ಚಿಕ್ಕಮಗಳೂರು/ಬೆಂಗಳೂರು: ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಗಾಳಿ ಸಹಿತ ಭಾರಿ (Heavy Rain) ಮಳೆಯಾಗುತ್ತಿದೆ. ಮಂಗಳವಾರ ಸಂಜೆ ಶುರುವಾದ ಮಳೆಯು ಕಳೆದ ಒಂದು ಗಂಟೆಗೂ ಹೆಚ್ಚು ಸಮಯದಿಂದ ಸುರಿಯುತ್ತಿದೆ. ಶೃಂಗೇರಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನಲ್ಲಿ ಧಾರಕಾರ ಮಳೆಯಾಗುತ್ತಿದ್ದು, ಪ್ರವಾಸಿಗರು ಹಾಗೂ ಜನ-ಜೀವನ ಅಸ್ತವ್ಯಸ್ತವಾಗಿತ್ತು. ಇನ್ನೂ ಗಾಳಿ ಮಳೆಗೆ ಶೃಂಗೇರಿ ತಾಲೂಕಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸತತ ಮಳೆಯಿಂದಾಗಿ (Rain News) ತುಂಗಾ ನದಿ ಹರಿವು ಕೊಂಚ ಏರಿಕೆಯಾಗುವ (Karnataka weather Forecast) ಸಾಧ್ಯತೆ ಇದೆ.
ಉತ್ತರಕನ್ನಡದಲ್ಲೂ ವರುಣಾರ್ಭಟ
ಉತ್ತರಕನ್ನಡದ ಘಟ್ಟದ ಮೇಲಿನ ತಾಲೂಕುಗಳಲ್ಲೂ ವರುಣಾರ್ಭಟ ಜೋರಾಗಿದೆ. ಶಿರಸಿ, ಸಿದ್ದಾಪುರ ಭಾಗದಲ್ಲೂ ಭಾರೀ ಗಾಳಿ ಸಹಿತ ಮಳೆಯಾಗುತ್ತಿದೆ. ಶಿರಸಿಯಲ್ಲಿ ಭಾರೀ ಮಳೆಗೆ ಮರಗಳು ಧರೆಗುರುಳಿದೆ. ನಗರದ ಸಹ್ಯಾದ್ರಿ ಕಾಲೋನಿಯಲ್ಲಿ ಮರ ಬಿದ್ದು, ವಿದ್ಯುತ್ ಕಂಬ ಮುರಿದು ರಸ್ತೆ ಸಂಪೂರ್ಣ ಬ್ಲಾಕ್ ಆಗಿದೆ. ಹತ್ತಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಕುಮಟಾ ತಾಲೂಕಿನ ವಿವಿಧೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಬಿಸಿಲಿಗೆ ಕಾದಿದ್ದ ಇಳೆಗೆ ವರುಣ ತಂಪೆರೆದಿದ್ದಾನೆ. ಅರ್ಧ ಗಂಟೆಗೂ ಅಧಿಕ ಕಾಲ ಧಾರಾಕಾರ ಮಳೆಯಾಗಿದೆ. ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಮಳೆಯಾದರೂ ಕರಾವಳಿಗೆ ವರುಣ ಕಾಲಿಟ್ಟಿರಲಿಲ್ಲ. ಇದೀಗ ವರುಣಾಗಮನದಿಂದ ಕರಾವಳಿ ಜನತೆ ಖುಷಿಯಾಗಿದ್ದಾರೆ. ಭಟ್ಕಳ, ಹೊನ್ನಾವರ, ಅಂಕೋಲಾ, ಕಾರವಾರ ಭಾಗದಲ್ಲಿ ಮೋಡ ಕವಿದ ವಾತಾವರಣವಿದೆ.
ಧಾರವಾಡದಲ್ಲಿ ಮಳೆಯ ಅಬ್ಬರ
ಧಾರವಾಡದಲ್ಲಿ ಮಂಗಳವಾರ ಬೆಳಗ್ಗೆನಿಂದಲ್ಲೂ ಮೋಡ ಕವಿದ ವಾತಾವರಣವಿತ್ತು. ಇಳಿ ಸಂಜೆಯಾಗುತ್ತಿದ್ದಂತೆ ಧಾರವಾಡ ನಗರಕ್ಕೆ ವರುಣನ ಆಗಮನವಾಗಿದೆ. ಕಳೆದ ಎರಡು ದಿನಗಳ ಹಿಂದೆ ಸುರಿದಿದ್ದ ಮಳೆಯು ಸ್ವಲ್ಪ ಸಮಯ ಬ್ರೇಕ್ ಕೊಟ್ಟಿತ್ತು. ಇಂದು ಮತ್ತೆ ಮಳೆ ಸುರಿದಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಇದನ್ನೂ ಓದಿ: Karnataka Rain: ಮಿಡ್‌ನೈಟ್ ಮಳೆ ಅವಾಂತರ; ಮರಗಳು, ವಿದ್ಯುತ್ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ
ಮೇ 18ರ ವರೆಗೆ ಮಳೆ ಸಾಧ್ಯತೆ
ಮೇ 18ರ ವರೆಗೆ ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ತಜ್ಞರು ನೀಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲವು ಕಡೆ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ಮಳೆಯಾಗಲಿದೆ.
ಕೊಡಗು, ಮೈಸೂರು, ಮಂಡ್ಯದ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿ (40-50 ಕಿಮೀ)ಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹಾಸನ, ಚಾಮರಾಜನಗರದಲ್ಲಿ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಕನ್ನಡ, ಧಾರವಾಡ, ಗದಗ, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (40-50 kmph) ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ ಜಿಲ್ಲೆಯಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಒಣ ಹವೆ ಹೆಚ್ಚಾಗುವ ಸಾಧ್ಯತೆ ಇದೆ.
ಶ್ರೀರಂಗಪಟ್ಟಣದಲ್ಲಿ 16 ಸೆಂ.ಮೀ ಮಳೆ
ನಿನ್ನೆ ಸೋಮವಾರ (ಮೇ 13) ರಾಜ್ಯಾದ್ಯಂತ ಮಳೆಯಾಗಿದ್ದು, ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಶ್ರೀರಂಗಪಟ್ಟಣದಲ್ಲಿ 16 ಸೆಂ.ಮೀ ಮಳೆಯಾಗಿದ್ದು, ಮಂಡ್ಯದ ಪಿಟಿಒನಲ್ಲಿ 9 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ. ಶಿರಾಳಿಯಲ್ಲಿ ಗರಿಷ್ಠ ಉಷ್ಣಾಂಶ 38.4 ಡಿ.ಸೆನಷ್ಟು ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