Site icon Vistara News

Karnataka Weather : ಬೇಸಿಗೆ ಬಿಸಿ ನಡುವೆಯು ಇಲ್ಲೆಲ್ಲ ಮಳೆಯ ಸಿಂಚನ

rain likely to occur at isolated places over Interior Karnataka and Dry weather prevail over Coastal Karnataka

ಬೆಂಗಳೂರು/ಕೊಡಗು: ಕಾದ ಕಾವಲಿಯಾಗಿದ್ದ ಕಾವೇರಿ ತವರು ಕೊಡಗಿನಲ್ಲಿ ಸೋಮವಾರ ಸಂಜೆ ಮಳೆ ತಂಪೆರೆದಿದೆ. ಕೊಡಗು ಜಿಲ್ಲೆಯ ಹಲವೆಡೆಗಳಲ್ಲಿ ವರ್ಷದ ಮೊದಲ ಮಳೆಯಾಗಿದೆ. ಕುಶಾಲನಗರ ತಾಲೂಕಿನ ದುಬಾರೆಯಲ್ಲಿ ಮಳೆಯ ಸಿಂಚನವಾಗಿದೆ. ಇತ್ತ ಮಡಿಕೇರಿ ತಾಲೂಕಿನ ನಾಪೋಕ್ಲು ಭಾಗದಲ್ಲೂ ವರ್ಷಾಧಾರೆಗೆ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. ಮಳೆಯಿಲ್ಲದೆ ಕಾಫಿ ಗಿಡಗಳು ಹಾಗೂ ಕಾಳುಮೆಣಸು ಬಳ್ಳಿ ಒಣಗುತ್ತಿದ್ದವು. ಸದ್ಯ ಮಳೆಯಿಂದಾಗಿ ಬೆಳಗಾರರಲ್ಲಿ ಸಂತಸ ಮೂಡಿದೆ.

ಮುಂದಿನ 24 ಗಂಟೆಯಲ್ಲಿ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ (Rain News) ಬಹಳಷ್ಟು ಸಾಧ್ಯತೆ ಇದೆ. ಕರಾವಳಿಯಲ್ಲಿ ಒಣಹವೆ (Dry Weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ. ದಕ್ಷಿಣ ಒಳನಾಡಿನ ರಾಮನಗರ ಮತ್ತು ಉತ್ತರ ಒಳನಾಡಿನ ಕಲಬುರಗಿಯಲ್ಲಿ ಮಳೆಯಾಗಬಹುದು.

ತಾಪಮಾನದ ಬಿಸಿ

ಕರಾವಳಿಯ ಪಣಂಬೂರು ಹಾಗೂ ಒಳನಾಡಿನ ಬಾಗಲಕೋಟೆ, ಹಾವೇರಿ, ಕೊಪ್ಪಳ, ದಾವಣಗೆರೆ ಹಾಗೂ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆಯಿದೆ.

ರಾಜಧಾನಿ ಬೆಂಗಳೂರಲ್ಲಿ ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಉಳಿದಂತೆ ಬಿಸಿಲ ಧಗೆಯು ಸುಸ್ತು ಮಾಡಲಿದೆ. ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Road Accident : ರಸ್ತೆ ತಿರುವಿನಲ್ಲಿತ್ತು ಆಪತ್ತು; ಬೈಕ್‌ ಸವಾರನ ಜೀವ ತೆಗೆದ ಟಿಪ್ಪರ್‌ ಲಾರಿ

ಬೀದರ್‌ನಲ್ಲಿ 4 ಸೆಂ.ಮೀ ಮಳೆ

ರಾಜ್ಯದಲ್ಲಿ ಭಾನುವಾರಂದು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಬೀದರ್ 4 ಸೆಂ.ಮೀನಷ್ಟು ಮಳೆಯಾಗಿರುವ ವರದಿ ಆಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣ ಹವೆ ಇತ್ತು.

