್ಷ ಕಲೆಗೆ ಪ್ರೋತ್ಸಾಹ ನೀಡಲು ನಾಡಿನಾದ್ಯಂತ ಇರುವ ಕಲೆಗಾರರಿಗೆ ಚುಂಚಾದ್ರಿ ಕಲೋತ್ಸವನ್ನು ಹಮ್ಮಿಕೊಂಡು ಅವರ ಕಲೆಗಳನ್ನು ಪ್ರದರ್ಶನ ಮಾಡಲು ಭವ್ಯ ವೇದಿಕೆ ರೂಪಿಸಿಕೊಡುತ್ತಿದ್ದಾರೆ. ಜ್ಞಾನ, ವಿಜ್ಞಾನ ತಂತ್ರಜ್ಞಾನ ಮೇಳವನ್ನು ಹಮ್ಮಿಕೊಂಡು ಸ್ವತಃ ವಿಜ್ಞಾನಿಗಳಾಗಿರುವ ಶ್ರೀಗಳು ಅತ್ಯಾಧುನಿಕ ವಿಚಾರಧಾರೆಗಳ ಬಗ್ಗೆ ಚರ್ಚಿಸಲು ಹಾಗು ಪರಿಹಾರ ಕಂಡುಕೊಳ್ಳಲು ಶ್ರೀಗಳು ಪ್ರತಿವರ್ಷ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ.
ಸಾಧಕರಿಗೆ ಭರವಸೆ
ಶ್ರೀಗಳು ಪ್ರತಿವರ್ಷ ಅಪ್ರತಿಮ ಸೇವೆ ಮಾಡಿರುವ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು 2016ರಿಂದ ನಡೆಸುಕೊಂಡು ಬರುತ್ತಿದ್ದಾರೆ. ಸಮಾಜಕ್ಕೆ ನೀಡಿರುವ ಅಪ್ರತಿಮ ಸೇವೆಯನ್ನು ಗುರ್ತಿಸಿ “ಚುಂಚಾದ್ರಿ ಪ್ರಶಸ್ತಿಯನ್ನು” , ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನ ಗುರ್ತಿಸಿ ” ವಿಜ್ಞಾನಂ” ಪ್ರಶಸ್ತಿಯನ್ನ ನೀಡಿ ಗೌರವಿಸಲಾಗುತ್ತಿದೆ.
ಸದ್ದು ಗದ್ದಲ ವಿಲ್ಲದೆ ಸಾಧನೆಗೈದ ಶ್ರೀಗಳು
ಶ್ರೀಗಳು ಯಾವುದೇ ಪ್ರಚಾರ ಬಯಸದದೇ ಕರ್ನಾಟಕ ಸರ್ಕಾರದಿಂದಲೇ ” ನಾಡಪ್ರಭು ಕೆಂಪೇಗೌಡರ ಜಯಂತಿ” ಆಚರಿಸಲು ಕಾರಣೀಭೂತರಾಗಿದ್ದರೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ” ನಾಡಪ್ರಭು ಕೆಂಪೇಗೌಡರ ಅಧ್ಯಯನ ಪೀಠ ರಚಿಸಲು ಹಾಗೂ ಮುಂದಿನ ತಲೆಮಾರಿಗೆ ಅವರ ಸಾಧನೆಗಳು ಪರಿಚಯಿಸಲು ಶ್ರಮಿಸಿದ್ದಾರೆ.
ವಿಶ್ವಪ್ರಸಿದ್ಧ ” 108″ ಅಡಿಯ ಕೆಂಪೇಗೌಡರ ” Statue of Prosperity ” ಸ್ಥಾಪನೆಯ ಹಿಂದಿನ ದೈತ್ಯ ಶಕ್ತಿಯಾಗಿ ಶ್ರೀ ಗಳು ಕಾರ್ಯ ನಿರ್ವಹಿಸಿದ್ದಾರೆ. ಒಕ್ಕಲಿಗ ಜನಾಂಗಕ್ಕೆ ಮೀಸಲಾತಿ ಎಂಬ ಸಂಕಷ್ಟದಿಂದ ಹೊರಗೆ ಬರಲು 2% ರಿಂದ 4 % ಮೀಸಲಾತಿ ಹೆಚ್ಚಿಸಲು ಶ್ರೀಗಳು ಶ್ರಮಿಸಿದ್ದಾರೆ.
ಗೌರವ ಸಲಹೆಗಾರರು ಹಾಗೂ ರಾಯಭಾರಿಗಳು
ಶ್ರೀಗಳು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ “Skill India ” ದ ಮಾರ್ಗದರ್ಶಕರಾಗಿ, “Swatch Bharath Abhiyan ” ದ ರಾಯಭಾರಿಗಾಳಾಗಿ, ISRO ಸಂಸ್ಥೆಯ “Technical Advisor ” ಆಗಿಯೂ ದೇಶ ಸೇವೆಯಲ್ಲಿ ತಮ್ಮನು ತೊಡಗಿಸಿಕೊಂಡಿದ್ದಾರೆ. ವಿಶ್ವಪ್ರಸಿದ್ದ ಹಾಗೂ ಭಾರತೀಯರ ಕನಸಿನ ಕೂಸಾದ ” ಅಯೋಧ್ಯೆ ರಾಮಮಂದಿರ ಸ್ಥಾಪನೆಯ ಮುಖ್ಯ ಸಲಹೆಗಾರರ ಸಮಿತಿಯ ಸದಸ್ಯರಾಗಿ ದೇಶಕ್ಕೆ ಮಹತ್ತರವಾದ ಕೊಡುಗೆಯನ್ನು ಶ್ರೀಗಳು ನೀಡಿದ್ದಾರೆ.
ಇದನ್ನೂ ಓದಿ : Sadguru Column : ಹಿಂದು ಒಂದು `ಇಸಂ’ ಅಲ್ಲ, ಅದೊಂದು ಭೌಗೋಳಿಕ, ಸಂಸ್ಕೃತಿಯ ಐಡೆಂಟಿಟಿ
ಗೌರವ ಪುರಸ್ಕಾರಗಳು
ಸಮಾಜಕ್ಕೆ ಶ್ರೀ ನಿರ್ಮಲಾನಂದ ಸ್ವಾಮೀಜಿಗಳ ನೀಡಿರುವ ಸೇವೆಗಳನ್ನು ಪರಿಗಣಿಸಿ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಅನ್ನು ಏಪ್ರಿಲ್ 30, 2016 ರಂದು ನೀಡಿ ಗೌರವಿಸಿದೆ. 2023 ರಲ್ಲಿ VTU (ವಿಶ್ವೇಶ್ವರಯ್ಯ ಟೆಕ್ನಿಕಲ್ ಯೂನಿವರ್ಸಿಟಿ) ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಸಮಾಜದ ಎಲ್ಲಾ ವರ್ಗದವರಿಗೆ ವಿಶೇಷವಾಗಿ ದೀನದಲಿತರಿಗೆ ಸೌಹಾರ್ದತೆ ಮತ್ತು ಜ್ಞಾನದ ಸಂದೇಶವನ್ನು ಹರಡುವ ಪರಮಪೂಜ್ಯ ಶ್ರೀ ಮಹಾಗುರುಗಳ ಪ್ರಾರಂಭಿಸಿದ ಕೆಲಸವನ್ನು ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಪಟ್ಟುಬಿಡದೆ ಮುಂದುವರಿಸುತ್ತಿದ್ದಾರೆ.