Site icon Vistara News

Karnataka Rain : ಮಳೆ ಅವಘಡಕ್ಕೆ ಜನರು ತತ್ತರ; ಧರೆಗುರುಳಿದ ಮರಗಳು, ಕುಸಿದು ಬಿದ್ದ ಮನೆಗಳು

Karnataka rain

ಮೈಸೂರು: ಮೈಸೂರಿನ ಹುಣಸೂರು ಭಾಗದಲ್ಲಿ ವರುಣನ (Rain News) ಅಬ್ಬರ ಜೋರಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ (Karnataka Rain) ತಾಲೂಕಿನ ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕಾಳೇನಹಳ್ಳಿಯಲ್ಲಿ ಶ್ರೀನಿವಾಸ್ ಎಂಬುವರಿಗೆ ಸೇರಿದ ಮನೆಯು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಜೋರಾಗಿ ಸುರಿದ ಮಳೆಗೆ ಮನೆಯಲ್ಲಿದ್ದ ವಸ್ತುಗಳೆಲ್ಲ ನಾಶವಾಗಿದೆ. ವಾಸಕ್ಕೆ ಮನೆಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕುಟುಂಬಸ್ಥರು ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.

ಇತ್ತ ಹನಗೋಡಿನಲ್ಲಿ ಭಾರಿ ಮಳೆಗೆ ಜನರು ತತ್ತರಿಸಿದ್ದರು. ಹುಣಸೂರು ತಾಲೂಕಿನ ಹನಗೋಡಿ ಗ್ರಾಮದಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೆ ಮನೆ ಅಂಗಡಿಗಳಿಗೆ ನೀರು ನುಗ್ಗಿ ಸಂಪೂರ್ಣ ಜಲಾವೃತಗೊಂಡಿತ್ತು. ಬಸ್ ನಿಲ್ದಾಣ ಕೆರೆಯಂತಾಗಿತ್ತು. ಚರಂಡಿಗಳ ವ್ಯವಸ್ಥೆ ಸರಿಯಿಲ್ಲದೆ ನೀರು ಹೋಗದೆ ನಿಂತಲ್ಲೇ ನಿಂತು ಜನರಿಗೆ ತೊಂದರೆಯಾಗಿತ್ತು.

ಇದನ್ನೂ ಓದಿ: Accident Case : ಇಳಿಜಾರಿನಲ್ಲಿ ತಪ್ಪಿದ ಕಂಟ್ರೋಲ್‌; ಟ್ರ್ಯಾಕ್ಟರ್‌ ಪಲ್ಟಿಯಾಗಿ ಯುವಕ ಮೃತ್ಯು

ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಶೆಡ್‌

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜೋರು ಗಾಳಿ ಮಳೆಗೆ ಶೆಡ್ ಹಾರಿ ಹೋಗಿತ್ತು. ಶಾಲೆಗೆ ರಜೆ ಇದ್ದಿದ್ದರಿಂದ ಭಾರಿ ಅನಾಹುತ ತಪ್ಪಿತ್ತು. ಶಾಲೆಯ ಶೆಡ್ ಹಾರಿ ಅಕ್ಕಪಕ್ಕದ ಮನೆಗಳು ಹಾಗೂ ವಿದ್ಯುತ್ ತಂತಿಗಳು ಮೇಲೆ ಬಿದ್ದು ಹಾನಿಯಾಗಿತ್ತು.