ಗರಿಷ್ಠ ಉಷ್ಣಾಂಶ 38.7 ಡಿ.ಸೆ ತುಮಕೂರಿನ ಚಿಕ್ಕನಹಳ್ಳಿಯಲ್ಲಿ ಎ ಡಬ್ಲ್ಯೂ ಎಸ್ ದಾಖಲಾಗಿದೆ. ಕನಿಷ್ಠ ಉಷ್ಣಾಂಶ 17.3 ಡಿ.ಸೆ. ಚಾಮರಾಜನಗರದಲ್ಲಿ ದಾಖಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 17.9 ಡಿಗ್ರಿ ಸೆಲ್ಸಿಯಸ್ ಹಾಗೂ ರಾಯಚೂರಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 39.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ರಾಮನಗರ ಮತ್ತು ಕೋಲಾರ, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 13 ಡಿಗ್ರಿ ಸೆಲ್ಸಿಯಸ್ ನಿಂದ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹಾವೇರಿ, ಉತ್ತರ ಕನ್ನಡ, ರಾಯಚೂರು, ಕೊಪ್ಪಳ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಿಂದ 42 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಹೋಳಿಯಲ್ಲಿ ಮಿಂದೇಳುವಾಗ ಕೂದಲು ಕಾಪಾಡಿಕೊಳ್ಳುವುದು ಹೇಗೆ?

ಹೋಳಿ (Holi 2024) ಹಬ್ಬದಂದು ಬಣ್ಣಗಳಲ್ಲಿ ಮಿಂದೇಳುವ ಬಯಕೆಯನ್ನು ಹತ್ತಿಕ್ಕುವುದು ಕಷ್ಟ. ವರ್ಷಕ್ಕೊಮ್ಮೆ ಬರುವ ರಂಗಿನಾಟ ನೀಡುವ ಖುಷಿಯೇ ಅಂಥದ್ದು. ಹಾಗೆಂದು ಬಣ್ಣಗಳಲ್ಲಿ ತೋಯ್ದ ಮೇಲೆ, ಆ ಬಣ್ಣಗಳಿಂದ ತ್ವಚೆ, ಕೂದಲುಗಳಿಗೆ ಆಗುವ ಹಾನಿಯನ್ನು ಸರಿ ಮಾಡಿಕೊಳ್ಳುವುದು ಇನ್ನೂ ಕಷ್ಟ. ಕೂದಲುಗಳಿಂದ ಬಣ್ಣ ತೆಗೆಯುವುದು, ತಲೆಯ ಚರ್ಮ ಒಣಗಿದಂತಾಗುವುದು, ಹೊಟ್ಟಾಗುವುದು, ತುರಿಕೆಯಂಥ ಕಿರಿಕಿರಿಗಳೇ ಮುಗಿಯುವುದಿಲ್ಲ.
ಇವುಗಳನ್ನೆಲ್ಲ ನಿವಾರಿಸುವುದಾಗಿ ಭರವಸೆ ನೀಡುವಂಥ ಹಲವಾರು ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರೆಯಬಹುದು. ಆದರೆ ಇಂಥ ಎಷ್ಟೋ ಉತ್ಪನ್ನಗಳಲ್ಲಿರುವ ರಾಸಾಯನಿಕಗಳು ಕೂದಲಿಗೆ ಆರೈಕೆ ಮಾಡುವ ಬದಲು ಹಾನಿ ಮಾಡುವ ಸಂದರ್ಭಗಳೇ ಹೆಚ್ಚು. ಹಾಗಾದರೆ ರಂಗಿನಾಟ ಬೇಡ ಎನ್ನುವುದೇ? ಅಗತ್ಯವಿಲ್ಲ! ಹಬ್ಬಕ್ಕೆ ಪೂರ್ವದಲ್ಲೇ ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅಗತ್ಯ. ಬಣ್ಣದಾಟದ ನಂತರ ಇನ್ನಷ್ಟು ಆರೈಕೆ ಮಾಡಿದರೆ, ಕೂದಲಿಗೆ ಹಾನಿಯಾಗಿ ಉದುರದಂತೆ ಕಾಪಾಡಿಕೊಳ್ಳಬಹುದು. ಹೋಳಿಯಲ್ಲಿ ರಂಗಿನಾಟ ಆಡಿದಾಗ ಕೂದಲಿಗೆ ಹಾನಿಯಾಗದಂತೆ (Hair care tips for Holi) ಏನು ಮಾಡಬೇಕು?

