Site icon Vistara News

Karnataka Weather : ಭಾರಿ ಮಳೆಗೆ ಕೆರೆಯಂತಾದ ರಸ್ತೆಗಳು; ಮುಳುಗಡೆಯಾದ ವಾಹನಗಳು

Karnataka Weather Forecast

ಬೆಂಗಳೂರು: ವೀಕೆಂಡ್‌ ಮೂಡ್‌ನಲ್ಲಿದ್ದ ಜನರಿಗೆ ಮಳೆರಾಯನ (Rain News) ಎಂಟ್ರಿ ಕೊಂಚ ಕಿರಿಕಿರಿಯನ್ನುಂಟು ಮಾಡಿದೆ. ಬೆಳಗ್ಗೆ ಬಿಸಿಲಿನಿಂದ ಕಂಗೆಟ್ಟ ಜನರಿಗೆ ಮಧ್ಯಾಹ್ನ ಆಗುತ್ತಿದ್ದಂತೆ ಮೋಡ ಕವಿದ ವಾತಾವರಣ ಇತ್ತು. ನೋಡನೋಡುತ್ತಿದ್ದಂತೆ ಗುಡುಗು ಸಹಿತ ಧಾರಾಕಾರ ಮಳೆ (Karnataka Weather Forecast) ಸುರಿದಿತ್ತು. ರಾಜಧಾನಿ ಬೆಂಗಳೂರಲ್ಲಿ ಬಿಡುವು ನೀಡಿದ್ದ ವರುಣ ವಾರದ ನಂತರ ಅಬ್ಬರಿಸಿದ್ದ. ಜಸ್ಟ್‌ ಒಂದೂವರೆ ಗಂಟೆಯ ಮಳೆಗೆ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡಬೇಕಾಯಿತು.

ಶೇಷಾದ್ರಿಪುರಂ, ಶಿವಾನಂದ ಸರ್ಕಲ್, ವಿಜಯನಗರ, ಶಿವಾಜಿನಗರ ಸೇರಿದಂತೆ ಮಲ್ಲೇಶ್ವರಂ, ವಸಂತನಗರ, ಶಾಂತಿನಗರ, ಜಯನಗರ, ಯಶವಂತಪುರ, ರಾಜಾಜಿನಗರ, ಕೋರಮಂಗಲ ಹಾಗೂ ಎಂಜಿ ರಸ್ತೆ, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿತ್ತು.

ಮುಳುಗಡೆಯಾದ ಸಹಕಾರ

ಮಹಾದೇವಪುರ ಸುತ್ತಮುತ್ತ ಒಂದು ಗಂಟೆಗೂ ಹೆಚ್ಚು ಕಾಲ ಭಾರಿ ಮಳೆ ಸುರಿದಿದೆ. ಮಳೆಗೆ ಸಹಕಾರ ನಗರದ ಜಿ ಬ್ಲಾಕ್‌ನ ರಸ್ತೆಗಳಲ್ಲಿ ನೀರು ತುಂಬಿ ಹರಿದಿತ್ತು. ಇದರಿಂದಾಗಿ ಅಂಗಡಿ ಮುಂಗಟ್ಟುಗಳಲ್ಲಿ ನೀರು ನಿಂತಿದ್ದರಿಂದ ಜನರು ಪರದಾಡಬೇಕಾಯಿತು. ಪಾದಚಾರಿಗಳು ಮತ್ತು ವಾಹನ ಸವಾರರು ರಸ್ತೆ ದಾಟಲು ಪರದಾಡಬೇಕಾಯಿತು. ಇನ್ನೂ ದಿಢೀರ್‌ ಮಳೆಗೆ ವಾಹನ ಸವಾರರು ಬಸ್ ನಿಲ್ದಾಣಗಳಲ್ಲಿ ಆಶ್ರಯ ಪಡೆದರು.

