ಬೆಂಗಳೂರು/ಚಿತ್ರದುರ್ಗ: ರಾಜ್ಯದ ಹಲವೆಡೆ ವರುಣಾರ್ಭಟಕ್ಕೆ ಅವಾಂತರವೇ (Karnataka Rain ) ಸೃಷ್ಟಿಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ (Karnataka weather) ಕರೆಂಟ್ ಕಟ್ ಆಗಿದ್ದು, ದೀಪದ ಬೆಳಕಿನಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ಆಸ್ಪತ್ರೆಯಲ್ಲಿ ಒಂದು ವಾರದಿಂದ ಜನರೇಟರ್ ಕೆಟ್ಟು ಹೋಗಿದ್ದು, ಸರಿಪಡಿಸದೇ ಅಧಿಕಾರಿಗಳು ಸುಮ್ಮನಾಗಿದ್ದಾರೆ. ಸೋಮವಾರ ರಾತ್ರಿ ಸುರಿದ ಮಳೆಯಿಂದ (rain News) ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ರೋಗಿಗಳಿಗೆ ಮೇಣದ ಬತ್ತಿ ಹಿಡಿದು ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ಕುಮಟಾದಲ್ಲಿ ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವರಹಕ್ಕಲ ಗ್ರಾಮದಲ್ಲಿ ಮಳೆಗೆ ಭಾರೀ ಗಾತ್ರದ ಮರ ಬಿದ್ದು ಮನೆಗೆ ಹಾನಿಯಾಗಿದೆ. ಲಲಿತಾ ನಾಯ್ಕ ಎಂಬುವವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಎದುರಿದ್ದ ಸ್ಕೂಟಿ ಜಖಂಗೊಂಡಿದೆ. ಮನೆಯ ಮುಂಭಾಗದ ಕೋಣೆಯ ಚಾವಣಿ ಹಾನಿಯಾಗಿದೆ. ಮರ ಬಿದ್ದ ಪರಿಣಾಮ ಸ್ಕೂಟಿ, ಮನೆ ಸೇರಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಮಗಳೂರಲ್ಲಿ ಕೆರೆ ಏರಿ ತುಂಡು
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರೆದಿದೆ. ಮಳೆಯ ಆರ್ಭಟಕ್ಕೆ ಕೆರೆಯ ಏರಿ ಹೊಡೆದು ನೀರು ಪೋಲಾಗಿದೆ. ಕಡೂರು ತಾಲೂಕಿನ ಗೌಡನ ಕಟ್ಟೆ ಗ್ರಾಮದಲ್ಲಿರುವ ಗೌಡನಕಟ್ಟೆ ಕೆರೆಯು ಕಳೆದ ಮೂರು ನಾಲ್ಕು ದಿನಗಳಿಂದ ಸುರಿದ ಮಳೆಗೆ ಭರ್ತಿಯಾಗಿದೆ. ಪರಿಣಾಮ ಕೆರೆ ಏರಿ ತುಂಡಾಗಿ ಪಿ ಕೋಡಿಹಳ್ಳಿ ಕೆರೆಗೆ ನೀರು ಹರಿವು ಹೆಚ್ಚಾಗಿದೆ. ಭಾರಿ ಪ್ರಮಾಣದ ನೀರಿನ ಒತ್ತಡ ತಡೆಯಲಾಗದೆ ಕೆರೆ ಏರಿ ಹಿಂಭಾಗದ ತೋಟ ಜಮೀನುಗಳು ಜಲಾವೃತಗೊಂಡಿತ್ತು.
ಕಾರುಗಳ ಮೇಲೆ ಬಿದ್ದ ಮರ; ಅಪಾಯದಿಂದ ಪಾರಾದ ತಾಯಿ-ಮಗ
ದಾವಣಗೆರೆ ಆಶೋಕ್ ಟಾಕೀಸ್ ಬಳಿ ಚಲಿಸುತ್ತಿದ್ದ ಕಾರುಗಳ ಮೇಲೆ ಮರವೊಂದು ಬಿದ್ದಿತ್ತು. ಪರಿಣಾಮ ಡಸ್ಟರ್ ಕಾರು ನಜ್ಜುಗುಜ್ಜಾಗಿತ್ತು. ಡಸ್ಟರ್ ಕಾರು ಚಾಲಕ ಹಾಗೂ ಮತ್ತೊಂದು ಕಾರಿನಲ್ಲಿದ್ದ ಚಿಕ್ಕ ಮಗು ಹಾಗು ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದರು. ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಕ್ರೇನ್ ಮೂಲಕ ಮರ ತೆರವು ಮಾಡಿದರು.
