ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಕಾರುಬಾರು ಜೋರಾಗಿದೆ. ಬಿಸಿಲಿನ ತೀವ್ರತೆಗೆ ನೆತ್ತಿ ಸುಡುವುದು ಮಾತ್ರವಲ್ಲ ಸೆಕೆಯೂ ಹೆಚ್ಚಾಗುತ್ತಿದೆ. ಜತೆಗೆ ವಿಪರೀತ ಬಾಯಾರಿಕೆಗೆ ಎಷ್ಟು ನೀರು ಕುಡಿದರು ಸಾಲದಂತಾಗಿದೆ. ಬಿಸಿಲ ಝಳಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ರಾಜ್ಯದಲ್ಲಿ ಶುಕ್ರವಾರದವರೆಗೆ ತಾಪಮಾನ ಏರಿಕೆ ಜತೆಗೆ ಬಿಸಿಲಿನ ಗಾಳಿ (Heat Waves) ಬೀಸಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.
ಏಪ್ರಿಲ್ 2 ರಿಂದ 5ನೇ ತಾರೀಖಿನವರೆಗೆ ರಾಜ್ಯದಲ್ಲಿ ಶುಷ್ಕ ಹವಾಮಾನವು ಮೇಲುಗೈ ಸಾಧಿಸಲಿದೆ. ಏಪ್ರಿಲ್ 6ರವರೆಗೆ ಬಿಸಿಗಾಳಿ ಬೀಸಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಳ್ಳಾರಿ, ಬೆಳಗಾವಿ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸಲಿದ್ದು, ಉಷ್ಣ ಅಲೆ ಎಚ್ಚರಿಕೆಯನ್ನು ನೀಡಲಾಗಿದೆ.
ಜತೆಗೆ ಮುಂದಿನ 3 ದಿನಗಳಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಬಿಸಿ ವಾತಾವರಣ ಇರಲಿದೆ.
ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂಜಾನೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಮಧ್ಯಾಹ್ನ/ಸಂಜೆಯ ಹೊತ್ತಿಗೆ ಸ್ಪಷ್ಟವಾದ ನಿರ್ಮಲ ಆಕಾಶ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 36 ಮತ್ತು 24 ಡಿ.ಸೆ ಇರಲಿದೆ.
ಇದನ್ನೂ ಓದಿ: Summer kids Fashion: ಬೇಸಿಗೆ ಫ್ಯಾಷನ್‌ಗೆ ಲಗ್ಗೆ ಇಟ್ಟ ಕಿಡ್ಸ್ ಫಂಕಿ ಫ್ಯಾಷನ್‌ವೇರ್ಸ್
ಈ ಸಲ ಏಪ್ರಿಲ್, ಮೇ ಧಗಧಗ; ಕರ್ನಾಟಕದಲ್ಲೂ ಬೀಸಲಿದೆ ತೀವ್ರ ಶಾಖದ ಅಲೆ
ಹೊಸದಿಲ್ಲಿ: ಈ ಬೇಸಿಗೆಯಲ್ಲಿ ಕರ್ನಾಟಕ (Karnataka) ಸೇರಿದಂತೆ ದೇಶದ ಹಲವು ರಾಜ್ಯಗಳು ತೀವ್ರ ಶಾಖದ ಅಲೆಗಳಿಗೆ (Heat Wave) ಸಾಕ್ಷಿಯಾಗಲಿವೆ. ಮಧ್ಯ, ಉತ್ತರ ಬಯಲು ಪ್ರದೇಶಗಳು ಮತ್ತು ದಕ್ಷಿಣ ಭಾರತದ ಹಲವು ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಶಾಖದ ಅಲೆಗಳ ದಿನಗಳು (Extreme weather) ಕಾಣಿಸಿಕೊಳ್ಳಲಿವೆ ಎಂದು ಭಾರತೀಯ ಹವಾಮಾನ ಇಲಾಖೆ (Indian meteorological department) ಮುನ್ಸೂಚನೆ ನೀಡಿದೆ.
ಏಪ್ರಿಲ್‌ನಿಂದ ಜೂನ್ ತಿಂಗಳುಗಳಲ್ಲಿ ದೇಶವು ತೀವ್ರತರವಾದ ಶಾಖವನ್ನು ಅನುಭವಿಸಲಿದೆ. ಮಧ್ಯ ಮತ್ತು ಪಶ್ಚಿಮ ಪರ್ಯಾಯ ದ್ವೀಪ ಭಾಗಗಳು ಕೆಟ್ಟ ಪರಿಣಾಮವನ್ನು ಎದುರಿಸುವ ನಿರೀಕ್ಷೆಯಿದೆ. ದೇಶದ ವಿವಿಧ ಭಾಗಗಳಲ್ಲಿ ಸಾಮಾನ್ಯವಾಗಿರುವ ನಾಲ್ಕರಿಂದ ಎಂಟು ದಿನಗಳ ಶಾಖದ ಅಲೆಗಳ ಬದಲು 10-20 ದಿನಗಳ ಶಾಖದ ಅಲೆಯನ್ನು ನಿರೀಕ್ಷಿಸಲಾಗಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಅವರು ಹೇಳಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ ಬಿಸಿಗಾಳಿಯ ಬಗ್ಗೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. “ನಾವು ಸಿದ್ಧತೆಗಳ ಬಗ್ಗೆ ರಾಜ್ಯ ಸರ್ಕಾರಗಳೊಂದಿಗೆ ಎರಡು ದಿನಗಳ ಸಭೆ ನಡೆಸಿದ್ದೇವೆ ಮತ್ತು ಸಲಹೆಗಳನ್ನು ನೀಡಿದ್ದೇವೆ” ಎಂದು ಅವರು ಹೇಳಿದರು.
