Site icon Vistara News

Karnataka Weather : ಕಾದ ಕೆಂಡವಾದ ಉತ್ತರ ಕರ್ನಾಟಕಕ್ಕೆ ಮಳೆ ಅಲರ್ಟ್‌

Karnataka Weather

ಬೆಂಗಳೂರು: ಬುಧವಾರದಂದು ಮಲೆನಾಡು ಹಾಗು ಉತ್ತರ ಒಳನಾಡಿನ ವಿವಿಧೆಡೆ ಹಗುರದಿಂದ ಮಳೆಯಾಗುವ (Rain News) ಸಾಧ್ಯತೆ ಇದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಶುಷ್ಕ ಪರಿಸ್ಥಿತಿಗಳು ಮೇಲುಗೈ (Dry Weather) ಸಾಧಿಸಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಉತ್ತರ ಒಳನಾಡಿನ ಹಾವೇರಿ ಮತ್ತು ಗದಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಉಳಿದೆಡೆ ಶುಷ್ಕ ವಾತಾವರಣವೇ ಇರಲಿದೆ. ದಕ್ಷಿಣ ಒಳನಾಡಿನ ಬೆಂಗಳೂರಿನಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ. ಮಲೆನಾಡಿನ ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಳಿದೆಡೆ ಶುಷ್ಕ ಹವಾಮಾನ ಇರಲಿದೆ.

ಇದನ್ನೂ ಓದಿ: Beach Fashion: ಸಮ್ಮರ್‌ ಬೀಚ್‌ಸೈಡ್‌ ಫ್ಯಾಷನ್‌ನಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಅಂಶಗಳು

ಹೀಟ್‌ ವೇವ್‌ ಅಲರ್ಟ್‌

ಉತ್ತರ ಒಳನಾಡಿನ ಬಳ್ಳಾರಿ, ಬಾಗಲಕೋಟೆ, ಕಲಬುರಗಿ, ರಾಯಚೂರು, ಕೊಪ್ಪಳ ಮತ್ತು ಯಾದಗಿರಿಯಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ. ಮಲೆನಾಡಿನ ಹಾಸನ ಹಾಗೂ ದಕ್ಷಿಣ ಒಳನಾಡಿನ ಕೋಲಾರ, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉಷ್ಣಾಂಶ ಹೆಚ್ಚಾಗಲಿದೆ.

ತಾಪಮಾನ ಮುನ್ಸೂಚನೆ

ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಧಾರವಾಡ, ಗದಗ ಹಾವೇರಿಯಲ್ಲಿ ಗರಿಷ್ಠ ಉಷ್ಣಾಂಶ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ಮೈಸೂರು, ಮಂಡ್ಯ ಮತ್ತು ಕೋಲಾರದಲ್ಲೂ ತಾಪಮಾನ ಏರಿಕೆ ಆಗಲಿದೆ.

ಯೆಲ್ಲೋ ಅಲರ್ಟ್‌

ಮುಂದಿನ 2 ದಿನಗಳು ಬಳ್ಳಾರಿ, ಬಾಗಲಕೋಟೆ, ಕಲಬುರಗಿ, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: Paytm Payment Service : ಪೇಟಿಎಂ ಬ್ಯಾಂಕಿಂಗ್ ವಿಭಾಗದ ಸಿಇಒ ದಿಢೀರ್ ರಾಜೀನಾಮೆ

