ಬೆಂಗಳೂರು: ಒಂದು ಕಡೆ ಬಿಸಿಲ ತಾಪ ಜೋರಾಗಿದ್ದರೆ, ಮತ್ತೊಂದು ಕಡೆ ಮಳೆಯು ಅಬ್ಬರಿಸುತ್ತಿದೆ. ವಿಜಯಪುರದಲ್ಲಿ ಬಿರುಗಾಳಿ ಸಹಿತ ಮಳೆಗೆ (Rain News) ಬೆಳೆಗಳು ನಾಶವಾಗಿವೆ. ಶನಿವಾರ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ (Karnataka Weather Forecast) ಮಳೆಯಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣಹವೆ ಇತ್ತು. ಇನ್ನೂ ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶವು 41.4 ಡಿ.ಸೆ ಹಾಗೂ ಕನಿಷ್ಠ ಉಷ್ಣಾಂಶವು ಚಾಮರಾಜನಗರದಲ್ಲಿ 17.8 ಡಿ.ಸೆ ದಾಖಲಾಗಿದೆ.
ಮುಂದಿನ 24 ಗಂಟೆಯಲ್ಲಿ ಉತ್ತರ ಒಳನಾಡಿನಲ್ಲಿ ಮಳೆಯು ಅಬ್ಬರಿಸಲಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡು, ಮಲೆನಾಡಿನಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka weather Forecast) ನೀಡಿದೆ
ಗುಡುಗು ಮುನ್ನೆಚ್ಚರಿಕೆ
ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ ಹಾಗೂ ವಿಜಯಪುರದ ಕೆಲವೆಡೆ ಗುಡುಗು ಮಿಂಚಿನ ಮಳೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆಯನ್ನು ನೀಡಿದೆ.
ತಾಪಮಾನದ ಮುನ್ಸೂಚನೆ
ಮುಂದಿನ 2 ದಿನಗಳು ಒಳನಾಡಿನ ಹಲವೆಡೆ ಗರಿಷ್ಠ ತಾಪಮಾನವು 2-3 ಡಿ.ಸೆ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದಾಗಿ ಬಿಸಿಲ ಧಗೆಯು ವಿಪರೀತವಾಗಿ ಇರಲಿದೆ.
ಹೀಟ್ ವೇವ್ ಅಲರ್ಟ್
ಏಪಿಲ್ 3 ರಿಂದ 5ರವರೆಗೆ ಉತ್ತರ ಒಳನಾಡಿನ ಕಲಬುರಗಿ, ಬಾಗಲಕೋಟೆ, ರಾಯಚೂರು, ಕೊಪ್ಪಳ ಜಿಲ್ಲೆಗಳ ಸುತ್ತಮುತ್ತಿನ ಪ್ರದೇಶಗಳಲ್ಲಿ ಶಾಖದ ಅಲೆಯ ಪರಿಸ್ಥಿತಿ ಇರಲಿದೆ.
ಬೆಂಗಳೂರಲ್ಲಿ ವಾತಾವರಣ ಯಥಾಸ್ಥಿತಿ
ಬೆಂಗಳೂರಲ್ಲಿ ಮುಖ್ಯವಾಗಿ ನಿರ್ಮಲ ಆಕಾಶ ಇರಲಿದೆ. ಗರಿಷ್ಠ ಉಷ್ಣಾಂಶ 36 ಹಾಗೂ ಕನಿಷ್ಠ ಉಷ್ಣಾಂಶ 22 ಡಿ.ಸೆ ಇರಲಿದೆ. ಬೆಂಗಳೂರಿಗೆ ಮಳೆ ಸೂಚನೆ ಇಲ್ಲ, ಬದಲಿಗೆ ಬಿಸಿಲ ಧಗೆ ಹೆಚ್ಚಾಗಿ ಇರಲಿದೆ.
ಇದನ್ನೂ ಓದಿ: Kalaburagi News : ಕಲಬುರಗಿಯಲ್ಲಿ ನರೇಗಾ ಕಾರ್ಮಿಕನ ಬಲಿ ಪಡಿಯಿತಾ ರಣ ಬಿಸಿಲು!
ಬಿರುಗಾಳಿಗೆ ಬಾಳೆ ತೋಟ, ದ್ರಾಕ್ಷಿ ಬೆಳೆ ನಾಶ
ವಿಜಯಪುರ ತಾಲೂಕಿನ ಬೊಮ್ಮನಳ್ಳಿ ಗ್ರಾಮದಲ್ಲಿ ಮುರುಗೆಪ್ಪ ಚೌಗುಲಾ ಎಂಬುವರಿಗೆ ಸೇರಿದ ಬಾಳೆ ತೋಟವು ಬಿರುಗಾಳಿಗೆ ನಾಶವಾಗಿದೆ. ಶನಿವಾರ ಸಂಜೆ ಬೀಸಿದ ಬಿರುಗಾಳಿ ಸುಮಾರು 1 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬಾಳೆ ಗಿಡಗಳು ಧರೆಗುರುಳಿವೆ. ಇದರಿಂದಾಗಿ ಸುಮಾರು ರೂ. 2 ಲಕ್ಷ ರೂ. ಹಾನಿಯಾಗಿದೆ.
ಕಟಾವು ಹಂತಕ್ಕೆ ಬಂದಿದ್ದ ಬಾಳೆ ಗಿಡಗಳು ನಾಶವಾಗಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ರೈತ ಕಂಗಾಲಾಗಿದ್ದು, ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಇನ್ನೂ ಶನಿವಾರ ರಾತ್ರಿ ಕೆಲವೆಡೆ ಗಾಳಿ ಸಹಿತ ಸಿಡಿಲಿನ ಮಳೆಯಾಗಿದೆ. ವಿಜಯಪುರದ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ಮಳೆ ಗಾಳಿಯು ಅಬ್ಬರಿಸಿತ್ತು. ಜೋರಾಗಿ ಬಂದ ಮಳೆ-ಗಾಳಿಗೆ ಮರ ಹಾಗೂ ವಿದ್ಯುತ್ ಕಂಬಗಳು ಮುರಿದು ಬಿದ್ದಿತ್ತು.
ಮಳೆಯಿಂದಾಗಿ ಹಳಗುಣಕಿ ಗ್ರಾಮದ ವಿಶ್ಚನಾಥ ಪಾಟೀಲ್ ಎಂಬುವವರು ಬೆಳೆದ ದ್ರಾಕ್ಷಿ ಬೆಳೆಗೆ ಹಾನಿಯಾಗಿದೆ. ದ್ರಾಕ್ಷಿ ಸಾಲುಗಳ ಮೇಲೆ ವಿದ್ಯುತ್ ಕಂಬಗಳು ಹಾಗೂ ಮರ ಬಿದ್ದ ಪರಿಣಾಮ ದ್ರಾಕ್ಷಿ ಬೆಳೆ ನೆಲಕಚ್ಚಿದೆ. ದ್ರಾಕ್ಷಿ ಬೆಳೆಗಾರ ವಿಶ್ವನಾಥ ಪಾಟೀಲ್ ತೋಟಗಾರಿಕಾ ಇಲಾಖೆಯು ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