ಪೂರ್ವ ತಯಾರಿ

ಹಬ್ಬಕ್ಕೆ ಒಂದು ವಾರ ಮೊದಲಿನಿಂದಲೇ ಕೂದಲಿಗೆ ಆರೈಕೆ ಬೇಕು. ಮೊದಲಿನಿಂದಲೂ ಹೋಳಿ ಆಡುವಾಗ ದೇಹಕ್ಕೆಲ್ಲಾ ಚೆನ್ನಾಗಿ ಎಣ್ಣೆ ಲೇಪಿಸಿದ್ದರೆ ಬಣ್ಣ ಅಷ್ಟಾಗಿ ಅಂಟುವುದಿಲ್ಲ; ಒಂದೊಮ್ಮೆ ಅಂಟಿದರೂ ತೊಳೆಯುವುದು ಸುಲಭ ಎಂಬ ಮಾತಿದೆ. ಇದು ನಿಜಕ್ಕೂ ಹೌದು. ಕೂದಲಿಗೆ ಪ್ರತಿ ದಿನ ತಪ್ಪದಂತೆ ಕೊಬ್ಬರಿ ಎಣ್ಣೆ ಲೇಪಿಸಿ. ಸಾಧ್ಯವಾದರೆ ಬುಡಕ್ಕೆಲ್ಲ ಭೃಂಗರಾಜದ ತೈಲ ಲೇಪಿಸಿದರೆ ಇನ್ನೂ ಒಳ್ಳೆಯದು. ಒರಟಾಗಿ ನೆತ್ತಿಯನ್ನಷ್ಟೇ ಉಜ್ಜದೆ, ನವಿರಾಗಿ ತಲೆಯಿಡೀ ಮಸಾಜ್‌ ಮಾಡಿ. ಇಡೀ ತಲೆಯೂ ಭೃಂಗರಾಜದ ಸದ್ಗುಣಗಳಲ್ಲಿ ನೆನೆಯಲಿ. ಇದರಿಂದ ಬಣ್ಣ ಮತ್ತು ತಲೆಯ ಚರ್ಮದ ನಡುವೆ ರಕ್ಷಾ ಕವಚವೊಂದು ರೂಪುಗೊಳ್ಳುತ್ತದೆ. ಈ ರೀತಿಯಲ್ಲಿ ತಲೆಯ ಚರ್ಮಕ್ಕೆ ಹಾನಿಯಾಗುವುದನ್ನು ತಪ್ಪಿಸಬಹುದು. ಜೊತೆಗೆ ಕೂದಲಿನ ಬುಡವನ್ನೂ ಬಲಗೊಳಿಸಬಹುದು.

ರಂಗಿನಾಟದ ನಂತರ

ಬಣ್ಣವನ್ನು ದೀರ್ಘ ಕಾಲ ಕೂದಲಿನಲ್ಲಿ ಒಣಗಲು ಬಿಡಬೇಡಿ. ಇದರಿಂದ ರಂಗು ತೊಳೆಯುವಾಗ ಉಜ್ಜಬೇಕಾಗಬಹುದು. ಕೂದಲಿಗೆ ಹಾನಿ ಇಲ್ಲಿಂದಲೂ ಆಗಬಹುದು. ತಲೆ ಸ್ನಾನ ಮಾಡುವಾಗ ಆದಷ್ಟೂ ರಾಸಾಯನಿಕಗಳಿಲ್ಲದ ಮೃದುವಾಗ ಶಾಂಪೂದಿಂದ ರಂಗು ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲ ಬುಡದಲ್ಲಿರುವ ನೈಸರ್ಗಿಕವಾದ ತೈಲದಂಶ ಹೊರಟುಹೋಗದಂತೆ ಕಾಪಾಡಿಕೊಳ್ಳಬಹುದು. ಸ್ನಾನದ ನಂತರ ಕೂದಲನ್ನು ಟವೆಲ್‌ನಿಂದ ಒರಟಾಗಿ ಉಜ್ಜಬೇಡಿ. ಕೆಲವು ನಿಮಿಷಗಳ ಕಾಲ ಬಿಸಿಲಲ್ಲಿ ಒಣಗಿಸಬಹುದು ಅಥವಾ ಗಾಳಿಯಲ್ಲೂ ಆರಿಸಿಕೊಳ್ಳಬಹುದು.

