Site icon Vistara News

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Karnataka Weather Forecast Heavy rain in chikkmagalur

ಚಿಕ್ಕಮಗಳೂರು/ಬೆಂಗಳೂರು: ಭಾನುವಾರ ರಾಜ್ಯದ ವಿವಿಧೆಡೆ ವರುರ್ಣಾಭಟ (Karnataka Weather Forecast) ಜೋರಾಗಿದೆ. ಚಿಕ್ಕಮಗಳೂರಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಜೋರಾಗಿ ಸುರಿದ ಮಳೆಗೆ ಬೃಹತ್‌ ಗಾತ್ರದ ಮರವೊಂದು ರಸ್ತೆ ಬದಿ ನಡೆದು ಹೋಗುತ್ತಿದ್ದ ಮಹಿಳೆಯ ಮೇಲೆ ಬಿದ್ದಿದೆ. ಮರದ ಅಡಿ ಸಿಲುಕಿದ ಮಹಿಳೆ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಸವಿತಾ (48) ಮೃತ ದುರ್ದೈವಿ. ಚಿಕ್ಕಮಗಳೂರಿನ ಎನ್‌ಆರ್‌ ಪುರ ‌ತಾಲೂಕಿನ ಕಟ್ಟಿಮನಿ ಗ್ರಾಮದ ಬಳಿ ಘಟನೆ ನಡೆದಿದೆ.

ಇದೇ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ‌ಕಾರಿನ ಮೇಲೂ ಮರ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ‌ ಮೂವರು ಗಂಭೀರ ಗಾಯಗೊಂಡಿದ್ದಾರೆ. ಮರ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳೀಯರು ಗಾಯಾಳುಗಳ ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಎನ್ ಆರ್ ಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇನ್ನೂ ಮಳೆಯ (Rain News) ಅವಾಂತರಕ್ಕೆ ಜನರು ಕಂಗಲಾಗಿದ್ದಾರೆ. ಚಿಕ್ಕಮಗಳೂರು ಮಲೆನಾಡಿನ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಚಿಕ್ಕಮಗಳೂರು ತಾಲೂಕಿನ ಶಿರವಾಸೆ, ಮುತ್ತೋಡಿ, ಮಲಂದೂರು ಸುತ್ತಮುತ್ತ ಗುಡುಗು, ಸಿಡಿಲು ಬಿರುಗಾಳಿ ಸಹಿತ ನಿರಂತರ ಮಳೆಯಾಗುತ್ತಿದೆ. ಶಿರವಾಸೆ ಗ್ರಾ.ಪಂ ವ್ಯಾಪ್ತಿಯ ಹತ್ತಾರು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಕೂಲಿ ಕಾರ್ಮಿಕರು ಪರದಾಟ ಅನುಭವಿಸುತ್ತಿದ್ದಾರೆ. ಇತ್ತ ನಿರಂತರ ಮಳೆಯಿಂದಾಗಿ ರೈತರು, ಕಾಫಿ ಬೆಳೆಗಾರರಲ್ಲಿ ಸಂತಸ ಮೂಡಿದೆ. ಕಾಫಿನಾಡ ಬಯಲುಸೀಮೆ ಭಾಗದಲ್ಲೂ ಧಾರಾಕಾರ ಮಳೆಯಾಗಿದೆ. ಕಳೆದೊಂದು ಗಂಟೆಯಿಂದ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಬಯಲು ಸೀಮೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ತರೀಕೆರೆ, ಅಜ್ಜಂಪುರ ತಾಲೂಕಿನ ಹಲವು ಭಾಗಗಳಲ್ಲೂ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ನಗರದ ಕೋಟೆ, ಹಿರೇಮಗಳೂರು, ಜಯನಗರ ಶಂಕರಪುರ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕಳಸಾಪುರ, ಬೆಳವಾಡಿ, ಮರ್ಲೆ, ತಿಳಿದಂತೆ ಹಲವು ಗ್ರಾಮಗಳಲ್ಲಿ ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ.

ಬೆಂಗಳೂರಲ್ಲೂ ಮಳೆ ಮೋಡಿ

ವೀಕೆಂಡ್‌ ಮೂಡ್‌ನಲ್ಲಿದ್ದ ಸಿಟಿ ಮಂದಿಗೆ ಮಳೆಯು ಮೋಡಿ ಮಾಡಿದೆ. ಬೆಂಗಳೂರಿನ ಉಲ್ಲಾಳ, ನಾಗರಬಾವಿ, ವಿಜಯನಗರ, ಶೇಷಾದ್ರಿಪುರಂ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಇತ್ತ ಕೆಲ ರಸ್ತೆಗಳಲ್ಲಿ ನೀರು ನಿಂತು ಕೆರೆಯಂತಾಗಿದೆ. ಪಾದಾಚಾರಿಗಳು ರಸ್ತೆ ದಾಟಲು ಆಗದೆ ಪರದಾಡುವಂತಾಗಿದೆ.

