ಚಿಕ್ಕಮಗಳೂರು/ಯಾದಗಿರಿ: ರಾಜ್ಯದ ಹಲವೆಡೆ ಮಳೆ ಪ್ರಮಾಣ ತಗ್ಗಿದ್ದರೂ ಮಳೆ ಅವಾಂತರ (Rain News) ಮಾತ್ರ ಕಡಿಮೆ ಆಗುತ್ತಿಲ್ಲ. ಯಾದಗಿರಿಯಲ್ಲಿ ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಪರಿಣಾಮ ಮೂರು ದಿನಗಳಿಂದ ಕರೆಂಟ್ ಇಲ್ಲದಂತಾಗಿದೆ.ಇತ್ತ ಮಂಗಳವಾರ ಚಿಕ್ಕಮಗಳೂರಿನಲ್ಲಿ ಭಾರಿ (Karnataka weather Forecast) ಮಳೆಯಾಗುತ್ತಿದೆ.
ಒಂದು ಗಂಟೆಯಿಂದ ಧಾರಾಕಾರ ಮಳೆ ಸುರಿದಿದೆ. ಕೊಟ್ಟಿಗೆಹಾರ, ಬಾಳೂರು, ಚಾರ್ಮಾಡಿ ಸುತ್ತಮುತ್ತ ನಿರಂತರ ಮಳೆಯಿಂದಾಗಿ ವಾಹನ ಸವಾರರು ಪರದಾಡಬೇಕಾಯಿತು. ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಆರ್ಭಟಿಸುತ್ತಿದೆ. ಭಾರಿ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ಸವಾರರು ರಸ್ತೆ ಬದಿ ವಾಹನ ನಿಲ್ಲಿಸಿ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದರು.
ಯಾದಗಿರಿಯಲ್ಲಿ ಮಳೆಗೆ ಪವರ್ ಕಟ್; ಜನರೇಟರ್ ಮೂಲಕ ಮೊಬೈಲ್‌ಗಳಿಗೆ ಚಾರ್ಜಿಂಗ್
ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ವಿದ್ಯುತ್ ಕಂಬ ಬಿದ್ದಿದ್ದು, ಮೂರು ದಿನಗಳಿಂದ ವಿದ್ಯುತ್ ಕಡಿತಗೊಂಡಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬಲಕಲ್, ಮರಮಕಲ್, ನಾಲ್ವಡಗಿ ಗ್ರಾಮಸ್ಥರು ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ತುರ್ತು ಎಂದಾಗ ಫೋನ್ ಮಾಡಲು ಮೊಬೈಲ್‌ನಲ್ಲಿ ಚಾರ್ಜಿಂಗ್ ಇಲ್ಲ.
ಹೀಗಾಗಿ ಮೊಬೈಲ್ ಚಾರ್ಜಿಂಗ್‌ಗಾಗಿ ಗ್ರಾಮಸ್ಥರು ಸೂಪರ್ ಪ್ಲ್ಯಾನ್‌ವೊಂದನ್ನು ಮಾಡಿಕೊಂಡಿದ್ದಾರೆ. ಜನರೇಟರ್ ಮೂಲಕ ಹತ್ತಾರು ಪವರ್ ಬಾಕ್ಸ್ ಇಟ್ಟು ವಿದ್ಯುತ್ ಕನೆಕ್ಷನ್ ಮಾಡಿಕೊಂಡಿದ್ದಾರೆ. ಜನರೇಟರ್ ಮೂಲಕ ಮೊಬೈಲ್ ಜಾರ್ಜ್ ಮಾಡಲು ಪಾಳಿ ವ್ಯವಸ್ಥೆ ಮಾಡಲಾಗಿದೆ. ಮರಮಕಲ್ ಗ್ರಾಮದ ಬಸವೇಶ್ವರ ಮಂದಿರದಲ್ಲಿ ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಮೂರು ದಿನಗಳಿಂದ ವಿದ್ಯುತ್ ಸಮಸ್ಯೆ ತಲೆದೊರಿದ್ದು, ಜನರೇಟರ್ ಮೂಲಕವೇ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ. ಎತ್ತಿನ ಬಂಡಿ, ಬೈಕ್ ಮೇಲೆ ದೂರದಿಂದ ಬಂದು ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ಬೇಗ ವಿದ್ಯುತ್ ದುರಸ್ತಿ ಮಾಡುವಂತೆ ಒತ್ತಾಯ ಬಂದಿದೆ.
ಇದನ್ನೂ ಓದಿ: Fraud Case: ಹಣ ಡಬ್ಲಿಂಗ್ ಕೇಸ್; ಬಹುಕೋಟಿ ವಂಚನೆ ಮಾಡಿದ್ದ ಆರೋಪಿಗಳು ನ್ಯಾಯಾಲಯಕ್ಕೆ ಶರಣು
ಎಲ್ಲೆಲ್ಲಿ ಮಳೆ ಅಬ್ಬರ?
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕೊಡಗು, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (30-40 ಕಿ.ಮೀ.) ಹಗುರದಿಂದ ಸಾಧಾರಣ ಮಳೆಯಾಗಲಿದೆ.
ಉತ್ತರ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಹಗುರಮಳೆ/ಗುಡುಗು ಸಹಿತ ಮಳೆಯಾದರೆ, ಬೆಳಗಾವಿ, ಧಾರವಾಡ, ಹಾವೇರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (30-40 kmph) ಹಗುರ ಮಳೆಯ ನಿರೀಕ್ಷೆ ಇದೆ. ಬಾಗಲಕೋಟೆ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ರಾಮನಗರ, ಶಿವಮೊಗ್ಗ, ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆ ಹೆಚ್ಚಾಗುವ ಸಾಧ್ಯತೆಯಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