Site icon Vistara News

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Karnataka Weather Forecast

ವಿಜಯನಗರ/ಚಿಕ್ಕಮಗಳೂರು: ರಾಜ್ಯಾದ್ಯಂತ ಮಳೆಯಾಟ (Karnataka Weather Forecast) ಜೋರಾಗಿದೆ. ನಿನ್ನೆ ಬುಧವಾರ ಕೊಟ್ಟೂರು ಪಟ್ಟಣದಲ್ಲಿ ಸುರಿದ ಭಾರಿ ಮಳೆಗೆ (Heavy Rain) ಕೊಟ್ಟೂರು ಬಸ್ ನಿಲ್ದಾಣ ಸಂಪೂರ್ಣ ಜಲಾವೃತ ಆಗಿತ್ತು. ಈ ವೇಳೆ ಬಸ್ ನಿಲ್ದಾಣ ಬಳಿಯ ದೊಡ್ಡ ಚರಂಡಿಗೆ ರಭಸವಾಗಿ ಮಳೆ ನೀರು ಹರಿದು ಹೋಗುತ್ತಿತ್ತು. ಅದೇ ಚರಂಡಿ ಪಕ್ಕದಲ್ಲಿ ನಿಧಾನವಾಗಿ ನಡೆದುಕೊಂಡು ಬರುವಾಗ ತಾಯಿ -ಮಗ ಇಬ್ಬರು ಆಯ ತಪ್ಪಿ ಬಿದ್ದಿದ್ದಾರೆ. ಒಂದು ಕೈಯಲ್ಲಿ ಮಗ, ಇನ್ನೊಂದು ಕೈಯಲ್ಲಿ ಲಗೇಜ್‌ ಹಿಡಿದು ಬರುವಾಗ ಬಿದ್ದಿದ್ದಾರೆ.

ಈ ಸಂದರ್ಭದಲ್ಲಿ ಆಚೆ – ಇಚೆ ಹೆಜ್ಜೆ ಇಟ್ಟಿದ್ದರೂ ಚರಂಡಿ ನೀರಲ್ಲಿ ಕೊಚ್ಚಿ ಹೋಗುತ್ತಿದ್ದರು. ಕೊಟ್ಟೂರು ಬಸ್ ನಿಲ್ದಾಣದಲ್ಲಿ ತಾಯಿ – ಮಗುವಿನ ಪರದಾಟದ ವಿಡಿಯೋ ಅಲ್ಲಿದ್ದ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಬಸ್ ನಿಲ್ದಾಣದಲ್ಲಿ ಇಷ್ಟೆಲ್ಲ ಅವ್ಯವಸ್ಥೆ ಇದ್ದರೂ ತಿರುಗಿ ನೋಡದ ಅಧಿಕಾರಿಗಳು, ಶಾಸಕರ ವಿರುದ್ಧ ಪ್ರಯಾಣಿಕರು ಕಿಡಿಕಾರಿದರು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯೇ ಸರ್ಕಾರಿ ಆಸ್ಪತ್ರೆ ಇದೆ. ನೂರಾರು ಜನರು ಇದೇ ಮಾರ್ಗದಲ್ಲಿ ಓಡಾಡುತ್ತಾರೆ. ಬಾಯ್ತೆರೆದಿರುವ ದೊಡ್ಡ ಚರಂಡಿ ಬಲಿಗಾಗಿ ಕಾಯುತ್ತಿದೆ. ಇದನ್ನೂ ಮುಚ್ಚಿಸಿಬೇಕಿದ್ದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಇತ್ತ ಕೊಟ್ಟೂರು ಬಸ್ ನಿಲ್ದಾಣದಲ್ಲಿ ಮಳೆಯಿಂದ ಅವಾಂತರದ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಸ್ಥಳಕ್ಕೆ ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್ ನಾಯಕ್, ವಿಜಯನಗರ ಡಿಸಿ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್ ನಿಲ್ದಾಣ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳ ವೀಕ್ಷಿಸಿದರು.

