Site icon Vistara News

Karnataka Weather : ಎತ್ತಿನ ಬಂಡಿಯಲ್ಲಿ ಬರುವಾಗ ಸಿಡಿಲು ಬಡಿದು ಬಾಲಕ ಸಾವು; ಭಾರಿ ಮಳೆಗೆ ನಲುಗಿದ ಜನರು

Karnataka Weather Forecast

ಬೆಂಗಳೂರು: ಉತ್ತರ ಒಳನಾಡು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ (Rain News) ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಶನಿವಾರ ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ವರುಣನ ಆರ್ಭಟಕ್ಕೆ (Karnataka Weather Forecast) ಜನರು ತತ್ತರಿಸಿ ಹೋಗಿದ್ದಾರೆ. ನರೋಣಾ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಮೃತಪಟ್ಟಿದ್ದಾನೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ನರೋಣ ಗ್ರಾಮ ಘಟನೆ ನಡೆದಿದೆ. ಜಮೀನಿನಿಂದ ಎತ್ತಿನ ಬಂಡಿಯಲ್ಲಿ ಮನೆಗೆ ವಾಪಾಸು ಬರುವಾಗ ಸಿಡಿಲು ಬಡಿದಿದೆ. ಸಿಡಿಲಿನ ಹೊಡೆತಕ್ಕೆ ಮಹೇಶ್ (10) ಎಂಬಾತ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ನರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೀದರ್‌ನಲ್ಲಿ ಗುಡುಗು ಸಹಿತ ಸುರಿದ ಭಾರಿ ಮಳೆಗೆ ನೆಹರು ಕ್ರೀಡಾಂಗಣವು ಕೆರೆಯಂತಾಗಿತ್ತು. ಕ್ರೀಡಾಂಗಣದ ಒಳಗೆ ಶೇ.70ರಷ್ಟು ಜಾಗ ಜಲಾವೃತವಾಗಿದೆ. ಒಳಚರಂಡಿ ವ್ಯವಸ್ಥೆ ಹಾಳಾದ ಹಿನ್ನೆಲೆಯಲ್ಲಿ ಸ್ಟೇಡಿಯಂವೊಳಗೆ 3-4 ಅಡಿ ನೀರು ಸಂಗ್ರಹವಾಗಿದೆ. ಮುಂಜಾನೆ ಹೊತ್ತು ಹಲವರು ನೆಹರು ಕ್ರೀಡಾಂಗಣಕ್ಕೆ ಬಂದು ವಾಕಿಂಗ್‌ ಮಾಡುತ್ತಿದ್ದರು. ಇದೀಗ ಆವರಣವೆಲ್ಲವೂ ನೀರುಮಯವಾದ ಕಾರಣಕ್ಕೆ ಕೂಡಲೇ ಒಳಚರಂಡಿ ವ್ಯವಸ್ಥೆ ಸರಿಪಡಿಸಿ ಎಂದು ಸಾರ್ವಜನಿಕರ ಆಕ್ರೋಶ ಹೊರಹಾಕಿದರು.

ಹಾವೇರಿ ಜಿಲ್ಲೆಯಲ್ಲೂ ಗುಡುಗು ಸಹಿತ ಮಳೆಯ ಅಬ್ಬರವಿತ್ತು. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹೊವಿನಶಿಗ್ಲಿ ಗ್ರಾಮದಲ್ಲಿ ತೆಂಗಿನ ಗಿಡಕ್ಕೆ ಸಿಡಿಲು ಬಡಿದು ತೆಂಗಿನಮರ ಹೊತ್ತಿ ಉರಿದಿತ್ತು. ಗುಡುಗಿನ ಹೊಡೆತಕ್ಕೆ ಹೊವಿನಶಿಗ್ಲಿ ಗ್ರಾಮದಲ್ಲಿ ಮನೆಯಲ್ಲಿರುವ ಹೋಂ ಥೆಟರ್ ಪುಡಿ ಪುಡಿಯಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ‌ ಸಂಭವಿಸಿಲ್ಲ.

ಇದನ್ನೂ ಓದಿ: Rain News : ಶುರುವಾಯ್ತು ಮಳೆ ಅವಘಡ; ಮಲಗಿದ್ದಾಗ ಚಾವಣಿ ಕುಸಿದು ಮಹಿಳೆ ಸಾವು

ಇನ್ನು ಯಾದಗಿರಿ ನಗರದಲ್ಲಿ ಶನಿವಾರ ಸುರಿದ ಅರ್ಧ ಗಂಟೆ ಮಳೆಗೆ ಪಿಡಬ್ಲ್ಯೂಡಿ ಕಚೇರಿ ಆವರಣದೊಳಗೆ ನೀರು ನುಗ್ಗಿತ್ತು. ಇದರಿಂದಾಗಿ ಕಚೇರಿಯೊಳಗೆ ಓಡಾಡಲು ಪರದಾಡಬೇಕಾಯಿತು. ಬಿಸಿಲ ನಗರಿ ಕಲಬುರಗಿಯಲ್ಲಿ ಬಿರುಗಾಳಿ ‌ಸಹಿತ ಭಾರಿ ಮಳೆಯಾಗಿದೆ. ಬಿಸಿಲ‌ ಬೇಗೆಗೆ ಬೆಂದಿದ್ದ ಜನತೆಗೆ ಮಳೆರಾಯ ತಂಪೇರಿದಿದ್ದ. ಭಾರಿ ಬಿರುಗಾಳಿಗೆ ಮರ ಧರೆಗುರುಳಿದ್ದವು.

ಬೆಂಗಳೂರು ಗ್ರಾಮಾಂತರಕ್ಕೆ ಕಾಲಿಟ್ಟ ಮಳೆರಾಯ

ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲ್ಲೂಕಿನಾದ್ಯಂತ ಮಳೆಯಾಗಿದೆ. ಬಿಸಿಲಿನ ಬೇಗೆಗೆ ಕಂಗೆಟ್ಟಿದ್ದ ಜನಕ್ಕೆ ಮಳೆಯು ನಿಟ್ಟುಸಿರುವ ಬಿಡುವಂತೆ ಮಾಡಿತ್ತು. ಆನೇಕಲ್, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ಭಾಗದಲ್ಲಿ ಮಳೆಯಾಗಿತ್ತು. ವರ್ಷದ ಮೊದಲ ಮಳೆ ಕಂಡು ಜನರು ಫುಲ್ ಖುಷ್ ಆದರು.

ಭಾರಿ ಮಳೆ ಎಚ್ಚರಿಕೆ

ದಕ್ಷಿಣ ಒಳನಾಡಿನ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಲಬುರಗಿ, ಬೀದರ್, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳು ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಮುಂದಿನ 24 ಗಂಟೆಯಲ್ಲಿ ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿ ಸಮಯದಲ್ಲಿ ಪ್ರತ್ಯೇಕ ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 34 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version