ಬೆಂಗಳೂರು: ರಾಜ್ಯಾದ್ಯಂತ ಪ್ರತ್ಯೇಕ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ರಾಮನಗರ, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ (30-40 ಕಿಮೀ) ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಧಾರವಾಡ, ಹಾವೇರಿಯಲ್ಲಿ ಒಂದೆರಡು ಕಡೆಗಳಲ್ಲಿ ಹಗುರ ಮಳೆಯೊಂದಿಗೆ ಗುಡುಗು ಇರಲಿದೆ.
ಬಾಗಲಕೋಟೆ, ಬೀದರ್, ಗದಗ, ಕಲಬುರಗಿ,ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ ಸೇರಿದಂತೆ ಮಂಡ್ಯ, ಮೈಸೂರು, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ.
ಇದನ್ನೂ ಓದಿ: Accident News : ಈಜಲು ಕೆರೆಗೆ ಜಿಗಿದ ಬಾಲಕ ಮೃತ್ಯು; ಬಸ್ ಡಿಕ್ಕಿಗೆ ಬೈಕ್‌ನಲ್ಲಿದ್ದ ರೈತರಿಬ್ಬರು ಸಾವು
ಕಡಲತೀರಕ್ಕೆ ಇಳಿಯದಂತೆ ಎಚ್ಚರಿಕೆ
ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನ್ ಎಫೆಕ್ಟ್ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಿದೆ. ಅಲೆಗಳ ಅಬ್ಬರ ಹೆಚ್ಚಿದ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ನೀರಿಗಿಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಕಡಲತೀರದಲ್ಲಿ ಲೈಫ್‌ಗಾರ್ಡ್‌ಗಳು ಕಟ್ಟೆಚ್ಚರ ವಹಿಸಿದ್ದಾರೆ. ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣ ಇತ್ತು. ಘಟ್ಟದ ಮೇಲಿನ ಕೆಲ ತಾಲೂಕುಗಳಲ್ಲಿ ಮಾತ್ರ ಅಲ್ಪ ಪ್ರಮಾಣದಲ್ಲಿ ಮಳೆಯಾಗಿತ್ತು. ಕರಾವಳಿ ತಾಲೂಕುಗಳಲ್ಲಿ ಬಿಸಿಲಿನ ವಾತಾವರಣ ಇತ್ತು.
ರೈಲ್ವೆ ನಿಲ್ದಾಣದಲ್ಲಿ ನೀರು ಸೋರಿಕೆ
ಮಳೆಯಿಂದಾಗಿ ರೈಲ್ವೆ ನಿಲ್ದಾಣದ ಚಾವಣಿಯು ಸೋರಿಕೆ ಆಗುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ವಿಜಯನಗರದ ಹೊಸಪೇಟೆ ನಗರದ ರೈಲ್ವೆ ನಿಲ್ದಾಣದಲ್ಲಿ ಭಾರಿ ಮಳೆಯಿಂದ ಅವಾಂತರವೇ ಸೃಷ್ಟಿಸಿಯಾಗಿದೆ. ರೈಲು ನಿಲ್ದಾಣದ ಒಳಗೆ ಮಳೆ ನೀರು ನುಗ್ಗಿದ್ದು, ಹೊಸಪೇಟೆ ರೈಲ್ವೆ ನಿಲ್ದಾಣದ ಒಂದನೇ ಪ್ಲಾಟ್ ಫಾರಂನಲ್ಲಿ ಮಳೆ ನೀರು ಸೋರುತ್ತಿದೆ. ಒಂದು ವರ್ಷದ ಹಿಂದೆ ಕೇಂದ್ರ ಸರ್ಕಾರವು ಈ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಿತ್ತು.
ರಾಯಚೂರಲ್ಲಿ ಸೇತುವೆ ಸಂಪರ್ಕ ಕಡಿತ
ರಾಯಚೂರಲ್ಲಿ ಅಬ್ಬರದ ಮಳೆ ಮುಂದುವರಿದಿದ್ದು, ಹಲವು ಗ್ರಾಮಗಳ ಸೇತುವೆ ಸಂಪರ್ಕ ಕಡಿತಗೊಂಡಿದೆ. ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿದೆ. ರಾಯಚೂರು ತಾಲೂಕಿನ ಫತ್ತೇಪೂರ ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದು, ಅಪಾಯದಲ್ಲೇ ಸೇತುವೆ ದಾಟಲು ಜನರು ಮುಂದಾಗುತ್ತಿದ್ದಾರೆ. ಸ್ವಲ್ಪ ಯಾಮಾರಿದರೂ ನೀರಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಇದೆ.
