Site icon Vistara News

Karnataka Weather : ಕೊಪ್ಪಳದಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು; ಹೊತ್ತಿ ಉರಿದ ತೆಂಗಿನ ಮರ, ಧರೆಗುರುಳಿದ ಮರಗಳು, ವಿದ್ಯುತ್‌ ಕಂಬ

Karnataka Weather

ಕೊಪ್ಪಳ: ಉತ್ತರ ಕರ್ನಾಟಕದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಸಿಡಿಲಿಗೆ ವ್ಯಕ್ತಿಯೊಬ್ಬರು (Rain News) ಬಲಿಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜೂಲಕಟ್ಟಿ ಬಳಿ ಘಟನೆ (Karnataka Weather Forecast) ನಡೆದಿದೆ. ಕೊರಡಕೇರಿಯ ಅಮೋಘಸಿದ್ದಯ್ಯ ಗುರುವಿನ (32) ಮೃತ ದುರ್ದೈವಿ.

ಅಮೋಘಸಿದ್ದಯ್ಯ ಕೊರಡಕೇರಿಯಿಂದ ಜೂಲಕಟ್ಟಿಯಲ್ಲಿ ಕಟ್ಟಿಗೆ ಕಡಿಯಲು ಕೂಲಿ ಕೆಲಸಕ್ಕೆ ಹೋಗಿದ್ದರು. ಗುರುವಾರ ಮಧ್ಯಾಹ್ನ ದಿಢೀರ್‌ ಶುರುವಾದ ಮಳೆ- ಗಾಳಿ ಜತೆಗೆ ಸಿಡಿಲಿ ಬಡಿದು ಮೃತಪಟ್ಟಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗದಗನಲ್ಲೂ ಬಿರುಗಾಳಿ ಸಹಿತ ಮಳೆ

ಮುಂಗಾರಿಗೂ ಮುನ್ನ ಗದಗ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ ಅಬ್ಬರ ಜೋರಾಗಿದೆ. ಬಿರುಗಾಳಿ ಮಳೆಗೆ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿ‌‌ನ ಪರಸಾಪೂರ ಬಳಿ ಘಟನೆ ನಡೆದಿದೆ. ರಸ್ತೆ ಮೇಲೆ ಮರ ಹಾಗೂ ವಿದ್ಯುತ್‌ ಕಂಬ ಧರೆಗುರುಳಿದ ಕಾರಣದಿಂದ ಕೆಲಕಾಲ ವಾಹನ ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು. ಸ್ಥಳೀಯರ ಸಹಾಯದಿಂದ ಕೊಂಬೆಗಳನ್ನು ತೆರವುಗೊಳಿಸಿ ಸಂಚಾರಕ್ಕೆ‌ ಅನುಕೂಲ ಮಾಡಿಕೊಡಲಾಯಿತು.

ಇದನ್ನೂ ಓದಿ: Fraud Case : ಚಿಟ್‌ ಫಂಡ್‌ ಹೆಸರಿನಲ್ಲಿ ದಂಪತಿ ಕೋಟ್ಯಂತರ ರೂ. ವಂಚನೆ; ಬೀದಿಗೆ ಬಿದ್ದರು ಚೀಟಿದಾರರು

ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ

ಧಾರವಾಡದ ಕಲಘಟಗಿಯಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ಕಲಘಟಗಿಯ ದೇವರಕೊಂಡ ಗ್ರಾಮದಲ್ಲಿ ಘಟನೆ ನಡೆದಿದೆ. ಫಕ್ಕಿರಗೌಡ ಶಿವನಗೌಡರ ಎಂಬುವರ ಮನೆಯ ಮುಂದಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಧಗಧಗನೆ ಹೊತ್ತಿ ಉರಿದಿದೆ. ಅದೃಷ್ಟವಶಾತ್‌ ಸಮಯದಲ್ಲಿ ಮನೆ ಮುಂದೆ ಅಕ್ಕ-ಪಕ್ಕ ಯಾರು ಇರಲಿಲ್ಲ. ಹೀಗಾಗಿ ಯಾವುದೇ ಅಪಾಯ ಸಂಭವಿಸಿಲ್ಲ.