ಮತ್ತಷ್ಟು ದಿನ ಬಿಸಿಲ ತಾಪ; ಅಲ್ಲಿಯವರೆಗೆ ತಂಪಾಗಿರಲು ಹೀಗೆ ಮಾಡಿ

ಬಿಸಿಲ ಬೇಗೆಗೆ (Protection From Heatwave) ಈಗಾಗಲೇ ಭೂಮಿ ಸುಡುತ್ತಿದೆ. ಎಲ್ಲರೂ ಬಸವಳಿಯುತ್ತಿದ್ದಾರೆ. ಆದರೂ ಮಳೆಯ ಸೂಚನೆಯಿಲ್ಲ. ದುರ್ಭಿಕ್ಷದಲ್ಲಿ ಅಧಿಕಮಾಸ ಎಂಬಂತೆ, ಉಷ್ಣತೆ ಇನ್ನೂ ಹೆಚ್ಚುತ್ತದೆಂಬ ಭವಿಷ್ಯವಾಣಿ ಹವಾಮಾನ ತಜ್ಞರಿಂದ ಮೊಳಗುತ್ತಿದೆ. ಬಿಸಿಲಿನ ಆಘಾತಕ್ಕೆ ಸಿಲುಕಿ ಮೃತ ಪಡುತ್ತಿರುವವರು, ಕಾಲರಾದಂಥ ರೋಗಕ್ಕೆ ಜೀವ ತೆರುತ್ತಿರುವವ ಸುದ್ದಿಗಳು ಬರುತ್ತಲೇ ಇವೆ. ಇಂಥ ದಿನಗಳಲ್ಲಿ ಬೇಸಿಗೆಯಲ್ಲಿ ನಮ್ಮ ಮತ್ತು ಕುಟುಂಬದ ಕಾಳಜಿ ಹೇಗಿರಬೇಕು ಎಂಬ ಬಗ್ಗೆ ಒಂದಿಷ್ಟು ಮಾಹಿತಿಗಳಿವು.

ಏನಿದು ಹೀಟ್‌ವೇವ್‌?

ಶಾಖದ ಅಲೆಗಳು ಅಥವಾ ಆಡು ಮಾತಿನಲ್ಲಿ ಹೇಳುವಂಥ ʻಹೀಟ್‌ವೇವ್‌ʼ ಎಂದರೇನು? ಯಾವುದೇ ಭೌಗೋಳಿ ಪ್ರದೇಶದ ಉಷ್ಣತೆಯು ಇದ್ದಕ್ಕಿದ್ದಂತೆ ತೀಕ್ಷ್ಣವಾಗಿ ಮೇಲೇರಿ, ತನ್ನ ಸಾಮಾನ್ಯ ಮಟ್ಟವನ್ನು ಮೀರುವುದನ್ನು ಹೀಟ್‌ವೇವ್‌ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ತಂಪಾಗಿರುವ ಗಿರಿ ನೆತ್ತಿಗಳಲ್ಲಿ 30-32 ಡಿ.ಸೆ. ಮೀರಿದರೆ ಅಥವಾ ಬಯಲು ಸೀಮೆಗಳಲ್ಲಿ 40-42 ಡಿ.ಸೆ. ಮೀರಿದರೆ ಆ ದಿನಗಳಲ್ಲಿ ಶಾಖದ ಅಬ್ಬರ ಜೋರಾಗಿದೆ ಎಂದೇ ಲೆಕ್ಕ. ಮಾರ್ಚ್‌ ಕಡೆಯ ವಾರಕ್ಕೆ ಇದ್ದಕ್ಕಿದ್ದಂತೆ ಮೇಲೇರಿರುವ ತಾಪಮಾನ, ತಂಪಾಗುವುದಕ್ಕೆ ಒಲ್ಲೆನೆಂದು ಹಠ ಹಿಡಿದು ಕೂತಂತಿದೆ. ಹೀಗೆ ಸಾಮಾನ್ಯ ಮಟ್ಟವನ್ನು ಮೀರಿ, ಇದ್ದಕ್ಕಿದ್ದಂತೆ ಉಷ್ಣತೆ ಮೇಲೇರುವುದರಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು. ಸುಸ್ತು, ಆಯಾಸ, ಎಚ್ಚರ ತಪ್ಪುವುದು, ಚರ್ಮದ ಸಮಸ್ಯೆಗಳು… ಇತ್ಯಾದಿ.

