ಉಡುಪಿ/ಬೆಳಗಾವಿ: ರಾಜ್ಯಾದ್ಯಂತ ಗುಡುಗು, ಸಿಡಿಲು ಸಹಿತ ಮಳೆಯಾಗುತ್ತಿದ್ದು, ಸಾವು- ನೋವು (Karnataka Rain) ಸಂಭವಿಸುತ್ತಿದೆ. ಉಡುಪಿಯಲ್ಲಿ ಸಿಡಿಲಾಘಾತಕ್ಕೆ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ. ಉಡುಪಿಯ ಶಿರ್ವ ಪಂಚಾಯತ್ ವ್ಯಾಪ್ತಿಯ ಮಾಣಿಬೆಟ್ಟು ಬಳಿ ಘಟನೆ ನಡೆದಿದೆ. ಶಿರ್ವ ಮಾಣೆಬೆಟ್ಟು ನಿವಾಸಿ ರಕ್ಷಿತ್ ಪೂಜಾರಿ ಮೃತ ದುರ್ದೈವಿ.
ರಕ್ಷಿತ್ ಶಿರ್ವ ಎಂಎಸ್‌ಆರ್‌ಎಸ್ ಕಾಲೇಜಿನ ಎರಡನೇ ವರ್ಷದ ಬಿಸಿಎ ವಿದ್ಯಾರ್ಥಿಯಾಗಿದ್ದ. ಗುರುವಾರ ಸಂಜೆ ಸ್ನಾನ ಮಾಡಲು ಬಚ್ಚಲು ಮನೆಯ ಬಳಿ ನಿಂತಿದ್ದಾಗ ಸಿಡಿಲು ಬಡಿದಿದೆ. ನೆಲದಲ್ಲಿ ಬಿದ್ದಿದ್ದ ರಕ್ಷಿತ್‌ನನ್ನು ಕೂಡಲೇ ಕುಟುಂಬಸ್ಥರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10 ಗಂಟೆಗೆ ಮೃತಪಟ್ಟಿದ್ದಾನೆ.
ಬೆಳಗಾವಿಯಲ್ಲಿ ಮರದಡಿ ನಿಂತಿದ್ದ ಆಕಳು ಸಾವು
ಬೆಳಗಾವಿಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಗಾಳಿಯೊಂದಿಗೆ ಭಾರಿ ಮಳೆಯಾಗಿದೆ. ಮಳೆಗೆ ಬೃಹತ್ ಗಾತ್ರದ ಮರ ಧರೆಗುರುಳಿದೆ. ಗುರುವಾರ ಸಂಜೆ ಸುರಿದ ಮಳೆಯಿಂದ ಮನೆ ಮುಂದಿದ್ದ ಮರ ಬಿದ್ದಿದೆ. ಮರದ ಕೆಳಗೆ ಕಟ್ಟಿದ್ದ ಆಕಳು ಮೇಲೆ ಬೃಹತ್ ಗಾತ್ರದ ಕೊಂಬೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದೆ. ರೈತ ಶಂಕರ್ ರೊಡ್ಡಣ್ಣವರ್ ಎಂಬುವವರಿಗೆ ಸೇರಿದ ಆಕಳು ಮೃತಪಟ್ಟಿದೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಳೆಗೆ ಮನೆ ಬಿದ್ದು ಬೀದಿಗೆ ಬಂದ ಕುಟುಂಬ
ಕಳೆದ ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ಎಲ್ಲವನ್ನೂ ಕಳೆದುಕೊಂಡು ಕುಟುಂಬವೊಂದು ಬೀದಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿ ಭಾರಿ ಮಳೆಗೆ ಲಕ್ಷ್ಮೀ ಮಾದರ್ ಎಂಬುವವರ ಮನೆಯ ಚಾವಣಿ ಹಾರಿ ಹೋಗಿದೆ. ಲಕ್ಷ್ಮಿ ಅವರ ಕೈ ಮೇಲೂ ಚಾವಣಿ ಬಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಎಲ್ಲ ಸಾಮಾಗ್ರಿಗಳಿಗೂ ಹಾನಿಯಾಗಿವೆ. ಸರ್ಕಾರದಿಂದ ಸೂಕ್ತ ಪರಿಹಾರಕ್ಕೆ ಲಕ್ಷ್ಮೀ ಮನವಿ ಮಾಡಿದ್ದಾರೆ. ಇನ್ನೂ ಭಾರಿ ಬಿರುಗಾಳಿಗೆ 5ಕ್ಕೂ ಹೆಚ್ಚು ಶೆಡ್‌ಗಳ ಚಾವಣಿ, 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮನೆಗಳಿಗೆ ಹಾನಿ ಹಿನ್ನೆಲೆ ಇಬ್ಬರಿಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಾಗಲಕೋಟೆಯಲ್ಲಿ ನೆಲಕ್ಕುರುಳಿದ ವಿದ್ಯುತ್ ಟ್ರಾನ್ಸ್‌ಫಾರ್ಮರ್
ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯು ಅವಾಂತರವನ್ನೇ ಸೃಷ್ಟಿಸಿದೆ. ಬಾಗಲಕೋಟೆಯ ತುಳಸಿಗೇರಿ ಗ್ರಾಮದಲ್ಲಿ ಬಿರುಗಾಳಿಗೆ ಮರ ಮುರಿದು ಬಿದ್ದು, ಚಾವಣಿಗೆ ಹಾರಿಹೋಗಿದೆ. ವಿದ್ಯುತ್ ಟ್ರಾನ್ಸ್‌ಫಾರ್ಮರ್ ನೆಲಕ್ಕುರಳಿದೆ. ನೋಡ ನೋಡುತ್ತಿದ್ದಂತೆ ಶೆಡ್‌ನ ಚಾವಣಿ ಶಿಟ್ ಗಾಳಿಯಲ್ಲಿ ಹಾರಾಡಿದ್ದವು. ಕಾಯಿ ಅಂಗಡಿಗಳ ಮೇಲೆ ಮರದ ಕೊಂಬೆ ಮುರಿದು ಬಿದ್ದ ಹಾನಿಯಾಗಿತ್ತು.