ಮತ್ತೊಂದೆಡೆ ಧಾರವಾಡದ ಅಣ್ಣಿಗೇರಿಯ ರಾಜರಾಜೇಶ್ವರಿ ನಗರದಲ್ಲೂ ಮನೆಯ ಪಕ್ಕದಲ್ಲಿಯೇ ಇದ್ದ ಮರಕ್ಕೆ ಸಿಡಿಲು ಬಡಿದ ಪರಿಣಾಮ ಹೊತ್ತಿ ಉರಿದಿತ್ತು. ಮರಕ್ಕೆ ಬೆಂಕಿ ಆವರಿಸುತ್ತಿದಂತೆಯೇ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವ ಕೆಲಸ ಮಾಡಿದರು.

ಧಾರವಾಡದಲ್ಲಿ ಆಲಿಕಲ್ಲು ಮಳೆ

ಧಾರವಾಡ ಜಿಲ್ಲೆಯಾದ್ಯಂತ ಆಲಿಕಲ್ಲು ಮಳೆಯಾಗಿದೆ. ನಗರದಲ್ಲಿ ಮಧ್ಯಾಹ್ನದವರೆಗೆ ಉರಿ ಬಿಸಿಲು ಇತ್ತು, ನಂತರ ಸಂಪೂರ್ಣ ಮೋಡ ಕವಿದ ವಾತಾವರಣದೊಂದಿಗೆ ಮಳೆಯು ಅಬ್ಬರಿಸಿತ್ತು. ವಿಜಯನಗರದ ನಾನಾ ಕಡೆ ಮಳೆರಾಯ ಕೃಪೆ ತೋರಿದ್ದಾನೆ. ಹರಪನಹಳ್ಳಿ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಹೊಸಪೇಟೆಯ ಮರಿಯಮ್ಮನಹಳ್ಳಿ, ದೇವಲಾಪುರ ಸೇರಿದಂತೆ ನಾನಾ ಕಡೆ ಉತ್ತಮ ಮಳೆಯಾಗಿದೆ. ಹರಪನಹಳ್ಳಿ ತಾಲೂಕಿನಲ್ಲಿ ಸಿಡಿಲು ಗುಡುಗು ಗಾಳಿ ಸಹಿತ ಭಾರೀ ಮಳೆಗೆ ಮರಗಳು ಉರುಳಿದವು. ಬಿರುಗಾಳಿಗೆ ಹಾಲಸ್ವಾಮಿ ಮಠದ ಬಳಿ, ಯಲ್ಲಾಪುರ ರಸ್ತೆ ಮೇಲೆ ಮರ ನೆಲಕ್ಕೆ ಉರುಳಿ ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ತಾಲೂಕು ಪಂ. ಆವರಣದಲ್ಲಿ ಎರಡು ಮರಗಳು ಕಳಚಿ ಬಿದ್ದಿತ್ತು. ಮಂಡ್ಯದ ಮಳವಳ್ಳಿಯ ಕೆಆರ್ ಪೇಟೆಯಲ್ಲಿ ಮೊದಲ ಮಳೆಯಾಗಿದೆ. ಸಿಡಿಲು ಬಡಿದ ಪರಿಣಾಮ ಬೃಹತ್ ಕಲ್ಲೊಂದು ಕಾರಿನ ಮೇಲೆ ಬಿದ್ದು, ಜಖಂಗೊಂಡಿರುವ ಘಟನೆ ವಿಜಯಪುರ ನಗರದ ಜೆಎಂ ರಸ್ತೆಯಲ್ಲಿ ನಡೆದಿದೆ.‌ ಮಹತ್ತರ ಮಹಲ್‌ನ ಗೋಡೆಯ ಬೃಹತ್ ಕಲ್ಲು ಕಾರಿನ ಮೇಲೆ ಬಿದ್ದಿದೆ. ಇದರಿಂದ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲ. ಭಾರಿ ಮಳೆ, ಗಾಳಿಯ ವೇಳೆ ಸಿಡಿಲು ಬಡಿದು ಈ ಅವಘಡ ಆಗಿದೆ. ಗೋಳಗುಮ್ಮಟ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಭಾರಿ ಮಳೆ ಮುನ್ಸೂಚನೆ

ಮುಂದಿನ 3 ಗಂಟೆಗಳಲ್ಲಿ ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬಿಜಾಪುರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಗುಲ್ಬರ್ಗ, ಹಾವೇರಿ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಒಂದು ಅಥವಾ ಎರಡು ಕಡೆಗಳಲ್ಲಿ ಭಾರಿ ಮಳೆಯಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version