ಬೆಂಗಳೂರು: ನೈರುತ್ಯ ಮುಂಗಾರು (Rain News) ಉತ್ತರ ಒಳನಾಡಿನಲ್ಲಿ ಸಾಧಾರಣವಾಗಿತ್ತು. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿಯ ಕೆಲವು ಸ್ಥಳಗಳಲ್ಲಿ ಮತ್ತು ಒಳನಾಡಿನ ಒಂದೆರಡು ಸ್ಥಳಗಳಲ್ಲಿ (Karnataka Weather Forecast) ಮಳೆಯಾಗಿದೆ.
ಎಲ್ಲೆಲ್ಲಿ ಮಳೆಯ ಸಿಂಚನ
ಉತ್ತರ ಒಳನಾಡು, ಕರಾವಳಿಯ ಕೆಲವೆಡೆ ಮಳೆಯಾಗಿರುವ ವರದಿ ಆಗಿದೆ. ರಾಯಚೂರಿನ ಗಬ್ಬೂರಿನಲ್ಲಿ 6 ಸೆಂ.ಮೀ, ಉಡುಪಿ, ಶೋರಾಪುರ, ಸೈದಾಪುರದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಅಂಕೋಲಾ, ಗೋಕರ್ಣ, ಕುಮಟಾ , ಕೆಂಭಾವಿ , ತಾವರಗೇರಾ , ಮುದಗಲ್, ಮಂಠಾಳದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಕೋಟ, ಹೊನಾವರ ವೀಕ್ಷಣಾಲಯ , ಕಾರ್ಕಳ, ಸಿದ್ದಾಪುರ, ಮಂಕಿ, ಯಲ್ಲಾಪುರ, ಯಡ್ರಾಮಿ ಸೇರಿದಂತೆ ದೇವದುರ್ಗ, ಕವಡಿಮಟ್ಟಿ ಎ.ಆರ್.ಜಿ, ಮಸ್ಕಿ, ಕಲಬುರಗಿ ವೀಕ್ಷಣಾಲಯ , ಕಕ್ಕೇರಿ, ಕಮಲಾಪುರ, ಮಾನ್ವಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ಗುಡುಗು ಸಹಿತ ಮಳೆ ಎಚ್ಚರಿಕೆ
ಜೂನ್ 16ರಂದು ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಒಳನಾಡಿನ ಕೆಲವು ಸ್ಥಳಗಳಲ್ಲಿ ಕೆಲವೊಮ್ಮೆ ಗುಡುಗು ಜತೆಗೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ತಗ್ಗಿದೆ. ಮೀನುಗಾರರಿಗೆ ನೀಡಲಾಗಿದ್ದ ಸೂಚನೆಯು ಮುಗಿದಿದೆ.
ರಾಜಧಾನಿ ಬೆಂಗಳೂರಿನಲ್ಲಿ ತಣ್ಣನೆಯ ವಾತಾವರಣ ಇರಲಿದ್ದು, ಮೋಡ ಕವಿದ ವಾತಾವರಣ ಇರಲಿದೆ. ಪ್ರತ್ಯೇಕ ಸ್ಥಳದಲ್ಲಿ ಗುಡುಗು ಸಹಿತ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶವು 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Anekal News : ಯುವತಿ ಕೈ ಬಲಿ ಪಡೆದ ಅಕ್ರಮ ಡ್ರೈ ಕ್ಲೀನಿಂಗ್ ಕಾರ್ಖಾನೆ; ಚಿಕಿತ್ಸೆ ಕೊಡಿಸದೆ ಮಾಲೀಕ ಎಸ್ಕೇಪ್
ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?
ಮುಂಗಾರು ಚುರುಕಾಗುತ್ತಿದೆ. ಮಳೆಗಾಲವನ್ನು ಸಿಕ್ಕಾಪಟ್ಟೆ ಪ್ರೀತಿಸುವವರು ಇದ್ದಷ್ಟೇ ಮುಖ ಹಿಂಡುವವರೂ ಇದ್ದಾರೆ. ಇದಕ್ಕೆ ಕಾರಣಗಳು ಬಹಳಷ್ಟಿದ್ದರೂ, ಈ ಒದ್ದೆ-ಥಂಡಿ-ಶೀತದ ದಿನಗಳಲ್ಲಿ ಕಾಡುವ ಸೋಂಕುಗಳು ಅವುಗಳಲ್ಲಿ ಒಂದು ಪ್ರಮುಖ ಕಾರಣ. ಹೊರಗೆ ಮೋಡ ಕಟ್ಟಿದಂತೆಯೇ ಒಳಗೆ ಮೂಗು ಕಟ್ಟಿ, ಹೊರಗಿನಂತೆ ಒಳಗೂ ಧಾರಾಕಾರ ಹರಿದು, ಗುಡುಗು-ಸಿಡಿಲಿನಂತೆ ಕೆಮ್ಮು ಪ್ರಾರಂಭವಾದರೆ- ಮಳೆಯನ್ನು ಪ್ರೀತಿಸಲು ಹೇಗೆ ಸಾಧ್ಯ? ರೋಗಾಣುಗಳನ್ನು ತಡೆಯಲು ಸಾಧ್ಯವಿಲ್ಲದಿದ್ದರೂ, ನಮ್ಮ ದೇಹವನ್ನು ಸದೃಢವಾಗಿ ಇರಿಸಿಕೊಳ್ಳಬಹುದಲ್ಲ. ರೋಗ ನಿರೋಧಕ ಶಕ್ತಿಗೆ ಬಲ ಬರುವುದೇ ನಮ್ಮ ಆಹಾರದಿಂದ. ಸೋಂಕು ದೂರ ಇರಿಸುವುದಕ್ಕೆ (Tips For Rainy Season) ಎಂಥ ಆಹಾರ ಒಳ್ಳೆಯದು?
