ಬೆಂಗಳೂರು: ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ. ಮಲೆನಾಡು, ಕರಾವಳಿ ಮತ್ತು ಉತ್ತರ ಒಳನಾಡಿನ ಭಾಗಗಳಲ್ಲಿ ಚದುರಿದಂತೆ ಹಗುರವಾದ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಪ್ರತ್ಯೇಕವಾಗಿ ಮಳೆಯಾಗುವ (Karnataka Weather Forecast) ನಿರೀಕ್ಷೆ ಇದೆ.
ದಕ್ಷಿಣ ಒಳನಾಡಿನ ದಾವಣಗೆರೆಯಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಉಳಿದೆಡೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಇನ್ನೂ ಉತ್ತರ ಒಳನಾಡಿನ ಹಾವೇರಿ, ಧಾರವಾಡ ಮತ್ತು ಬೆಳಗಾವಿಯಲ್ಲಿ ಚದುರಿದಂತೆ ಹಗುರವಾದ ಮಳೆ ಸಂಭವ ಇದೆ. ಗದಗ, ಕೊಪ್ಪಳ, ಬಾಗಲಕೋಟೆ, ವಿಜಯನಗರ ಮತ್ತು ವಿಜಯಪುರದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಒಣ ಹವೆ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.
ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಚದುರಿದ ಸಾಧಾರಣ ಮಳೆಯ ನಿರೀಕ್ಷೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯ ಅಲ್ಲೆಲ್ಲ ಸಾಧಾರಣ ಮಳೆಯಾಗಲಿದೆ. ಉಳಿದಂತೆ ಬೆಂಗಳೂರಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ. ಗರಿಷ್ಠ 35 ಮತ್ತು ಕನಿಷ್ಠ ತಾಪಮಾನವು 21ರ ಆಸುಪಾಸಿನಲ್ಲಿರಲಿದೆ.
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 35 ಡಿ.ಸೆ – 21 ಡಿ.ಸೆ
ಮಂಗಳೂರು: 35 ಡಿ.ಸೆ – 24 ಡಿ.ಸೆ
ಚಿತ್ರದುರ್ಗ: 37 ಡಿ.ಸೆ – 22 ಡಿ.ಸೆ
ಗದಗ: 38 ಡಿ.ಸೆ – 22 ಡಿ.ಸೆ
ಹೊನ್ನಾವರ: 34 ಡಿ.ಸೆ- 24 ಡಿ.ಸೆ
ಕಲಬುರಗಿ: 40 ಡಿ.ಸೆ – 26 ಡಿ.ಸೆ
ಬೆಳಗಾವಿ: 39 ಡಿ.ಸೆ – 21 ಡಿ.ಸೆ
ಕಾರವಾರ: 35 ಡಿ.ಸೆ – 25 ಡಿ.ಸೆ
ಇದನ್ನೂ ಓದಿ: Lok Sabha Election 2024: ರೆಸಾರ್ಟ್‌ನಲ್ಲಿ ಮೂರು ರಾತ್ರಿ, ಎರಡು ಹಗಲು ಸಿಎಂ ಸಿದ್ದರಾಮಯ್ಯ ಮಾಡಿದ್ದೇನು?
ಬೇಸಿಗೆಯಲ್ಲಿ ನಿಮ್ಮ ಚರ್ಮ ಕಪ್ಪಾಗದಂತೆ ತಡೆಯಲು ಹೀಗೆ ಮಾಡಿ
ಬಿಸಿಲು ತನ್ನ ಪ್ರಕೋಪ ತೋರಿಸುತ್ತಿದೆ. ಅಲ್ಪಕಾಲ ಬಿಸಿಲಿಗೆ ಒಡ್ಡಿಕೊಂಡರೂ ಚರ್ಮ ಕೆಂಪಾಗುತ್ತದೆ. ತಾಸುಗಟ್ಟಲೆ ಬಿಸಿಲಲ್ಲಿದ್ದರೆ ಮುಖವೆಂಬುದು ಥೇಟ್ ಸುಟ್ಟ ಬದನೆಕಾಯಿ! ಹಾಗಿರುವಾಗ ಬೇಸಿಗೆಯಲ್ಲೂ ನಳನಳಿಸುವ ತ್ವಚೆಯನ್ನು ತಡೆಯುವುದು ಹೇಗೆ? ಬೆವರಿನಲ್ಲೇ ಮುಳುಗಿರುವ ಚರ್ಮದ ಆರೈಕೆ ಮಾಡಿವುದು ಹೇಗೆ? ಇದೇನು ದೊಡ್ಡ ವಿಷಯವಲ್ಲ… ಬೇಸಿಗೆಯಲ್ಲಿ ಲಭ್ಯವಿರುವ ಹಣ್ಣುಗಳ ಬಗ್ಗೆ ತಿಳಿದಿದ್ದರೆ. ಬೇಸಿಗೆಯ ಹಣ್ಣುಗಳಿಂದ ತ್ವಚೆಯನ್ನು ಮಾತ್ರವೇ ಅಲ್ಲ, ಬದುಕಿನ ಸ್ವಾಸ್ಥ್ಯವೇ (Summer Skincare) ನಳನಳಿಸುವಂತೆ ಮಾಡಬಹುದು.
