Site icon Vistara News

Karnataka Weather : ಇಂದು ಮೂರು ಹೊತ್ತು ಒಂದೊಂದು ವಾತಾವರಣ

karnataka Weather Forecast

ಬೆಂಗಳೂರು: ರಾಜ್ಯಾದ್ಯಂತ ಶುಷ್ಕ ವಾತಾವರಣ (Dry Weather) ಇದ್ದರೂ, ಕೆಲವೆಡೆ ಮಳೆಯ (Rain News) ಸಿಂಚನವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಏ.2ರಂದು ಮಲೆನಾಡಿನ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಜತೆಗೆ ದಕ್ಷಿಣ ಒಳನಾಡಿನ ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರಿನ ಪ್ರತ್ಯೇಕ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ.

ಬೆಂಗಳೂರಲ್ಲಿ ಮುಖ್ಯವಾಗಿ ಶುಭ್ರ ಆಕಾಶವು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

ರೆಡ್ ಅಲರ್ಟ್

ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ. ಮೇ 5ರವರೆಗೆ ಈ ಜಿಲ್ಲೆಗಳಲ್ಲಿ ತಾಪಮಾನ ವಿಪರೀತವಾಗಿ ಇರಲಿದೆ. ಉರಿ ಸೆಕೆಯ ವಾತಾವರಣ ಇರಲಿದೆ.

ಆರೆಂಜ್ ಅಲರ್ಟ್

ಇನ್ನೂ ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಮುಂದಿನ 5 ದಿನಗಳ ಕಾಲ ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮೇ 5 ರವರೆಗೆ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ವಾತಾವರಣವು ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ‌Prajwal Revanna Case: ಪ್ರಜ್ವಲ್ ಕಾಂಗ್ರೆಸ್‌ ಬೆಂಬಲಿತ ಸಂಸದ; ನಿಮಗಾಗದಿದ್ದರೆ ನಮಗೆ ಅಧಿಕಾರ ಕೊಡಿ, 24 ಗಂಟೆಯಲ್ಲಿ ಹಿಡಿಯುತ್ತೇವೆ: ಅಶೋಕ್

Summer Tips: ಬಿಸಿಲಿನ ಆಘಾತದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ…

ಬಿಸಿಲು ಈಗಲೇ ಸಹಿಸುವುದಕ್ಕೆ ಅಸಾಧ್ಯವಾಗಿದೆ. ಇದಲ್ಲ, ಇನ್ನೂ ಹೆಚ್ಚಾಗಲಿದೆ ಎಂಬ ಮುನ್ಸೂಚನೆ ಹವಾಮಾನ ತಜ್ಞರಿಂದ ದೊರೆತಿದೆ. ಈ ಘೋರ ಬಿಸಿಲಿನಲ್ಲಿ ಸ್ಮೃತಿ ತಪ್ಪಿದವರ ಸುದ್ದಿಗಳು ಅಲ್ಲಲ್ಲಿ ಕೇಳುತ್ತಿವೆ. ಬಿಸಿಲಾಘಾತಕ್ಕೆ ಜೀವ ತೆತ್ತವರ ವಿಷಯಗಳೂ ಕೇಳಿಬರುತ್ತಿವೆ. ಛತ್ರಿ ಹಿಡಿದೇ ಹೋಗುತ್ತೇವೆ ಹೊರಗೆ, ಚೆನ್ನಾಗಿ ನೀರು ಕುಡಿಯುತ್ತೇವೆ ನಾವು. ನಮಗೇನು ಬಿಸಿಲಿನ ಭಯವಿಲ್ಲ ಎನ್ನುವವರಿದ್ದಾರೆ. ವಿಷಯ ಹಾಗಲ್ಲ, ಬಿಸಿಲ ದಿನಗಳಲ್ಲಿ ಆರೋಗ್ಯದ ಕಾಳಜಿಯನ್ನು ಎಷ್ಟು ಮಾಡಿದರೂ ಸಾಲದು. ಒಮ್ಮೆ ಶಾಖದ ಆಘಾತಕ್ಕೆ ಅಥವಾ ನಿರ್ಜಲೀಕರಣಕ್ಕೆ ತುತ್ತಾದರೆ, ಚೇತರಿಸಿಕೊಳ್ಳಲು ನಾಲ್ಕಾರು ದಿನಗಳಾದರೂ ಬೇಕಾಗುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ, ಜೀವಕ್ಕೆ ಅಪಾಯ ತಪ್ಪಿದ್ದಲ್ಲ. ಹಾಗಾದರೆ ಇವುಗಳಿಂದ (Summer Tips) ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲವೇ?

ಏಕೆ ಹೀಗಾಗುತ್ತದೆ?

