Site icon Vistara News

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

Karnataka Rain

ಮಂಗಳೂರು: ಮಂಗಳೂರು ನಗರದ ಕೊಟ್ಟಾರ ಅಬ್ಬಕ್ಕ ನಗರದಲ್ಲಿ ಭಾರಿ ಮಳೆಗೆ (Karnataka Rain) ರಾಜಕಾಲುವೆಗೆ ಆಟೋ ಉರುಳಿದ್ದು, ಚಾಲಕ ದಾರುಣವಾಗಿ ಮೃತಪಟ್ಟಿದ್ದಾರೆ. ಚಾಲಕ ದೀಪಕ್ (40) ದುರ್ಮರಣ ಹೊಂದಿದವರು. ಶುಕ್ರವಾರ ರಾತ್ರಿ ಸುರಿದ ಮಳೆಗೆ ಕೊಟ್ಟಾರದಲ್ಲಿ ರಾಜಕಾಲುವೆ ತುಂಬಿ ಹರಿಯುತ್ತಿತ್ತು. ಕಾಲುವೆಗೆ ತಡೆಗೋಡೆ ಇಲ್ಲದ ಕಾರಣ ನೀರು ರಸ್ತೆಗೆ ಬಂದಿತ್ತು. ರಾತ್ರಿ ವೇಳೆ ಅದೇ ರಸ್ತೆಯಲ್ಲಿ ಬಂದ ಚಾಲಕ ದೀಪಕ್‌ ಆಟೋ ಸಮೇತ ರಾಜಕಾಲುವೆ ಉರುಳಿ ಬಿದ್ದಿದ್ದಾರೆ. ರಸ್ತೆ ಹಾಗೂ ರಾಜಕಾಲುವೆಗೆ ಸಮಾನವಾಗಿ ನೀರು ಹರಿಯುತ್ತಿದ್ದ ಕಾರಣ ಈ ಅವಘಡ ಸಂಭವಿಸಿದೆ. ಮಂಗಳೂರು ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೆ ಆಟೋ ಚಾಲಕ ದೀಪಕ್‌ ಬಲಿಯಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ರಾಜಕಾಲುವೆಗೆ ತಡೆಗೋಡೆ ನಿರ್ಮಿಸದೇ ಇರುವುದೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಮಳೆಗೆ ನೆಲಕ್ಕೆ ಬಿದ್ದ ಮನೆಯ ಚಾವಣಿ

ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಸಮೀಪದ ನರಗನಹಳ್ಳಿಯಲ್ಲಿ ರಾತ್ರಿ ಸುರಿದ ಮಳೆಗೆ ಏಕಾಏಕಿ ಮನೆ ಚಾವಣಿ ನೆಲಕ್ಕೆ ಬಿದ್ದಿತ್ತು. ಅದೃಷ್ಟವಶಾತ್ ತಾಯಿ-ಮಗು ಪ್ರಾಣಾಪಾಯದಿಂದ ಪಾರಾಗಿದೆ. ಗುಡುಗು ಸಹಿತ ಮಳೆಯ ರಭಸಕ್ಕೆ ಸೀಟು ಪುಡಿ ಪುಡಿಯಾಗಿದೆ. ತಾಯಿ-ಮಗು ಮಲಗಿದ್ದ ಪಕ್ಕದಲ್ಲೇ ಮನೆ ಮೇಲಿನ ಸೀಟು ಬಿದ್ದಿದೆ. ಆನಂದಮ್ಮ ಎಂಬುವವರಿಗೆ ಸೇರಿದ ಮನೆ ಕುಸಿದು ಬಿದ್ದಿದ್ದು, ರಾತ್ರಿಯಿಡೀ ಪಕ್ಕದ ಮನೆಯಲ್ಲಿ ವಾಸ ಮಾಡುವಂತಾಯಿತು. ಮನೆ ಕಳೆದುಕೊಂಡ ಕುಟುಂಬ ಕಂಗಲಾಗಿತ್ತು. ಇತ್ತ ಮನೆ ಕುಸಿದರೂ ಸ್ಥಳಕ್ಕೆ ಬಾರದ ಪಂಚಾಯಿತಿ ಸಿಬ್ಬಂದಿ ತಾಲೂಕು ಆಡಳಿತದ ವಿರುದ್ದ ಸ್ಥಳೀಯರು ಕಿಡಿಕಾರಿದರು.