ಕಲ್ಲಂಗಡಿ
ಬಿರುಬೇಸಿಗೆಯಲ್ಲಿ ದಣಿದು ಬಂದಾಗ ತಂಪಾದ ಕಲ್ಲಂಗಡಿ ಹಣ್ಣನ್ನು ಯಾರಾದರೂ ಕೊಟ್ಟರೆ ಅವರಿಗೆ ಮೂರು ಜನ್ಮಕ್ಕೆ ಸಾಕಾಗುವಷ್ಟು ಹರಸುತ್ತೀರಿ. ಸಿಹಿಯಾದ ಈ ರಸಭರಿತ ಹಣ್ಣು ಎಲ್ಲರಿಗೂ ಅಚ್ಚುಮೆಚ್ಚು. ವಿಟಮಿನ್ ಎ ಮತ್ತು ಸಿ ಇದರಲ್ಲಿ ಧಾರಾಳವಾಗಿದ್ದು, ಚರ್ಮದ ಆರೈಕೆಗೆ ಹೇಳಿ ಮಾಡಿಸಿದಂತಿದೆ. ಚರ್ಮದಲ್ಲಿ ಹೊಸ ಕೊಶಗಳ ಉತ್ಪಾದನೆಗೆ ವಿಟಮಿನ್ ಎ ಅಗತ್ಯವಾದರೆ, ಕೊಲಾಜಿನ್ ಉತ್ಪಾದನೆಗೆ ವಿಟಮಿನ್ ಸಿ ಬೇಕಾಗುತ್ತದೆ. ಬೇಸಿಗೆಯಲ್ಲಿ ತಂಪಾಗಿ ಕಲ್ಲಂಗಡಿ ಮೆಲ್ಲುವುದರಿಂದ ಹೊಟ್ಟೆಗೂ ಹಿತ, ಚರ್ಮಕ್ಕೂ ಸುಖ.
ಮಾವಿನ ಹಣ್ಣು
ʻಹಣ್ಣುಗಳ ರಾಜʼ ಎಂದೇ ಕರೆಸಿಕೊಳ್ಳುವ ಈ ಉಷ್ಣವಲಯದ ಹಣ್ಣನ್ನು ಕಂಡು ಬಾಯಲ್ಲಿ ನೀರೂರಿಸಿಕೊಳ್ಳದವರೂ ಇರಬಹುದೇ? ಹಲವು ರೀತಿಯ ಉತ್ಕರ್ಷಣ ನಿರೋಧಕಗಳ ಗುಡಾಣದಂತಿದೆ ಈ ಹಣ್ಣು. ಇದರಲ್ಲೂ ಎ ಮತ್ತು ಸಿ ಜೀವಸತ್ವಗಳು ಸಮೃದ್ಧವಾಗಿವೆ. ಹಾಗಾಗಿ ಚರ್ಮದ ಮೇಲಿನ ಸುಕ್ಕನ್ನು ನಿಯಂತ್ರಿಸಲು ಮತ್ತು ಕೊಲಾಜಿನ್ ಉತ್ಪಾದನೆಗೆ ಈ ಹಣ್ಣು ನೆರವಾಗಬಲ್ಲದು.
ಪಪ್ಪಾಯ
ಹಳೆಯದನ್ನೆಲ್ಲ ಕಳೆದು, ತೊಳೆದು ಹೊಸದನ್ನು ಉತ್ಪಾದಿಸುವುದಕ್ಕೆ ಪಪ್ಪಾಯ ಹಣ್ಣು ಎತ್ತಿದ ಕೈ. ಇದರಲ್ಲಿರುವ ಪಪೈನ್ ಎಂಬ ಕಿಣ್ವಗಳು ಹಳೆಯದನ್ನು ತೊಡೆದು ಹಾಕುವಲ್ಲಿ ಸಮರ್ಥವಾಗಿ ಸಹಾಯ ಮಾಡುತ್ತವೆ. ಹಾಗಾಗಿ ಚರ್ಮದ ಮೇಲಿನ ಹಳೆಯ ಕೋಶಗಳನ್ನು ತೆಗೆದುಹಾಕಿ ಹೊಸದಕ್ಕೆ ಅವಕಾಶ ಮಾಡುತ್ತವೆ. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ವಿಟಮಿನ್ ಸಿ ಸಹ ಈ ಹಣ್ಣಿನಲ್ಲಿ ಹೇರಳವಾಗಿ ಇರುವುದರಿಂದ ಚರ್ಮ ಬಿಗಿಯಾಗಿರುವಂತೆ ನೋಡಿಕೊಳ್ಳುತ್ತದೆ.