ಸುಸ್ತು, ಆಯಾಸ

ಹೀಟ್‌ ಎಕ್ಸಾಶನ್‌ ಎಂದು ಕರೆಯಲಾಗುವ ಈ ಅವಸ್ಥೆಯಲ್ಲಿ ಹಲವು ಹಂತಗಳಿವೆ. ಮೊದಲ ಹಂತದಲ್ಲಿ ಹೊರಗಿನ ತಾಪಮಾನಕ್ಕೆ ತನ್ನಷ್ಟಕ್ಕೆ ದೇಹ ಬಿಸಿಯಾಗಲಾರಂಭಿಸುತ್ತದೆ. ಇದಕ್ಕೆ ಪೂರಕವಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಿದ್ದು, ದೈಹಿಕವಾಗಿ ಚಟುವಟಿಕೆಯೂ ತೀವ್ರವಾಗಿದ್ದರೆ ಆಯಾಸ, ಸುಸ್ತು ಕಾಣಲಾರಂಭಿಸುತ್ತದೆ. ಇದು ಪ್ರಾರಂಭಿಕ ಹಂತ. ಇದೇ ಮುಂದುವರಿದು, ಸ್ನಾಯುಗಳಲ್ಲಿ ನೋವು, ದುರ್ಬಲತೆ ಅನುಭವಕ್ಕೆ ಬರಬಹುದು. ಇದು ದೇಹದಲ್ಲಿ ನೀರು ಮತ್ತು ಅಗತ್ಯ ಲವಣಾಂಶಗಳು ಕಡಿಮೆಯಾಗುವುದರಿಂದ ಉಂಟಾಗುವ ಅವಸ್ಥೆ. ಕೈ, ಕಾಲು, ತೋಳು, ತೊಡೆಗಳೆಲ್ಲ ಮರಗಟ್ಟಿದ ಅನುಭವ ಉಂಟಾಗಬಹುದು.

ಉಷ್ಣತೆ ಮತ್ತೂ ಏರಲಿದೆ

ಮುಂದಿನ ಹಂತದಲ್ಲಿ ದೇಹದ ಉಷ್ಣತೆ 103, 104 ಡಿಗ್ರಿ ಫ್ಯಾರನ್‌ ಹೀಟ್‌ ತಲುಪುತ್ತದೆ. ಜ್ವರ ಇದ್ದರೂ, ಇಲ್ಲದಿದ್ದರೂ ದೇಹದ ಉಷ್ಣತೆ ಮಾತ್ರ ಹೆಚ್ಚಾಗಿರುತ್ತದೆ. ಜೊತೆಗೆ ತಲೆನೋವು, ಹೊಟ್ಟೆ ತೊಳೆಸುವುದು, ವಾಂತಿ, ಕಿರಕಿರಿ, ಮೂತ್ರ ಬಾರದಿರುವುದು, ಬೀಳುವಷ್ಟು ಆಯಾಸವಾಗುವುದು, ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬೀಳುವುದು- ಇಂಥ ಲಕ್ಷಣಗಳೆಲ್ಲ ತೋರಬಹುದು. ಇವಿಷ್ಟೇ ಅಲ್ಲ, ಮಾನಸಿಕ ಗೊಂದಲ, ಚರ್ಮವೆಲ್ಲ ಒಣಗಿ ಕೆಂಪಾಗುವುದು, ಬೆವರು ಬಾರದಿರುವುದು, ಫಿಟ್ಸ್‌ ಬಂದಂತಾಗುವುದು, ಅಂಗಾಂಗ ವೈಫಲ್ಯಕ್ಕೂ ಎಡೆಯಾಗಬಹುದು. ಇದನ್ನು ಹೀಟ್‌ ಸ್ಟ್ರೋಕ್‌ ಅಥವಾ ಶಾಖದ ಆಘಾತ ಎಂದು ಕರೆಯಲಾಗುತ್ತದೆ. ಈ ಹಂತಕ್ಕೆ ಹೋದರೆ ಇದು ಮಾರಣಾಂತಿಕವಾಗಬಹುದು.

ಏನು ಮಾಡಬೇಕು?

