ಬೆಂಗಳೂರು: ರಣ ಬಿಸಿಲು ಜನರ ಜೀವ ಹಿಂಡುತ್ತಿದೆ. ನೀರಿಲ್ಲದೇ ಜನರು ಮಾತ್ರವಲ್ಲ ಮೂಕಜೀವಿಗಳು ಶಾಖಘಾತಕ್ಕೆ ಒಳಗಾಗುತ್ತಿದ್ದಾರೆ. ಸದ್ಯ ಹವಾಮಾನ ಇಲಾಖೆ ಪ್ರಕಾರ ಸೋಮವಾರ ಸಂಜೆ ಹಾಗೂ ಮಂಗಳವಾರದಂದು ಹಲವೆಡೆ ಮಳೆಯಾಗುವ (Rain News) ಸಾಧ್ಯತೆ ಇದೆ. ಈ ಬಗ್ಗೆ ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.
ಯುಗಾದಿ ಹಬ್ಬದಂದು ಅಂದರೆ ಏ.9ರಂದು ಮಲೆನಾಡಿನ ಚಿಕ್ಕಮಗಳೂರು, ಕೊಡಗು ಹಾಗೂ ದಕ್ಷಿಣ ಒಳನಾಡಿನ ಮೈಸೂರಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದೆಡೆ ಒಣಹವೆ ಇರಲಿದೆ.
ಹಗಲು ಸುಡು ಬಿಸಿಲು, ರಾತ್ರಿ ಬೆಚ್ಚನೆಯ ವಾತಾವರಣ
ಹವಾಮಾನ ವೈಪರಿತ್ಯದಿಂದಾಗಿ ರಾಜ್ಯದಲ್ಲಿ ಹಗಲು ಹೊತ್ತು ಸುಡು ಬಿಸಿಲು ಇದ್ದರೆ, ರಾತ್ರಿ ಹೊತ್ತು ಬೆಚ್ಚನೆಯ ವಾತಾವರಣದೊಂದಿಗೆ ಬಿಸಿ ಗಾಳಿ ಬೀಸಲಿದೆ. ಮುಖ್ಯವಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಬಿಸಿ ಮತ್ತು ಆರ್ದ್ರೆತೆ ಇರಲಿದೆ. ಗರಿಷ್ಠ ತಾಪಮಾನವು ಮುಂದಿನ 2 ದಿನಗಳಲ್ಲಿ ಒಳನಾಡಿನ ಎಲ್ಲಾ ಸ್ಥಳಗಳಲ್ಲಿ 2-4 ಡಿ.ಸೆ ಏರಿಕೆ ಆಗಲಿದೆ. ಕೊಪ್ಪಳ, ರಾಯಚೂರು ಮತ್ತು ಕಲಬುರಗಿಯಲ್ಲಿ ರಾತ್ರಿ ಬೆಚ್ಚನೆಯ ವಾತಾವರಣ ಇರಲಿದೆ.
ಹೀಟ್ ವೇವ್ ಅಲರ್ಟ್
ಉತ್ತರ ಕನ್ನಡ, ಬಾಗಲಕೋಟೆ, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿಗೆ ಹೀಟ್ ವೇವ್ ಅಲರ್ಟ್ ನೀಡಲಾಗಿದೆ. ಇನ್ನೂ ಬೆಂಗಳೂರಿನಲ್ಲಿ ಒಣಹವೆ ಇರಲಿದ್ದು, ಗರಿಷ್ಠ ಉಷ್ಣಾಂಶ 38 ಹಾಗೂ ಕನಿಷ್ಠ ಉಷ್ಣಾಂಶ 23 ಡಿ.ಸೆ ಇರಲಿದೆ.
ಉಷ್ಣಾಘಾತಕ್ಕೆ ಕಲಬುರಗಿ ತಲ್ಲಣ
ಭಾನುವಾರ ರಾಜ್ಯಾದ್ಯಂತ ಶುಷ್ಕ ವಾತಾವರಣವೇ ಮೇಲುಗೈ ಸಾಧಿಸಿತ್ತು. ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದ್ದು, ಕರಾವಳಿಯಲ್ಲಿ ಒಣ ಹವೆ ಇತ್ತು. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶವು 42.3 ಡಿ.ಸೆ ದಾಖಲಾಗಿತ್ತು.
ಇದನ್ನೂ ಓದಿ: Benefits of Summer Fruits: ಬೇಸಿಗೆಯಲ್ಲಿ ಈ ಹಣ್ಣುಗಳನ್ನು ನಾವು ತಿನ್ನಲೇಬೇಕು!
ರಾಜ್ಯದಲ್ಲಿ 600 ಹೀಟ್ ಸ್ಟ್ರೋಕ್ ಕೇಸ್; ಏರುತ್ತಿದೆ ಶಾಖ, ಸಾವಿಗೂ ಕಾರಣವಾದೀತು, ಎಚ್ಚರಿಕೆ ವಹಿಸಿ!
