Site icon Vistara News

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast

ವಿಜಯಪುರ: ರಾಜ್ಯದ ಹಲವೆಡೆ ವ್ಯಾಪಕ ಮಳೆಯಾಗುತ್ತಿದ್ದು, (Karnataka Weather Forecast) ಅವಾಂತರವನ್ನೇ ಸೃಷ್ಟಿಸಿದೆ. ವಿಜಯಪುರದಲ್ಲಿ ಸುರಿದ ಧಾರಾಕಾರ ಮಳೆಗೆ (Rain News) ಮನೆಯ ಗೋಡೆ ಕುಸಿದು, ಎರಡು ಎಮ್ಮೆಗಳು ಮೃತಪಟ್ಟಿವೆ. ಗೋಡೆ ಕುಸಿಯುವಾಗ ಮನೆಯಲ್ಲಿ ಯಾರು ಇಲ್ಲದ ಕಾರಣಕ್ಕೆ ಭಾರಿ ಅನಾಹುತವೊಂದು ತಪ್ಪಿದೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದಲ್ಲಿ ಘಟನೆ ನಡೆದಿದೆ.

ಬಸಪ್ಪ ಕೋಟಿನ್ ಎಂಬುವರಿಗೆ ಸೇರಿದ ಎರಡು ಎಮ್ಮೆಗಳನ್ನು ಮನೆ ಸಮೀಪವೇ ಕಟ್ಟಲಾಗಿತ್ತು. ಈ ವೇಳೆ ಗೋಡೆ ಕುಸಿದು ಬಿದ್ದ ರಭಸಕ್ಕೆ ಎಮ್ಮೆಗಳು ಮೃತಪಟ್ಟಿವೆ. ಲಕ್ಷ ರೂಪಾಯಿಗೆ ಬೆಲೆ ಬಾಳುತ್ತಿದ್ದ ಎರಡು ಎಮ್ಮೆಗಳನ್ನು ಕಳೆದುಕೊಂಡು ಬಸಪ್ಪ ಕಂಗಲಾಗಿದ್ದಾರೆ. ನೈಸರ್ಗಿಕ ವಿಕೋಪದಿಂದ ಆದ ಅನಾಹುತಕ್ಕೆ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ನಿನ್ನೆ ಭಾನುವಾರ ರಾತ್ರಿ‌ ಸುರಿದ ಧಾರಾಕಾರ ಮಳೆಗೆ ದೇವರ ಹಿಪ್ಪರಗಿಯ ಕೆಲ ಮನೆಗಳಲ್ಲಿ ನೀರು ನುಗ್ಗಿತ್ತು. ಇದರಿಂದಾಗಿ ಜನರು ಜಾಗರಣೆ ಮಾಡುವಂತಾಯಿತು.

ಯಾದಗಿರಿಯಲ್ಲಿ ವಿದ್ಯುತ್ ತಗುಲಿ ಜಾನುವಾರು ಸಾವು

ಇತ್ತ ಯಾದಗಿರಿಯ ಯಡ್ಡಹಳ್ಳಿ ಗ್ರಾಮದಲ್ಲಿ ವಿದ್ಯುತ್‌ ತಗುಲಿ ಜಾನುವಾರು ಮೃತಪಟ್ಟಿದೆ. ಜೆಸ್ಕಾಂ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ವಿದ್ಯುತ್‌ ಕಂಬಗಳು ಧರೆಗುರುಳಿದ್ದವು. ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿ ತೆರವು ಮಾಡದೆ ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಪೂರೈಕೆ ಮಾಡಿದ್ದಾರೆ. ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ವಿದ್ಯುತ್ ತಂತಿ ತುಳಿದು ಆಕಳು ಮೃತಪಟ್ಟಿದೆ ಎಂದು ಆರೋಪಿಸಿದ್ದಾರೆ. ಆಕಳು ಕಳೆದುಕೊಂಡ ಲಿಂಗಾರೆಡ್ಡಿ ಕಂಗಲಾಗಿದ್ದು, ಜೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ಹೊರಹಾಕಿದ್ದಾರೆ.