ಮೊದಲಿಗೆ, ಬಿಸಿಲಿಗೆ ಎಚ್ಚರ ತಪ್ಪುವುದೇಕೆ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಹೊರಗಿನ ವಾತಾವರಣದ ಉಷ್ಣತೆಯನ್ನು ಆಧರಿಸಿ, ನಮ್ಮ ದೇಹ ತನ್ನ ಉಷ್ಣತೆಯನ್ನು ಮಾರ್ಪಾಡು ಮಾಡಿಕೊಳ್ಳುತ್ತದೆ. ಹೊರಗಿನ ತಾಪಮಾನ ತೀವ್ರವಾಗಿ ಏರಿಕೆಯಾದಾಗ, ದೇಹದೊಳಗಿನ ಉಷ್ಣತೆಯನ್ನು ತಗ್ಗಿಸುವುದಕ್ಕೆ ಶರೀರ ಬೆವರಲು ಪ್ರಾರಂಭಿಸುತ್ತದೆ. ಇದರಿಂದಲೇ ದೇಹ ತಣ್ಣಗಾಗಬೇಕು, ಆಂತರಿಕ ಉಷ್ಣತೆ ನಿಯಂತ್ರಣದಲ್ಲಿ ಇರಬೇಕು. ಆದರೆ ಈ ಎಲ್ಲ ತಂತ್ರಗಳು ಕೈಕೊಟ್ಟಾಗ, ಸಾಕಾಗದೆ ಇದ್ದಾಗ ಅಥವಾ ಅತಿಯಾಗಿ ಬೆವರಿ ದೇಹದಲ್ಲಿ ನೀರಿನಂಶ ಕಡಿಮೆ ಆದಾಗ, ಎಚ್ಚರ ತಪ್ಪುತ್ತದೆ. ಇದರಿಂದ ಮೆದುಳಿಗೆ ಅಗತ್ಯವಾದಷ್ಟು ರಕ್ತಸಂಚಾರ ಆಗದಿದ್ದರೆ, ಪಾರ್ಶ್ವವಾಯು ಸಂಭವಿಸಿ ಜೀವಹಾನಿಯೂ ಆಗಬಹುದು.

ಮಾನವ ಶರೀರ ತನ್ನಷ್ಟಕ್ಕೆ ತಡೆದುಕೊಳ್ಳಲು ಸಾಧ್ಯವಾಗುವ ಗರಿಷ್ಟ ಉಷ್ಣತೆಯೆಂದರೆ ೪೨.೩ ಡಿಗ್ರಿ ಸೆ. ಇದಿಷ್ಟು ತಡೆಯುವುದೂ ಸುಲಭವಿಲ್ಲ. ಇನ್ನು ಇದಕ್ಕಿಂತಲೂ ಹೆಚ್ಚಿನ ತಾಪಮಾನವನ್ನು ಸಹಿಸಿಕೊಳ್ಳಲು ಏನೆಲ್ಲ ಉಪಚಾರ ಸಾಧ್ಯವೋ ಅದನ್ನು ನಮಗೆ ನಾವೇ ಮಾಡಿಕೊಳ್ಳಬೇಕು. ಸಿಕ್ಕಾಪಟ್ಟೆ ನೀರು ಕುಡಿಯುವುದು, ಎಲೆಕ್ಟ್ರೋಲೈಟ್‌ ಮರುಪೂರಣ ಮಾಡುವುದು, ಚೆನ್ನಾಗಿ ಗಾಳಿಯಾಡುವ ವಾತಾವರಣದಲ್ಲಿರುವುದು- ಇಂಥವೆಲ್ಲ ನಾವು ಅಗತ್ಯವಾಗಿ ಮಾಡಬೇಕಾದ ಕೆಲಸಗಳು.

ಉಷ್ಣತೆಗೆ ಮಾತ್ರವಲ್ಲ

ತೀವ್ರ ತಾಪಮಾನಗಳಿಗೆ ಎಚ್ಚರ ತಪ್ಪುವುದು ಬಿಸಿ ಹೆಚ್ಚಾದಾಗ ಮಾತ್ರವಲ್ಲ, ತೀವ್ರ ಚಳಿಯಲ್ಲೂ ಆಗುತ್ತದೆ. ಈ ಎರಡೂ ಅತಿರೇಕದ ತಾಪಮಾನಗಳಲ್ಲಿ ದೇಹದ ಉಷ್ಣತಾ-ನಿಯಂತ್ರಕ ವ್ಯವಸ್ಥೆ ಕೈಕೊಡಬಹುದು. ಬಿಸಿ ಹೆಚ್ಚಾದಾಗ ಮೆದುಳಿಗೆ ರಕ್ತಸಂಚಾರ ಸರಾಗ ಆಗದಿರುವ ಸಂಭವ ಇರುವದಂತೆಯೇ, ಚಳಿ ಹೆಚ್ಚಾದಾಗಲೂ ಆಗುತ್ತದೆ. ಹೊರಗಿನ ಚಳಿ ತೀವ್ರವಾಗಿ ಹೆಚ್ಚಾದರೆ, ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವುದಕ್ಕೆ ರಕ್ತ ನಾಳಗಳು ಸಂಕೋಚಗೊಳ್ಳುತ್ತವೆ. ಹೀಗೆ ಸಂಕೋಚಗೊಳ್ಳುವುದು ಅತಿಯಾದರೆ ಆಗಲೂ ಮೆದುಳಿಗೆ ಬೇಕಾದಷ್ಟು ರಕ್ತಸಂಚಾರ ಆಗದೆ ಜ್ಞಾನ ತಪ್ಪಬಹುದು.

