Site icon Vistara News

Karnataka Weather : ತಾಪಮಾನ ಏರಿಕೆ ಜತೆಗೆ ಮಳೆ ಮುನ್ಸೂಚನೆ ಕೊಟ್ಟ ತಜ್ಞರು

Karnataka Weather

ಬೆಂಗಳೂರು: ತಾಪಮಾನ ಏರಿಕೆ (Temperature forecast) ನಡುವೆಯೂ ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (karnataka Weather Forecast) ಮುನ್ಸೂಚನೆಯನ್ನು ನೀಡಿದೆ. ಕರಾವಳಿ, ಮಲೆನಾಡು ಮತ್ತು ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಮಳೆಯಾಗುವ (Rain News) ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಭಾಗಗಳಲ್ಲಿ ಶುಷ್ಕ ಹವಾಮಾನ ಪರಿಸ್ಥಿತಿಗಳು ಮೇಲುಗೈ ಸಾಧಿಸಲಿದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಣ್ಣ ಮಳೆಯಾಗಬಹುದು. ಈ ಉಳಿದ ಪ್ರದೇಶದಲ್ಲಿ ಕೆಲವೊಮ್ಮೆ ಮೋಡ ಕವಿದ ವಾತಾವರಣದೊಂದಿಗೆ ಶುಷ್ಕ ಹವಾಮಾನ ಇರಲಿದೆ.

ಇದನ್ನೂ ಓದಿ: Dead Body Found : ವಾಟರ್‌ ಟ್ಯಾಂಕರ್‌ನಲ್ಲಿತ್ತು ಕೊಳೆತ ಶವ; ಅದೇ ನೀರು ಕುಡಿದವರು ಕಕ್ಕಾಬಿಕ್ಕಿ

ಕರಾವಳಿ-ಮಲೆನಾಡಲ್ಲಿ ಮಳೆ ಮುನ್ಸೂಚನೆ

ಮಲೆನಾಡಿನ ಕೊಡಗು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಜತೆಗೆ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲೂ ಕೆಲವೊಮ್ಮೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರು ಸುತ್ತಮುತ್ತ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 36 ಮತ್ತು 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಶಾಖ ತರಂಗದ ಎಚ್ಚರಿಕೆ

ಮುಂದಿನ ಎರಡು ದಿನಗಳ ಕಾಲ ಉತ್ತರ ಒಳನಾಡಿನ ಕಲಬುರಗಿ, ಬಾಗಲಕೋಟೆ, ಬೀದರ್ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಬಿಸಿಗಾಳಿ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ತಾಪಮಾನ ಮುನ್ಸೂಚನೆ

ಮುಂದಿನ 5 ದಿನಗಳಲ್ಲಿ ಕರ್ನಾಟಕದ ದಕ್ಷಿಣ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ ತಾಪಮಾನವು 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಹಾಗೇ ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Health Tips: ನಮ್ಮ ಅನಾರೋಗ್ಯದಲ್ಲಿ ನಾವು ಬಳಸುವ ಪಾತ್ರೆಗಳ ಪಾತ್ರವೇ ಮುಖ್ಯ!

ನೀರು ಕುಡಿದು ತಂಪಾಗಿರಿ, ಹೀಟ್‌ ಸ್ಟ್ರೋಕ್‌ ತಪ್ಪಿಸಿಕೊಳ್ಳಿ

ಬಿಸಿಲಿನ ತಾಪ (Heat stroke) ಮುಗಿಲು ಮುಟ್ಟುತ್ತಿದೆ. ಮಾರ್ಚ್‌ ತಿಂಗಳಲ್ಲಿ ವಿಪರೀತ ಎನಿಸುವಷ್ಟು ಸೂರ್ಯ ತನ್ನ ಕಿರಣಗಳನ್ನು ಝಳಪಿಸುತ್ತಿದ್ದಾನೆ. ರಾಜ್ಯದ ಹಲವು ಕಡೆಗಳಲ್ಲಿ ತಾಪಮಾನ 40 ಡಿ.ಸೆ. ಈಗಾಗಲೇ ದಾಟಿದ್ದು, ಈ ಬೇಸಿಗೆ ಕಳೆಯುವುದು ಹೇಗಪ್ಪಾ ಎಂಬ ಚಿಂತೆ ಎಲ್ಲರ ಮುಖದಲ್ಲಿ ಕಾಣುತ್ತಿದೆ. ಉಷ್ಣತೆ ಇನ್ನೂ ಹೆಚ್ಚಬಹುದು ಎಂಬ ಎಚ್ಚರಿಕೆ ಸರಕಾರದಿಂದ, ತಜ್ಞರಿಂದ ಬಂದಿದೆ. ಇಂಥ ತೀಕ್ಷ್ಣ ಉರಿ ಸೆಕೆಯಲ್ಲಿ ಬಿಸಿಲಿನ ಆಘಾತದ ಅಪಾಯ ಹೆಚ್ಚುತ್ತದೆ. ಕಾರಣ, ದೇಹದ ತಾಪಮಾನವನ್ನು ಕಾಯ್ದುಕೊಳ್ಳುವ ಸಹಜ ತಂತ್ರಗಳು ಕೆಲವೊಮ್ಮೆ ದೇಹಕ್ಕೇ ಕೈಕೊಟ್ಟಾಗ ಆರೋಗ್ಯ ಏರುಪೇರಾಗುವುದು ನಿಶ್ಚಿತ. ಸುಸ್ತು, ಆಯಾಸ, ಡಯರಿಯಾ, ವಾಂತಿ, ನಿರ್ಜಲೀಕರಣ, ಮಾನಸಿಕ ಗೊಂದಲ, ಹೀಟ್‌ ಸ್ಟ್ರೋಕ್‌ ಮುಂತಾದ ಹಲವು ರೀತಿಯ ಸಮಸ್ಯೆಗಳು ಎರಗಬಹುದು. ಈಗಾಗಲೇ ಇರುವಂಥ ಆರೋಗ್ಯ ಸಮಸ್ಯೆಗಳು ಉಲ್ಭಣಿಸಬಹುದು. ಬಿಸಿಲಿನ ಆಘಾತದಿಂದ ವ್ಯಕ್ತಿಗಳ ವರ್ತನೆಯಲ್ಲೂ ವ್ಯತ್ಯಾಸ ಕಾಣಬಹುದು.