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮಳೆಯ ಅವಾಂತರಕ್ಕೆ 16 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ತೂಬಗೆರೆ ಹೋಬಳಿಯಲ್ಲಿ ಸಾಕಷ್ಟು ಹಾನಿಯಾಗಿದೆ. ಬುಡ ಸಮೇತ ಮರಗಳು ರಸ್ತೆಗೆ ಬಿದ್ದಿವೆ. ಅಮದಾಜು 80ಕ್ಕೂ ಹೆಚ್ಚು ಮರಗಳು ಧರಗೆ ಉರುಳಿವೆ. ತೂಬಗೆರೆ ಹೋಬಳಿಯಲ್ಲಿ ವಿದ್ಯುತ್ ಕಂಬ ಬಿದ್ದ ಕಾರಣ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಬೆಸ್ಕಾಂ ಸಿಬ್ಬಂದಿ ಬೆಳಗ್ಗೆಯಿಂದಲೂ ಕಂಬಗಳನ್ನು ಸರಿಪಡಿಸುತ್ತಿದ್ದಾರೆ. ಮಳೆಯ ಅವಾಂತರಕ್ಕೆ ವಿದ್ಯುತ್ ಇಲ್ಲದೆ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಇಷ್ಟೆಲ್ಲಾ ಆದರೂ ಕೂಡ ತಾಲೂಕು ಆಡಳಿತ ಸ್ಪಂದಿಸುತ್ತಿಲ್ಲ. ತಹಸೀಲ್ದಾರ್, ಇಓ ಯಾರೂ ಕೂಡ ಭೇಟಿ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಕಾಫಿನಾಡು ಚಿಕ್ಕಮಗಳೂರಿನಲ್ಲಿ ವ್ಯಾಪಕ ಮಳೆ

ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದ್ದು, ಕಲ್ಲತ್ತಿಗರಿ ಜಲಪಾತ ಮೈದುಂಬಿ ಹರಿಯುತ್ತಿದೆ. ಮೊನ್ನೆವರೆಗೂ ಜಲಪಾತದಲ್ಲಿ ನೀರಿನ ಪ್ರಮಾಣ ಕಡಿಮೆ ಇತ್ತು. ರಾತ್ರಿ ಸುರಿದ ಒಂದೇ ಮಳೆಗೆ ಕಲ್ಲತ್ತಿಗರಿ ಜಲಪಾತ ಧುಮ್ಮಿಕ್ಕುತ್ತಿದೆ. ಕೆಮ್ಮಣ್ಣುಗುಂಡಿ ಗುಡ್ಡಗಾಡು ತಪ್ಪಲ್ಲಿನಲ್ಲಿ ಭಾರೀ ಮಳೆ ಹಿನ್ನೆಲೆ ಜಲಪಾತ ನೋಡಲು ಪ್ರವಾಸಿಗರ ದಂಡು ಬರುತ್ತಿದೆ.

ತರೀಕೆರೆ ತಾಲೂಕಿನ ತ್ಯಾಗದಬಾಗಿ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಹಳ್ಳ ಬಂದಿದ್ದರಿಂದ ಇಟಾಚಿ ಮುಳುಗಿದೆ. ತ್ಯಾಗದ ಬಾಗಿ ಗ್ರಾಮದಲ್ಲಿ ಸೇತುವೆ ಇಕ್ಕೆಲಗಳನ್ನು ಕ್ಲೀನ್ ಮಾಡುವಾಗ ಈ ಘಟನೆ ನಡೆದಿದೆ. ಕೆಮ್ಮಣ್ಣುಗುಂಡಿ-ಕಲ್ಲತ್ತಿಗರಿ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಇದ್ದಕ್ಕಿದ್ದಂತೆ ಹಳ್ಳದಲ್ಲಿ ನೀರು ಹೆಚ್ಚಾಗಿ ಇಟಾಚಿ ಮುಳುಗಿದೆ. ಕಾರ್ಮಿಕರಿದ್ದರು ಇಟಾಚಿ ಮೇಲೆ ತರಲು ಸಾಧ್ಯವಾಗಿಲ್ಲ. ಇಟಾಚಿ ಬಿಟ್ಡು ಮೇಲೆ ಬಂದು ಕಾರ್ಮಿಕರು ಜೀವ ಉಳಿಸಿಕೊಂಡಿದ್ದಾರೆ. ಮಳೆ ಕಡಿಮೆ ಆಗುವವರೆಗೂ ಹಳ್ಳದಲ್ಲೇ ಇಟಾಚಿ ಲಾಕ್ ಆಗಲಿದೆ.

