ತುಮಕೂರು/ಬೆಂಗಳೂರು: ಬಿಸಿಲ ಬೇಗೆಗೆ ಬೇಸತ್ತ ಜನರು ಮಳೆಗಾಗಿ (Rain News) ದೇವರ ಮೊರೆ ಹೋಗುತ್ತಿದ್ದಾರೆ. ಮಳೆರಾಯನ (Karnataka Weather Forecast) ಕಣ್ಣಾಮುಚ್ಚಾಲೆ ಆಟ ನಿಲ್ಲಿಸಲೆಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಮಳೆಗಾಗಿ ಪೂಜೆ ನಡೆದಿದೆ.
ತಾವರೆಕೆರೆ ಗ್ರಾ.ಪಂ ಪಿಡಿಒ ನಾಗರಾಜ್ ಅವರು ಸ್ವತಃ ಮಳೆರಾಯನ ಹೊತ್ತು ಜಲಾಭಿಷೇಕ ಮಾಡಿ ಪ್ರಾರ್ಥನೆ ಸಲ್ಲಿಸಿದರು. ವರುಣ ದೇವನನ್ನು ಪ್ರತಿಷ್ಠಾಪಿಸಿ ನಂತರ ತಲೆ ಮೇಲೆ ಹೊತ್ತು ಮನೆ ಮನೆಗೆ ಹೋಗಿ ಪ್ರಾರ್ಥನೆ ಸಲ್ಲಿಸಿದರು. ಭೀಕರ ಬರಗಾಲ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿದರು.
ಇನ್ನೂ ಶನಿವಾರದಂದು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಚಾಮರಾಜನಗರದ ಎಂ.ಎಂ ಹಿಲ್ಸ್‌ನಲ್ಲಿ 4 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ. ಉಳಿದಂತೆ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವೆ ಇತ್ತು. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶವು 44.7 ಡಿ.ಸೆ ದಾಖಲಾಗಿತ್ತು.
ಇದನ್ನೂ ಓದಿ: Heat Wave: ಬಿಸಿಲಿನ ಬೇಗೆಗೆ ಹೈರಾಣಾದ ದೇಶ; ಹಲವು ಭಾಗಗಳಲ್ಲಿ ಏಪ್ರಿಲ್‌ನಲ್ಲಿ ಗರಿಷ್ಠ ತಾಪಮಾನ ದಾಖಲು
ಮತ್ತಷ್ಟು ದಿನ ಬಿಸಿಲ ತಾಪ
ರಣಬಿಸಿಲು, ಉಷ್ಣಗಾಳಿ ಹೊಡೆತಕ್ಕೆ ಜನರು ಈಗಾಗಲೇ ತತ್ತರಿಸಿ ಹೋಗಿದ್ದಾರೆ. ಮತ್ತಷ್ಟು ದಿನ ಬಿಸಿಲ ತಾಪ ಹೆಚ್ಚಾಗಲಿದ್ದು, ಆರೋಗ್ಯದ ಕಾಳಜಿ ವಹಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಉಷ್ಣತೆಯು ಇದ್ದಕ್ಕಿದ್ದಂತೆ ತೀಕ್ಷ್ಣವಾಗಿ ಮೇಲೇರಿ, ತನ್ನ ಸಾಮಾನ್ಯ ಮಟ್ಟವನ್ನು ಮೀರುವುದನ್ನು ಶಾಖದ ಅಲೆಗಳು ಅಥವಾ ಹೀಟ್‌ವೇವ್ ಎನ್ನಲಾಗುತ್ತದೆ. ಸದ್ಯ ಸಾಮಾನ್ಯ ಮಟ್ಟವನ್ನು ಮೀರಿ, ಉಷ್ಣತೆ ಮೇಲೇರುವುದರಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು. ಸುಸ್ತು, ಆಯಾಸ, ಎಚ್ಚರ ತಪ್ಪುವುದು ಆಗಲಿದೆ. ಹೀಗಾಗಿ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ.
ಮೇ.8ರವೆರೆಗೆ ಹೀಟ್ ವೇವ್ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ ಮತ್ತು ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಶಾಖದ ಅಲೆಯ ವಾತಾವರಣವು ಹೆಚ್ಚಾಗಲಿದೆ.
ಮಳೆ ಸೂಚನೆ ಇದ್ಯಾ?
ರಾಜ್ಯದ ಬಹುತೇಕ ಕಡೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಇದರ ಹೊರತಾಗಿಯೂ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಕೊಡಗು, ಹಾಸನದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಜತೆಗೆ ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
ರಾಜಧಾನಿ ಬೆಂಗಳೂರಲ್ಲಿ ಮತ್ತೆ ತಾಪಮಾನ ಏರಿಕೆ
ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ ಏರಿಕೆ ಆಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ನಿರ್ಮಲ ಆಕಾಶ ಇರಲಿದ್ದು, ಗರಿಷ್ಠ ಉಷ್ಣಾಂಶವು 39ರ ಗಡಿ ದಾಟಲಿದೆ. ಜತೆಗೆ ಆಗಾಗ ಗಾಳಿ ವೇಗವು ಇರಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