ದಾವಣಗೆರೆ ಜೆಲ್ಲೆಯ ಜಗಳೂರು ತಾಲೂಕಿನ ಗಡೆಮಾಕುಂಟೆ, ಭರಮಸಮುದ್ರ, ಮರಿಕಟ್ಟೆ, ತುಂಬಿನಕಟ್ಟೆ, ಕ್ಯಾಸೇನಹಳ್ಳಿ, ತಮ್ಮಲೇಹಳ್ಳಿ ಸೇರಿದಂತೆ ಬಹುತೇಕ ಕಡೆ ತಡ ರಾತ್ರಿ ಭರ್ಜರಿ ಮಳೆಯಾಗಿದೆ. ಇದರಿಂದಾಗಿ ಗಡೆಮಾಕುಂಟೆ ಹಾಗೂ ಭರಮಸಮುದ್ರ ಕೆರೆಗಳು ಭರ್ತಿಯಾಗಿವೆ. ಇನ್ನೂ ಖಾಲಿಯಾದ ಕೆರೆಯಲ್ಲಿ ನೀರು ಕಂಡು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಇದನ್ನೂ ಓದಿ: Road Accident : ತಾಯಿ-ಮಗನ ಬಲಿ ಪಡೆದ ಕಂಟೇನರ್; ಆಟೋ ಪ್ರಯಾಣಿಕ ಸೇರಿ ಸವಾರರಿಬ್ಬರ ಪ್ರಾಣ ಕಸಿದ ಬೈಕ್
ವಿಜಯನಗರದಲ್ಲಿ ಕೊಚ್ಚಿ ಹೋದ ರೋಡ್
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಮಳೆ ನೀರಿನ ರಭಸಕ್ಕೆ ರಸ್ತೆಯೇ ಕೊಚ್ಚಿ ಹೋಗಿತ್ತು. ಇದರಿಂದಾಗಿ ಕೂಡ್ಲಿಗಿ ತಾಲೂಕಿನ ಯಂಬ್ಳಿ- ಆಲೂರು ಗ್ರಾಮಗಳ ಮಾರ್ಗ ರಸ್ತೆ ಸಂಪರ್ಕ ಕಟ್ ಆಗಿತ್ತು. ರಸ್ತೆ ಸಂಪರ್ಕ ಇಲ್ಲದೆ ವಾಹನ ಸವಾರರು ಪರದಾಡಬೇಕಾಯಿತು.
ತುಮಕೂರಿನಲ್ಲಿ ನೀರಿನಲ್ಲಿ ಸಿಲುಕಿದ ಲಾರಿ ಹಾಗೂ ಬಸ್
ಮಳೆಯಿಂದ ಜಲಾವೃತವಾದ ರಸ್ತೆಯಲ್ಲಿ ಸಂಚಾರಿಸಿದ ಪರಿಣಾಮ ಲಾರಿ- ಬಸ್ಸು ಕೆಸರಿನಲ್ಲಿ ಸಿಲುಕಿದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಲಕ್ಕನಹಳ್ಳಿ ನಡೆದಿದೆ. ಶಿರಾ- ಅಮರಾಪುರ ರಸ್ತೆ ಕಾಮಗಾರಿ ನಿಧಾನವಾಗಿ ನಡೆಯುತ್ತಿರುವುದರಿಂದ ಬಿಡ್ಜ್ ಕಾಮಗಾರಿ ಬಳಿ ರಸ್ತೆಯು ಜಲಾವೃತಗೊಂಡು ಸವಾರರು ಪರದಾಡುವಂತಾಗಿದೆ.
