Site icon Vistara News

Paytm Payments Bank: ʼನಿಮ್ಮ ಹಣ ಸೇಫ್‌ʼ ಎಂದ ಪೇಟಿಎಂ ಪಾವತಿ ಬ್ಯಾಂಕ್; ಆದರೆ…

paytm payments bank

ಹೊಸದಿಲ್ಲಿ: “ಆತಂಕ ಬೇಡ, ನಿಮ್ಮ ಹಣ ನಮ್ಮಲ್ಲಿ ಸುರಕ್ಷಿತವಾಗಿರುತ್ತದೆ” ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ತನ್ನ ಗ್ರಾಹಕರಿಗೆ ಭರವಸೆ ನೀಡಿದೆ. ಫೆಬ್ರವರಿ 29ರ ನಂತರ ಹೊಸ ಠೇವಣಿಗಳನ್ನು ಸ್ವೀಕರಿಸದಂತೆ ಅಥವಾ ಸಾಲದ ವಹಿವಾಟುಗಳನ್ನು ಅನುಮತಿಸದಂತೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India – RBI- ಆರ್‌ಬಿಐ) ಪೇಟಿಎಂಗೆ ನಿರ್ದೇಶನ ನೀಡಿದ ಎರಡು ದಿನಗಳ ನಂತರ ಕಂಪನಿಯ ಈ ಹೇಳಿಕೆ ಬಂದಿದೆ.

ತನ್ನ ಗ್ರಾಹಕರಿಗೆ ನೀಡಿದ ಇಮೇಲ್ ಮತ್ತು ಪಠ್ಯ ಸಂದೇಶದಲ್ಲಿ, ಪೇಟಿಎಂ ಪೇಮೆಂಟ್‌ ಬ್ಯಾಂಕ್‌, RBI ನಿರ್ದೇಶನವು ಈಗಾಗಲೇ ಅಸ್ತಿತ್ವದಲ್ಲಿರುವ ಠೇವಣಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ. “ನಿಮ್ಮ ಹಣವು ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿರುತ್ತದೆ” ಎಂದು ಬ್ಯಾಂಕ್ ತನ್ನ ʼಪ್ರಮುಖ ಅಪ್‌ಡೇಟ್ʼನಲ್ಲಿ ಹೇಳಿದೆ.

ಹಾಗಾದರೆ ಆರ್‌ಬಿಐ ನಿರ್ದೇಶನದಿಂದ ಬದಲಾಗುವುದೇನು?

ಫೆಬ್ರವರಿ 29ರ ನಂತರ ತಮ್ಮ ಖಾತೆಗಳಿಗೆ/ವ್ಯಾಲೆಟ್‌ಗಳಿಗೆ ಹಣವನ್ನು ಸೇರಿಸಲು/ಠೇವಣಿ ಮಾಡಲು ಸಾಧ್ಯವಿಲ್ಲ ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ತಿಳಿಸಿದೆ. “ಆದಾಗ್ಯೂ, ಫೆಬ್ರವರಿ 29ರ ನಂತರವೂ ನಿಮ್ಮ ಅಸ್ತಿತ್ವದಲ್ಲಿರುವ ಬ್ಯಾಲೆನ್ಸ್‌ನಿಂದ ಹಣವನ್ನು ಹಿಂಪಡೆಯಲು ಯಾವುದೇ ನಿರ್ಬಂಧವಿಲ್ಲ” ಎಂದು ಅದು ಹೇಳಿದೆ.

“ಯಾವುದೇ ಹೆಚ್ಚಿನ ಸಹಾಯಕ್ಕಾಗಿ ದಯವಿಟ್ಟು ಪೇಟಿಎಂ ಅಪ್ಲಿಕೇಶನ್‌ನಲ್ಲಿ 24×7 ಸಹಾಯ ವಿಭಾಗದ ಮೂಲಕ ನಮ್ಮನ್ನು ಸಂಪರ್ಕಿಸಿ” ಎಂದು Paytm ಗ್ರಾಹಕರಿಗೆ ತಿಳಿಸಿದೆ.

ಆರ್‌ಬಿಐ ಕಡಿವಾಣ

ಮಾರ್ಚ್‌ನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಠೇವಣಿಗಳನ್ನು ತೆಗೆದುಕೊಳ್ಳಲು, ಸಾಲ ಸೇವೆಗಳನ್ನು ನೀಡಲು ಅಥವಾ ನಿಧಿ ವರ್ಗಾವಣೆಯನ್ನು ಸುಗಮಗೊಳಿಸಲು ಸಾಧ್ಯವಿಲ್ಲ ಎಂದು ಆರ್‌ಬಿಐ ಬುಧವಾರ ಹೇಳಿತ್ತು.

