ಬೆಂಗಳೂರು: ಮೇ 22ರಂದು ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದ್ದು, ಉತ್ತರ ಒಳನಾಡು ಭಾಗದಲ್ಲಿ ವ್ಯಾಪಕವಾಗಿ ಹಗುರದಿಂದ ಮಧ್ಯಮ (rain News) ಮಳೆಯಾಗಲಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮಿಂಚಿನ ಜತೆಗೆ ಗಾಳಿ ವೇಗವು ಗಂಟೆಗೆ 30-40 ಕಿ.ಮೀ ಬೀಸುವ (Karnataka Weather Forecast) ಸಾಧ್ಯತೆಯಿದೆ.
ದಕ್ಷಿಣ ಒಳನಾಡಿನ ತುಮಕೂರು, ಮೈಸೂರು, ರಾಮನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಮಧ್ಯಮ ಮಳೆಯ ನಿರೀಕ್ಷೆ ಇದೆ. ಉಳಿದ ಭಾಗಗಳಲ್ಲಿ ವ್ಯಾಪಕವಾಗಿ ಹಗುರ ಕೂಡಿದ ಮಳೆಯಾಗಲಿದೆ. ಇನ್ನೂ ಉತ್ತರ ಒಳನಾಡಿನ ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ, ಧಾರವಾಡ, ಕೊಪ್ಪಳ, ಬೆಳಗಾವಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಮಲೆನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮಳೆಯು ಸಾಧಾರಣವಾಗಿದೆ. ರಾಜಧಾನಿ ಬೆಂಗಳೂರಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ 29 ಮತ್ತು 21 ಡಿ.ಸೆ ಇರಲಿದೆ.
ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಕರೆಂಟ್ ಕಟ್, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್; ಮರ ಬಿದ್ದರೂ ಪಾರಾದ ತಾಯಿ-ಮಗ
8 ಜಿಲ್ಲೆಗಳಲ್ಲಿ ಮಳೆ ರುದ್ರ ನರ್ತನ
ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ಕೊಡಗು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಶಿವಮೊಗ್ಗದಲ್ಲೂ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅದಷ್ಟು ಈ ಭಾಗದ ಜನರು ಮರದಡಿ ನಿಲ್ಲುವುದು, ಮಳೆ ಸಮಯದಲ್ಲಿ ವಾಹನ ಚಲಾಯಿಸುವುದನ್ನು ತಪ್ಪಿಸುವಂತೆ ಸಲಹೆ ನೀಡಲಾಗಿದೆ.
ಭಾರಿ ಮಳೆಗೆ ಕರೆಂಟ್ ಕಟ್, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್
ಬೆಂಗಳೂರು/ಚಿತ್ರದುರ್ಗ: ರಾಜ್ಯದ ಹಲವೆಡೆ ವರುಣಾರ್ಭಟಕ್ಕೆ ಅವಾಂತರವೇ (Karnataka Rain ) ಸೃಷ್ಟಿಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ (Karnataka weather) ಕರೆಂಟ್ ಕಟ್ ಆಗಿದ್ದು, ದೀಪದ ಬೆಳಕಿನಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ಆಸ್ಪತ್ರೆಯಲ್ಲಿ ಒಂದು ವಾರದಿಂದ ಜನರೇಟರ್ ಕೆಟ್ಟು