Site icon Vistara News

Karnataka Weather : ಸಿಡಿಲಿಗೆ ಎತ್ತು ಸಾವು, ಬಿರುಗಾಳಿಗೆ ನೆಲಕಚ್ಚಿದ ಬೆಳೆಗಳು; ಏ.24ರವರೆಗೆ ಮಳೆ ಅಬ್ಬರ

Karnataka Weather Forecast Rain Effected

ಬೆಂಗಳೂರು: ರಾಜ್ಯದಲ್ಲಿ ಮಳೆ (Rain News) ಅನಾಹುತ (Karnataka Weather Forecast) ಮುಂದುವರಿದಿದ್ದು, ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಬೇಲೂರ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ. ರೈತ ಅಣ್ಣೆಪ್ಪ ಕಾಶಪ್ಪ ಯೆರಂಡಗೆ ಅವರಿಗೆ ಸೇರಿದ ಎತ್ತು ಸಿಡಿಲಿಗೆ ಬಲಿಯಾಗಿದೆ. ಸುದ್ದಿ ತಿಳಿದ ಹುಲಸೂರ ಠಾಣೆ ಪಿಎಸ್ಐ ನಾಗೇಂದ್ರ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಕುರಿತು ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಹಾದ್ರಿಪುರ ಗ್ರಾಮದಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಬೆಳೆಗಳು ನೆಲಕಚ್ಚಿದವು. ಬಾಳೆ, ಹೀರೆಗಿಡ, ಅಡಿಕೆ ಬೆಳೆಗಳು ನೆಲಕ್ಕೆ ಉರುಳಿವೆ. ಶನಿವಾರ ಸಂಜೆ ಏಕಾಏಕಿ ಸುರಿದ ಮಳೆಗೆ ಗೊನೆ ಬಿಟ್ಟಿದ್ದ ಬಾಳೆ ಗಿಡಗಳು ಮುರಿದು ಹೋಗಿವೆ.

8 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಇನ್ನೊಂದು ತಿಂಗಳಲ್ಲಿ ಕಟಾವು ಮಾಡಬೇಕಿತ್ತು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರ ಅಳಲು ತೋಡಿಕೊಂಡಿದ್ದಾರೆ. ಗ್ರಾಮದ ಸುಧಾಕರ್, ನಂಜೇಗೌಡ, ಮಂಜುನಾಥ, ಜಯರಾಮಯ್ಯ, ದೇವರಾಜಪ್ಪ, ಎಂಬ ರೈತರಿಗೆ ಸೇರಿದ ಬಾಳೆ ಗಿಡಗಳು ಸಂಪೂರ್ಣ ಹಾಳಾಗಿವೆ. ಚನ್ನರಾಯಪ್ಪ ಎಂಬ ರೈತನಿಗೆ ಸೇರಿದ ಒಂದು ಎಕರೆ ಹೀರೆಗಿಡ ನಾಶವಾಗಿದೆ.

ಹಾಸನದಲ್ಲೂ ಶನಿವಾರ ರಾತ್ರಿ ಗಾಳಿಯೊಂದಿಗೆ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮದಲ್ಲಿ ಫಸಲಿಗೆ ಬಂದಿದ್ದ ಅಡಿಕೆ ಗಿಡಗಳು ನಾಶವಾಗಿದ್ದವು. ರವೀಶ್ ಎಂಬುವವರಿಗೆ ಸೇರಿದ ಎರಡುವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ಗಿಡಗಳು, ಬಿರುಗಾಳಿ ಸಹಿತ ಸುರಿದ ಮಳೆಗೆ 350ಕ್ಕೂ ಹೆಚ್ಚು ಗಿಡಗಳು ನೆಲಕಚ್ಚಿವೆ. ಸುಮಾರು ಮೂರರಿಂದ ನಾಲ್ಕು‌ ಲಕ್ಷ ರೂ ಹಾನಿಯಾಗಿದೆ. ಫಸಲಿಗೆ ಬಂದಿದ್ದ ಅಡಿಕೆ ಗಿಡಗಳನ್ನು ಕಳೆದುಕೊಂಡು ರೈತ ರವೀಶ್ ಕಂಗಾಲಾಗಿದ್ದರು. ಸ್ಥಳಕ್ಕೆ ತಹಸೀಲ್ದಾರ್ ಮಮತಾ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Kids Summer Travel Fashion: ಬೇಸಿಗೆಯಲ್ಲಿ ಹೀಗಿರಲಿ ಚಿಣ್ಣರ ಟ್ರಾವೆಲ್‌ ಫ್ಯಾಷನ್‌

ರಾಜ್ಯದಲ್ಲಿ ಶನಿವಾರದಂದು ಕರಾವಳಿ ಕೆಲವು ಕಡೆಗಳಲ್ಲಿ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಭಾರಿ ಮಳೆಯು ಖಜೂರಿ 9 ಸೆಂ.ಮೀ, ಗದಗ 7 ಸೆಂ.ಮೀ ಮಳೆಯಾಗಿದೆ. ಕುಕನೂರು5, ಶಿಗ್ಗಾಂವ 5, ಸವಣೂರು 4, ಕಲಬುರಗಿ, ಶಿರಹಟ್ಟಿ, ಕುಂದಗೋಳದಲ್ಲಿ 3 ಸೆಂ.ಮೀ ಮಳೆಯಾಗಿದೆ. ಅಫಜಲಪುರ ಎಚ್‌ಎಂಎಸ್, ಆಳಂದ, ಕಲಘಟಗಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಗೋಕರ್ಣ, ಕಿರವತ್ತಿ, ಕಾರವಾರ ವೀಕ್ಷಣಾಲಯ, ಹುಬ್ಬಳ್ಳಿ, ಯಲಬುರ್ಗಾ, ಮುಂಡರಗಿ 1 ಸೆಂ.ಮೀ ಮಳೆಯಾಗಿದೆ. ಅತೀ ಗರಿಷ್ಠ ಉಷ್ಣಾಂಶ 37.4 ಡಿ.ಸೆ ಕಲಬುರಗಿಯಲ್ಲಿ ದಾಖಲಾಗಿದೆ.

ಮುಂದಿನ 24 ಗಂಟೆಯಲ್ಲಿ ಮಳೆ ಮುನ್ಸೂಚನೆ

ಏ.22ರಂದು ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಗದಗನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಹಾಸನ ಸೇರಿ ದಕ್ಷಿಣಒಳನಾಡಿನ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಇನ್ನು ರಾಜಧಾನಿ ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ಆಕಾಶವಿರುತ್ತದೆ. ಗರಿಷ್ಠ ಉಷ್ಣಾಂಶ 36 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ತಾಪಮಾನದ ಮುನ್ಸೂಚನೆ

ಏಪ್ರಿಲ್ 22 ರಿಂದ 25ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ 5 ದಿನಗಳಲ್ಲಿ ರಾಜ್ಯಾದ್ಯಂತ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.

ಬಿರುಗಾಳಿ ಸಹಿತ ಮಳೆ ಸಾಧ್ಯತೆ

ಏಪ್ರಿಲ್‌ 22ರಂದು ಒಂದು ಅಥವಾ ಎರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಸಾಧ್ಯತೆ ಇದ್ದು, ಮುಂದಿನ 5 ದಿನಗಳಲ್ಲಿ ಗರಿಷ್ಟ ಉಷ್ಣಾಂಶದಲ್ಲಿ ಕ್ರಮೇಣ 2-3 ಡಿ.ಸೆ ಏರಿಕೆಯಾಗುವ ಸಾಧ್ಯತೆಯಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version