ಇದನ್ನೂ ಓದಿ: Fake Intelligence Officer : ಜಾಸ್ತಿ `ಇಂಟೆಲಿಜೆಂಟ್‌’ ಆಗ್ಬೇಡಿ! ಊರವರ ಮುಂದೆ ಪೊಲೀಸ್‌ ಎಂದು ಬಿಲ್ಡಪ್‌ ಕೊಟ್ಟವ ಈಗ ಲಾಕಪ್‌ ಒಳಗೆ!

ಮಳೆಗೆ ಸೋರುತಿಹುದು ಕೆಎಸ್‌ಆರ್‌ಟಿಸಿ ಬಸ್ಸಿನ ಮಾಳಿಗೆ

ಕೊಡಗು ಜಿಲ್ಲೆಯಲ್ಲೂ ಮಳೆಯಾಗುತ್ತಿದ್ದು, ಕೆಎಸ್‌ಆರ್‌ಟಿಸಿ ಬಸ್ಸಿನ ಮಾಳಿಗೆ ಸೋರುತ್ತಿದೆ. ಮಳೆಯಿಂದಾಗಿ ಬಸ್‌‌ನೊಳಗೆ ಇರುವ ಪ್ರಯಾಣಿಕರ ಮೇಲೆ ನೀರು ಬೀಳುವ ವಿಡಿಯೊ ವೈರಲ್‌ ಆಗಿದೆ. ಮೈಸೂರಿನಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಬಸ್ ಇದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಯಾವ ಡಿಪೋ ಬಸ್ ಎಂಬ ಬಗ್ಗೆ ಮಾಹಿತಿ‌ ಲಭ್ಯವಿಲ್ಲ.

ಧಾರಾಕಾರ ಮಳೆಗೆ ಜಲಾವೃತಗೊಂಡು ನಂಜನಗೂಡು ಮನೆಗಳು

ಮೈಸೂರು ಭಾಗದಲ್ಲಿ ಮಳೆ ಅಬ್ಬರ ಜೋರಾಗಿದ್ದು, ನಂಜನಗೂಡಿನಲ್ಲಿ ಮನೆಗಳು ಜಲಾವೃತಗೊಂಡಿವೆ. ಹಲವು ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ದಿನಸಿ, ಗೃಹೋಪಯೋಗಿ ವಸ್ತುಗಳು ನಾಶವಾಗಿವೆ. ನಂಜನಗೂಡಿನ ಅಶೋಕಪುರಂ ಬಡಾವಣೆಯಲ್ಲಿ ಘಟನೆ ನಡೆದಿದೆ. ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ ಮನೆಗಳಿಗೆ ಕಲುಷಿತ ನೀರು ನುಗ್ಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ತುಮಕೂರಿನಲ್ಲಿ ಧರೆಗುರುಳಿದ ಮರಗಳು, ವಿದ್ಯುತ್‌ ಕಂಬಗಳು

ಗಾಳಿ ಮಳೆ ಅಬ್ಬರಕ್ಕೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ನಡೆದಿದೆ. ಮಳೆ ಹಿನ್ನೆಲೆಯಲ್ಲಿ ವಿದ್ಯುತ್ ಕಡಿತಗೊಳಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಐದಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಇನ್ನೂ ರಸ್ತೆಗೆ ಮರ ಬಿದ್ದು ಕೆಲ ಕಾಲ ಸಂಚಾರಕ್ಕೆ ತೊಂದರೆಯಾಗಿತ್ತು. ಕೊರಟಗೆರೆ ಮುಖ್ಯರಸ್ತೆಗೆ ಮರ ಬಿದ್ದ ಹಿನ್ನೆಲೆ ಸಂಚಾರಕ್ಕೆ ತೊಂದರೆಯಾಗಿದ್ದು, ಬಳಿಕ ಜೆಸಿಬಿ ಸಹಾಯದಿಂದ ಮರವನ್ನು ತೆರವುಗೊಳಿಸಲಾಯಿತು.