ಬಿಸಿಲಿನ ಆಘಾತದ ಪ್ರಾರಂಭಿಕ ಲಕ್ಷಣಗಳು ಕಾಣುತ್ತಿದ್ದಂತೆಯೇ, ಆ ವ್ಯಕ್ತಿಯನ್ನು ನೆರಳಿಗೆ ಕರೆತನ್ನಿ. ಮಾಡುತ್ತಿರುವ ಚಟಿವಟಿಕೆಗಳನ್ನು ಬಿಟ್ಟು ವಿಶ್ರಾಂತಿ ನೀಡಲೇಬೇಕು ದೇಹಕ್ಕೆ. ತಂಪಾದ ನೀರು, ಎಳನೀರು ಅಥವಾ ಎಲೆಕ್ಟ್ರೋಲೈಟಿಕ್‌ ಪೇಯಗಳನ್ನು ಒಂದೊಂದು ಗುಟುಕಾಗಿ ಹತ್ತಾರು ನಿಮಿಷಗಳವರೆಗೆ ಕುಡಿಸುತ್ತಿರಿ, ಒಮ್ಮೆಲೇ ಗಂಟಲಿಗೆ ಸುರಿಯಬೇಡಿ. ಬಿಗಿಯಾದ ಬಟ್ಟೆಗಳನ್ನು ಧರಿಸಿದ್ದರೆ ಸಡಿಲಿಸಿ, ದೇಹದ ಮೇಲೆಲ್ಲ ತಂಪಾದ ಗಾಳಿ ಹಾಕಿ. ಸಾಧ್ಯವಾದರೆ ತಂಪಾದ ಬಟ್ಟೆಯಿಂದ ಇಡೀ ಮೈಯನ್ನೆಲ್ಲ ಒರೆಸಿ, ನಂತರ ಗಾಳಿ ಹಾಕಿ. ಮುಂದಿನ ಅರ್ಧ ತಾಸಿನಲ್ಲಿ ಆ ವ್ಯಕ್ತಿಯ ಆರೋಗ್ಯ ಸುಧಾರಿಸದಿದ್ದರೆ, ಕೂಡಲೇ ಆಸ್ಪತ್ರೆಗೆ ಧಾವಿಸಿ.

ಈಗ ಏನು ಮಾಡಬೇಕು?

ಈ ಪರಿಸ್ಥಿತಿಯಿಂದ ಪೂರ್ಣ ಚೇತರಿಸಿಕೊಳ್ಳಲು ಒಂದು ವಾರದವರೆಗೂ ಬೇಕಾಗುತ್ತದೆ. ಇಂಥ ದಿನಗಳಲ್ಲಿ ವಿಶ್ರಾಂತಿ, ಪೌಷ್ಟಿಕ ಆಹಾರ ಮತ್ತು ಸಾಕಷ್ಟು ನೀರು ಕುಡಿಯುವುದು ಕಡ್ಡಾಯವಾಗಿ ಮಾಡಬೇಕಾದ ಕೆಲಸಗಳು. ಇದಲ್ಲದೆ ಬಿಸಿಲಿಗೆ, ಶಾಖಕ್ಕೆ ಒಡ್ಡಿಕೊಳ್ಳುವುದು ಸಲ್ಲದು. ದೈಹಿಕ ಚಟುವಟಿಕೆಗಳನ್ನೂ ಮಿತವಾಗಿಸುವುದು, ಅಂದರೆ ಬೆವರು ಹರಿಯುವಂತೆ ವ್ಯಾಯಾಮ ಮಾಡುವುದು, ಬಿಸಿಲಿನ ಕೆಲಸಗಳು ಮುಂತಾದವು ಚೇತರಿಕೆಯನ್ನು ಕಷ್ಟಕರವಾಗಿಸುತ್ತವೆ. ಈ ಅವಧಿಯಲ್ಲಿ ಮಾನಸಿಕ ಗೊಂದಲ, ಅರೆಪ್ರಜ್ಞೆ ಅಥವಾ ಎಚ್ಚರ ತಪ್ಪುವುದು, ನೀರು ಕುಡಿಯಲಾಗದ ಸ್ಥಿತಿಗಳೇನಾದರೂ ಕಂಡು ಬಂದರೆ ಮತ್ತೆ ವೈದ್ಯಕೀಯ ನೆರವು ಬೇಕಾಗುತ್ತದೆ.