ಇದನ್ನೂ ಓದಿ: Karnataka Weather : ಕರಾವಳಿಯಲ್ಲಿ ಬಿರುಗಾಳಿ ಮಳೆ; ಕಡಲಿಗಿಳಿಯದಂತೆ ಮೀನುಗಾರರಿಗೆ ಅಲರ್ಟ್!
ಕುಸಿದು ಬಿದ್ದ ಕಳವಾಡಿ ಈಶ್ವರ ಮಾರಿಕಾಂಬಾ ದೇವಳದ ಅನ್ನಛತ್ರ
ಭಾರಿ ಗಾಳಿ ಮಳೆಗೆ ದೇವಳದ ಅನ್ನಛತ್ರ ಕುಸಿದು ಭಾರಿ ಅನಾಹುತ ತಪ್ಪಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಳವಾಡಿ ಈಶ್ವರ ಮಾರಿಕಾಂಬಾ ದೇವಳದ ಅನ್ನಛತ್ರದಲ್ಲಿ ಘಟನೆ ನಡೆದಿದೆ. ಕೊಲ್ಲೂರು ರಸ್ತೆಯಲ್ಲಿ ಮರ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ವಿದ್ಯುತ್ ತಂತಿಯ ಮೇಲೆ ಮರ ಬಿದ್ದು, ತಡರಾತ್ರಿಯವರಗೂ ಹಲವೆಡೆ ವಿದ್ಯುತ್ ವ್ಯತ್ಯಯವಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದರು.
ಚಿಕ್ಕಮಗಳೂರಲ್ಲಿ ಮರ ಬಿದ್ದು ಐವರು ಕೂದಲೆಳೆ ಅಂತರದಲ್ಲಿ ಪಾರು
ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ ಮುಂದುವರಿದಿದೆ. ಭಾರಿ ಬಿರುಗಾಳಿ ಮಳೆಗೆ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಇದೇ ವೇಳೆ ಮನೆಯಲ್ಲಿದ್ದ ಐವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಚಿಕ್ಕಮಗಳೂರಿನ ಕಳಸ ತಾಲೂಕಿನ ಬಾಳೆಹೊಳೆ ಕಗ್ಗನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಮಲಗಿದ್ದಾಗ ಮಂಚದ ಮೇಲೆಯೇ ಬೃಹತ್ ಗಾತ್ರದ ಕೊಂಬೆ ಬಿದ್ದಿದೆ. ಮನೆಯಲ್ಲಿದ್ದ ಕುಟುಂಬಸ್ಥರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಮನೆಯೊಳಗೆ ಸಿಲುಕಿದ್ದವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮನೆ ಸಂಪೂರ್ಣ ಜಖಂಗೊಂಡಿದ್ದು, ಪಿಠೋಪಕರಣಗಳಿಗೆ ಹಾನಿಯಾಗಿದೆ. ಮನೆಯಲ್ಲಿ ಸಂಗ್ರಹಿಸಿದ್ದ ಆಹಾರ ಪದಾರ್ಥಗಳು ಮಣ್ಣು ಪಾಲಾಗಿದೆ. ಬೆಳಗಿನ ಜಾವ ನಾಲ್ಕು ಗಂಟೆಗೆ ಈ ಅವಘಡ ಸಂಭವಿಸಿದೆ. ಬೃಹತ್ ಗಾತ್ರದ ಮರ ಬಿದ್ದರೂ ಐವರು ಉಳಿದಿದ್ದೆ ಪವಾಡ ಎಂದಿದ್ದಾರೆ.
ಮಳೆ ಅನಾಹುತಕ್ಕೆ ಶುಂಠಿ ಬೆಳೆ ನಾಶ
ಮೈಸೂರಿನಲ್ಲಿ ಮಳೆ ಅನಾಹುತ ಮುಂದುವರಿದಿದೆ. ಸರಗೂರು ತಾಲೂಕಿನ ಬಾಡಿಗೆ ಗ್ರಾಮದಲ್ಲಿ ರೈತ ಜವರಯ್ಯ ಹಾಗೂ ಪುಟ್ಟತಾಯಮ್ಮ ಅವರಿಗೆ ಸೇರಿದ ಶುಂಠಿ ಬೆಳೆ ನಾಶವಾಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಜಮೀನಿನಲ್ಲಿ ಮಳೆ ನೀರು ನಿಂತಿದ್ದರಿಂದ ಪುಟ್ಟತಾಯಮ್ಮ ಕಣ್ಣೀರಿಟ್ಟು, ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.
ರಾಯಚೂರಲ್ಲಿ ಸುರಿದ ಒಂದೇ ಮಳೆಗೆ ಜಮೀನು ಜಲಾವೃತ
ರಾಯಚೂರು ತಾಲೂಕಿನ ಕೆರೆಬೂದೂರು ಗ್ರಾಮದ ಬಳಿ ಒಂದೇ ಮಳೆಗೆ ಜಮೀನು ಜಲಾವೃತಗೊಂಡಿದೆ. ಮಳೆಯಿಂದಾಗಿ ನೂರಾರು ಎಕರೆ ಜಮೀನು ಜಲಾವೃತಗೊಂಡಿದ್ದರಿಂದ ಬಿತ್ತನೆಗೆ ತಯಾರಿ ನಡೆಸಿದ್ದ ರೈತರಿಗೆ ಭಾರೀ ನಿರಾಸೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