ಇದನ್ನೂ ಓದಿ: Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

ಹಾವೇರಿಯಲ್ಲಿ ಸಿಡಿಲಿಗೆ ಯುವಕ ಬಲಿ

ಹಾವೇರಿ ಜಿಲ್ಲೆಯಾದ್ಯಂತ ಗುಡುಗು ಸಿಡಿಲಿನ ಆರ್ಭಟಕ್ಕೆ ಯುವಕ ಬಲಿಯಾಗಿದ್ದಾನೆ. ಹಾವೇರಿ ತಾಲೂಕಿನ ಕುರುಬಗೊಂಡ ಗ್ರಾಮದಲ್ಲಿ ಘಟನೆ ನಡೆದಿದೆ. ದಯಾನಂದ (22) ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಭಾರಿ ಮಳೆಯೊಂದಿಗೆ ಗುಡುಗು ಸಿಡಿಲಿನ ಆರ್ಭಟಕ್ಕೆ ದಯಾನಂದ ಮರದ ಕೆಳಗೆ ನಿಂತಿದ್ದ. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ದಯಾನಂದ ಮೃತಪಟ್ಟಿದ್ದಾನೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿಕ್ಕಮಗಳೂರಲ್ಲಿ ಮಲ್ಲಿಗೆ ಹೂವಿನಂತೆ ಸುರಿದ ಆಲಿಕಲ್ಲು

ಚಿಕ್ಕಮಗಳೂರಿನಲ್ಲಿ ಗುರುವಾರ ಸಂಜೆ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಮುತ್ತೋಡಿ ಅಭಯಾರಣ್ಯದ ಬಳಿ ಭಾರಿ ಆಲಿಕಲ್ಲು ಮಳೆಯು ಮಲ್ಲಿಗೆ ಹೂವಿನಂತೆ ಕಂಡು ಬಂತು. ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಯಾಗುತ್ತಿದ್ದು, ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮಳೆ ನೀರಿಗಿಂತ ಆಲಿಕಲ್ಲು ಆರ್ಭಟ ಜೋರಾಗಿತ್ತು.

ಚಿಕ್ಕಮಗಳೂರಲ್ಲಿ ಮಳೆಗೆ ಮನೆ ಮೇಲೆ ಮರ ಬಿದ್ದು ಜಖಂ

ಚಿಕ್ಕಮಗಳೂರಿನಲ್ಲಿ ಗುರುವಾರವೂ ಮಳೆಯು ಆರ್ಭಟಿಸಿದೆ. ಭಾರಿ ಮಳೆಗೆ ತೆಂಗಿನ ಮರವೊಂದು ಮನೆಯ ಮೇಲೆ ಬಿದ್ದು ಅವಾಂತರವೇ ಸೃಷ್ಟಿಯಾಗಿತ್ತು. ಮನೆಯಲ್ಲಿದ್ದ ವಸ್ತುಗಳು, ದವಸ ಧಾನ್ಯಗಳು ನಾಶವಾಗಿದ್ದವು. ಗಾಳಿ- ಮಳೆಗೆ ಮನೆಯ ಹೆಂಚುಗಳು ಹಾರಿ ಹೋಗಿದ್ದವು. ಕಳಸ ಪಟ್ಟಣದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಳಸ-ಕುದುರೆಮುಖ, ಬಾಳೆಹೊನ್ನೂರು-ಕಳಸ ಹೆದ್ದಾರಿಯಲ್ಲಿ ಸುಮಾರು 15 ಹೆಚ್ಚು ಕಡೆ ಮರ ಬಿದ್ದು, ಪ್ರಯಾಣಿಕರು ಪರದಾಟ ಅನುಭವಿಸಿದರು.

ಕಳಸ ತಾಲೂಕಿನ ನೆಲ್ಲಿಕೆರೆ, ಕಲ್ಮಕ್ಕಿ, ಕೈಮರ ಗ್ರಾಮಗಳಲ್ಲಿ ಹಲವು ಮನೆಗಳ ಮೇಲೆ ಬೃಹತ್ ಗಾತ್ರದ ಮರಗಳು ಬಿದ್ದಿತ್ತು. ಮನೆಗಳ ಹೆಂಚುಗಳು, ಕೊಟ್ಟಿಗೆಯ ಚಾವಣಿ ಹಾನಿಯಾಗಿತ್ತು. ಇನ್ನೂ ಮರಗಳ ಕೊಂಬೆ ತಂತಿಯ ಮೇಲೆ ಬಿದ್ದು ವಿದ್ಯುತ್ ಸ್ಥಗಿತವಾಗಿತ್ತು. ಧಾರವಾಡದಲ್ಲೂ ಗುಡುಗು, ಮಿಂಚು ಸಹಿತ ಮಳೆ ಸುರಿಯುತ್ತಿದೆ. ಗುರುವಾರ ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ಇತ್ತು. ನೋಡ ನೋಡುತ್ತಿದ್ದಂತೆ ಮಳೆ ಸುರಿದಿದೆ.