ಬೆಂಗಳೂರು: ಈ ವರ್ಷದ ಬೇಸಿಗೆಯಲ್ಲಿ (Summer) ಕಳೆದ ಒಂದು ತಿಂಗಳಿನಲ್ಲೇ ರಾಜ್ಯಾದ್ಯಂತ 600 ಹೀಟ್ ಸ್ಟ್ರೋಕ್ (Heat Stroke) ಪ್ರಕರಣಗಳು ವರದಿಯಾಗಿವೆ. ಬೇಸಿಗೆ ಬಿಸಿಲಿನ ಶಾಖ ಇನ್ನಷ್ಟು ಏರುತ್ತಲೇ ಇದ್ದು, ಮತ್ತಷ್ಟು ಪ್ರಕರಣಗಳು ತಲೆದೋರುವ ಆತಂಕ ಎದುರಾಗಿದೆ.
ಇವುಗಳನ್ನು ಟ್ರೀಟ್ ಮಾಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಹೀಟ್ ಸ್ಟ್ರೋಕ್ ವಾರ್ಡ್‌ಗಳನ್ನು (Heat Stroke Ward) ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಹೀಟ್ ಸ್ಟ್ರೋಕ್ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.
ಕಳೆದ 8 ವರ್ಷಗಳಲ್ಲಿಯೇ ಗರಿಷ್ಠ ತಾಪಮಾನ ಹಾಗೂ ಹೀಟ್ ವೇವ್ ರಾಜ್ಯದಲ್ಲಿ ಕಂಡುಬಂದಿದೆ. ರಾಜ್ಯದಲ್ಲಿ ಇದುವರೆಗೂ ಒಟ್ಟು 600 ಹೀಟ್ ವೇವ್ ಕೇಸ್ ದಾಖಲಾಗಿದೆ. ತಾಪಮಾನದಲ್ಲಿ ಆದ ಏರಿಕೆಯಿಂದ ಮಕ್ಕಳು, ವೃದ್ಧರು ಹಾಗೂ ದುರ್ಬಲರಲ್ಲಿ ಅಸ್ವಸ್ಥತೆ ಉಂಟಾಗಿದೆ. ವಯಸ್ಸಾದವರಲ್ಲಿ ಹೀಟ್ ಸ್ಟ್ರೋಕ್‌ನಿಂದ ಕಡಿಮೆ ರಕ್ತದೊತ್ತಡ ಹಾಗೂ ನಿತ್ರಾಣ ಉಂಟಾಗುತ್ತಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಹೀಟ್ ಸ್ಟ್ರೋಕ್ ವಾರ್ಡ್ ನಿರ್ಮಾಣ ಮಾಡಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. 5ರಿಂದ 6 ಬೆಡ್ ಹೊಂದಿರುವ ಹೀಟ್ ಸ್ಟ್ರೋಕ್ ವಾರ್ಡ್ ನಿರ್ಮಾಣವಾಗುತ್ತಿದೆ. ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಹೀಟ್ ಸ್ಟ್ರೋಕ್ ವಾರ್ಡ್ ನಿರ್ಮಿಸಲಾಗಿದೆ. ಅಲ್ಲಿ ಔಷಧಿಗಳು, ಆಕ್ಸಿಜನ್, ಕೂಲರ್, ಫ್ಯಾನ್ ಒದಗಿಸಲಾಗುತ್ತಿದೆ.
ಏನಿದು ಹೀಟ್ ಸ್ಟ್ರೋಕ್? ಎಚ್ಚರಿಕೆ ಹೇಗೆ?
ಬಿಸಿಲಿನ ಶಾಖದ ಹೊಡೆತದಿಂದಾಗಿ ದೇಹ ತನ್ನ ತಾಪಮಾನವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಹೀಟ್ ಸ್ಟ್ರೋಕ್ ಉಂಟಾಗುತ್ತದೆ. ದೇಹದ ಉಷ್ಣತೆಯು ವೇಗವಾಗಿ ಹೆಚ್ಚಾಗುತ್ತದೆ. ಶಾಖ ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ. ದೇಹದ ಬೆವರುವಿಕೆಯ ಕಾರ್ಯವಿಧಾನವೂ ವಿಫಲಗೊಳ್ಳುತ್ತದೆ. ವ್ಯಕ್ತಿ ಬೆವರುವುದಿಲ್ಲ. ಹೀಟ್-ಸ್ಟ್ರೋಕ್ ಹೊಡೆದ ನಂತರ 10ರಿಂದ 15 ನಿಮಿಷಗಳಲ್ಲಿ ದೇಹದ ಉಷ್ಣತೆ 106°Fಗಿಂತ ಹೆಚ್ಚಾಗುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಅಂಗಾಂಗಗಳ ವೈಫಲ್ಯಕ್ಕೆ ಅಥವಾ ಮುಂದುವರಿದು ಸಾವಿಗೆ ಕಾರಣವಾಗಬಹುದು.
ಹೀಟ್ ಸ್ಟ್ರೋಕ್ ಲಕ್ಷಣಗಳು
ಹೀಟ್ ಸ್ಟ್ರೋಕ್ ರೋಗ ಲಕ್ಷಣಗಳನ್ನು ಬೇಗ ಗುರುತಿಸಿದರೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ. ಆದ್ದರಿಂದ ಲಕ್ಷಣಗಳನ್ನು ಗುರುತಿಸುವುದು ತುಂಬಾ ಮುಖ್ಯ.