ಯಾದಗಿರಿಯಲ್ಲಿ ಸಿಡಿಲು ಬಡಿದು ಹೊತ್ತಿ ಉರಿದ ಮನೆ

ತಡರಾತ್ರಿ ಬಿರುಗಾಳಿ ಸಹಿತ ಮಳೆ ಆಗಿದ್ದು, ಸಿಡಿಲು ಬಡಿದು ಮನೆಯೊಂದು ಹೊತ್ತಿ ಉರಿದಿದೆ. ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಸಿಂಗನಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಪತ್ರಾಸ್ ಮನೆಗೆ ಸಿಡಿಲು ಹೊಡೆದು ಮನೆಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದರು. ಅಂದಾಜು ಐದು ಲಕ್ಷ ಮೌಲ್ಯದ ವಸ್ತುಗಳು ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ, ಗೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗಾಳಿ ಮಳೆಗೆ ಎರಡು ದಿನದಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕರೆಂಟ್ ಸಮಸ್ಯೆಯಿಂದ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಯಾದಗಿರಿಯ ಹೊಸಳ್ಳಿ, ಹೊಸಳ್ಳಿ ತಾಂಡಾ ಹಾಗೂ ತಡಿಬಿಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಕಳೆದ ಎರಡು ದಿನಗಳಿಂದ ಕರೆಂಟ್ ಸಮಸ್ಯೆಯಿಂದ ಬೋರ್‌ವೆಲ್‌ಗಳಲ್ಲಿ ನೀರು ಬಂದಿಲ್ಲ. ಇದರಿಂದಾಗಿ ಗ್ರಾಮದ ಸಮೀಪದ ಪೆಟ್ರೋಲ್ ಬಂಕ್ ಬಳಿಯ ಬೋರ್‌ವೆಲ್‌ನಿಂದ ನೀರನ್ನು ತಂದು ಬಳಸುತ್ತಿದ್ದಾರೆ. ಸರತಿ ಸಾಲಿನಲ್ಲಿ ಬಿಂದಿಗೆಯಿಟ್ಟು ನೀರಿಗಾಗಿ ಕಾದು ಕೂರುವ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ: Murder case : ದನ ಕಟ್ಟುವ ವಿಚಾರಕ್ಕೆ ಕಿರಿಕ್‌; ಕಾಲಿಂದ ಒದ್ದು ಕುಡುಗೋಲಿನಿಂದ ಹೊಡೆದು ದೊಡ್ಡಮ್ಮನನ್ನೇ ಕೊಂದ ದುಷ್ಟ

ಮಂಡ್ಯದಲ್ಲಿ ಧಾರಾಕಾರ ಮಳೆ ಕರೆಂಟ್‌ ಕಟ್‌

ಮಂಡ್ಯ ಜಿಲ್ಲೆ ಕೆಆರ್‌ಪೇಟೆ ತಾಲೂಕಿನ ಹೆಗ್ಗಡಹಳ್ಳಿಯಲ್ಲಿ ಧಾರಾಕಾರ ಮಳೆಯಿಂದ ಅವಾಂತರವೇ ಸೃಷ್ಟಿಯಾಗಿದೆ. ವರುಣನ ಅಬ್ಬರಕ್ಕೆ ವಿದ್ಯುತ್ ತಂತಿ ಹಾಗೂ ಮರಗಳು ಧರೆಗುರುಳಿವೆ. ಹೆಗ್ಗಡಹಳ್ಳಿ ಗ್ರಾಮದಲ್ಲಿ 5ಕ್ಕೂ ಹೆಚ್ಚು ಮನೆಗಳಲ್ಲಿ ಚಾವಣಿ ಹಾರಿಹೋಗಿವೆ. ಬಿರುಗಾಳಿಗೆ ಮನೆಗಳ ಮೇಲೆ ವಿದ್ಯುತ್ ಕಂಬ ಉರುಳಿದ್ದು, ಬೇರು ಸಮೇತ ಮರ ಧರೆಗುರುಳಿದ ಪರಿಣಾಮ ಗ್ರಾಮದ ಸಂಚಾರ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದ ಕಾರಣ ವಿದ್ಯುತ್ ಇಲ್ಲದೆ ಜನರು ಕಂಗಾಲಾಗಿದ್ದಾರೆ. ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವಂತೆ ಗ್ರಾಮಸ್ಥರ ಮನವಿ ಮಾಡಿದ್ದಾರೆ.

