ಬೆಂಗಳೂರು: ರಾಜ್ಯದ ಹಲವೆಡೆ ಏ.12ರ ಶುಕ್ರವಾರದಂದು ಗುಡುಗು, ಸಿಡಿಲು ಸಹಿತ ಭಾರಿ (Heavy Rain) ಮಳೆಯಾಗಿದೆ. ಬೆಳಗಾವಿ ನಗರದಲ್ಲಿಂದು ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಮಳೆಯು (Rain News) ಅಬ್ಬರಿಸುತ್ತಿದೆ. ಬಿಸಿಲು, ಧಗೆಯಿಂದ ಕಂಗೆಟ್ಟ ಜನರಿಗೆ ವರುಣ ತಂಪೆರೆದಿದ್ದಾನೆ. ನಗರದ ಚನ್ನಮ್ಮ ವೃತ್ತ, ಸದಾಶಿವ ನಗರ, ಕ್ಯಾಂಪ್, ಮಾರುಕಟ್ಟೆ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿದೆ. ದಿಢೀರ್ ಮಳೆಯಿಂದಾಗಿ (Karnataka Weather Forecast) ಜನ-ಜೀವನ ಅಸ್ತವ್ಯಸ್ತವಾಗಿ, ವಾಹನ ಸವಾರರು ಪರದಾಡಿದರು. ಬೋವಿ ಗಲ್ಲಿಯಲ್ಲಿ ಮಳಿಗೆಗಳಿಗೆ ನೀರು ನುಗ್ಗಿತ್ತು. ಮಳೆ ನೀರು ಒಳಬಾರದಂತೆ ತಡೆಯಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದರು.
ವಿಜಯಪುರ ನಗರದಲ್ಲೂ ಗುಡುಗು, ಸಿಡಿಲಿನ ಭಾರಿ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಿಗೆ ನೀರು ಹರಿದಿದೆ. ಸಿಡಿಲಿನ ಆರ್ಭಟಕ್ಕೆ ನಿನ್ನೆ ವಿಜಯಪುರ ಜಿಲ್ಲೆಯಲ್ಲಿ ಇಬ್ಬರ ಮೃತಪಟ್ಟಿದ್ದರು. ಶುಕ್ರವಾರವೂ ಸುರಿದ ಮಳೆಗೆ ನಗರ ಪ್ರದೇಶದ ಜನತೆ ಕೂಲ್ ಆಗಿದ್ದಾರೆ. ದಾವಣಗೆರೆಯಲ್ಲಿ ಬಿಸಿಲ ಬೇಗೆಯಿಂದ ಬೆಂದಿದ್ದ ಜನರಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯು ನಿಟ್ಟುಸಿರು ಬಿಡುವಂತಾಗಿದೆ. ದಾವಣಗೆರೆ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಒಣಗುತ್ತಿದ್ದ ತೋಟಗಳಿಗೆ ಮಳೆ ಆಸರೆ ಆಯಿತು.
ಮಳೆಯಲ್ಲೆ ಭಕ್ತಾಧಿಗಳ ಭರ್ಜರಿ ಡ್ಯಾನ್ಸ್
ಕೊಡಗು ಜಿಲ್ಲೆಯ ಮೂರ್ನಾಡು, ನೆಲಜಿ, ಮರಂದೋಡ ಹಾಗೂ ಬಿಳಿಗೇರಿ ಸೇರಿ ಹಲವೆಡೆ ವರ್ಷಧಾರೆ ಆಗಿದೆ. ಮಳೆಗಾಗಿ ಕಾದುಕುಳಿತ್ತಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಇತ್ತ ಶ್ರೀಮಾರಿಯಮ್ಮ ಹಾಗೂ ಕೊರಗಜ್ಜದೇವರ ವಾರ್ಷಿಕ ಉತ್ಸವದ ವೇಳೆ ಮಳೆ ಬಂದ ಕಾರಣಕ್ಕೆ ಭಕ್ತಾಧಿಗಳು ಕುಣಿದು ಕುಪ್ಪಳಿಸಿದರು. ನಾಪೋಕ್ಲು ಸಮೀಪದ ಹೊದ್ದೂರು ಗ್ರಾಮದ ಭಗವತಿ ಕಾಲೋನಿಯಲ್ಲಿ ಜನರು ಮಳೆಯಲ್ಲಿ ನೆನೆದರು.
ಇದನ್ನೂ ಓದಿ: Beggary Rescue : ರಂಜಾನ್ ಹಬ್ಬದಂದು 40ಕ್ಕೂ ಹೆಚ್ಚು ಮಕ್ಕಳಿಂದ ಭಿಕ್ಷಾಟನೆ; ಸಿಕ್ಕಿಬಿದ್ದರು ಲೇಡಿ ಗ್ಯಾಂಗ್
ವೀಕೆಂಡ್‌ನಲ್ಲೂ ಭರ್ಜರಿ ಮಳೆ
ಮುಂದಿನ 24 ಗಂಟೆಯಲ್ಲಿ (ಏ.13) ಕರಾವಳಿಯ ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಹಾಗೆ ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಗದಗ, ಕಲಬುರಗಿ ಸೇರಿದಂತೆ ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿಯಲ್ಲೂ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ.
ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹಾಸನ, ಕೊಡಗು, ಮಂಡ್ಯ, ರಾಮನಗರ, ವಿಜಯನಗರ, ಮೈಸೂರಿನಲ್ಲೂ ಮಳೆಯಾಗಲಿದೆ.
ಉತ್ತರ ಒಳನಾಡಲ್ಲಿ ರಭಸವಾಗಿ ಬೀಸಲಿದೆ ಗಾಳಿ
ಇನ್ನೂ ಏಪ್ರಿಲ್ 12, 13 ಮತ್ತು 14ರಂದು ಗಂಟೆಗೆ 40-50 ಕಿ.ಮೀ ಮತ್ತು 30-40 ಕಿ.ಮೀ ವೇಗದಲ್ಲಿ ಗಾಳಿಯ ವೇಗವು ರಭಸವಾಗಿ ಇರಲಿದೆ. ಮುಂದಿನ 3 ದಿನಗಳು ದಕ್ಷಿಣ ಒಳನಾಡಿನಲ್ಲಿ ಗಾಳಿ ವೇಗವು 30-40 ಕಿ.ಮೀ ತಲುಪುವ ಸಾಧ್ಯತೆ ಇದೆ. ಏ.14ರವರೆಗೆ ರಾಜ್ಯದ ಒಂದೆರಡು ಕಡೆಗಳಲ್ಲಿ ಸಿಡಿಲು, ಗುಡುಗು ಕೂಡಿದ ಮಳೆಯಾಗಲಿದೆ.
ಅಂತೂ ಬೆಂಗಳೂರಿಗೆ ಎಂಟ್ರಿ ಆಗಲಿರುವ ವರುಣ
ರಾಜಧಾನಿ ಬೆಂಗಳೂರಿಗರು ಮಳೆಯಿಲ್ಲದೆ ಬಿಸಿಲಿನಿಂದ ಕಂಗೆಟ್ಟಿದ್ದಾರೆ. ಶುಕ್ರವಾರ ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
ಇನ್ನೂ ಶುಕ್ರವಾರ ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 35.8 ಡಿ.ಸೆ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 36.4 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ಆಗಿತ್ತು.
ಇದನ್ನೂ ಓದಿ: Physical Abuse : ಬಹಿರ್ದೆಸೆಗೆ ತೆರಳಿದ ಮಹಿಳೆ ಮೇಲೆ ಎರಗಿ ಬಲತ್ಕಾರ ಮಾಡಿದ ರಾಕ್ಷಸ
ಯಾವ್ಯಾವ ಜಿಲ್ಲೆಯಲ್ಲಿ ಎಷ್ಟಿದೆ ಗರಿಷ್ಠ ತಾಪಮಾನ
ಕಲಬುರ್ಗಿ- 38.6 ಡಿ.ಸೆ
ಬೆಳಗಾವಿ- 36.8 ಡಿ.ಸೆ
ಬಳ್ಳಾರಿ- 39.7 ಡಿ.ಸೆ
ದಕ್ಷಿಣ ಕನ್ನಡ- 35.6 ಡಿ.ಸೆ
ದಾವಣಗೆರೆ- 38 ಡಿ.ಸೆ
ಚಿತ್ರದುರ್ಗ- 37.6 ಡಿ.ಸೆ
ಮೈಸೂರು – 37.3 ಡಿ.ಸೆ
ಕೊಡಗು- 36.1 ಡಿ.ಸೆ
ಉತ್ತರ ಕನ್ನಡ- 36.6 ಡಿ.ಸೆ
ಕೋಲಾರ- 36.9 ಡಿ.ಸೆ
ಕೊಪ್ಪಳ- 39.7 ಡಿ.ಸೆ
ಶಿವಮೊಗ್ಗ- 37.6 ಡಿ.ಸೆ
ಧಾರವಾಡ- 36.8 ಡಿ.ಸೆ
( 11/04/2024 ಬೆಳಗ್ಗೆ 8.30ರಿಂದ 12/04/2024 ಬೆಳಗ್ಗೆ 8.30ರವರೆಗಿನ ತಾಪಮಾನದ ಆಧಾರದ ಮೇಲೆ ಈ ವರದಿಯನ್ನು ನೀಡಲಾಗಿದೆ)
ಇನ್ನೂ ಗುರುವಾರ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಿದೆ. ಕರಾವಳಿಯಲ್ಲಿ ಒಣ ಹವೆ ಇತ್ತು. ಮಂಠಾಳ 3, ನಿಂಬರ್ಗಾ ತಾಂಡಾ 3, ಖಜೂರಿ 2, ಇಂಡಿ 2 ಸೆಂ.ಮೀ ಮಳೆಯಾಗಿದೆ. ಆಳಂದ, ಇಳಕಲ್, ನಾರಾಯಣಪುರ ಎಚ್‌ಎಂಎಸ್ , ಬಾಳೆಹೊನ್ನೂರಿನಲ್ಲೂ ತಲಾ 2 ಸೆಂ.ಮೀ ಮಳೆಯಾಗಿದೆ. ಭಾಲ್ಕಿ , ಯಡ್ರಾಮಿ, ಯಡ್ವಾಡ, ಮುದ್ದೇಬಿಹಾಳ, ಕಳಸ 1 ಸೆಂ.ಮೀ ಮಳೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