ಚಾಲ್ತಿಯಲ್ಲಿರುವ ಶಾಖದ ಪರಿಸ್ಥಿತಿಯ ಪ್ರಕಾರ, ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶದಂತಹ ರಾಜ್ಯಗಳು ಸೇರಿದಂತೆ ದೇಶದ ಬೃಹತ್ ಪ್ರದೇಶವು ಶಾಖದ ಅಲೆಯಿಂದ ಪ್ರಭಾವಿತವಾಗಿರುತ್ತದೆ,” ಎಂದಿದ್ದಾರೆ.
ಗುಜರಾತ್, ಮಧ್ಯ ಮಹಾರಾಷ್ಟ್ರ, ಉತ್ತರ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ, ಉತ್ತರ ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶಗಳು ಶಾಖದ ಅಲೆಗಳ ಕೆಟ್ಟ ಪರಿಣಾಮವನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಮೊಹಾಪಾತ್ರ ಹೇಳಿದರು. ಏಪ್ರಿಲ್‌ನಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನದ ಸಾಧ್ಯತೆಯಿದೆ. ಮಧ್ಯ ದಕ್ಷಿಣ ಭಾರತದಲ್ಲಿ ಹೆಚ್ಚಿನ ಸಂಭವನೀಯತೆ ಇರುತ್ತದೆ.
ಏಪ್ರಿಲ್‌ನಲ್ಲಿ ಪಶ್ಚಿಮ ಹಿಮಾಲಯ ಪ್ರದೇಶ ಮತ್ತು ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ಸಾಮಾನ್ಯದಿಂದ ಕಡಿಮೆ ಗರಿಷ್ಠ ತಾಪಮಾನದ ಸಾಧ್ಯತೆಯಿದೆ ಎಂದು IMD ತಿಳಿಸಿದೆ. ಏಪ್ರಿಲ್‌ನಲ್ಲಿ ಮಧ್ಯ ಭಾರತ, ಉತ್ತರ ಬಯಲು ಪ್ರದೇಶ ಮತ್ತು ದಕ್ಷಿಣ ಭಾರತದ ಅಕ್ಕಪಕ್ಕದ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ದಿನಗಳು ಸಂಭವಿಸಬಹುದು ಎಂದು ಹವಾಮಾನ ಕಚೇರಿ ತಿಳಿಸಿದೆ.
ಮೊಹಾಪಾತ್ರ ಪ್ರಕಾರ, ಈ ಪ್ರದೇಶಗಳಲ್ಲಿ ಸಾಮಾನ್ಯ ಒಂದರಿಂದ ಮೂರು ದಿನಗಳ ಬದಲು ಎರಡರಿಂದ ಎಂಟು ದಿನಗಳ ಶಾಖದ ಅಲೆಯನ್ನು ನಿರೀಕ್ಷಿಸಲಾಗಿದೆ. ಗುಜರಾತ್, ಮಹಾರಾಷ್ಟ್ರ, ಉತ್ತರ ಕರ್ನಾಟಕ, ಒಡಿಶಾ, ಪಶ್ಚಿಮ ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶಗಳು ಏಪ್ರಿಲ್‌ನಲ್ಲಿ ಶಾಖದ ಅಲೆಗಳ ಕೆಟ್ಟ ಪರಿಣಾಮವನ್ನು ಅನುಭವಿಸುವ ಮುನ್ಸೂಚನೆಗಳಿವೆ. ಭಾರತದಲ್ಲಿ ಲೋಕಸಭೆ ಚುನಾವಣೆಯು ಏಪ್ರಿಲ್ 19 ಮತ್ತು ಜೂನ್ 1 ರ ನಡುವೆ ಏಳು ಹಂತಗಳಲ್ಲಿ ನಡೆಯಲಿದೆ.
ಬೆಂಗಳೂರಿನಲ್ಲಿ ಈಗಾಗಲೇ ಗರಿಷ್ಠ ತಾಪಮಾನ 36ರ ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದು ಇನ್ನೂ 1 – 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಂಭವವಿದೆ. ಕರಾವಳಿ ಜಿಲ್ಲೆಗಳಲ್ಲಿ ಸಹ ಉಷ್ಣಾಂಶವು ಹೆಚ್ಚಾಗಿಯೇ ಇರಲಿದೆ. ಮಂಗಳೂರಿನಲ್ಲಿ ಇನ್ನೊಂದು ವಾರದಲ್ಲಿ 34 – 35 ಡಿಗ್ರಿ ಸೆಲ್ಸಿಯಸ್ ಇರಲಿದ್ದರೆ, ಕಾರವಾರದಲ್ಲಿ 35-36 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ. ಮಲೆನಾಡಿನ ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉಷ್ಣಾಂಶ ಹೆಚ್ಚಾಗಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