ಬೆಂಗಳೂರು/ಚಿಕ್ಕಮಗಳೂರು: ಬೆಂಗಳೂರಿನಲ್ಲಿ ಗಂಟೆ ಕಾಲ ಸುರಿದ ಮಳೆಗೆ (Karnataka Rain) ರಸ್ತೆಗಳೆಲ್ಲವೂ ಹೊಳೆಯಂತಾಗಿದೆ. ರಾಜಕಾಲುವೆಯಿಂದ ಯಲಹಂಕ ನಿವಾಸಿಗಳಿಗೆ ನಿತ್ಯ ಸಂಕಷ್ಟ ಎದುರಿಸುವಂತಾಗಿದೆ. ನಿನ್ನೆ ಶನಿವಾರ ರಾತ್ರಿ ಸುರಿದ ಮಳೆಗೆ ಇಡೀ ಏರಿಯಾ ಜಲಾವೃತಗೊಂಡಿದೆ.
ಯಲಹಂಕದ ನಾರ್ಥ್ ಹುಡ್ ಅಪಾರ್ಟ್‌ಮೆಂಟ್ ಸುತ್ತಮುತ್ತ ನೀರು ತುಂಬಿ ಅವಾಂತರವೇ ಸೃಷ್ಟಿಯಾಗಿದೆ. ಕಳೆದ ಒಂದು ವಾರದಿಂದ ರಾಜಕಾಲುವೆಯಿಂದ ನೀರು ಹರಿಯುತ್ತಿದೆ. ಸ್ಟಾರ್ಮ್ ವಾಟರ್ ಡ್ರೇನ್ ಓಪನ್ ಬಿಟ್ಟಿರುವುದರಿಂದ ಈ ಸಮಸ್ಯೆ ಆಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನೂ ರಾಜಕಾಲುವೆ ನೀರಿನ ವಾಸನೆಗೆ ನಿವಾಸಿಗಳು ಕಂಗಾಲಾಗಿದ್ದಾರೆ. ಗಬ್ಬು ವಾಸನೆ ತಾಳಲಾರದೇ ಕೆಲ ನಿವಾಸಿಗಳು ಮನೆ ಖಾಲಿ ಮಾಡಿದ್ದಾರೆ. ರಾತ್ರಿಯಿಂದಲೂ ಮೋಟಾರ್ ಮೂಲಕ ನೀರು ಹೊರಹಾಕುತ್ತಿದ್ದಾರೆ. ಸುತ್ತಮುತ್ತಲಿನ ಐದಾರು ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ. ವಾರದ ಹಿಂದೆ ಬಿಬಿಎಂಪಿಗೆ ಪತ್ರ ಬರೆದರೂ ಯಾವುದೇ ಪ್ರಯೋಜವಿಲ್ಲ ಎಂದು ಕಿಡಿಕಾರಿದ್ದಾರೆ. ರಾಜಕಾಲುವೆಯಿಂದ ನೀರು ತುಂಬಿ 22 ಮನೆಗಳ ನಿವಾಸಿಗಳು ಪರದಾಡುತ್ತಿದ್ದಾರೆ. ಪಕ್ಕದಲ್ಲಿರುವ ಪುಟ್ಟೇನಹಳ್ಳಿ ಕೆರೆಗೆ ನೀರು ಹರಿಯದೇ ಇರುವುದರಿಂದ ಆ ನೀರು ಕೂಡ ಸೇರುತ್ತಿದೆ. ರಾಜಕಾಲುವೆ, ಮಳೆ ನೀರು ಸೇರಿ ಇಡೀ ಏರಿಯಾ ಕೆರೆಯಂತಾಗಿದೆ.
ಇದನ್ನೂ ಓದಿ: Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು
ಕಳಸ ತಾಲೂಕಿನಾದ್ಯಂತ ಧಾರಾಕಾರ ಮಳೆ
ಕಾಫಿನಾಡು ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಭಾರೀ ಗಾಳಿ-ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಕಳಸ ತಾಲೂಕಿನಾದ್ಯಂತ ಧಾರಾಕಾರ ಮಳೆಗೆ ಕಳಸ ದೇವಸ್ಥಾನದ ಎತ್ತರದ ಪ್ರದೇಶದಿಂದ ನೀರು ಹರಿಯುತ್ತಿದೆ. ದಕ್ಷಿಣ ಕಾಶಿ ಕಳಸೇಶ್ವರ ಸ್ವಾಮಿ ದೇವಸ್ಥಾನದ ಮೆಟ್ಟಿಲು ಮೇಲಿಂದ ನೀರು ಹರಿಯುತ್ತಿದೆ. ಇತ್ತ ಮೆಟ್ಟಿಲ ಮೇಲೆ ನಿಂತು ಮಳೆ ನೀರಲ್ಲಿ ಮಕ್ಕಳು ಆಟವಾಡುತ್ತಿರುವ ದೃಶ್ಯ ಕಂಡು ಬಂತು. ಗಾಳಿ-ಮಳೆಗೆ ಮರ ಬಿದ್ದು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕುದುರೆಮುಖ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಭದ್ರಾ ನದಿ ಒಳಹರಿವಿನಲ್ಲಿ ನೀರಿನ ಪ್ರಮಾಣ ಹೆಚ್ಚಳಗೊಂಡಿದೆ.
ಕೊಪ್ಪಳದಲ್ಲೂ ಮುಂಗಾರು ಪೂರ್ವ ಮಳೆ
ಕೊಪ್ಪಳದಲ್ಲಿ ಭಾನುವಾರ ಮುಂಗಾರು ಪೂರ್ವ ಮಳೆ ಆರಂಭವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಮೂರು ದಿನಗಳಿಂದ ಆಗಾಗ ಮಳೆ ಸುರಿಯುತ್ತಿದೆ. ನಿನ್ನೆ ಶನಿವಾರ ಸಂಜೆ ಸುರಿದಿದ್ದ ಮಳೆಯು ಭಾನುವಾರ ಬೆಳಗಿನವರೆಗೆ ಬಿಡುವು ಕೊಟ್ಟಿತ್ತು. ಮಧ್ಯಾಹ್ನದ ನಂತರ ಧೋ ಎಂದು ಗುಡುಗು ಸಹಿತ ಮಳೆ ಸುರಿಯುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