ಇನ್ನೂ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಅರಸಿಕೆರೆ ಗ್ರಾಮದಲ್ಲಿ ಗಾಳಿ- ಮಳೆ ರಭಸಕ್ಕೆ ಅಡಿಕೆ ಮರಗಳು ನೆಲಕ್ಕುರುಳಿದ್ದವು. ರೈತ ಪ್ರಕಾಶ್ ಎಂಬುವರಿಗೆ ಸೇರಿದ 12 ವರ್ಷದ ಹಳೇ ಅಡಿಕೆ ಮರಗಳು ಫಸಲಿಗೆ ಬಂದಿತ್ತು. ಇದೀಗ ಮಳೆಯಿಂದಾಗಿ ಅಂದಾಜು 2 ಲಕ್ಷ ರೂಪಾಯಿ ನಷ್ಟವಾಗಿದೆ.
ಮೈಸೂರಿನಲ್ಲಿ ಕೆರೆಯಂತಾದ ಜಮೀನುಗಳು
ಮೈಸೂರು ಜಿಲ್ಲೆಯಲ್ಲಿ ಮಳೆಯು ಮುಂದುವರಿದ್ದು, ಹುಣಸೂರು ತಾಲೂಕಿನ ಜಮೀನುಗಳಲ್ಲಿ ಜಲಾವೃತಗೊಂಡಿತ್ತು. ನೂರಾರು ಎಕರೆ ಬೆಳೆದ ಶುಂಠಿ, ತಂಬಾಕು ಬೆಳೆ ನಾಶವಾಗಿತ್ತು. ಗ್ರಾಮದ ಜಮೀನುಗಳು ಕೆರೆಗಳಂತಾಗಿತ್ತು. ಇತ್ತ ಬಿರುಗಾಳಿ ಮಳೆಗೆ ಮನೆ ಚಾವಣಿ, ಬ್ಯಾರನ್ ಹಾರಿಹೋಗಿತ್ತು. ಮೈಸೂರಿನ ಅತ್ತಿಕುಪ್ಪೆಯಲ್ಲಿ ಕೆರೆ ಕೋಡಿ ಒಡೆದು ಬೆಳೆ ನಾಶವಾಗಿತ್ತು. ಇದರಿಂದಾಗಿ ತೆಂಗಿನ ಸಸಿಗಳು ಕೊಚ್ಚಿಹೋಗಿದ್ದವು. ಹನಗೋಡು ಹೋಬಳಿ ಕಚುವಿನಹಳ್ಳಿ ಗ್ರಾಮದ ಜಯಮ್ಮ ಮತ್ತು ಲಲಿತಮ್ಮರಿಗೆ ಸೇರಿದ ತಂಬಾಕು ಹದಗೊಳಿಸುವ ಬ್ಯಾರನ್ ಗೋಡೆ ಕುಸಿದಿತ್ತು. ಚಿಲ್ಕುಂದ ಗ್ರಾಮದಲ್ಲಿ ಬಿರುಗಾಳಿಗೆ ರಾಮಶೆಟ್ಟರ ಮನೆ ಚಾವಣಿ ಹಾಗೂ ಚಂದ್ರುರವರ ಕೊಟ್ಟಿಗೆಗೆ ಹಾಕಿದ್ದ ಕಲ್ನಾರ್ ಶೀಟ್ ಹಾರಿ ಹೋಗಿದೆ. ಇತ್ತ ಸುಜ್ಜಲೂರು ಗ್ರಾಮದಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿತ್ತು.
