ಚಿಕ್ಕಮಗಳೂರು/ಬೆಂಗಳೂರು: ಕಾದ ಕಾವಲಿಯಂತಾಗಿದ್ದ ಭೂಮಿಗೆ ಮಳೆಯು (Rain News) ತಂಪೆರೆಯುತ್ತಿದೆ. ಕಾಫಿನಾಡು ಚಿಕ್ಕಮಗಳೂರಲ್ಲಿ ಗುರುವಾರ ವರ್ಷದ ಮೊದಲ ಭರ್ಜರಿ ಮಳೆ (Karnataka Weather Forecast) ಸುರಿದಿದೆ. ಸುಮಾರು ಒಂದೇ ಗಂಟೆ ಕಾಲ ಸುರಿದ ಮಳೆಗೆ ಹಳ್ಳಿಗರು, ಬೆಳೆಗಾರರು ಸಂತಸಗೊಂಡಿದ್ದಾರೆ.
ಚಿಕ್ಕಮಗಳೂರಿನ ಮುತ್ತೋಡಿ ತಪ್ಪಲಿನ ಜಾಗರ ಹೋಬಳಿಯ ಕೊಳಗಾವೆ ಗ್ರಾಮದಲ್ಲಿ ಭಾರೀ ಮಳೆಯಾಗಿದೆ. ಕೊಳಗಾಮೆ ಜತೆಗೆ ಮೇಲಿನಹುಲುವತ್ತಿ ಭಾಗದ ಸುತ್ತಮುತ್ತ 38.5 ಮಿ.ಮೀ ಮಳೆ ಸುರಿದಿದೆ. ಮಳೆಗಾಗಿ ಆಕಾಶ ನೋಡುತ್ತಿದ್ದ ರೈತರು, ಕಾಫಿ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. ಇನ್ನೂ ಕೊಡಗಿನ ವಿರಾಜಪೇಟೆ ತಾಲೂಕಿನ ಕಾಕೋಟುಪರಂಬುನಲ್ಲಿ 3.5 ಮಿ.ಮೀ ಮಳೆಯಾಗಿದೆ.
ದಕ್ಷಿಣ ಒಳನಾಡಲ್ಲಿ ಮಳೆಯ ಸಿಂಚನ
ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ರಾಮನಗರ, ಬೆಂಗಳೂರು ನಗರ ಮತ್ತು ಮಲೆನಾಡಿನ ಹಾಸನ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ.
ಇದನ್ನೂ ಓದಿ: Different Danny : ಫೈಟ್ ಮಾಸ್ಟರ್ಸ್ ಫೈರ್ ಫೈಟಿಂಗ್; ರವಿವರ್ಮ ವಿರುದ್ಧ ಡಿಫರೆಂಟ್ ಡ್ಯಾನಿ ಸಮರ
ಹೀಟ್ ವೇವ್ ಎಚ್ಚರಿಕೆ
ಕರ್ನಾಟಕದ ಉತ್ತರ ಒಳನಾಡಿನ ಪ್ರತ್ಯೇಕ ಪ್ರದೇಶಗಳಲ್ಲಿ ತಾಪಮಾನವು ದುಪ್ಪಟ್ಟಾಗಲಿದೆ. ಶಾಖದ ತರಂಗ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಕರಾವಳಿಯ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿ.ಸೆ ಹೆಚ್ಚಾಗಲಿದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ.
ಬೆಂಗಳೂರಲ್ಲಿ ಮಳೆ-ಮೋಡ
ರಾಜಧಾನಿ ಬೆಂಗಳೂರಿನ ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 35 ಹಾಗೂ ಕನಿಷ್ಠ ಉಷ್ಣಾಂಶ 23 ಡಿ.ಸೆ ಇರಲಿದೆ.
ಕಲಬುರಗಿಯಲ್ಲಿ 40ರ ಗಡಿದಾಟಿದ ತಾಪಮಾನ
ಬುಧವಾರ ರಾಜ್ಯಾದ್ಯಂತ ಒಣ ಹವೆ ಇತ್ತು. ಗರಿಷ್ಠ ಉಷ್ಣಾಂಶವು ಕಲಬುರಗಿಯಲ್ಲಿ 40.2 ಡಿ.ಸೆ ದಾಖಲಾಗಿದ್ದರೆ, ಕನಿಷ್ಠ ಉಷ್ಣಾಂಶವು ಬೆಳಗಾವಿಯಲ್ಲಿ 17 ಡಿ.ಸೆ ದಾಖಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