ವಿಜಯನಗರದಲ್ಲಿ ಗಾಳಿ ಮಳೆಯ ಅವಾಂತರ

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಗಾಳಿ ಮಳೆಯ ಅವಾಂತರಕ್ಕೆ ಗುರುವಾರ ಸಂಜೆ ಸಾರ್ವಜನಿಕ ಗ್ರಂಥಾಲಯ ಮುಂಭಾಗ ವಿದ್ಯುತ್ ಕಂಬ ಧರೆಗೆ ಉರುಳಿದೆ. ಅದೇ ರೀತಿ ಪಟ್ಟಣದ ಕುಡಿಯುವ ನೀರಿನ ಘಟಕದ ಬಳಿ ಬೃಹತ್ ಮರ ಬಿದ್ದಿದೆ. ಇತ್ತ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಳೆ ನೀರು ನುಗ್ಗಿ ಚಿಕಿತ್ಸೆಗೆ ಬಂದಿದ್ದವರು ತೊಂದರೆ ಅನುಭವಿಸಿದರು. ಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದು ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು.

ಕೆರೆಯಲ್ಲಿ ಮರಿಯಾನೆಯೊಂದಿಗೆ ಮಳೆಯಾಟ

ಮೈಸೂರಿನಲ್ಲೂ ಮಳೆಯಾಗುತ್ತಿದ್ದು, ಹನಿಗಳ ನಡುವೆ ಕೆರೆಯಲ್ಲಿ ಕಾಡಾನೆಗಳ ಜಲಕ್ರೀಡೆ ನೋಡುಗರ ಸೆಳೆದವು. ನಾಗರಹೊಳೆಯ ಕುಟ್ಟ ಬಳಿ ಕೆರೆಯಲ್ಲಿ ಆನೆಯು ಮರಿಯೊಂದಿಗೆ ಆಟವಾಡುತ್ತಿರುವ ದೃಶ್ಯ ಕಂಡು ಬಂತು. ಖ್ಯಾತ ವನ್ಯಜೀವಿ ಫೋಟೋಗ್ರಾಫರ್ ರವಿಶಂಕರ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿಗರನ್ನು ಕೈಬೀಸಿ ಕರೆಯುತ್ತಿದೆ.

ಮೇ 21ರವರೆಗೆ ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

ಮುಂದಿನ ಐದು ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಬಿರುಗಾಳಿ ವೇಗವು 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಕೊಡಗು, ಮೈಸೂರು, ಮಂಡ್ಯ, ಹಾಸನದಲ್ಲಿ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.

ಗದಗ, ಕೊಪ್ಪಳ, ರಾಯಚೂರು, ಬಾಗಲಕೋಟೆ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಬೆಳಗಾವಿ, ಬೀದರ್‌, ಧಾರವಾಡ, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿಯಲ್ಲಿ ರಭಸವಾಗಿ ಗಾಳಿ ಬೀಸಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಗರಿಷ್ಠ ಉಷ್ಣಾಂಶ ಇಳಿಕೆ

ಮುಂದಿನ 5 ದಿನ ಗರಿಷ್ಠ ಉಷ್ಣಾಂಶ 2-3 ಡಿ.ಸೆ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ವಾತಾವರಣವು ತಂಪಾಗಿ ಇರಲಿದೆ.

ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವೆಡೆ ಸಂಜೆ ಅಥವಾ ರಾತ್ರಿ ನಂತರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಹಾಗೂ ಕನಿಷ್ಠ ತಾಪಮಾನವು ಕ್ರಮವಾಗಿ 30 ಹಾಗೂ 22 ಡಿ.ಸೆ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version