ತಪ್ಪಿಸಿಕೊಳ್ಳಲಾಗದೆ?

ಖಂಡಿತ ಸಾಧ್ಯವಿದೆ. ಮೊದಲಿಗೆ, 40 ಡಿ.ಸೆ. ಉಷ್ಣತೆಯನ್ನು ತಲುಪಿದಾಗ ಮನೆಯಿಂದ ಹೊರಗೆ ಹೋಗಬೇಡಿ. ಹೋಗುವುದು ಅನಿವಾರ್ಯವಾದರೆ, ಸಡಿಲವಾದ ಬಿಳಿ ಅಥವಾ ತಿಳಿ ಬಣ್ಣದ ಹತ್ತಿಯ ಬಟ್ಟೆಗಳನ್ನೇ ಧರಿಸಿ. ತಲೆಗೆ ಟೋಪಿ, ಛತ್ರಿಗಳಂಥವು ಇದ್ದರೆ ಒಳ್ಳೆಯದು. ನಿಲ್ಲಿಸಿದ ಕಾರಿನೊಳಗೆ ಯಾರನ್ನೂ ಬಿಡಬೇಡಿ. ಈ ಸೆಕೆಯಲ್ಲಿ ದಿನಕ್ಕೆ ಐದು ಲೀಟರ್‌ ನೀರು ಅಥವಾ ಪೇಯಗಳನ್ನು ಕುಡಿಯುವ ಗುರಿ ಇರಿಸಿಕೊಳ್ಳಿ. ಆಲ್ಕೋಹಾಲ್‌ ಮತ್ತು ಕೆಫೇನ್‌ ಸೇವನೆಯ ಮೇಲೆ ಕಡಿವಾಣ ಅಗತ್ಯ. ಇಲ್ಲದಿದ್ದರೆ ದೇಹ ಬೇಗನೇ ನಿರ್ಜಲೀಕರಣಕ್ಕೆ ತುತ್ತಾಗುತ್ತದೆ. ಜೊತೆಗೆ, ಸೆಕೆಯಲ್ಲಿ ದೇಹವನ್ನು ತಂಪಾಗಿಸುವ ಶಾರೀರಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ತಲೆನೋವು, ಅತಿಯಾಗಿ ಬೆವರುವುದು, ಬಾಯಿ ಒಣಗುವುದು, ತೀರದ ದಾಹ, ಮೈಯೆಲ್ಲ ಬಿಸಿಯಾದ ಅನುಭವಗಳು ಆದರೆ ಜಾಗ್ರತೆ ಮಾಡಿ. ತಕ್ಷಣವೇ ದೇಹವನ್ನು ತಂಪಾಗಿಸುವ ಬಗ್ಗೆ ಕ್ರಮ ಕೈಗೊಳ್ಳಿ. ತಂಪಾದ ಬಟ್ಟೆಯಿಂದ ಇಡೀ ದೇಹವನ್ನು ಒರೆಸಬಹುದು. ಒಆರೆಸ್‌, ಎಳನೀರು ಮುಂತಾದ ಎಲೆಕ್ಟ್ರೋಲೈಟಿಕ್‌ ಪೇಯಗಳು ಬೇಕಾಗುತ್ತವೆ. ಕೂಲರ್‌, ಎಸಿಯಂಥ ಉಪಕರಣಗಳ ಮೂಲಕ ಮನೆಯ ವಾತಾವರಣವನ್ನು ತಂಪಾಗಿಸಲು ಪ್ರಯತ್ನಿಸಿ. ಈ ಹೊತ್ತಿನಲ್ಲಿ ಮನೆಯಿಂದ ಹೊರಗಿದ್ದರೆ, ತಂಪಾದ ನೆರಳಿನಂಥ ಜಾಗಕ್ಕೆ ಹೋಗಿ. ಬಿಸಿಲಿನ ಆಘಾತ ತಾಗಿದಾಗ ತ್ವರಿತವಾಗಿ ಕ್ರಮ ಕೈಗೊಳ್ಳದಿದ್ದರೆ ಜೀವಕ್ಕೇ ಎರವಾಗುತ್ತದೆ, ನೆನಪಿರಲಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version