ಬೆರ್ರಿಗಳು
ಸ್ಟ್ರಾಬೆರ್ರಿ, ಬ್ಲೂಬೆರ್ರಿ, ಚೆರ್ರಿ, ರಾಸ್ಪ್‌ಬೆರ್ರಿ, ಕ್ರೇನ್‌ಬೆರ್ರಿ ಮುಂತಾದ ಯಾವುದೇ ಬೆರ್ರಿಯೂ ಉತ್ಕರ್ಷಣ ನಿರೋಧಕಗಳಿಂದ ಭರಿತವಾಗಿದೆ. ವಿಟಮಿನ್ ಸಿ ಕೂಡ ಸಮೃದ್ಧವಾಗಿದ್ದು, ದೇಹದಲ್ಲಿರುವ ಮುಕ್ತ ಕಣಗಳನ್ನು ನಿರ್ಬಂಧಿಸಿ, ತ್ವಚೆಯ ಕಳೆಯನ್ನು ವೃದ್ಧಿಸುತ್ತದೆ. ಚರ್ಮದಲ್ಲಿರುವ ಮೊಡವೆ, ಕಪ್ಪುಕಲೆಗಳನ್ನು ತೆಗೆಯಲು ಬೆರ್ರಿಯಲ್ಲಿರುವ ಸತ್ವಗಳು ಉಪಯುಕ್ತ
ಸೌತೇಕಾಯಿ
ಇದೇನು ಬೇಸಿಗೆಗೆ ಸೀಮಿತವಾಗಿದ್ದಲ್ಲ. ಆದರೆ ಬೇಸಿಗೆಯಲ್ಲಿಯೆ ಹೆಚ್ಚಾಗಿ ಇದರ ನೆನಪಾಗುವುದು. ಇದರಲ್ಲಿರುವ ಭರಪೂರ ನೀರಿನಂಶವು ಚರ್ಮ ಒಣಗದಂತೆ ಕಾಪಾಡುತ್ತದೆ. ಹಾಗಾಗಿ ಸೌತೆಕಾಯಿಯ ಸೇವನೆಯು ಬೇಸಿಗೆಯ ದಾಹವನ್ನು ತಣಿಸುವುದು ಮಾತ್ರವಲ್ಲ, ಚರ್ಮಕ್ಕೂ ನೀರುಣಿಸಿ ಪೋಷಿಸುತ್ತದೆ.
ಟೊಮೇಟೊ
ಇದನ್ನೂ ವರ್ಷವಿಡೀ ಬಳಸಬಹುದು. ಇದು ಹಣ್ಣೊ, ತರಕಾರಿಯೊ ಮುಂತಾದ ಚರ್ಚೆಗಳನ್ನು ಒಮ್ಮೆ ಬದಿಗಿಟ್ಟು, ಇದರ ಸತ್ವಗಳು ನಮಗೇಕೆ ಮುಖ್ಯ ಎನ್ನುವುದನ್ನು ನೋಡೋಣ. ಇದರಲ್ಲಿರುವ ಲೈಕೊಪೇನ್ ಎಂಬ ಉತ್ಕರ್ಷಣ ನಿರೋಧಕವು ಸೂರ್ಯನ ಬಿಸಿಲಿಗೆ ಚರ್ಮಕ್ಕೆ ಆಗುವ ಹಾನಿಯನ್ನು ದುರಸ್ತಿ ಮಾಡುವುದಕ್ಕೆ ಬೇಕು. ಜೊತೆಗೆ ವಿಟಮಿನ್ ಸಿ ಸಹ ಇರುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.
ಮೊಸರು
ಪ್ರೊಬಯಾಟಿಕ್ ಪವರ್‌ಹೌಸ್ ಎಂದೇ ಹೆಸರಾದ ಮೊಸರು ನಮ್ಮ ಜೀರ್ಣಾಂಗಗಳಿಗೆ ಮಾತ್ರವಲ್ಲ, ಚರ್ಮಕ್ಕೂ ಆರೋಗ್ಯ ಒದಗಿಸುತ್ತದೆ. ಚರ್ಮದ ಉರಿಯೂತ ತಗ್ಗಿಸುವಂಥ ಗುಣಗಳು ಮೊಸರಿನಲ್ಲಿವೆ. ಎಷ್ಟೋ ಫೇಸ್‌ಪ್ಯಾಕ್‌ಗಳಿಗೆ ಮೊಸರು ಬಳಸುವುದನ್ನು ಗಮನಿಸಿರಬಹುದು. ಬೇಸಿಗೆಯನ್ನು ತಂಪಾದ ಮೊಸರು, ಮಜ್ಜಿಗೆಗಳು ಹೊಟ್ಟೆಗೆ ಮಾತ್ರವಲ್ಲ, ಚರ್ಮಕ್ಕೂ ಲಾಭದಾಯಕ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