Site icon Vistara News

Karnataka Weather : ಭಾರಿ ಮಳೆಗೆ ಕುಸಿದು ಬಿದ್ದ ಮಣ್ಣಿನ ಮನೆ; ಮಲಗಿದ್ದಲ್ಲೇ ಪ್ರಾಣ ಬಿಟ್ಟ ವ್ಯಕ್ತಿ

karnataka weather Forecast

ಬಾಗಲಕೋಟೆ/ಬೆಂಗಳೂರು: ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯು (Karnataka Weather Forecast) ಅಬ್ಬರಿಸುತ್ತಿದೆ. ಬಾಗಲಕೋಟೆಯ ಜಮಖಂಡಿ ನಗರದ ಮೋಮಿನ ಗಲ್ಲಿಯಲ್ಲಿ ನಿರಂತರ ಮಳೆಗೆ (Rain News) ಮಣ್ಣಿನ ಮನೆ ಕುಸಿದಿದ್ದು, ಮನೆಯೊಳಗಿದ್ದ ವ್ಯಕ್ತಿ ದಾರುಣವಾಗಿ ಮೃತಪಟ್ಟಿದ್ದಾರೆ. ಮುಸ್ತಾಕ ಮಕಬುಲ್ ಸಾಬ್ ಆವಟಿ (43)‌ ಮೃತ ದುರ್ದೈವಿ‌.

ಜೋರಾಗಿ ಸುರಿದ ಮಳೆಗೆ ಮಣ್ಣಿನ ಮನೆಯು ಏಕಾಏಕಿ ಕುಸಿದಿದೆ. ಈ ವೇಳೆ ಮುಸ್ತಾಕ ಮಕಬುಲ್‌ ಅವರು ಮನೆಯೊಳಗೆ ಮಲಗಿದ್ದು, ಇವರ ಮೈಮೇಲೆ ಮಣ್ಣು ಕುಸಿದ ಪರಿಣಾಮ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ. ಮುಸ್ತಾಕ ಅವರ ಪತ್ನಿ- ಮಕ್ಕಳು ಪಕ್ಕದ ಇನ್ನೊಂದು ಮನೆಯಲ್ಲಿದ್ದಾಗ ಘಟನೆ ನಡೆದಿದೆ. ಇನ್ನೂ ಮಣ್ಣಿನ ಅವಶೇಷಗಳಡಿ ಸಿಲುಕಿದ‌ ಮೃತದೇಹವನ್ನು ಹೊರ ತೆಗೆಯಲಾಯಿತು.

ತಹಸೀಲ್ದಾರ್‌ ಸದಾಶಿವ ಮುಕ್ಕೋಜಿ ಹಾಗೂ ಶಹರ್ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಮಖಂಡಿ ನಗರದ ಶಹರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಬೆಂಗಳೂರಿನಲ್ಲೂ ಮುಂದುವರಿದ ವರ್ಷಧಾರೆ

ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಮಳೆಯು ಮುಂದುವರಿದಿದೆ. ಕೆಆರ್‌ ಸರ್ಕಲ್‌, ವಿಧಾನಸೌಧ, ಶಿವಾಜಿನಗರ, ವಸಂತ ನಗರ, ಮೆಜೆಸ್ಟಿಕ್‌, ಕೆಂಗೇರಿ, ಜ್ಞಾನಭಾರತಿ, ನಾಗರಭಾವಿ ಸುತ್ತಮುತ್ತ ಮಳೆಯಾಗಿದೆ. ಬಿಟ್ಟು ಬಿಟ್ಟು ಜೋರಾಗಿ ಮಳೆ ಸುರಿಯುತ್ತಿದ್ದು, ಪಾದಚಾರಿಗಳು, ವಾಹನ ಸವಾರರು ತೊಂದರೆ ಅನುಭವಿಸಿದರು. ಶಾಲೆ ಬಿಡುವ ಸಂದರ್ಭದಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ ಹಲವೆಡೆ ಟ್ರಾಫಿಕ್ ಜಾಮ್‌ ಉಂಟಾಗಿತ್ತು.

ಇದನ್ನೂ ಓದಿ: Karnataka Rain : ಮಳೆ ಅವಾಂತರ: ತರಗತಿ ನಡೆಯುವಾಗಲೇ ಮಕ್ಕಳ ಮೇಲೆ ಕುಸಿದು ಬಿದ್ದ ಚಾವಣಿ

ಲಘು ಮಳೆ ಸಾಧ್ಯತೆ

ಜೂನ್‌ 14ರಂದು ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ಕರಾವಳಿ ಜಿಲ್ಲೆಯ ಬಹುತೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯೊಂದಿಗೆ ಗುಡುಗು ಇರಲಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಗುಡುಗು ಸಹಿತ ಲಘು ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 21 ಡಿ.ಸೆ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version