ಕೆರೆ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಕರು
ಮೈಸೂರು ಮಳೆ ಅವಾಂತರಕ್ಕೆ ಜನರು ಹೈರಾಣಾಗಿದ್ದಾರೆ. ಕೆರೆ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಕರುವೊಂದನ್ನು ಯುವಕರು ರಕ್ಷಿಸಿದ ಘಟನೆ ಪಿರಿಯಾಪಟ್ಟಣ ತಾಲೂಕು ತರಿಕಲ್ ಗ್ರಾಮದಲ್ಲಿ ನಡೆದಿದೆ. ಹಾರನಹಳ್ಳಿ ಗ್ರಾಮದ ಶಿವಣ್ಣ ಅವರ ಹಸುವಿನ ಕರುವನ್ನು ರಕ್ಷಣೆ ಮಾಡಲಾಗಿತ್ತು. ಬಾಲಗೆರೆ ತುಂಬಿ ಕೋಡಿ ಒಡೆದ ಪರಿಣಾಮ ಬೆಟ್ಟದಪುರ- ಕುಶಾಲನಗರ ರಸ್ತೆ ಮೇಲೆ ಮಂಡಿಯುದ್ದ ನೀರು ನಿಂತಿತ್ತು. ಮಳೆ ನೀರಿನಲ್ಲಿ ತಂಬಾಕು ಸಸಿಗಳು, ಗಿಡಕ್ಕೆ ಸಿಂಪಡಿಸಲು ತಂದಿದ್ದ ರಸಾಯನಿಕ ವಸ್ತುಗಳು ಹಾಳಾಗಿದ್ದವು.
ವಿಜಯನಗರದಲ್ಲಿ ನೆಲಸಮವಾದ ವೀಳ್ಯದೆಲೆ ಬಳ್ಳಿ
ಭಾರಿ ಮಳೆಗೆ ವೀಳ್ಯದೆಲೆ ಬಳ್ಳಿ ತೋಟ ನೆಲಸಮವಾಗಿತ್ತು. ವಿಜಯನಗರದ ಕೂಡ್ಲಿಗಿ ತಾಲೂಕಿನ ಎಚ್. ಮ್ಯಾಸರಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ದುಡಿಯುವ ಮಗನಂತೆ ಬೆಳೆದು ನಿಂತಿದ್ದ ಎಲೆಬಳ್ಳಿ ತೋಟ ನೆಲಕಚ್ಚಿತ್ತು. ಮಲ್ಲಮ್ಮ ಗಂಡ ಪೂಜಾರಿ ಮಾರಣ್ಣಗೆ ಸೇರಿದ ಒಂದು ಎಕರೆ ಎಲೆಬಳ್ಳಿ ತೋಟ ನೆಲಕ್ಕುರುಳಿದ್ದನ್ನು ಕಂಡು ಕಣ್ಣೀರುಇಟ್ಟರು.
ಮನೆಗಳಿಗೆ ನುಗ್ಗಿದ ಚರಂಡಿ ನೀರು
ಕೊಡಗು ಜಿಲ್ಲೆಯ ಗುಮ್ಮನ ಕೊಲ್ಲಿ ಚೌಡೇಶ್ವರಿ ಬಡಾವಣೆಯ ತಗ್ಗು ಪ್ರದೇಶಕ್ಕೆ ಚರಂಡಿ ನೀರು ನುಗ್ಗಿತ್ತು. ಚರಂಡಿ ನೀರು ಉಕ್ಕಿ ರಸ್ತೆ ಮೇಲೆ ಹರಿದ ಪರಿಣಾಮ ಮನೆಯಂಗಳಕ್ಕೆ ನೀರು ನುಗ್ಗಿತ್ತು. ಪ್ರವಾಹದಂತೆ ರಸ್ತೆ ತುಂಬೆಲ್ಲ ನೀರು ನಿಂತಿತ್ತು. ಇತ್ತ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲದ ಅಜ್ಜನಕಟ್ಟೆಯಲ್ಲಿ 20 ಕ್ಕೂ ಹೆಚ್ಚು ಕುಟುಂಬಗಳು ಜಲದಿಗ್ಬಂಧನದಿಂದ ಓಡಾಡಲು ಪರದಾಡಬೇಕಾಯಿತು. ಇತ್ತ ಶಾಲಾ ಮಕ್ಕಳು ಕೆಸರಲ್ಲಿ ಬೀಳುವ ಆತಂಕದಲ್ಲಿಯೇ ಮನೆಯಿಂದ ಹೊರ ಬರುತ್ತಿದ್ದರು.ಕಾಲೋನಿಯಲ್ಲಿ ಎಮರ್ಜೆನ್ಸಿ ಅಂದರೆ ಆಂಬುಲೆನ್ಸ್ ಕೂಡ ಬರಲು ಆಗುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