Site icon Vistara News

Karnataka Weather: ಇನ್ನೂ 5 ದಿನ ಬಿಸಿಲಿನ ಟಾರ್ಚರ್‌; ಹೀಗಿದೆ ಕರ್ನಾಟಕದ ಮಳೆ ವೆದರ್!

Karnataka Weather Heavy sunshine for another 5 days Rain expected

ಬೆಂಗಳೂರು: ಮುಂದಿನ ಐದು ದಿನಗಳ ಕಾಲ ಅಂದರೆ ಏಪ್ರಿಲ್‌ 11ರವರೆಗೆ ಕರ್ನಾಟಕದಲ್ಲಿ ಭಾರಿ ಬಿಸಿಲಿನ ತಾಪ (Sunny temperature) ಇರಲಿದೆ. ಮುಂದಿನ 2 ದಿನಗಳಲ್ಲಿ ಕರ್ನಾಟಕದ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಸುಮಾರು 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ನಂತರದ 3 ದಿನ ರಾಜ್ಯದ ಒಳನಾಡಿನ ಕೆಲವು ಸ್ಥಳಗಳಲ್ಲಿ ಕ್ರಮೇಣ 2 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಉತ್ತರ ಒಳನಾಡಿನ ಬೀದರ್, ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರ, ಹಾವೇರಿ ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹೀಟ್‌ ವೇವ್‌ (ಉಷ್ಣ ಅಲೆ) ಹೆಚ್ಚಾಗುವ ಸಾಧ್ಯತೆಯಿದೆ. ಅಲ್ಲದೆ, ಮುಂದಿನ 2 ದಿನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಆರ್ದ್ರತೆಯ ಅಂಶಗಳು ಪರಿಣಾಮ ಬೀರಲಿದೆ. ಹಾಗೆಯೇ ಬೆಳಗಾವಿ, ಬೀದರ್, ಬಾಗಲಕೋಟೆ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ರಾತ್ರಿ ವೇಳೆ ಸೆಖೆಯು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಇನ್ನೊಂದು ವಾರ ಎಲ್ಲೆಲ್ಲಿ ಮಳೆ ಸಾಧ್ಯತೆ?

ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಭಾನುವಾರ ಹಾಗೂ ಸೋಮವಾರ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಇನ್ನು ಬೀದರ್, ಕಲಬುರಗಿ, ಕೊಡಗು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಅದೇ ರೀತಿಯಾಗಿ ಏಪ್ರಿಲ್‌ 12 ವರೆಗೆ ದಕ್ಷಿಣ ಕನ್ನಡ, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ವಿಜಯಪುರ, ಕೊಪ್ಪಳ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಕೊಡಗು, ಚಿತ್ರದುರ್ಗ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ವಿಜಯನಗರ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: Karnataka Weather: ಈ ಯುಗಾದಿವರೆಗೂ ಬೆಂಗಳೂರಲ್ಲಿ ಇಳಿಯಲ್ಲ ಟೆಂಪ್ರೇಚರ‍್ರು! ಹಬ್ಬದ ಬಳಿಕವೇ ಮಳೆ!

ಬೆಂಗಳೂರಲ್ಲಿ 37ರ ಗಡಿ ದಾಟಲಿದೆ ಗರಿಷ್ಠ ಉಷ್ಣಾಂಶ

ರಾಜಧಾನಿ ಬೆಂಗಳೂರಲ್ಲಿ ತಾಪಮಾನ ಏರಿಕೆ ಆಗುತ್ತಲೇ ಇದೆ. ಶನಿವಾರ 37 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದ್ದು, ಭಾನುವಾರ 38 ಡಿ.ಸೆ. ದಾಟುವ ನಿರೀಕ್ಷೆ ಇದೆ. ಆದರೆ, ಬಿಸಿಲಿನ ತೀವ್ರತೆ ಹೆಚ್ಚಾಗಿ ಇರಲಿದ್ದು, ರಾತ್ರಿ ವೇಳೆಯೂ ತಂಪಿನ ವಾತಾವರಣ ಮರೀಚಿಕೆಯಾಗಿದೆ. ಆದರೆ, ಯುಗಾದಿ ತರುವಾಯ (ಏಪ್ರಿಲ್‌ 9) ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಬೆಂಗಳೂರಿಗೆ ಮಳೆ ನಿರೀಕ್ಷೆಯಲ್ಲಿದ್ದಾರೆ.

Exit mobile version