- ತಲೆನೋವು
- ಬುದ್ಧಿಮಾಂದ್ಯತೆ
- ಅಧಿಕ ಜ್ವರ
- ಪ್ರಜ್ಞೆ ತಪ್ಪುವುದು
- ಮಾನಸಿಕ ಸ್ಥಿತಿಯ ಕ್ಷೀಣತೆ
- ವಾಕರಿಕೆ ಮತ್ತು ವಾಂತಿ
- ಚರ್ಮದ ಕೆಂಪಾಗುವಿಕೆ
- ಹೃದಯದ ಬಡಿತ ಹೆಚ್ಚಾಗುವುದು
- ಚರ್ಮದ ಮೃದುತ್ವ ಮತ್ತು ಚರ್ಮ ಶುಷ್ಕತೆ
ಕಾರಣಗಳು ಯಾವವು?
- ಬಿಸಿಲು ಅಥವಾ ಶಾಖದ ಜಾಗದಲ್ಲಿ ದೀರ್ಘಕಾಲ ಉಳಿಯುವುದು ಹೀಟ್ ಸ್ಟ್ರೋಕ್ಗೆ ಮುಖ್ಯ ಕಾರಣ.
- ಹಠಾತ್ತನೆ ಶೀತ ವಾತಾವರಣದಿಂದ ಬಿಸಿಯಾದ ಸ್ಥಳಕ್ಕೆ ಹೋದರೆ ಅಂತಹವರಲ್ಲಿ ಶಾಖದ ಹೊಡೆತ ಪ್ರಮಾಣ ಹೆಚ್ಚಾಗಿರುತ್ತದೆ.
- ಬಿಸಿ ವಾತಾವರಣದಲ್ಲಿ ಹೆಚ್ಚು ವ್ಯಾಯಾಮ ಮಾಡುವುದು ಕೂಡ ಶಾಖದ ಹೊಡೆತಕ್ಕೆ ಮುಖ್ಯ ಕಾರಣ.
- ಬೇಸಿಗೆಯಲ್ಲಿ ಅತಿಯಾದ ಬೆವರುವಿಕೆ, ಸಾಕಷ್ಟು ನೀರು ಕುಡಿಯದೇ ಇರುವುದು.
- ಹೆಚ್ಚು ಆಲ್ಕೋಹಾಲ್ ಸೇವಿಸಿದರೆ ದೇಹವು ತನ್ನ ತಾಪಮಾನ ಸರಿಪಡಿಸುವ ಶಕ್ತಿ ಕಳೆದುಕೊಳ್ಳುತ್ತದೆ.
- ಬೆವರದಂಥ, ಗಾಳಿಯು ಹಾದು ಹೋಗದ, ಶಾಖದ ಬಟ್ಟೆ ಧರಿಸಿದರೆ ಸ್ಟ್ರೋಕ್ ಅಪಾಯ ಹೆಚ್ಚು.
ಹೀಟ್ ಸ್ಟ್ರೋಕ್‌ನಿಂದ ರಕ್ಷಣೆ ಹೇಗೆ?
- ಹೀಟ್ ಸ್ಟ್ರೋಕ್ ಆದರೆ ತಕ್ಷಣವೇ ಕೆಳಗೆ ತಿಳಿಸಲಾದ ಆರಂಭಿಕ ವಿಧಾನ ಅನುಸರಿಸಬೇಕು.
- ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯನ್ನು ಬಿಸಿಲಿನಲ್ಲಿ ಬಿಡಬೇಡಿ.
- ಬಟ್ಟೆಯ ದಪ್ಪ ಪದರ ತೆಗೆದು ಹಾಕಿ ಮತ್ತು ಗಾಳಿಯಾಡಲು ಬಿಡಿ.
- ದೇಹವನ್ನು ತಂಪಾಗಿಸಲು, ಕೂಲರ್ ಅಥವಾ ಫ್ಯಾನ್ನಡಿ ಕುಳಿತುಕೊಳ್ಳಿ. ತಣ್ಣೀರಿನಿಂದ ಸ್ನಾನ ಮಾಡಿ, ಒದ್ದೆ ಬಟ್ಟೆಯಿಂದ ದೇಹವನ್ನು ಒರೆಸಿ.
- ಐಸ್ ಪ್ಯಾಕ್ ಅಥವಾ ತಣ್ಣೀರಿನಿಂದ ತೇವಗೊಳಿಸಿದ ಬಟ್ಟೆಯನ್ನು ತಲೆಯ ಮೇಲೆ ಇಟ್ಟುಕೊಳ್ಳಿ.
- ತಣ್ಣೀರಿನಲ್ಲಿ ಅದ್ದಿದ ಟವೆಲ್ ಅನ್ನು ಇಟ್ಟುಕೊಂಡು ತಲೆ, ಕುತ್ತಿಗೆ, ಕಂಕುಳ ಮತ್ತು ಸೊಂಟವನ್ನು ಸವರಿಕೊಳ್ಳಿ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