ಹೋಗಿದ್ದು, ಸರಿಪಡಿಸದೇ ಅಧಿಕಾರಿಗಳು ಸುಮ್ಮನಾಗಿದ್ದಾರೆ. ಸೋಮವಾರ ರಾತ್ರಿ ಸುರಿದ ಮಳೆಯಿಂದ (rain News) ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ರೋಗಿಗಳಿಗೆ ಮೇಣದ ಬತ್ತಿ ಹಿಡಿದು ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ಕುಮಟಾದಲ್ಲಿ ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವರಹಕ್ಕಲ ಗ್ರಾಮದಲ್ಲಿ ಮಳೆಗೆ ಭಾರೀ ಗಾತ್ರದ ಮರ ಬಿದ್ದು ಮನೆಗೆ ಹಾನಿಯಾಗಿದೆ. ಲಲಿತಾ ನಾಯ್ಕ ಎಂಬುವವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಎದುರಿದ್ದ ಸ್ಕೂಟಿ ಜಖಂಗೊಂಡಿದೆ. ಮನೆಯ ಮುಂಭಾಗದ ಕೋಣೆಯ ಚಾವಣಿ ಹಾನಿಯಾಗಿದೆ. ಮರ ಬಿದ್ದ ಪರಿಣಾಮ ಸ್ಕೂಟಿ, ಮನೆ ಸೇರಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಮಗಳೂರಲ್ಲಿ ಕೆರೆ ಏರಿ ತುಂಡು
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರೆದಿದೆ. ಮಳೆಯ ಆರ್ಭಟಕ್ಕೆ ಕೆರೆಯ ಏರಿ ಹೊಡೆದು ನೀರು ಪೋಲಾಗಿದೆ. ಕಡೂರು ತಾಲೂಕಿನ ಗೌಡನ ಕಟ್ಟೆ ಗ್ರಾಮದಲ್ಲಿರುವ ಗೌಡನಕಟ್ಟೆ ಕೆರೆಯು ಕಳೆದ ಮೂರು ನಾಲ್ಕು ದಿನಗಳಿಂದ ಸುರಿದ ಮಳೆಗೆ ಭರ್ತಿಯಾಗಿದೆ. ಪರಿಣಾಮ ಕೆರೆ ಏರಿ ತುಂಡಾಗಿ ಪಿ ಕೋಡಿಹಳ್ಳಿ ಕೆರೆಗೆ ನೀರು ಹರಿವು ಹೆಚ್ಚಾಗಿದೆ. ಭಾರಿ ಪ್ರಮಾಣದ ನೀರಿನ ಒತ್ತಡ ತಡೆಯಲಾಗದೆ ಕೆರೆ ಏರಿ ಹಿಂಭಾಗದ ತೋಟ ಜಮೀನುಗಳು ಜಲಾವೃತಗೊಂಡಿತ್ತು.
ಕಾರುಗಳ ಮೇಲೆ ಬಿದ್ದ ಮರ; ಅಪಾಯದಿಂದ ಪಾರಾದ ತಾಯಿ-ಮಗ
ದಾವಣಗೆರೆ ಆಶೋಕ್ ಟಾಕೀಸ್ ಬಳಿ ಚಲಿಸುತ್ತಿದ್ದ ಕಾರುಗಳ ಮೇಲೆ ಮರವೊಂದು ಬಿದ್ದಿತ್ತು. ಪರಿಣಾಮ ಡಸ್ಟರ್ ಕಾರು ನಜ್ಜುಗುಜ್ಜಾಗಿತ್ತು. ಡಸ್ಟರ್ ಕಾರು ಚಾಲಕ ಹಾಗೂ ಮತ್ತೊಂದು ಕಾರಿನಲ್ಲಿದ್ದ ಚಿಕ್ಕ ಮಗು ಹಾಗು ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದರು. ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಕ್ರೇನ್ ಮೂಲಕ ಮರ ತೆರವು ಮಾಡಿದರು.
ದಾವಣಗೆರೆ ಜೆಲ್ಲೆಯ ಜಗಳೂರು ತಾಲೂಕಿನ ಗಡೆಮಾಕುಂಟೆ, ಭರಮಸಮುದ್ರ, ಮರಿಕಟ್ಟೆ, ತುಂಬಿನಕಟ್ಟೆ, ಕ್ಯಾಸೇನಹಳ್ಳಿ, ತಮ್ಮಲೇಹಳ್ಳಿ ಸೇರಿದಂತೆ ಬಹುತೇಕ ಕಡೆ ತಡ ರಾತ್ರಿ ಭರ್ಜರಿ ಮಳೆಯಾಗಿದೆ. ಇದರಿಂದಾಗಿ ಗಡೆಮಾಕುಂಟೆ ಹಾಗೂ ಭರಮಸಮುದ್ರ ಕೆರೆಗಳು ಭರ್ತಿಯಾಗಿವೆ. ಇನ್ನೂ ಖಾಲಿಯಾದ ಕೆರೆಯಲ್ಲಿ ನೀರು ಕಂಡು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