ನೀರು ಕಡಿಮೆ ಕುಡಿಯಬೇಡಿ

ತೀಕ್ಷ್ಣ ಬಿಸಿಲಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ, ಚೆನ್ನಾಗಿ ನೀರು ಕುಡಿಯದಿರುವುದರಿಂದ ಮೊದಲಿಗೆ ಸುಸ್ತು, ಆಯಾಸ ಕಾಣಿಸಿಕೊಳ್ಳುತ್ತದೆ. ಇದನ್ನು ಸೂಕ್ತವಾಗಿ ನಿರ್ವಹಿಸದಿದ್ದಲ್ಲಿ ಹೀಟ್‌ಸ್ಟ್ರೋಕ್‌ ಉಂಟಾಗಬಹುದು. ಅಂದರೆ, ಜ್ವರದ ಯಾವುದೇ ಲಕ್ಷಣವಿಲ್ಲದಿದ್ದರೂ, ದೇಹದ ಉಷ್ಣತೆ 104 ಡಿಗ್ರಿ ಫ್ಯಾರನ್‌ಹೀಟ್‌ ಅಥವಾ ಅದಕ್ಕಿಂತಲೂ ಹೆಚ್ಚು ತಲುಪಬಹುದು. ಇದಕ್ಕೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಬೇಕು. ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಜೀವಕ್ಕೆ ಅಪಾಯ ಕಟ್ಟಿಟ್ಟಿದ್ದು. ಏನಿದರ ಲಕ್ಷಣಗಳು?

ತೀವ್ರವಾಗಿ ಹೆಚ್ಚುವ ದೇಹದ ಉಷ್ಣತೆ

ತೀವ್ರವಾದ ಜ್ವರದಲ್ಲಿ ಏರುವ ದೇಹದ ಉಷ್ಣತೆಯಂತೆಯೇ 40 ಡಿ. ಸೆ. ಅಥವಾ 104 ಡಿ. ಫ್ಯಾರನ್‌ಹೀಟ್‌ ತಲುಪುತ್ತದೆ. ಕೆಲವೊಮ್ಮೆ ಅದಕ್ಕಿಂತ ಹೆಚ್ಚೂ ಇರಬಹುದು. ಹೃದಯದ ಬಡಿತ ತೀವ್ರಗತಿಯಲ್ಲಿರುತ್ತದೆ. ಈ ಹಂತದಲ್ಲಿ ತಕ್ಷಣ ಎಚ್ಚೆತ್ತುಕೊಂಡು ಆಸ್ಪತ್ರೆಗೆ ಧಾವಿಸುವುದು ಕ್ಷೇಮ. ಚರ್ಮ ಒಣಗುವುದು, ಕೆಂಪಾಗುವುದು ಇಂಥವೆಲ್ಲಾ ಈ ಲಕ್ಷಣಗಳ ಜೊತೆಜೊತೆಗೇ ಕಾಣಬಹುದು.

ಉಸಿರಾಟ

ಹೃದಯದ ಬಡಿತಕ್ಕೆ ಪೂರಕವಾಗಿ ಉಸಿರಾಟವೂ ತೀವ್ರವಾಗಿರುತ್ತದೆ. ಬಡಿತ ಮತ್ತು ಉಸಿರಾಟದ ಮೂಲಕ ಹೆಚ್ಚಿನ ಆಮ್ಲಜನಕ ಒದಗಿಸಿ, ಶರೀರವನ್ನು ತಂಪಾಗಿಸುವ ಯತ್ನವನ್ನು ದೇಹ ತಂತಾನೇ ಮಾಡುತ್ತಿರುತ್ತದೆ. ಈ ಹಂತದಲ್ಲಿ ಉಸಿರಾಟದ ತೊಂದರೆ ಮತ್ತು ಅತೀವ ಬೆವರು ಸಹ ಗೋಚರಿಸಬಹುದು ಅಥವಾ ಬೆವರೇ ಬಾರದೆಯೂ ಇರಬಹುದು.