ಆನೇಕಲ್‌ನಲ್ಲೂ ಮಳೆ ಅಬ್ಬರ

ಆನೇಕಲ್ ತಾಲೂಕಿನಾದ್ಯಂತ ಮಳೆಯು ಅಬ್ಬರಿಸಿತ್ತು. ಆನೇಕಲ್, ಚಂದಾಪುರ, ಅತ್ತಿಬೆಲೆ, ಹೆಬ್ಬಗೋಡಿ, ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಮಳೆಯಾಗಿದೆ. ಚಂದಾಪುರದ ಬಳಿ ಸರ್ವೀಸ್ ರಸ್ತೆ ಜಲಾವೃತಗೊಂಡಿತ್ತು. ಇದರಿಂದಾಗಿ ಬೈಕ್ ಸವಾರರು, ಪಾದಚಾರಿಗಳು ಹಾಗೂ ವಾಹನ ಸವಾರ ಪರದಾಡಬೇಕಾಯಿತು. ಮಳೆ ನೀರು ಹೊರ ಹೋಗಲು ಜಾಗವಿಲ್ಲದೆ ರಸ್ತೆಯು ಕೆರೆಯಂತಾಗಿತ್ತು.

ಇದನ್ನೂ ಓದಿ: Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

ಚಿಕ್ಕಮಗಳೂರಿನಲ್ಲೂ ಮಳೆಯ ಸಿಂಚನ

ಶನಿವಾರದಂದು ಚಿಕ್ಕಮಗಳೂರು ಜಿಲ್ಲೆಯ ಹಲವಡೆ ಭಾರಿ ಮಳೆಯಾಗಿದೆ. ಚಿಕ್ಕಮಗಳೂರು ನಗರ, ಬೆಳವಾಡಿ, ಕಳಸಾಪುರ, ಮಾಗಡಿ, ಅಂಬಳೆ, ತೇಗೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಡೂರು ತಾಲೂಕಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ಭಾರಿ ಬಿರುಗಾಳಿ ಮಳೆಗೆ ಚಿಕ್ಕಮಗಳೂರು ಗ್ರಾಮಾಂತರ ತತ್ತರಿಸಿತ್ತು. ಮಳೆಯಿಂದಾಗಿ ಚಿಕ್ಕಮಗಳೂರು ನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಗುಡುಗು ಸಿಡಿಲು ಸಹಿತ ಸುರಿದ ಮಳೆಗೆ ಹಳ್ಳ ಕೊಳ್ಳಗಳು ಉಕ್ಕಿ ಹರಿದಿದೆ.

ಮೇಲ್ಮೈ ಸುಳಿಗಾಳಿ ಹಿನ್ನೆಲೆ ಇನ್ನೈದು ದಿನ ಭಾರಿ ಮಳೆ

ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ‌ ಮುಂದಿನ ಐದು ದಿನಗಳ‌ ಕಾಲ ಭಾರಿ‌ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಸದ್ಯ ಮುಂಗಾರು ಕೇರಳ ರಾಜ್ಯವನ್ನು ಪ್ರವೇಶಿಸಿದ್ದು, ನಂತರ ಕರ್ನಾಟಕವನ್ನು ಆವರಿಸಲಿದೆ.

ಈ ಭಾರಿ ಅವಧಿಗೂ ಮೊದಲೇ ಮುಂಗಾರು ಪ್ರವೇಶವಾಗುತ್ತಿದೆ. ಕಳೆದ ವರ್ಷ ಕರ್ನಾಟಕದಲ್ಲಿ ಜೂನ್ 15ಕ್ಕೆ ಮುಂಗಾರು ಪ್ರವೇಶವಾಗಿತ್ತು. ಆದರೆ ಈ ವರ್ಷ 15 ದಿನಗಳಿಗೂ ಮೊದಲೇ ಮುಂಗಾರು ಪ್ರವೇಶವಾಗುತ್ತಿದೆ. ಈ ಬಾರಿ ಉತ್ತಮ ಮಳೆಯಾಗುವ ಸೂಚನೆಯನ್ನು ಹವಾಮಾನ ತಜ್ಞರು ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version