ಕೋಲಾರ/ಬೆಂಗಳೂರು: ಭಾನುವಾರ ಕೋಲಾರ ಜಿಲ್ಲೆಯ ಹಲವು ಕಡೆ ಗುಡುಗು ಸಹಿತ (rain News) ಮಳೆಯಾಗಿದೆ. ಮಧ್ಯಾಹ್ನ 3 ಗಂಟೆಗೆ ಶುರುವಾದ ಮಳೆಗೆ (Karnataka Weather Forecast) ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬಿಟ್ಟುಬಿಡದೆ ಸುರಿದ ಮಳೆಗೆ ಕೃಷಿ ಚಟುವಟಿಕೆಗಳು ಸ್ಥಗಿತವಾಗಿದ್ದವು. ಮುಳಬಾಗಲು, ಕೋಲಾರದಲ್ಲಿ ಅತಿ ಹೆಚ್ಚು ಮಳೆಯಿಂದಾಗಿ ತೋಟದ ಬೆಳೆಗಳಿಗೆ ಹಾನಿಯಾಗಿತ್ತು. ಮಳೆಯಿಂದ ಮಾವು, ಟೊಮೊಟೊ ಬೆಳೆಗಾರರಿಗೆ ಸಂಕಷ್ಟ ಎದುರಾಯಿತು.
ಇತ್ತ ರಾಜಧಾನಿ ಬೆಂಗಳೂರಿನಲ್ಲೂ ಮಳೆಯಾಗಿದೆ. ಬನಶಂಕರಿ, ಕುಮಾರಸ್ವಾಮಿ ಲೇಔಟ್, ಎಳಚೇನಹಳ್ಳಿ, ಉತ್ತರಹಳ್ಳಿ, ಪದ್ಮನಾಭ ನಗರ ಸುತ್ತಮುತ್ತ ಮಳೆಯಾಗಿದ್ದರಿಂದ ವಾಹನ ಸವಾರರಿಗೆ ಅನಾನುಕೂಲ ಉಂಟಾಯಿತು. ದಿಢೀರ್ ಮಳೆಗೆ ಜನರು ಬಸ್ ನಿಲ್ದಾಣ, ಅಂಗಡಿಗಳನ್ನು ಆಶ್ರಯಿಸಿದರು.
ಇನ್ನೂ ಶನಿವಾರ ದಕ್ಷಿಣ ಒಳನಾಡು ಹಾಗೂ ಕರಾವಳಿ, ಉತ್ತರ ಒಳನಾಡಿನ ಹಲವೆಡೆ ಮಳೆಯಾಗಿರುವ ವರದಿ ಆಗಿದೆ. ಮಂಡ್ಯದ ಹೊನಕೆರೆಯಲ್ಲಿ 8 ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ ಗರಿಷ್ಟ ಉಷ್ಣಾಂಶ 40.3 ಡಿ.ಸೆ ದಾಖಲಾಗಿದೆ.
ಇದನ್ನೂ ಓದಿ: Karnataka Rain : ವೀಕೆಂಡ್ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ
ಬೆಂಗಳೂರು ಸೇರಿ ದಕ್ಷಿಣ ಒಳನಾಡು ಆವರಿಸಿದ ಮುಂಗಾರು
ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಕರ್ನಾಟಕದ ಬಹುತೇಕ ಭಾಗವನ್ನು ಮುಂಗಾರು ಆವರಿಸಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಗದಗ, ರಾಯಚೂರು, ಯಾದಗಿರಿ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯೊಂದಿಗೆ ಗುಡುಗು ಸಹಿತ ಗಾಳಿಯು 30-40 ಕಿ.ಮೀ ವೇಗದಲ್ಲಿ ಬೀಸಲಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ದಾವಣಗೆರೆ, ಕೊಡಗು, ಕೋಲಾರ ಸೇರಿದಂತೆ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಉಳಿದಂತೆ ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ , ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ.
ತಾಪಮಾನದ ಮುನ್ಸೂಚನೆ
ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದ ಒಳನಾಡಿನಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್‌ನಿಂದ ಕ್ರಮೇಣ ಕಡಿಮೆಯಾಗುವ ಸಾಧ್ಯತೆಯಿದೆ.
ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ
ಬೆಂಗಳೂರು ನಗರ ಮತ್ತು ಸುತ್ತಮುತ್ತ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಗುಡುಗು ಸಹಿತ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 20 ಡಿ.ಸೆ ಇರಬಹುದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