ಗೊಂದಲ

ದೇಹದಲ್ಲಿನ ಈ ಬದಲಾವಣೆಯಿಂದ ಮೆದುಳಿನಲ್ಲೂ ಸಮಸ್ಯೆಗಳು ಕಂಡು ಬರುತ್ತವೆ. ಬಿಸಿಲಿನ ಆಘಾತಕ್ಕೆ ಒಳಗಾದ ವ್ಯಕ್ತಿಗಳಲ್ಲಿ ಗೊಂದಲ, ಕೋಪ, ದೇಹದ ಅಸಮತೋಲನ, ಕೆಲವೊಮ್ಮೆ ಅಪಸ್ಮಾರವೂ ಕಂಡುಬಂದೀತು. ಇಂಥವರಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಿ ಬೇಕು.

ತಲೆನೋವು

ತೀವ್ರವಾದ ತಲೆನೋವು, ತಲೆಸುತ್ತುವುದು, ಹೊಟ್ಟೆ ತೊಳೆಸುವುದು, ವಾಂತಿ- ಇವೆಲ್ಲವೂ ನಿರ್ಜಲೀಕರಣದ ಲಕ್ಷಣಗಳಾಗಿರಬಹುದು. ಮೈ ಮುಟ್ಟಿದರೆ ಬಿಸಿಯ ಅನುಭವ ಮತ್ತು ಚರ್ಮ ಒಣಗಿದಂಥ ಲಕ್ಷಣಗಳು ಕಾಣಬಹುದು. ಮೊದಲಿಗೆ ಸಿಕ್ಕಾಪಟ್ಟೆ ಬೆವರುವ ದೇಹದಿಂದ ಕ್ರಮೇಣ ಒಂದು ಹನಿ ಬೆವರೂ ಬಾರದಿರಬಹುದು. ಇಂಥ ಸಂದರ್ಭಗಳಲ್ಲೂ ಚಿಕಿತ್ಸೆ ಬೇಕಾಗುತ್ತದೆ.

ಮಾಂಸಖಂಡಗಳಲ್ಲಿ ನೋವು

ಬಿಸಿಲಿನ ಆಘಾತದಿಂದ ಮಾಂಸಖಂಡಗಳಲ್ಲಿ ನೋವು, ಏಳಲಾರದಂಥ ಸುಸ್ತು ಆರಂಭವಾಗಿ ನಂತರ ಎಚ್ಚರ ತಪ್ಪಬಹುದು. ತೀವ್ರವಾದ ಸೆಖೆಯ ದಿನಗಳಲ್ಲಿ ಸಿಕ್ಕಾಪಟ್ಟೆ ವ್ಯಾಯಾಮ ಮಾಡಿದಾಗ ಮೊದಲಿಗೆ ಕಾಣುವ ಲಕ್ಷಣಗಳೆಂದರೆ ಕಾಲು, ತೋಳು ಅಥವಾ ಕಿಬ್ಬೊಟ್ಟೆಯಲ್ಲಿ ನೋವು. ಚೆನ್ನಾಗಿ ನೀರು, ಒಆರೆಸ್‌ನಂಥ ಎಲೆಕ್ಟ್ರೋಲೈಟಿಕ್‌ ಪೇಯಗಳು ದೇಹಕ್ಕೆ ತುರ್ತಾಗಿ ಬೇಕಾಗುತ್ತದೆ.

ತಂಪಾಗಿಸಿ

ದೇಹದ ಬಿಸಿ ಹೆಚ್ಚುತ್ತ ಹೋದಂತೆ ಜೀವಾಪಾಯವೂ ಹೆಚ್ಚುತ್ತಲೇ ಹೋಗುತ್ತದೆ. ಇಂಥ ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ಧಾವಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆ ವ್ಯಕ್ತಿಯ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು. ವ್ಯಕ್ತಿಯನ್ನು ನೆರಳಿರುವ, ತಂಪಾದ, ತಾಜಾ ಗಾಳಿ ಬರುವ ಜಾಗಕ್ಕೆ ಸ್ಥಳಾಂತರಿಸಿ. ಒಆರೆಸ್‌ನಂಥ ಎಲೆಕ್ಟ್ರೋಲೈಟಿಕ್‌ ಪೇಯಗಳನ್ನು ಸ್ವಲ್ಪ ಸ್ವಲ್ಪವಾಗಿ ಕುಡಿಸುತ್ತಿರಿ. ಸಾಧ್ಯವಾದರೆ ಮೈಯನ್ನೆಲ್ಲಾ ತಂಪಾದ ಒದ್ದೆ ಬಟ್ಟೆಯಲ್ಲಿ ಒರೆಸಿ, ಚೆನ್ನಾಗಿ ಗಾಳಿ ಹಾಕಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version