“ಫೆಬ್ರವರಿ 29, 2024ರ ನಂತರ ಯಾವುದೇ ಗ್ರಾಹಕ ಖಾತೆಗಳು, ಪ್ರಿಪೇಯ್ಡ್ ಸಾಧನಗಳು, ವ್ಯಾಲೆಟ್‌ಗಳು, ಫಾಸ್ಟ್‌ಟ್ಯಾಗ್‌ಗಳು, NCMC ಕಾರ್ಡ್‌ಗಳು ಇತ್ಯಾದಿಗಳಲ್ಲಿ ಯಾವುದೇ ಡೆಪಾಸಿಟ್‌ ಮಾಡಲು, ಸಾಲ ಪಡೆಯಲು, ಟಾಪ್‌ಅಪ್‌ ಮಾಡಲು ಅನುಮತಿಯಿಲ್ಲ. ಆದರೆ ಬಡ್ಡಿ, ಕ್ಯಾಶ್‌ಬ್ಯಾಕ್ ಅಥವಾ ಮರುಪಾವತಿಗಳನ್ನು ಯಾವುದೇ ಸಮಯದಲ್ಲಿ ಪಡೆಯಬಹುದು” ಎಂದು ಸೆಂಟ್ರಲ್ ಬ್ಯಾಂಕ್ ಹೇಳಿದೆ.

ಹೊಸ ಗ್ರಾಹಕರನ್ನು ಸೇರಿಸುವುದನ್ನು ನಿಲ್ಲಿಸುವಂತೆ 2022ರ ಮಾರ್ಚ್‌ನಲ್ಲಿಯೇ Paytm ಪೇಮೆಂಟ್ಸ್ ಬ್ಯಾಂಕ್ ಅನ್ನು RBI ಕೇಳಿದೆ.

ಸಮಗ್ರ ಸಿಸ್ಟಮ್ ಆಡಿಟ್ ವರದಿ ಮತ್ತು ನಂತರದ ಬಾಹ್ಯ ಲೆಕ್ಕ ಪರಿಶೋಧಕರ ಅನುಸರಣೆಗಳಿಂದ, ಬ್ಯಾಂಕಿನಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿದ ಹಣಕಾಸು ವಹಿವಾಟು ಕಂಡುಬಂದಿದೆ. ಹೀಗಾಗಿ ಹೆಚ್ಚಿನ ಮೇಲ್ವಿಚಾರಣಾ ಕ್ರಮ ಅನಿವಾರ್ಯವಾಗಿದೆ ಎಂದು ಆರ್‌ಬಿಐ ಹೇಳಿದೆ.

Paytm ಷೇರುಗಳು ಕುಸಿತ

ತನ್ನ ಸಹವರ್ತಿ Paytm ಪೇಮೆಂಟ್ಸ್ ಬ್ಯಾಂಕ್ ವಿರುದ್ಧ RBIನ ಕ್ರಮದ ನಂತರ, ಡಿಜಿಟಲ್ ಪಾವತಿ ಸಂಸ್ಥೆ Paytm ಗುರುವಾರ ತನ್ನ ಮಾರುಕಟ್ಟೆ ಮೌಲ್ಯದ ಐದನೇ ಒಂದು ಭಾಗವನ್ನು ಕಳೆದುಕೊಂಡಿತು. Paytmನ ಷೇರುಗಳ ಬೆಲೆ ಆರು ವಾರಗಳ ಕನಿಷ್ಠ ಅಂದರೆ ₹609ಕ್ಕೆ ಕುಸಿದವು. ಕಂಪನಿಯಿಂದ ಸುಮಾರು $1.2 ಶತಕೋಟಿ ಸೋರಿಹೋಯಿತು.

ಸ್ಟಾಕ್ ಮೌಲ್ಯ 20%ದಷ್ಟು ಕಡಿಮೆಯಾಗಿದೆ. ಆರ್‌ಬಿಐನ ಆದೇಶದಿಂದ ತನ್ನ ವಾರ್ಷಿಕ ಗಳಿಕೆಗೆ ₹ 300 ಕೋಟಿಯಿಂದ ₹ 500 ಕೋಟಿಗಳಷ್ಟು “ದುಷ್ಪರಿಣಾಮ” ನಿರೀಕ್ಷಿಸುತ್ತದೆ ಎಂದು Paytm ಗುರುವಾರ ಹೇಳಿದೆ. ಕಂಪನಿಯು ಆರ್‌ಬಿಐ ನಿರ್ದೇಶನಗಳನ್ನು ಅನುಸರಿಸಲು “ತಕ್ಷಣದ ಕ್ರಮಗಳನ್ನು” ತೆಗೆದುಕೊಳ್ಳುತ್ತಿದೆ. ತನ್ನ ಲಾಭದಾಯಕತೆಯನ್ನು ಸುಧಾರಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ.

ಇದನ್ನೂ ಓದಿ: Paytm Shares: ಪಾತಾಳಕ್ಕೆ ಕುಸಿದ ಪೇಟಿಎಂ ಷೇರು; 17 ಸಾವಿರ ಕೋಟಿ ರೂ. ನಷ್ಟ!

Exit mobile version