ಯಾದಗಿರಿಯಲ್ಲಿ ಮಳೆಗೆ ಚಾವಣಿ ಕುಸಿತ
ಯಾದಗಿರಿಯಲ್ಲಿ ಸುರಿದ ಭಾರಿ ಮಳೆಗೆ ಜನ-ಜೀವನ ಅಸ್ತವ್ಯಸ್ತವಾಗಿದೆ. ಇಡೀ ಮನೆಯ ಚಾವಣಿ ಕುಸಿದಿದ್ದು, ಪವಾಡ ಸದೃಶ್ಯ ಎಂಬಂತೆ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ತೆಗ್ಗೆಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ತೆಗ್ಗೆಳ್ಳಿ ಗ್ರಾಮದ ಭೀರಪ್ಪ ಪೂಜಾರಿ ಹಾಗೂ ಸುರೇಶ್ ಕಲ್ಮನಿ ಎಂಬುವರಿಗೆ ಸೇರಿದ ಮನೆಯು ವಿಪರೀತ ಗಾಳಿ ಮಳೆಯಿಂದ ಚಾವಣಿ ಕುಸಿದಿದೆ. ಮನೆಯಲ್ಲಿದ್ದ ದವಸ ಧಾನ್ಯಗಳು ಸಂಪೂರ್ಣ ಹಾಳಾಗಿವೆ.
ರಾಯಚೂರಲ್ಲಿ ಗಾಳಿಗೆ ಮಳೆಗೆ ಹಾರಿಹೋದ ಜೋಪಡಿಗಳು
ರಾಯಚೂರು ಜಿಲ್ಲೆಯಲ್ಲಿ ತಡರಾತ್ರಿ ಗಾಳಿ ಸಹಿತ ಭಾರಿ ಮಳೆಗೆ ಲಿಂಗಸಗೂರಿನಲ್ಲಿ ಜೋಪಡಿಗಳು ಹಾರಿಹೋಗಿದೆ. ಅಲೆಮಾರಿ ಬುಡ್ಗ ಜಂಗಮ ಸಮುದಾಯದ ಜನರು ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ 50 ಕ್ಕೂ ಹೆಚ್ಚು ಜೋಪಡಿಗಳಿಗೆ ಹಾನಿಯಾಗಿದೆ. ಸೂರುಯಿಲ್ಲದೆ ಬುಡ್ಗ ಜಂಗಮ ಸಮುದಾಯದವರು ಕಂಗಲಾಗಿದ್ದಾರೆ. ಜೋಪಡಿಗಳಿಗೆ ಹಾನಿಯಾದರೂ,ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಬುಡ್ಗ ಜಂಗಮ ಸಮುದಾಯದವರ ಆಕ್ರೋಶ ಹೊರಹಾಕಿದ್ದಾರೆ.
ಧಾರವಾಡದಲ್ಲಿ ಬಿತ್ತನೆ ಕಾರ್ಯ ಚುರುಕು
ಮುಂಗಾರು ಪೂರ್ವ ಮಳೆ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಮುಂಗಾರಿನ ಬೆಳೆಗಳನ್ನು ಬಿತ್ತುವ ಕಾರ್ಯ ಆರಂಭವಾಗಿದೆ. ಧಾರವಾಡ ಗ್ರಾಮೀಣ ಹಾಗೂ ಜಿಲ್ಲೆಯಾದ್ಯಂತ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಮುಂಗಾರು ಬೆಳೆಗಳಾದ ಹೆಸರು, ಕಡಲೆ, ಶೇಂಗಾ ಇತ್ಯಾದಿ ಬೆಳೆಗಳನ್ನು ರೈತರು ಬಿತ್ತುತ್ತಿದ್ದಾರೆ. ನಿರಂತರ ಮಳೆಯಿಂದಾಗಿ ಬಿತ್ತನೆ ಕಾರ್ಯ ಚುರುಕು ಪಡೆದಿದೆ. ಕಳೆದ ವರ್ಷ ಬರ ಹಿನ್ನೆಲೆ ಈ ಮುಂಗಾರು ಪೂರ್ವವೇ ಬಿತ್ತನೆಗೆ ಸಿದ್ಧತೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