ವಿಟಮಿನ್ ಸಿ ಆಹಾರಗಳು
ದೇಹದ ರೋಗ ನಿರೋಧಕ ಶಕ್ತಿಯನ್ನು ಉದ್ದೀಪಿಸುವಲ್ಲಿ ಸಿ ಜೀವಸತ್ವ ಪ್ರಧಾನವಾಗಿ ಬೇಕು. ಅದರಲ್ಲೂ ನೆಗಡಿ, ಕೆಮ್ಮು, ಜ್ವರದಂಥ ಮಳೆಗಾಲದ ಸೋಂಕು ರೋಗಗಳನ್ನು ದೂರ ಇಡುವುದಕ್ಕೆ ವಿಟಮಿನ್ ಸಿ ಅಗತ್ಯವಾಗಿ ಬೇಕು. ಹಾಗಾಗಿ ಕಿತ್ತಳೆ, ನಿಂಬೆ, ದಾಳಿಂಬೆ, ಪಪ್ಪಾಯ, ಪೇರಳೆ, ಬ್ರೊಕೊಲಿ, ದಪ್ಪಮೆಣಸು, ಮೊಳಕೆ ಕಟ್ಟಿದ ಕಾಳುಗಳನ್ನು ತಪ್ಪದೆ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
ಶುಂಠಿ
ಇದಕ್ಕೆ ಹಲವಾರು ಔಷಧೀಯ ಗುಣಗಳಿವೆ. ಅದರಲ್ಲೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಬ್ಯಾಕ್ಟೀರಿಯ ನಿರೋಧಕ ಮತ್ತು ಉರಿಯೂತ ಶಾಮಕ ಗುಣಗಳು ಇದರಲ್ಲಿ ಧಾರಾಳವಾಗಿವೆ. ಕೆಮ್ಮು, ನೆಗಡಿ, ಕಫದಂಥ ಸಮಸ್ಯೆಗಳಿಗೆ ಶುಂಠಿ ಚಹಾ, ಶುಂಠಿ ಕಷಾಯಗಳು ಉಪಶಮನ ನೀಡಬಲ್ಲವು. ಗಂಟಲು ಕಟ್ಟಿದ್ದರೆ, ಗಂಟಲಲ್ಲಿ ನೋವಿದ್ದರೆ ಬೆಚ್ಚಗಿನ ಶುಂಠಿಯ ಕಷಾಯಕ್ಕೆ ಕೊಂಚ ಜೇನುತುಪ್ಪ ಸೇರಿಸಿ ಕುಡಿದರೆ ಆರಾಮ ದೊರೆತೀತು.
ಜಿಂಕ್ ಆಹಾರಗಳು
ನಮ್ಮ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸತುವಿನಂಶ ಇರುವ ಆಹಾರಗಳು ಸಹ ಅಗತ್ಯ. ಇದನ್ನು ಸಿ ಜೀವಸತ್ವದಂತೆ ಹೇರಳವಾಗಿ ಪಡೆಯಲಾಗದು. ಬದಲಿಗೆ, ಹಲವಾರು ಆಹಾರಗಳಿಂದ ಮಿಲಿ ಗ್ರಾಂ ಗಳ ಲೆಕ್ಕದಲ್ಲಿಯೇ ಪಡೆಯಬೇಕು ನಾವು. ಇದಕ್ಕಾಗಿ ಅಣಬೆಗಳು, ಪಾಲಕ್ ಸೊಪ್ಪು, ದ್ವಿದಳ ಧಾನ್ಯಗಳು, ಮೊಸರು, ಹಾಲು, ಗೋಡಂಬಿ, ಕುಂಬಳಕಾಯಿ ಬೀಜ, ಶೇಂಗಾ, ಬಾದಾಮಿಯಂಥ ಆಹಾರಗಳ ಮೂಲಕ ಈ ಸತ್ವವನ್ನು ಪಡೆಯಬಹುದು.