ಹೇರ್‌ ಮಾಸ್ಕ್‌

ಕೂದಲಿಗೆ ಒಳ್ಳೆಯ ಹೇರ್‌ಮಾಸ್ಕ್‌ ಹಾಕುವುದು ಹೆಚ್ಚಿನ ಪೋಷಣೆಯನ್ನು ನೀಡಿ, ರಂಗಿನಾಟದಿಂದ ಹಾನಿ ಆಗಿದ್ದರೆ, ಅದನ್ನು ಸರಿಪಡಿಸುತ್ತದೆ. ಮೊಸರು, ಮೆಂತೆಯ ಪೇಸ್ಟ್‌ ಸೇರಿಸಿದ ಹೇರ್‌ ಮಾಸ್ಕ್‌ ಬಳಸಬಹುದು. ಅದಿಲ್ಲದಿದ್ದರೆ, ತೆಂಗಿನಹಾಲಿಗೆ ನಾಲ್ಕಾರು ಚಮಚದಷ್ಟು ಭೃಂಗರಾಜದ ರಸ ಸೇರಿಸಿ ಕೂದಲಿಗೆ ಹಚ್ಚಬಹುದು. ಒಂದೊಮ್ಮೆ ತಾಜಾ ಭೃಂಗರಾಜ ದೊರೆಯದಿದ್ದರೆ ಒಂದು ಚಮಚದಷ್ಟು ಭೃಂಗದ ಎಣ್ಣೆಯನ್ನೇ ಉಪಯೋಗಿಸಬಹುದು. 20-30 ನಿಮಿಷಗಳ ನಂತರ ಉಗುರು ಬಿಸಿ ನೀರಿನಲ್ಲಿ ತಲೆಸ್ನಾನ ಮಾಡಿದರೆ ಸಾಕಾಗುತ್ತದೆ.
ತಲೆಸ್ನಾನಕ್ಕೆ ಕಠೋರವಾದ ಶಾಂಪೂ ಅಥವಾ ಕ್ಲೆನ್ಸರ್‌ಗಳ ಬಳಕೆ ಯೋಗ್ಯವಲ್ಲ. ಮೃದುವಾದ, ರಾಸಾಯನಿಕಗಳಿಲ್ಲದ ಶಾಂಪೂ ಒಳ್ಳೆಯದು. ಅಂಟುವಾಳಕಾಯಿ ಅಥವಾ ಸೀಗೆಕಾಯಿ ದೊರೆಯುವಂತಿದ್ದರೆ, ಅದನ್ನು ಹಿಂದಿನ ರಾತ್ರಿ ನೀರಿಗೆ ಹಾಕಿದ್ದರೆ ಸಾಕು. ಮಾರನೇದಿನ ಅದೇ ನೀರನ್ನು ಶಾಂಪೂ ಆಗಿ ಬಳಸಬಹುದು. ಜೊತೆಗೆ ದಾಸವಾಳ ಸೊಪ್ಪಿನ ಲೋಳೆಯಂಥ ರಸವನ್ನೂ ಸೇರಿಸಿಕೊಂಡರೆ, ನೈಸರ್ಗಿಕ ಕಂಡೀಶನರ್‌ ಸಹ ಕೂದಲಿಗೆ ದೊರೆಯುತ್ತದೆ.

ನಿಯಮಿತ ಮಸಾಜ್‌

ತಲೆಗೂದಲಿಗೆ ನಿಯಮಿತವಾಗಿ ಆರೈಕೆ ಅಗತ್ಯವಿದೆ. ಇಲ್ಲದಿದ್ದರೆ ಕೂದಲು ಉದುರುವುದು, ತುಂಡಾಗುವುದು, ಬೇಗನೇ ಬಿಳಿಯಾಗುವುದು- ಇಂಥವನ್ನು ತಡೆಯಲು ಸಾಧ್ಯವಿಲ್ಲ. ಕಹಿಬೇವು, ಲೋಳೆಸರದ ರಸಗಳನ್ನು ವಾರಕ್ಕೊಮ್ಮೆ ಕೂದಲ ಬುಡಕ್ಕೆ ಮಸಾಜ್‌ ಮಾಡಿ, ಕೆಲ ಸಮಯದ ನಂತರ ತೊಳೆಯಬಹುದು. ಭೃಂಗರಾಜ ಮತ್ತು ಮದರಂಗಿ ಪುಡಿಗಳನ್ನು ಮೊಸರಿನಲ್ಲಿ ಸೇರಿಸಿ ಹೇರ್‌ಮಾಸ್ಕ್‌ ಮಾಡಬಹುದು. ಇಂಥ ಕ್ರಮಗಳಿಂದ ಕೂದಲ ಬುಡ ಭದ್ರವಾಗುತ್ತದೆ. ಹೋಳಿಯಲ್ಲಿ ರಂಗಿನಾಟ ಆಡುವಾಗ ಕೂದಲ ಗತಿಯೇನು ಎಂಬ ಚಿಂತೆಯೂ ದೂರವಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version