Site icon Vistara News

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Karnataka weather Forecast

ಬೆಂಗಳೂರು : ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗಲಿದ್ದು, ರಾಜ್ಯಾದ್ಯಂತ ಪ್ರತ್ಯೇಕ ಕಡೆಯಲ್ಲಿ ಭಾರಿ ಮಳೆಯಾಗುವ (Heavy Rain) ಸಾಧ್ಯತೆಯಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮಿಂಚು ಮತ್ತು 30-40 ಕಿ.ಮೀ ವ್ಯಾಪ್ತಿಯಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು (Rain News) ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ತುಮಕೂರು, ರಾಮನಗರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ. ಉಳಿದ ಉಳಿದ ಭಾಗಗಳಲ್ಲಿ ಹಗುರ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಅನುಕ್ರಮವಾಗಿ 33 ಮತ್ತು 23 ಡಿ.ಸೆ ಇರಲಿದೆ.

ಉತ್ತರ ಒಳನಾಡಿನ ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇತರ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ಇರಲಿದೆ. ಮಲೆನಾಡಿನ ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಇಲ್ಲೆಲ್ಲ ಭಯಂಕರ ಮಳೆ

ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಏಳು ಜಿಲ್ಲೆಗಳಲ್ಲಿ ಭಾರೀ ಮಳೆಯೊಂದಿಗೆ ಗುಡುಗು ಮತ್ತು ಗಂಟೆಗೆ 40-50 ಕಿ.ಮೀ ವ್ಯಾಪ್ತಿಯಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಇದನ್ನೂ ಓದಿ: Murder Case : ತಂಗಿಯನ್ನು ಬೈಕ್‌ನಲ್ಲಿ ಸುತ್ತಾಡಿಸುತ್ತಿದ್ದವನನ್ನು ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಕೊಂದ

ಕೊಟ್ಟೂರು ಬಸ್ ಸ್ಟ್ಯಾಂಡ್‌ನಲ್ಲಿ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

ವಿಜಯನಗರದ ಕೊಟ್ಟೂರು ಪಟ್ಟಣದಲ್ಲಿ ಸುರಿದ ಭಾರಿ ಮಳೆಗೆ (Heavy Rain) ಕೊಟ್ಟೂರು ಬಸ್ ನಿಲ್ದಾಣ ಸಂಪೂರ್ಣ ಜಲಾವೃತ ಆಗಿತ್ತು. ಈ ವೇಳೆ ಬಸ್ ನಿಲ್ದಾಣ ಬಳಿಯ ದೊಡ್ಡ ಚರಂಡಿಗೆ ರಭಸವಾಗಿ ಮಳೆ ನೀರು ಹರಿದು ಹೋಗುತ್ತಿತ್ತು. ಅದೇ ಚರಂಡಿ ಪಕ್ಕದಲ್ಲಿ ನಿಧಾನವಾಗಿ ನಡೆದುಕೊಂಡು ಬರುವಾಗ ತಾಯಿ -ಮಗ ಇಬ್ಬರು ಆಯ ತಪ್ಪಿ ಬಿದ್ದಿದ್ದಾರೆ. ಒಂದು ಕೈಯಲ್ಲಿ ಮಗ, ಇನ್ನೊಂದು ಕೈಯಲ್ಲಿ ಲಗೇಜ್‌ ಹಿಡಿದು ಬರುವಾಗ ಬಿದ್ದಿದ್ದರು.

ಈ ಸಂದರ್ಭದಲ್ಲಿ ಆಚೆ – ಇಚೆ ಹೆಜ್ಜೆ ಇಟ್ಟಿದ್ದರೂ ಚರಂಡಿ ನೀರಲ್ಲಿ ಕೊಚ್ಚಿ ಹೋಗುತ್ತಿದ್ದರು. ಕೊಟ್ಟೂರು ಬಸ್ ನಿಲ್ದಾಣದಲ್ಲಿ ತಾಯಿ – ಮಗುವಿನ ಪರದಾಟದ ವಿಡಿಯೋ ಅಲ್ಲಿದ್ದ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿತ್ತು.

Karnataka Weather Forecast

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯೇ ಸರ್ಕಾರಿ ಆಸ್ಪತ್ರೆ ಇದೆ. ನೂರಾರು ಜನರು ಇದೇ ಮಾರ್ಗದಲ್ಲಿ ಓಡಾಡುತ್ತಾರೆ. ಬಾಯ್ತೆರೆದಿರುವ ದೊಡ್ಡ ಚರಂಡಿ ಬಲಿಗಾಗಿ ಕಾಯುತ್ತಿದೆ. ಇದನ್ನೂ ಮುಚ್ಚಿಸಿಬೇಕಿದ್ದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು.

ಇತ್ತ ಕೊಟ್ಟೂರು ಬಸ್ ನಿಲ್ದಾಣದಲ್ಲಿ ಮಳೆಯಿಂದ ಅವಾಂತರದ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಸ್ಥಳಕ್ಕೆ ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್ ನಾಯಕ್, ವಿಜಯನಗರ ಡಿಸಿ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್ ನಿಲ್ದಾಣ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳ ವೀಕ್ಷಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version