ಒಮೇಗಾ 3 ಕೊಬ್ಬಿನಾಮ್ಲ
ಇದು ನಮ್ಮ ಮೆದುಳು ಮತ್ತು ಹೃದಯದ ಯೋಗಕ್ಷೇಮ ನೋಡಿಕೊಳ್ಳುವುದಷ್ಟೇ ಅಲ್ಲ, ಸೋಂಕುಗಳನ್ನು ದೂರ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ. ಇದಕ್ಕಾಗಿ ಮಳೆಗಾಲದ ಆರಂಭದಲ್ಲಿ ದೊರೆಯುವ ಬೆಣ್ಣೆ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿ. ಜೊತೆಗೆ ವಾಲ್‌ನಟ್, ಬಾದಾಮಿ, ಅಗಸೆಬೀಜ, ಕೊಬ್ಬಿರುವ ಮೀನುಗಳನ್ನು ಸೇವಿಸುವುದರಿಂದ ಒಮೇಗಾ ೩ ಕೊಬ್ಬಿನಾಮ್ಲ ವಿಫುಲವಾಗಿ ಲಭಿಸುತ್ತದೆ.
ಪ್ರೊಬಯಾಟಿಕ್ ಆಹಾರಗಳು
ನಮ್ಮ ಜೀರ್ಣಾಂಗಗಳ ಆರೋಗ್ಯ ಚೆನ್ನಾಗಿದ್ದರೆ ಮಾತ್ರವೇ ದೇಹದ ಪ್ರತಿರೋಧಕ ಶಕ್ತಿ ಬಲವಾಗಿರುತ್ತದೆ. ಜೀರ್ಣಾಂಗಗಳಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆ ಭರಪೂರ ಇದ್ದಷ್ಟೂ ದೇಹ ರೋಗಮುಕ್ತವಾಗಿರುತ್ತದೆ ಎನ್ನುತ್ತವೆ ಅಧ್ಯಯನಗಳು. ಹಾಗಾಗಿ ಪ್ರೊಬಯಾಟಿಕ್ ಆಹಾರಗಳು ನಮ್ಮ ದೇಹಕ್ಕೆ ಬೇಕೇಬೇಕು. ಇದಕ್ಕಾಗಿ ಮೊಸರು, ಮಜ್ಜಿಗೆಯಂಥ ಹುದುಗು ಬರಿಸಿದ ಆಹಾರಗಳನ್ನು ಪ್ರತಿದಿನ ಸೇವಿಸಿ.
ಕಷಾಯಗಳು
ಶೀತದ ದಿನಗಳಲ್ಲಿ ದೇಹವನ್ನು ಬೆಚ್ಚಗೆ ಇರಿಸಿಕೊಳ್ಳುವುದಕ್ಕೆ ತರಹೇವಾರಿ ಕಷಾಯಗಳನ್ನು ಮಾಡಿಕೊಳ್ಳಬಹುದು. ಇದರಿಂದಲೂ ನಮ್ಮ ದೇಹದ ಸೋಂಕು ನಿರೋಧಕ ಶಕ್ತಿ ಪ್ರಬಲವಾಗುತ್ತದೆ. ಇದಕ್ಕಾಗಿ ಯಾವೆಲ್ಲ ವಸ್ತುಗಳನ್ನು ಉಪಯೋಗಿಸಬಹುದು ಎನ್ನುವುದಕ್ಕೆ ಉಪಯುಕ್ತ ವಿವರಗಳು ಇಲ್ಲಿವೆ. ಈ ಯಾವುದೇ ವಸ್ತುಗಳನ್ನು ಬಳಸಿ ಕಷಾಯ ಮಾಡಿಕೊಳ್ಳಬಹುದು.
ಅರಿಶಿನ
ಇದರಲ್ಲಿರುವ ಕರ್ಕುಮಿನ್ ಎಂಬ ಪ್ರಬಲ ಉತ್ಕರ್ಷಣ ನಿರೋಧಕವು ಸೋಂಕುಗಳನ್ನು ಹೊಡೆದೋಡಿಸುತ್ತದೆ
ಶುಂಠಿ
ಇದರ ಜಿಂಜರಾಲ್ ಅಂಶದಲ್ಲಿ ಉರಿಯೂತ ಶಮನ ಮಾಡಿ, ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ
ಬೆಳ್ಳುಳ್ಳಿ
ಇದರ ಅಲ್ಲಿಸಿನ್ ಅಂಶದಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯ ನಿರೋಧಕ ಗುಣವಿದೆ
ದಾಲ್ಚಿನ್ನಿ ಚಕ್ಕೆ
ಇದರಲ್ಲಿರುವ ಉರಿಯೂತ ಶಾಮಕ ಸತ್ವಗಳು ರೋಗನಿರೋಧಕವೂ ಹೌದು
ಕಾಳು ಮೆಣಸು
ಇದರ ಕ್ಯಾಪ್ಸೈಸಿನ್‌ನಲ್ಲಿ ದೇಹದ ಪ್ರತಿರೋಧಕತೆಯನ್ನು ವೃದ್ಧಿಸುವ ಸಾಮರ್ಥ್ಯವಿದೆ
ಜೀರಿಗೆ
ಇದರ ಉತ್ಕರ್ಷಣ ನಿರೋಧಕಗಳು ಸೋಂಕಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ
ಧನಿಯ
ಇದರ ಉತ್ಕರ್ಷಣ ನಿರೋಧಕ ಸತ್ವಗಳು ಸೋಂಕುಗಳನ್ನು ನಿವಾರಿಸುತ್ತವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