ಇತ್ತ ಧಾರಕಾರ ಮಳೆಯಿಂದ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬರದೇವನಾಳ ಸಮೀಪದ ಡೋಣಿ ನದಿಯ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಕಿರಿದಾದ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಡೋಣಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ತರಕಿಹಾಳ, ಕರೇಕನಾಳ, ಮದಲಿಂಗನಾಳ ಹಾಗೂ ಗೆದ್ದಲಮರಿ ಸೇರಿ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ.

ಇದನ್ನೂ ಓದಿ: Karnataka Rain : ಬೆಳಗಾವಿಯಲ್ಲಿ ಭಾರಿ ಮಳೆಗೆ ಮರ ಬಿದ್ದು ಗಂಭೀರ ಗಾಯಗೊಂಡಿದ್ದ ಮತ್ತೊಬ್ಬ ಯುವಕ ಸಾವು

ಕಲಬುರಗಿಯಲ್ಲಿ ಕೆರೆಯಂತಾದ ರಸ್ತೆಗಳು

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ತೋಟ್ನಳ್ಳಿ ಗ್ರಾಮದಲ್ಲಿ ಭಾರಿ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳು ಜಲಾವೃತಗೊಂಡಿವೆ. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ತವರು ಕ್ಷೇತ್ರದಲ್ಲಿ ಮಳೆಯು ಅವಾಂತರವನ್ನು ಸೃಷ್ಟಿಸಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಗ್ರಾಮಸ್ಥರು ಪರದಾಡುವಂತಾಗಿದೆ. ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ಕೊಡಗಿನಲ್ಲಿ ಮಳೆಗೆ ಧರೆಗುರುಳಿದ ಮರಗಳು

ಕೊಡಗು ಜಿಲ್ಲೆಯಾದ್ಯಂತ ನಿರಂತರ ಮಳೆಯಿಂದಾಗಿ ಹಲವೆಡೆ ಮರಗಳು ಧರೆಗುರುಳಿವೆ. ಮಡಿಕೇರಿ ತಾಲೂಕಿನ ಭಾಗಮಂಡಲದ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಮತ್ತೊಂದೆಡೆ ಪಾಂಡಿ ಹಾಗೂ ಸೂರ್ತಲೆ ರಸ್ತೆಯಲ್ಲೂ ಮರ ಬಿದ್ದು ಅವಾಂತರವೇ ಸೃಷ್ಟಿಯಾಗಿದೆ. ಭಾಗಮಂಡಲ ರಸ್ತೆಯಲ್ಲಿ ಬಿದ್ದಿರುವ ಮರಗಳನ್ನು ಸ್ಥಳೀಯರೇ ತೆರವುಗೊಳಿಸಿದ್ದಾರೆ.

ವಿಜಯನಗರದಲ್ಲಿ ನೆಲಕ್ಕೆ ಅಪ್ಪಳಿಸಿದ ಆಲದ ಮರ

ವಿಜಯನಗರದ ಕೂಡ್ಲಿಗಿ ಪಟ್ಟಣದ ರಾಜೀವ್ ಗಾಂಧೀ ನಗರದಲ್ಲಿ ನಿರಂತರ ಮಳೆಯಿಂದಾಗಿ ಬೃಹತ್ ಆಲದ ಮರವೊಂದು ನೆಲಕ್ಕೆ ಅಪ್ಪಳಿಸಿದೆ. ಕೂಡ್ಲಿಗಿ – ಹೊಸಪೇಟೆ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮರ ಉರುಳಿ ಬಿದ್ದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡಚಣೆ ಆಗಿತು. ಮರ ತೆರವು ಗೊಳಿಸುವಂತೆ ರಾಜೀವ್ ಗಾಂಧೀ ನಗರದ ನಿವಾಸಿಗಳು ಹಾಗೂ ರೈತರು ಆಗ್ರಹಿಸಿದರು. ಆಲದ ಮರವು ವಿದ್ಯುತ್ ತಂತಿ ಮೇಲೆಯೂ ಬಿದ್ದಿದ್ದು, ರಾಜೀವ್ ಗಾಂಧೀ ನಗರಕ್ಕೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version