ಬೆಂಗಳೂರು: ಮಳೆ ಕಾಣದೆ ಕಂಗೆಟ್ಟಿದ್ದ ಕರ್ನಾಟಕಕ್ಕೆ ಭಾರತೀಯ ಹವಾಮಾನ ಇಲಾಖೆಯು (Karnataka Weather Forecast) ದೀರ್ಘಕಾಲಿನ ಮುಂಗಾರು ಮಳೆ ಕುರಿತು ಗುಡ್ ನ್ಯೂಸ್ ನೀಡಿದೆ. ಈ ಬಾರಿ ವಾಡಿಕೆಗಿಂತ ತುಸು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಕರ್ನಾಟಕ ಸೇರಿದಂತೆ ನೈರುತ್ಯ ಭಾರತದಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ.
ರಾಜ್ಯಕ್ಕೆ ಮುಂಗಾರು ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಸರಾಸರಿ ವಾಡಿಕೆ ಮಳೆ ಪ್ರಮಾಣ 85.2 ಸೆ.ಮೀ ರಷ್ಟಿದೆ. ದೀರ್ಘಾಕಾಲಿನ ಮುಂಗಾರು ಮಳೆ ಮುನ್ಸೂಚನೆ ಪ್ರಕಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ದೀರ್ಘಾವಧಿ ಸರಾಸರಿ ವಾಡಿಕೆ ಮಳೆ ಜೂನ್‌ನಲ್ಲಿ 19.9 ಸೆಂ.ಮೀ, ಜುಲೈನಲ್ಲಿ 27.1 ಸೆಂ.ಮೀ. ಆಗಸ್ಟ್‌ನಲ್ಲಿ 22 ಸೆಂ.ಮೀ ಹಾಗೂ ಸೆಪ್ಟೆಂಬರ್‌ನಲ್ಲಿ 16.1 ಸೆಂ.ಮೀ ನಷ್ಟಿದ್ದು ಒಟ್ಟಾರೆ ರಾಜ್ಯಕ್ಕೆ ಮುಂಗಾರು ಹಂಗಾಮಿನಲ್ಲಿ 85.2 ಸೆಂ.ಮೀ ನಷ್ಟಿದೆ.
2024ರ ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೇಶದಾದ್ಯಂತ ದೀರ್ಘಾವಧಿ ಸರಾಸರಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಶೇಕಡಾ 5ರಷ್ಟು ವ್ಯತ್ಯಯದೊಂದಿಗೆ ಶೇಕಡಾ 106 ರಷ್ಟು ವಾಡಿಕೆಗಿಂತಾ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ಕಳೆದ 1971-2020ರ ಸರಾಸರಿ ವಾಡಿಕೆ ಮಳೆ ಪ್ರಮಾಣ 87 ಸೆಂ.ಮೀ ನಷ್ಟಿದೆ . ಮುಂಗಾರು ಮಳೆ ಮುನ್ಸೂಚನೆ ಅನ್ವಯ ದೇಶದಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ದೀರ್ಘಾವಧಿ ಸರಾಸರಿ ಶೇ. 104-110ರಷ್ಟು ಇರಲಿದೆ.
ಇದನ್ನೂ ಓದಿ: Physical Abuse : ಇವನೆಂಥ ಗಂಡ! ಕಾಲ್ ಗರ್ಲ್ ಕರೆಸಿ ಪತ್ನಿ ಮುಂದೆಯೇ ಅಸಭ್ಯ ವರ್ತನೆ
ಇನ್ನೊಂದು ವಾರ ಮಳೆ ಅಬ್ಬರ
ನಾಳೆಯಿಂದ ಅಂದರೆ ಏಪ್ರಿಲ್ 17 ರಿಂದ 22ರವರೆಗೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಇದೆ. ರಾಜ್ಯಾದ್ಯಂತ ಬುಧವಾರದಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲಬುರುಗಿ ಹಾಗೂ ಕೊಪ್ಪಳ, ರಾಯಚೂರು, ವಿಜಯಪುರ ಸೇರಿದಂತೆ ಯಾದಗಿರಿ, ಬಳ್ಳಾರಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಉಳಿದಂತೆ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮೈಸೂರು, ಮಂಡ್ಯ, ರಾಮನಗರ ಮತ್ತು ತುಮಕೂರಿನ ಒಂದೆರಡು ಕಡೆಗಳಲ್ಲಿ ಮಳೆ ಸಾಧ್ಯತೆ ಇದೆ. ಉಳಿದಂತೆ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಉಷ್ಣಾಂಶ 37 ಹಾಗೂ ಕನಿಷ್ಠ ಉಷ್ಣಾಂಶ 22 ಡಿ.ಸೆ ಇರುವ ಸಾಧ್ಯತೆ ಇದೆ.
ಗುಡುಗು ಮುನ್ನೆಚ್ಚರಿಕೆ
ಏಪ್ರಿಲ್ 19, 20 ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಗಾಳಿಯ ವೇಗ ಗಂಟೆಗೆ 30-40 ಕಿ.ಮೀ ತಲುಪುವ ಜತೆಗೆ ಮೇಲ್ಮೈ ಮಾರುತಗಳು ಬಲವಾದ ಮತ್ತು ರಭಸದಿಂದ ಕೂಡಿರುವ ಸಾಧ್ಯತೆ ಇದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