ಕೋಡಿ ಬಿದ್ದ ಮಲ್ಲಾಪುರ ಕೆರೆ

ಚಿತ್ರದುರ್ಗದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮಲ್ಲಾಪುರ ಕೆರೆ ಕೋಡಿ ಬಿದ್ದಿದೆ. ಕೋಡಿ ಬಿದ್ದ ಪರಿಣಾಮ ಕೆಲ ಮನೆಗಳಿಗೆ ನೀರು ನುಗ್ಗಿದೆ. ನಗರಸಭೆ ಅಧಿಕಾರಿಗಳು ಕೆರೆಯಲ್ಲಿದ್ದ ಕಸ ತೆಗೆಯುತ್ತಿದ್ದಾರೆ. ಕಸದಿಂದ ಸೇತುವೆ ಕೆಳಗೆ ಕೆರೆ ನೀರು ನಿಂತಿದೆ. ಹಂತ ಹಂತವಾಗಿ ಕಸ ತೆರವು ಮಾಡುತ್ತಿದ್ದರೆ ಇತ್ತ ಕೆರೆ ನೀರಿನಲ್ಲಿ ಮೀನು ಹಿಡಿಯಲು ಸ್ಥಳೀಯರು ಮುಂದಾದರು.

ಹಾಸನದಲ್ಲಿ ಮಳೆಗೆ ಬೆಳೆ ಹಾನಿ

ಹಾಸನ ಜಿಲ್ಲೆಯಲ್ಲಿ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಬೇಲೂರು ತಾಲೂಕಿನ ಹಳೆಬೀಡು ಹೋಬಳಿಯಲ್ಲಿ ಗಾಳಿ ಮಳೆಗೆ ಬೆಳೆಯು ನಾಶವಾಗಿದೆ. ಬಾಳೆ, ಅಡಿಕೆ, ತೆಂಗು ಬೆಳೆ ‌ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಕ್ಯಾತಲಾಪುರ ಗ್ರಾಮದಲ್ಲಿ ಬಾಳೆ, ಅಡಿಕೆ, ತೆಂಗು ಬೆಳೆ ಧರೆಗುರುಳಿದೆ. ಫಸಲಿಗೆ ಬಂದಿದ್ದ ತೆಂಗು, ಬಾಳೆ, ಅಡಿಕೆ ಬೆಳೆ ಸಂಪೂರ್ಣ ನಾಶವಾಗಿದ್ದು, ಸೂಕ್ತ ಪರಿಹಾರಕ್ಕಾಗಿ ಗ್ರಾಮದ ರೈತ ಶಿವಮೂರ್ತಿ ಒತ್ತಾಯಿಸಿದ್ದಾರೆ.

ಇತ್ತ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಸಮೀಪದ ಸೂಪ್ಪನಹಳ್ಳಿ ಗ್ರಾಮದಲ್ಲಿ ಗಾಳಿ- ಮಳೆಗೆ ವಾಸದ ಮನೆಯ ಚಾವಣಿ ಕುಸಿದಿದೆ. ಸೂಪ್ಪನಹಳ್ಳಿ ಗ್ರಾಮದ ರುದ್ರೇಶ್ ಎಂಬುವವರಿಗೆ ಸೇರಿದ ಮನೆಯು ಭಾರಿ ಗಾಳಿಗೆ ಮನೆಯ ಚಾವಣಿ ಶೀಟ್‌ ಹಾರಿ ಹೋಗಿದೆ. 200 ಮೀಟರ್ ದೂರಕ್ಕೆ ಹಾರಿ ಬಿದ್ದಿದ್ದು, ಮನೆಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳೆಲ್ಲವೂ ನೀರುಪಾಲಾಗಿದೆ. ಸೂಕ್ತ ಪರಿಹಾರಕ್ಕೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version