Site icon Vistara News

Karnataka Weather : ಶಿವಮೊಗ್ಗದಲ್ಲಿ ತುಂತುರು ಮಳೆ; ನಾಳೆ, ನಾಡಿದ್ದು ತಾಪಮಾನ ದುಪ್ಪಟ್ಟು

Karnataka weather Forecast

ಬೆಂಗಳೂರು: ರಾಜ್ಯಾದ್ಯಂತ ಇನ್ನೆರಡು ದಿನಗಳು ವಾತಾವರಣದಲ್ಲಿ ತಾಪಮಾನದ ಏರಿಳಿತ (Temperature forecast) ಇರಲಿದೆ. ಏ.4, 5ರಂದು ಶುಷ್ಕ ವಾತಾವರಣವೇ (Dry Weather) ಮೇಲುಗೈ ಸಾಧಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಶಿವಮೊಗ್ಗದಲ್ಲಿ ಬುಧವಾರ ತುಂತುರು ಮಳೆ

ರಾಜ್ಯಾದ್ಯಂತ ಬುಧವಾರ ಒಣಹವೆ ಇದ್ದರೂ, ಮಲೆನಾಡಲ್ಲಿ ಮೊದಲ ಮಳೆಯ ಸಿಂಚನವಾಗಿದೆ. ಶಿವಮೊಗ್ಗದ ಭದ್ರಾವತಿ ನಗರದಾದ್ಯಂತ ಬುಧವಾರ ತುಂತುರು ಮಳೆಯಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಅರ್ಧ ಗಂಟೆಯಿಂದ ಭದ್ರಾವತಿಯಲ್ಲಿ‌ ತುಂತುರು ಮಳೆಯಿಂದಾಗಿ ರೈತರು ನಿಟ್ಟುಸಿರು ಬಿಟ್ಟರು.

ತಾಪಮಾನದ ಎಚ್ಚರಿಕೆ

ಮುಂದಿನ 3 ದಿನಗಳಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯ ಪ್ರತ್ಯೇಕ ಸ್ಥಳಗಳಲ್ಲಿ ಬಿಸಿ ಗಾಳಿ ಬೀಸಲಿದೆ. ರಾಯಚೂರು ಹಾಗೂ ಕಲಬುರಗಿಯಲ್ಲಿ ಏ.5 ರವರೆಗೆ ರಾತ್ರಿ ಸಮಯ ಬೆಚ್ಚಗೆ ಇರಲಿದೆ.

ಇನ್ನೈದು ದಿನಗಳು ಬಾಗಲಕೋಟೆ, ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು 2-3 ಡಿ.ಸೆ ಹೆಚ್ಚಾಗಲಿದೆ. ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರಿನಲ್ಲಿ ಒಂದೆರಡು ಕಡೆಗಳಲ್ಲಿ 2-3 ಡಿ.ಸೆ ಏರಿಕೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: Robbery Case : ನಿದ್ದೆಗೆ ಜಾರಿದ ಮಾಲೀಕನ ಕೈ-ಕಾಲು ಕಟ್ಟಿ, ಮನೆಯನ್ನೇ ಲೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್‌!

ಬಿಸಿ ಗಾಳಿ ಎಚ್ಚರಿಕೆ

ಉತ್ತರ ಒಳನಾಡಿನ ಬಾಗಲಕೋಟೆ, ಕಲಬುರಗಿ, ವಿಜಯಪುರ, ಕೊಪ್ಪಳ ಮತ್ತು ಗದಗ ಜಿಲ್ಲೆಯಲ್ಲಿ ಶಾಖದ ಅಲೆಗಳು ಪರಿಸ್ಥಿತಿ ಇರಲಿದೆ. ಇನ್ನೂ ಬೆಂಗಳೂರಿನಲ್ಲಿ ಕೆಲವೊಮ್ಮೆ ಮೋಡ ಕವಿದ ವಾತಾವರಣ ಇರಲಿದೆ. ಮಧ್ಯಾಹ್ನ ಅಥವಾ ಸಂಜೆ ಹೊತ್ತಿಗೆ ಆಕಾಶವು ನಿರ್ಮಲವಾಗಿರಲಿದ್ದು, ಬಿಸಿಲ ಧಗೆ ಇರಲಿದೆ.

ಕಲಬುರಗಿ, ಯಾದಗಿರಿ ಕಾದ ಕೆಂಡ

ಮಂಗಳವಾರದಂದು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಉಳಿದಂತೆ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವೆ ಇತ್ತು. ಗರಿಷ್ಠ ಉಷ್ಣಾಂಶವು ಯಾದಗಿರಿಯಲ್ಲಿ 42.7 ಡಿಗ್ರಿ ಸೆಲ್ಸಿಯಸ್ ಹಾಗೂ ಕಲಬುರಗಿಯಲ್ಲಿ 42.3 ಡಿ.ಸೆ ದಾಖಲಾಗಿತ್ತು. ಕೋಲಾರ ಜಿಲ್ಲೆಯಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 18.6 ಡಿಗ್ರಿ ಸೆಲ್ಸಿಯಸ್‌ವರೆಗೂ ದಾಖಲಾಗಿದೆ.

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ಬೆಳಗಾವಿ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ನಿಂದ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹಾವೇರಿ, ಯಾದಗಿರಿ, ವಿಜಯಪುರ, ಬೀದರ್, ಕೊಪ್ಪಳ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ನಿಂದ 44 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version