ಇದನ್ನೂ ಓದಿ: Karnataka Rain: ಸಿಡಿಲಾಘಾತಕ್ಕೆ ಕುರಿಗಳು ಬಲಿ; ಮೇವಿನ ಬಣವೆ ಭಸ್ಮ, ಮನೆಗಳಿಗೆ ಹಾನಿ

ಹುಬ್ಬಳ್ಳಿಯಲ್ಲಿ ಮಳೆ ಅವಾಂತರಕ್ಕೆ ಬೈಕ್‌ಗಳಿಗೆ ಹಾನಿ

ಹುಬ್ಬಳ್ಳಿಯಲ್ಲಿ ನಿನ್ನೆ ಶನಿವಾರ ಸುರಿದ ಮಳೆಯಿಂದ ಅವಾಂತರ‌ವೇ ಸೃಷ್ಟಿಯಾಗಿದೆ. ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿದ್ದ 40ಕ್ಕೂ ಹೆಚ್ಚು ಬೈಕ್‌ಗಳಿಗೆ ಹಾನಿಯಾಗಿದೆ. ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಬೇಸ್ಮೇಂಟ್‌ನಲ್ಲಿ ಮಳೆ ನೀರು ನುಗ್ಗಿದ್ದು, ತಡೆಗೋಡೆ ಕುಸಿದು ಕೆಲವು ಬೈಕ್‌ಗಳಿಗೆ ಹಾನಿಯಾಗಿದೆ. ಕಾಂಪ್ಲೆಕ್ಸ್‌ ಸಿಬ್ಬಂದಿ ಮೆಕ್ಯಾನಿಕಲ್ ಕರೆದುಕೊಂಡು ಬಂದು ಬೈಕ್ ರೀಪೇರಿ ಮಾಡಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ‌ದಲ್ಲಿ ನೆಲಕಚ್ಚಿದ ಪಪ್ಪಾಯಿ ಬೆಳೆ

ಮಳೆಯ ಆರ್ಭಟಕ್ಕೆ ಎರಡು ಎಕರೆ ಪಪ್ಪಾಯಿ ಬೆಳೆ ನೆಲಕಚ್ಚಿದೆ. ಕಟಾವಿಗೆ ಬಂದಿದ್ದ ಪಪ್ಪಾಯಿ‌ ಬೆಳೆ ಮಣ್ಣುಪಾಲಾಗಿದೆ, ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ದೇವರಗುಡಿಪಲ್ಲಿ ಗ್ರಾಮದ ವೆಂಕಟಶಿವಪ್ಪ ಎಂಬುವರಿಗೆ ಸೇರಿದ ಪಪ್ಪಾಯಿ ಬೆಳೆ ಕೊಯ್ಲಿಗೆ ಬಂದಿತ್ತು. ಇದೀಗ ಗುಡುಗು‌ ಸಿಡಿಲು ಸಮೇತ ಸುರಿದ ಮಳೆಗೆ ಬೆಳೆ ನಾಶವಾಗಿದ್ದು, ರೈತ ಕಂಗಲಾಗಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಗೆ ಪರಿಹಾರ ನೀಡಿ ಎಂದು ಒತ್ತಾಯಿಸಿದ್ದಾರೆ.

ಮುಕ್ಕಾಲು ಕರ್ನಾಟಕಕ್ಕೆ ಆರೆಂಜ್‌ ಅಲರ್ಟ್‌

ರಾಜ್ಯಾದ್ಯಂತ ಮಳೆಯು ಅಬ್ಬರಿಸಲಿದ್ದು, ಮುಂದಿನ 24 ಗಂಟೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಹವಾಮಾನ ಇಲಾಖೆಯು 23 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌ ಹಾಗೂ 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿದೆ.

ಶಿವಮೊಗ್ಗ, ಕೊಡಗು, ಹಾಸನ ಹಾಗೂ ಮೈಸೂರು ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಭಾರಿ ಗಾಳಿ ಹಾಗೂ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಸೇರಿ ಕಲಬುರಗಿ, ವಿಜಯಪುರ, ಯಾದಗಿರಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಹಾಗೂ ಕೊಡುಗು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ. ಇನ್ನುಳಿದ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ರಾಜ್ಯದ ಕೆಲವು ಸ್ಥಳಗಳಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version