ತಡೆಯಲಾಗದೆ?

ಈ ಅವಸ್ಥೆಯನ್ನು ಖಂಡಿತ ತಡೆಯಬಹುದು. ಬಾಯಾರಿಕೆ ಆಗದಿದ್ದರೂ, ದಿನವಿಡೀ ಅಲ್ಪ-ಸ್ವಲ್ಪ ನೀರು ಗುಟುಕರಿಸುತ್ತಲೇ ಇರಿ. ಆಗಾಗ ಹಣ್ಣಿನ ರಸ, ಎಳನೀರು, ಕಬ್ಬಿನ ರಸ, ಪಾನಕ, ಮಜ್ಜಿಗೆ, ಒಆರ್‌ಎಸ್‌ ಮುಂತಾದ ಯಾವುದೇ ಆರೋಗ್ಯಕರ ಪೇಯಗಳನ್ನು ಹೆಚ್ಚಾಗಿ ಸೇವಿಸಿ. ಪಾನೀಯಗಳ ಸೇವನೆಯಿಂದ ಒಂದೊಮ್ಮೆ ಊಟದ ಇಚ್ಛೆಯಿಲ್ಲ ಎನಿಸಿದರೆ ರಾಗಿ ಅಂಬಲಿ, ತರಕಾರಿಗಳ ಸೂಪ್‌, ಹಣ್ಣಿನ ಸ್ಮೂದಿಗಳು ಮುಂತಾದ ದ್ರವಾಹಾರಗಳು ದೇಹಕ್ಕೆ ಆರಾಮ ನೀಡುತ್ತವೆ.

ಆಹಾರ ಲಘುವಾಗಿರಲಿ

ಎಣ್ಣೆ, ಮಸಾಲೆ, ಖಾರ, ಜಿಡ್ಡಿನ ಆಹಾರಗಳು ಹೆಚ್ಚಿದಷ್ಟೂ ದೇಹಕ್ಕೆ ಅವುಗಳನ್ನು ಚೂರ್ಣಿಸುವಲ್ಲಿ ತೊಂದರೆ. ಯಾವುದೇ ತೀರಿಯ ಕೆಫೇನ್‌ ಮತ್ತು ಆಲ್ಕೊಹಾಲ್‌ ದೂರ ಇರಿಸಿ. ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಕಿತ್ತಳೆಯಂಥ ರಸಭರಿತ ಹಣ್ಣುಗಳು, ಸಲಾಡ್‌ಗಳು, ಸೌತೇಕಾಯಿಯಂಥ ತರಕಾರಿಗಳು ಊಟದ ಭಾಗವಾಗಿರಲಿ. ಇದರಿಂದ ದೇಹದ ಉಷ್ಣತೆ ಹೆಚ್ಚಿ, ಆರೋಗ್ಯದ ಸಮಸ್ಯೆಗಳಾಗುವುದನ್ನು ತಪ್ಪಿಸಬಹುದು.

ಈ ಅವಧಿಯಲ್ಲಿ ಬಿಸಿಲಿಗೆ ಹೋಗಬೇಡಿ

ಬೆಳಗಿನ ಹನ್ನೊಂದು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಬಿಸಿಲಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ವೃದ್ಧರಿಗಂತೂ ಈ ಸಮಯ ಖಂಡಿತಕ್ಕೂ ಹೇಳಿಸಿದ್ದಲ್ಲ. ಹೊರಗಿನ ಕೆಲಸಗಳಿಗೆ ತಂಪು ಹೊತ್ತನ್ನೇ ಆಯ್ದುಕೊಳ್ಳಿ. ಈ ಅವಧಿಯಲ್ಲಿ ಮಕ್ಕಳನ್ನು ಮನೆಯೊಳಗೆ ಮಾತ್ರವೇ ಆಡುವುದಕ್ಕೆ ಬಿಡಿ. ಸಾಕು ಪ್ರಾಣಿಗಳಿಗೂ ನೆರಳು ಅಗತ್ಯ. ಅವುಗಳಿಗೆ ಸಾಕಷ್ಟು ನೀರುಣಿಸಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version