ಚಿಕ್ಕಮಗಳೂರು/ಹಾಸನ/ಬೆಂಗಳೂರು: ಮಂಗಳವಾರ ಮಧ್ಯಾಹ್ನ ಚಿಕ್ಕಮಗಳೂರು ನಗರದಲ್ಲಿ ಧಾರಾಕಾರ ಮಳೆಯಾಗಿದೆ. ಭಾರಿ ಆಲಿಕಲ್ಲು ಮಳೆಗೆ ಚಿಕ್ಕಮಗಳೂರು ನಗರ ನಿವಾಸಿಗಳು ಥಂಡಾ ಹೊಡೆದಿದ್ದಾರೆ. ಮಳೆಯಿಲ್ಲದೆ ಕಾದ ಕಾವಲಿಯಂತಾಗಿದ್ದ ಕಾಫಿನಾಡಿನಲ್ಲಿ ಕಳೆದೊಂದು ಗಂಟೆಯಿಂದ ಭಯಂಕರ ಮಳೆ ಸುರಿಯುತ್ತಿದೆ.
ರಸ್ತೆಯಲ್ಲಿ ಅರ್ಧ ಅಡಿ ಎತ್ತರದಲ್ಲಿ ನೀರು ಹರಿಯುತ್ತಿದೆ. 41 ಡಿಗ್ರಿ ತಲುಪುತ್ತಿದ್ದ ಬಿಸಿಲ ತಾಪಮಾನಕ್ಕೆ ಜನ ಹೈರಾಣಾಗಿದ್ದರು. ಧಾರಾಕಾರ ಮಳೆ ಕಂಡು ರೈತರು, ಬೆಳೆಗಾರರು ಸಂತಸಗೊಂಡರು. ಇನ್ನೂ ಆಲಿಕಲ್ಲು ಕೈಯಲ್ಲಿ ಹಿಡಿದು ಖುಷಿ ಪಟ್ಟರು.
ಹಾಸನದಲ್ಲೂ ಧಾರಾಕಾರ ಮಳೆ
ಹಾಸನ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಹಾಸನ, ಹೊಳೆನರಸೀಪುರ, ಅರಸೀಕೆರೆ ಭಾಗಗಳಲ್ಲಿ ಭಾರಿ ಗಾಳಿಯೊಂದಿಗೆ ಗುಡುಗು, ಸಿಡಿಲು ಸಹಿತ ಮಳೆ ಸುರಿಯುತ್ತಿದೆ. ಅರಸೀಕೆರೆಯಲ್ಲಿ ಆಲಿಕಲ್ಲು ಸಹಿತ ಮಳೆಯಾಗುತ್ತಿದೆ. ಜೋರಾಗಿ ಆಲಿಕಲ್ಲು ಬೀಳುತ್ತಿರುವುದರಿಂದ ಸವಾರರು ಬೈಕ್ ನಿಲ್ಲಿಸಿ ರಸ್ತೆ ಬದಿ ನಿಲ್ಲುವಂತಾಯಿತು. ಬಿಸಿಲಿನಿಂದ ಕಂಗಾಲಾಗಿದ್ದ ಜನತೆಗೆ ವರುಣ ತಂಪೆರೆದಿದ್ದಾನೆ.
ಇದನ್ನೂ ಓದಿ: Karnataka Rains: ಮಳೆಗೆ ಮರ ಬಿದ್ದು ಮಂಡ್ಯದಲ್ಲಿ ವ್ಯಕ್ತಿ ಸಾವು, ಬೆಂಗಳೂರಲ್ಲಿ ಟೆಕ್ಕಿ ಬೆನ್ನು ಮೂಳೆ ಮುರಿತ
ಮಂಗಳವಾರ ಸಂಜೆಗೆ ಲಘು ಮಳೆ ಎಚ್ಚರಿಕೆ
ಮೇ 7ರ ಸಂಜೆಗೆ ದಕ್ಷಿಣ ಕನ್ನಡ, ಕೊಡಗು, ಮಂಡ್ಯ, ಮೈಸೂರು ಸೇರಿದಂತೆ ತುಮಕೂರು, ಉಡುಪಿಯಲ್ಲಿ ಗುಡುಗು ಸಹಿತ ಲಘು ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಬೆಂಗಳೂರಲ್ಲಿ ಗುಡುಗು, ಮಿಂಚು ಸಹಿತ ಗಾಳಿ ಮಳೆ
ಬೆಂಗಳೂರು ನಗರ ಮತ್ತು ಸುತ್ತಮುತ್ತ ಮುಂದಿನ 24 ಗಂಟೆಯಲ್ಲಿ ಮುಂಜಾನೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಪ್ರದೇಶಗಳಲ್ಲಿ ಸಂಜೆ/ರಾತ್ರಿಯ ಸಮಯದಲ್ಲಿ ಗುಡುಗು ಮಿಂಚು ಜತೆಗೆ ಮಳೆಯಾಗಲಿದೆ. ಈ ವೇಳೆ ಗಾಳಿ ವೇಗವು 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 35 ಮತ್ತು 22 ಡಿ.ಸೆ ಇರಲಿದೆ.
ಇನ್ನೂ ಕೊಡಗು, ಮೈಸೂರು, ಮಂಡ್ಯ, ಹಾಸನ, ಕೋಲಾರ, ಬೆಂಗಳೂರು ನಗರ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಭಾರೀ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು ಮತ್ತು ಕೆಲವು ಸ್ಥಳಗಳಲ್ಲಿ ಬಿರುಗಾಳಿ ಸಹಿತ (ಗಂಟೆಗೆ 40-50 ಕಿಮೀ) ಹಗುರದಿಂದ ಶುರುವಾಗಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ವಿಜಯನಗರ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಬಿರುಗಾಳಿ ಸಹಿತ (30-40 ಕಿಮೀ) ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