ಯಾದಗಿರಿಯಲ್ಲಿ ಧರೆಗುರುಳಿದ ಮರಗಳು

ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರಗಳು ಧರೆಗುರುಳಿದ್ದವು. ಸತತ ಒಂದು ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಗೆ ಮರಗಳ ಮೇಲ್ಭಾಗದ ರಂಬೆ, ಕೊಂಬೆಗಳು ಸಂಪೂರ್ಣ ಗಾಳಿಗೆ ಮುರಿದು ಬೋಳಾಗಿದ್ದವು. ಕೆಲವೆಡೆ ಮನೆ ಮುಂದೆ ಇದ್ದ ಮರಗಳು ನೆಲಕ್ಕುರುಳಿದ್ದವು. ಭಾರಿ ಮಳೆಗೆ ಸುಭಾಷ್ ವೃತ್ತದ ಸಮೀಪದ ಪಿಡ್ಲೂಡಿ ಕಚೇರಿ ಆವರಣದೊಳಗೆ ಮಳೆ ನೀರು ನುಗ್ಗಿತ್ತು. ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರ ಜನಸಂಪರ್ಕದ ಕಚೇರಿ ಆವರಣದಲ್ಲಿ ಮರಗಳು ಧರೆಗುರುಳಿದ್ದವು.

ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಆರು ಜನರ ಕುಟುಂಬವೊಂದು ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದೆ. ಯಾದಗಿರಿಯ ಮಾತಾಮಣಿಕೇಶ್ವರಿ ನಗರದಲ್ಲಿ ಭಾರೀ ಮಳೆ ಗಾಳಿಗೆ ಮನೆಗೆ ಹಾಕಿದ ಟಿನ್ ಶೆಡ್ ಹಾರಿಹೋಗಿದೆ. ಮಳೆ ಗಾಳಿ ಜೋರಾಗುತ್ತಿದ್ದಂತೆ ಇಡೀ ಕುಟುಂಬ ಮನೆಯಿಂದ ಹೊರಬಂದು ಬಚಾವ್ ಆಗಿದ್ದಾರೆ. ಮನೆಯಿಂದ ಹೊರ ಬಂದ ಕೆಲವೇ ಕ್ಷಣದಲ್ಲಿ ಟಿನ್ ಶೆಡ್ ಕುಸಿದು ಬಿದ್ದಿದೆ. ಇತ್ತ ದಿನಸಿ ಸಾಮಾನು ಸೇರಿದಂತೆ ಎಲ್ಲ ವಸ್ತುಗಳು ಹಾಳಾಗಿವೆ.

ಧಾರಾವಾಡದಲ್ಲಿ ಧಾರಾಕಾರ ಮಳೆಗೆ ರಸ್ತೆ ಮೇಲೆ ನಿಂತ ನೀರು

ಧಾರವಾಡದಲ್ಲಿ ಗುರುವಾರದಂದು ಅರ್ಧ ಗಂಟೆಗೂ ಹೆಚ್ಚು ಸಮಯ ಮಳೆಯಾಗಿತ್ತು. ಎರಡು ದಿನದಿಂದ ಬ್ರೇಕ್‌ ಕೊಟ್ಟಿದ್ದ ಮಳೆಯು ಗುರುವಾರ ದಿಢೀರ್‌ ಅಪ್ಪಳಿಸಿತ್ತು. ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಧಾರವಾಡ ಹೊರವಲಯದ ಕೆಎಂಎಫ್ ಬಳಿ ಧಾರಾಕಾರ ಮಳೆಗೆ ರಸ್ತೆಯಲ್ಲೇ ನೀರು ನಿಂತಿತ್ತು. ಬಿಆರ್‌ಟಿಎಸ್ ಕಾರಿಡಾರ್‌ನಿಂದ ಹರಿದು ಹೋಗದೇ ಇರುವುದೇ ಕಾರಣ ಎಂದು ಸ್ಥಳೀಯರು ಆಕ್ರೋಶಿಸಿದರು.

ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಸರೀಕಟ್ಟೆ, ತರೀಕೆರೆಯಲ್ಲೂ ಭಾರೀ ಮಳೆಯಾಗಿದ್ದು ರಸ್ತೆಯಲ್ಲಿ ಎರಡು ಅಡಿ ನೀರು ನಿಂತಿತ್ತು. ತರೀಕೆರೆ ಪಟ್ಟಣದ ಗಣಪತಿ ಪೆಂಡಾಲ್ ಮುಂಭಾಗ ಕಾರು, ಬೈಕ್‌ಗಳು ಅರ್ಧದಷ್ಟು ಮುಳುಗಿತ್ತು. ಎನ್ಆರ್‌ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲೂ ಮಳೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version